ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSPolls: ವರುಣ್ ಗಾಂಧಿ ಮುಂದಿನ ನಡೆ ಏನು?

ಪಿಲಿಭಿತ್ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಬಿಜೆಪಿ
Published 25 ಮಾರ್ಚ್ 2024, 21:24 IST
Last Updated 25 ಮಾರ್ಚ್ 2024, 21:24 IST
ಅಕ್ಷರ ಗಾತ್ರ

ಸಂಜಯ್ ಪಾಂಡೆ

ಲಖನೌ: ಉತ್ತರ ಪ್ರದೇಶದ ಪಿಲಿಭಿತ್‌ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿಗೆ ಬಿಜೆಪಿಯು ಟಿಕೆಟ್ ನಿರಾಕರಿಸಿದೆ. ಇದು ಅವರ ಮುಂದಿನ ರಾಜಕೀಯ ನಡೆ ಏನು ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.   

ಸಮಯ ಸಿಕ್ಕಾಗಲೆಲ್ಲ ತಮ್ಮದೇ ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದ ವರುಣ್ ಗಾಂಧಿ ವಿಚಾರದಲ್ಲಿ ಇದು ನಿರೀಕ್ಷಿತವೇ ಆಗಿತ್ತು. ಕೆಲವು ದಿನಗಳ ಹಿಂದೆ ತನ್ನ ಬೆಂಬಲಿಗನೊಬ್ಬನ ಮೂಲಕ ವರುಣ್ ನಾಲ್ಕು ಪ್ರತಿ ನಾಮಪತ್ರಗಳನ್ನು ತರಿಸಿಕೊಂಡಿದ್ದರು. ಅದು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದೆನ್ನುವ ಊಹಾಪೋಹಕ್ಕೆ ಕಾರಣವಾಗಿತ್ತು.   

ಚುನಾವಣಾ ಆಯೋಗವು ಮತದಾನದ ದಿನಾಂಕ ಘೋಷಣೆ ಮಾಡಿದಂದಿನಿಂದಲೂ, ಎರಡು ಅವಧಿಯ (2009, 2019) ಬಿಜೆಪಿ ಸಂಸದ ವರುಣ್ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ವರುಣ್ ತಮ್ಮನ್ನು ಸಂಪರ್ಕಿಸಿದರೆ ಅವರಿಗೆ ಸಮಾಜವಾದಿ ಪಕ್ಷದಿಂದ ಪಿಲಿಭಿತ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಲು ಸಿದ್ಧ ಎನ್ನುವ ಸೂಚನೆಯನ್ನು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನೀಡಿದ್ದರು. ಮರುದಿನವೇ ಪಿಲಿಭಿತ್ ಕ್ಷೇತ್ರಕ್ಕೆ ಎಸ್‌ಪಿ ಅಭ್ಯರ್ಥಿಯಾಗಿ  ಭಾಗವತ್ ಶರಣ್ ಗಂಗವಾರ್ ಅವರ ಹೆಸರನ್ನು ಘೋಷಣೆ ಮಾಡಲಾಯಿತು.

ರಾಹುಲ್ ವಯನಾಡ್‌ನಿಂದ ಮಾತ್ರ ಸ್ಪರ್ಧಿಸಿದರೆ ನೆಹರೂ ಮನೆತನದವರೇ ಆದ ವರುಣ್ ಗಾಂಧಿ ಅವರನ್ನು ಅಮೇಠಿಯಿಂದ ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಒತ್ತಾಯಿಸಿದ್ದರು. ಆದರೆ, ವರುಣ್ ತಾಯಿ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರನ್ನು ಸುಲ್ತಾನ್‌ಪುರ ಕ್ಷೇತ್ರದಿಂದ ಬಿಜೆಪಿಯು ಕಣಕ್ಕಿಳಿಸುವ ಮೂಲಕ ಈ ಎಲ್ಲ ಊಹಾಪೋಹಗಳಿಗೂ ತೆರೆ ಬಿದ್ದಿದೆ.

‘ವರುಣ್ ಗಾಂಧಿ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವ ವ್ಯಕ್ತಿ. ತಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬಹಿರಂಗವಾಗಿ ಟೀಕಿಸುವವರು. ಅವರ ನಡೆಯನ್ನು ಊಹಿಸುವುದು ಕಷ್ಟ’ ಎಂದು ಲಖನೌ ಮೂಲದ ರಾಜಕೀಯ ವಿಶ್ಲೇಷಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.   

ವರುಣ್ ಅವರ ಸದ್ಯದ ಸ್ಥಿತಿಗೆ ಅವರೇ ಕಾರಣ ಎನ್ನುವುದು ಉತ್ತರ ಪ್ರದೇಶದ ಬಿಜೆಪಿ ಮುಖಂಡರೊಬ್ಬರ ಅಭಿಪ್ರಾಯ.

ವರುಣ್ ಅವರ ಮಾತು ಹೇಗಿರುತ್ತದೆ ಎಂಬುದಕ್ಕೆ ಬಿಜೆಪಿ ಮುಖಂಡರು ಒಂದು ಘಟನೆಯನ್ನು ಉದಾಹರಿಸುತ್ತಾರೆ. ಒಮ್ಮೆ ಪಿಲಿಭಿತ್‌ನ ಸಾರ್ವಜನಿಕ ಸಮಾರಂಭವೊಂದರಲ್ಲಿ ವರುಣ್ ಗಾಂಧಿ ಭಾಷಣ ಮಾಡುತ್ತಿದ್ದಾಗ ವೇದಿಕೆಯ ಮೇಲಿದ್ದ ಸಾಧುವೊಬ್ಬರ ಮೊಬೈಲ್ ರಿಂಗ್ ಆಗುತ್ತದೆ. ಕರೆ ಸ್ವೀಕರಿಸುವುದೋ ಬೇಡವೋ ಎನ್ನುವ ಗೊಂದಲದಿಂದ ಸಾಧು ಚಡಪಡಿಸತೊಡಗುತ್ತಾರೆ. ಆಗ ಅವರ ಕಡೆಗೆ ತಿರುಗಿದ ವರುಣ್, ‘ಕರೆ ತಿರಸ್ಕರಿಸಬೇಡಿ. ಯಾರಿಗೆ ಗೊತ್ತು ಸಾಧು ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಬಹುದು. ಆಗ ನನ್ನ ಕಥೆ ಏನು?’ ಎಂದು ಪ್ರತಿಕ್ರಿಯಿಸಿದ್ದರು. ಆ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ವ್ಯಂಗ್ಯ ಮಾಡಿದ್ದರು.

ಭಾರತವು ಸದ್ಯದಲ್ಲಿಯೇ ಐದು ಟ್ರಿಲಿಯನ್ ಆರ್ಥಿಕತೆಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಬಗ್ಗೆಯೂ ವರುಣ್ ಅಣಕ ಮಾಡಿದ್ದರು. 2022ರಲ್ಲಿ ನಡೆದಿದ್ದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದ ವರುಣ್, ಉತ್ತರ ಪ್ರದೇಶ ಸರ್ಕಾರವು ಅಬಕಾರಿಯಿಂದ ಹೆಚ್ಚಿನ ಆದಾಯ ಗಳಿಸಿದ್ದರ ಬಗೆಗಿನ ಪ್ರಚಾರವನ್ನೂ ಟೀಕಿಸಿದ್ದರು.

ವರುಣ್ ಗಾಂಧಿ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡು ಸುಮ್ಮನೇ ಕೂರುವರೇ ಅಥವಾ ಬೇರೊಂದು ಮಾರ್ಗದಲ್ಲಿ ಲೋಕಸಭಾ ಚುನಾವಣೆಯ ಕಣಕ್ಕೆ ಧುಮುಕವರೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT