ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ರಾಜಕಾರಣ: ‘ಮೀಸಲಾತಿ’ ಅಸ್ತ್ರ..

ಜಾತಿ ವ್ಯವಸ್ಥೆ’ಯ ಕುರಿತು ಎಷ್ಟೇ ಟೀಕಿಸಿದರೂ, ಅದರ ಕ್ರೌರ್ಯಗಳ ಬಗ್ಗೆ ಕಿಡಿಕಾರಿದರೂ ಚುನಾವಣೆ ಬಂತೆಂದರೆ ‘ಜಾತಿ ಸಮೀಕರಣ’ಗಳನ್ನೇ ರಾಜಕೀಯ ನಾಯಕರು ನೆಚ್ಚಿಕೊಳ್ಳುತ್ತಾರೆ
Published 15 ಏಪ್ರಿಲ್ 2024, 2:14 IST
Last Updated 15 ಏಪ್ರಿಲ್ 2024, 3:18 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ವ್ಯವಸ್ಥೆ’ಯ ಕುರಿತು ಎಷ್ಟೇ ಟೀಕಿಸಿದರೂ, ಅದರ ಕ್ರೌರ್ಯಗಳ ಬಗ್ಗೆ ಕಿಡಿಕಾರಿದರೂ ಚುನಾವಣೆ ಬಂತೆಂದರೆ ‘ಜಾತಿ ಸಮೀಕರಣ’ಗಳನ್ನೇ ರಾಜಕೀಯ ನಾಯಕರು ನೆಚ್ಚಿಕೊಳ್ಳುತ್ತಾರೆ. ಅಭ್ಯರ್ಥಿ ಆಯ್ಕೆ, ಮತ ಆಮಿಷ, ಚುನಾವಣೆಯ ನಾಯಕತ್ವದ ಲೆಕ್ಕಾಚಾರಗಳೂ ಜಾತಿಯನ್ನೇ ಅವಲಂಬಿಸಿವೆ. ಹೀಗಾಗಿ, ಮೀಸಲಾತಿ ಎಂಬುದು ಪ್ರತಿ ಚುನಾವಣೆಯಲ್ಲೂ ಮತ ಫಸಲಿನ ಅಸ್ತ್ರವಾಗಿ ಬಳಕೆಯಾಗುತ್ತಲೇ ಇದೆ.

ರಾಜ್ಯದಲ್ಲಿ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ವರ್ಗ ಬಹುಸಂಖ್ಯಾತವಾಗಿದ್ದರೂ, ಮತ ನಿರ್ಣಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ತಮ್ಮ ಪ್ರಾಬಲ್ಯವನ್ನು ಇನ್ನೂ ಉಳಿಸಿಕೊಂಡಿವೆ. ಗ್ರಾಮೀಣ ಭಾಗದಲ್ಲಿ ಜಮೀನ್ದಾರಿ ವ್ಯವಸ್ಥೆ ಹಾಗೂ ಊಳಿಗಮಾನ್ಯ ಪದ್ಧತಿಯ ಯಜಮಾನ ಪದ್ಧತಿ ಜೀವಂತವಾಗಿರುವುದೇ ಇದಕ್ಕೆ ಕಾರಣ. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ, ಭಿನ್ನಮತ ಮರೆತ ದಲಿತ ಸಂಘಟನೆಗಳು ಕಾಂಗ್ರೆಸ್‌ ಪರ ಒಟ್ಟಾಗಿ ನಿಂತಿದ್ದರಿಂದಾಗಿ, ಅದೊಂದು ಪ್ರಬಲಶಕ್ತಿಯಾಗಿ ಪರಿವರ್ತನೆಯಾಗಿ ಆ ಪಕ್ಷ ಹೆಚ್ಚು ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. 

2023ರ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಸಮೀಕರಣ ನಾಟಕೀಯವಾಗಿ ಬದಲಾಗಿರುವುದು ಸ್ಪಷ್ಟ. ‘ಅಹಿಂದ’ ಬಲದ ಜೊತೆಗೆ, ಡಿ.ಕೆ. ಶಿವಕುಮಾರ್ ಕಾರಣಕ್ಕೆ ಒಕ್ಕಲಿಗರು ಕೂಡ ಕಾಂಗ್ರೆಸ್‌ ಬೆಂಬಲಕ್ಕೆ ನಿಂತರು. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಕಾಂಗ್ರೆಸ್‌ಗೆ ಒತ್ತಾಸೆಯಾದರು. ಪರಿಣಾಮವಾಗಿ ಒಕ್ಕಲಿಗರ ಭದ್ರಕೋಟೆಯನ್ನು ಹಿಡಿದುಕೊಂಡಿದ್ದ ಜೆಡಿಎಸ್‌ನ ನೆಲೆ ಕಳಚಿ, ಅಲ್ಲೆಲ್ಲ ಕಾಂಗ್ರೆಸ್ ವಿಜಯ ಸಾಧಿಸಿತು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಜಾತಿ ಪ್ರಾಬಲ್ಯದ ‘ದಾಳ’, ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಚಾರ ತಂತ್ರಗಾರಿಕೆವರೆಗೂ ವಿಸ್ತರಿಸಿಕೊಂಡಿದೆ. ಹಲವು ಸಮುದಾಯಗಳ ಮೀಸಲಾತಿ ಬೇಡಿಕೆಯೂ ಚುನಾವಣೆಯ ಹೊತ್ತಲ್ಲಿ ಮುನ್ನೆಲೆಗೆ ಬಂದಿದೆ. 

ಹಳೆ ಮೈಸೂರು ಭಾಗದಲ್ಲಿ ಪ್ರಬಲ ಶಕ್ತಿಯಾಗಿದ್ದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಲೋಕಸಭೆ ಚುನಾವಣೆಯಲ್ಲಿ ಜಾತಿ ಸಮೀಕರಣಕ್ಕೆ ಬೇರೆ ಸ್ವರೂಪ ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ತನ್ನ ನೆಲೆ ಅಲುಗಾಡಿದ್ದರೂ ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಹಾಗೂ ಬೆಂಗಳೂರು ನಗರದ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಡೆದ ಮತ ಪ್ರಮಾಣವೇನೂ ಕಡಿಮೆಯಾಗಿಲ್ಲ. ತನ್ನದೇ ಮತ ಬ್ಯಾಂಕ್‌ ಅನ್ನು ದಳ ಹೊಂದಿದೆ. ಎಷ್ಟೇ ಬಡಿದಾಡಿದರೂ ತನ್ನ ಬೇರು ಬಿಡಲು ಸಾಧ್ಯವಾಗದ ಬಿಜೆಪಿ, ದಳದ ಆಶ್ರಯದಲ್ಲಿ ಒಕ್ಕಲಿಗರ ಮನಗೆಲ್ಲಲು ಹೊರಟಿದೆ. ಅದಕ್ಕಾಗಿ ಹಲವು ದಾಳ ಹೂಡಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಅಪೇಕ್ಷೆಯಿಂದ ಒಕ್ಕಲಿಗ ಸಮುದಾಯ ‘ಹಸ್ತ’ಲಾಘವ ಮಾಡಿತ್ತು. ಅದೇ ಅಸ್ತ್ರವನ್ನು ಈ ಬಾರಿಯೂ ಶಿವಕುಮಾರ್ ಬಳಸುತ್ತಿದ್ದಾರೆ. 

ಇದರ ಜತೆಗೇ, ದಲಿತ ಒಳಪಂಗಡಗಳ ನಡುವಿನ ಮೀಸಲಾತಿ ವರ್ಗೀಕರಣ, ಸ್ಪೃಶ್ಯ ದಲಿತರು– ಅಸ್ಪೃಶ್ಯ ದಲಿತರ ನಡುವಿನ ಮೇಲಾಟ, ಜೆಡಿಎಸ್–ಬಿಜೆಪಿ ಮೈತ್ರಿ, ದಲಿತರಿಗೆಂದೇ ಮೀಸಲಿಟ್ಟ ಅನುದಾನ ಬಳಕೆ ಮುಂತಾದ ವಿಷಯಗಳು ಲೋಕಸಭೆ ಚುನಾವಣೆಯ ವೇಳೆ ಮುನ್ನೆಲೆಗೆ ಬಂದಿವೆ. ಪರಿಶಿಷ್ಟ ಜಾತಿಗೆ ಕಾಂಗ್ರೆಸ್‌ ಒಳ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕೆ 2018ರ ಚುನಾವಣೆಯಲ್ಲಿ ಮಾದಿಗ (ಎಡಗೈ) ಸಮುದಾಯದವರು ಬಿಜೆಪಿ ಜತೆ ಹೋಗಿದ್ದರು. ಇದರಿಂದ ಕಾಂಗ್ರೆಸ್ ಹೊಡೆತ ತಿಂದಿತ್ತು. ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ, ಈ ವಿಷಯದಲ್ಲಿ ಗಟ್ಟಿ ನಿರ್ಧಾರವನ್ನೇನೂ ತೆಗೆದುಕೊಳ್ಳಲಿಲ್ಲ. ಹೀಗಾಗಿ, 2023ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ಈ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗಿದ್ದು, ಮತ ವಿಭಜನೆಯ ಲೆಕ್ಕಾಚಾರ ಎರಡೂ ಪಕ್ಷಗಳ ನಾಯಕರಲ್ಲಿದೆ.

2023ರ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ‘ಮೀಸಲಾತಿ’ ವಿಚಾರವನ್ನೇ ಪ್ರಬಲವಾದ ಅಸ್ತ್ರವಾಗಿ ಬಳಸಿತ್ತು. ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 4 ಮೀಸಲಾತಿ ರದ್ದುಪಡಿಸಿ, ಒಕ್ಕಲಿಗರು ಮತ್ತು ಲಿಂಗಾಯತರಿರುವ ಪ್ರವರ್ಗಗಳಿಗೆ ತಲಾ ಶೇ 2ರಂತೆ ಮರು ಹಂಚಿಕೆ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಪರಿಶಿಷ್ಟ ಜಾತಿ–ಪಂಗಡದ ಮೀಸಲಾತಿಯನ್ನು ಹೆಚ್ಚಿಸಿತ್ತು. ಒಳಮೀಸಲಾತಿ ಕುರಿತ ಸದಾಶಿವ ಆಯೋಗದ ವರದಿಯನ್ನು ಬದಿಗಿಟ್ಟು, ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂ‍ಪುಗಳಾಗಿ ವರ್ಗೀಕರಿಸಿ, ಮೀಸಲಾತಿ ನಿಗದಿಪಡಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, ಇದಕ್ಕೆ ಬೋವಿ ಮತ್ತು ಬಂಜಾರರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಬಿಜೆಪಿ ಪಾಲಿಗೆ ಯಾವ ಮೀಸಲಾತಿ ಅಸ್ತ್ರವೂ ಮತ ಬೆಳೆ ತಂದುಕೊಡಲಿಲ್ಲ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುತ್ತಿದ್ದಂತೆಯೇ, ಸದಾಶಿವ ಆಯೋಗದ ವರದಿ ಮತ್ತೆ ಬೇಡಿಕೆಯ ಮುಂಚೂಣಿಗೆ ಬಂದಿತು. ಲೋಕಸಭೆ ಚುನಾವಣೆ ವೇಳೆಗೆ ಈ ವಿಷಯ ಮುನ್ನೆಲೆಗೆ ಬರಬಹುದೆಂಬ ಮುನ್ಸೂಚನೆ ಇದ್ದುದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಳಮೀಸಲಾತಿ ವಿಷಯವನ್ನು ಕೇಂದ್ರದ ಹೆಗಲಿಗೆ ದಾಟಿಸಿದ್ದಾರೆ. 

2018ರಲ್ಲಿ ಸಿದ್ಧಗೊಂಡಿದ್ದ ಜಾತಿ ಗಣತಿ ವರದಿಗೆ ಲಿಂಗಾಯತ, ಒಕ್ಕಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ಮಧ್ಯೆಯೂ, ಸಿದ್ದರಾಮಯ್ಯನವರು ಜಾತಿಗಣತಿ ವರದಿ ಸ್ವೀಕರಿಸಿದ್ದಾರೆ. ವರದಿಯನ್ನು ಜಾರಿ ಮಾಡುವ ವಿಷಯದಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಅಹಿಂದ ಸಮುದಾಯಗಳ ಮೇಲೆ ಈ ವರದಿ ಸ್ವೀಕಾರ ಎಷ್ಟರಮಟ್ಟಿಗೆ ಪರಿಣಾಮ ಬೀರಿ, ಮತವಾಗಿ ಪರಿವರ್ತಿತವಾಗಲಿದೆ ಎಂಬುದನ್ನು ಚುನಾವಣೆ ಫಲಿತಾಂಶವೇ ಹೇಳಬೇಕಿದೆ.

ಇದರ ಜತೆಗೆ, ಪಂಚಮಸಾಲಿ ಮೀಸಲಾತಿ ಈಗಲೂ ಜೀವಂತವಾಗಿದೆ. ಬಿಜೆಪಿಯು ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಸಮುದಾಯದ ಸ್ವಾಮೀಜಿಗಳೇ ಅಪಸ್ವರ ಎತ್ತಿದ್ದಾರೆ. ಇದನ್ನು ಬಿಜೆಪಿ ನಾಯಕರು ಹೇಗೆ ನಿವಾರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಇದೆ. 

ಕಾಂಗ್ರೆಸ್ ಸರ್ಕಾರದ ನಡೆ

  • lಕೇಂದ್ರ ಸರ್ಕಾರವು ಸಂವಿಧಾನದ 341ನೇ ವಿಧಿಗೆ ಹೊಸತಾಗಿ ಖಂಡ (3) ಅನ್ನು ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶ ಆಗಲಿದೆಯೆಂದು ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು

  • ಲಿಂಗಾಯತ, ಒಕ್ಕಲಿಗ, ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಬೊಮ್ಮಾಯಿ ಸರ್ಕಾರದ ಕ್ರಮದ ಬಗ್ಗೆ ಎಚ್ಚರಿಕೆಯ ಹೆಜ್ಜೆ

  • ಬಿಜೆಪಿ ಸರ್ಕಾರ ರದ್ದುಪಡಿಸಿದ್ದ ಮುಸ್ಲಿಮರ ಶೇ 4 ಮೀಸಲಾತಿ ಮರು ಜಾರಿ ಭರವಸೆ. ಆದರೆ, ಸದ್ಯ, ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಮೌನ 

  • 2015ರಲ್ಲಿ ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಒಕ್ಕಲಿಗ, ಲಿಂಗಾಯತ ಸಮುದಾಯದ ತೀವ್ರ ವಿರೋಧದ ನಡುವೆಯೂ ಸ್ವೀಕಾರ

ಬಿಜೆಪಿ ಸರ್ಕಾರದ ನಡೆ

  • ಹಿಂದುಳಿದ ವರ್ಗಗಳ ‘ಪ್ರವರ್ಗ 2ಬಿ’ಗೆ (ಮುಸ್ಲಿಂ ಮತ್ತು ಅದರಲ್ಲಿರುವ ಉಪ ಜಾತಿಗಳು) ನೀಡಿದ್ದ ಶೇ 4 ಮೀಸಲಾತಿ ರದ್ದು

  • ಒಕ್ಕಲಿಗರಿರುವ ‘ಪ್ರವರ್ಗ 3ಎ’ ಮತ್ತು ಪಂಚಮಸಾಲಿ ಲಿಂಗಾಯತರಿರುವ ‘ಪ್ರವರ್ಗ 3ಬಿ’ಗೆ ತಲಾ ಶೇ 2ರಂತೆ ಮೀಸಲಾತಿ ಹೆಚ್ಚಳ. ‘ಪ್ರವರ್ಗ 3ಎ’, ‘3ಬಿ’ ಬದಲು ‘ಪ್ರವರ್ಗ 2ಸಿ’, ‘2ಡಿ’ ಸೃಜನೆ

  • ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ ರೂಪಿಸಿ, ಎಸ್‌ಸಿ ಮೀಸಲಾತಿ ಶೇ 15ರಿಂದ ಶೇ 17ಕ್ಕೆ, ಎಸ್‌ಟಿ ಮೀಸಲಾತಿ ಶೇ 3ರಿಂದ ಶೇ 7ಕ್ಕೆ ಹೆಚ್ಚಳ

  • ಸದಾಶಿವ ಆಯೋಗದ ವರದಿ ‘ಅಪ್ರಸ್ತುತ’ ಎಂದು ಷರಾ ಬರೆದ ಸಂಪುಟ ಉಪ ಸಮಿತಿ, ಪರಿಶಿಷ್ಟ ಜಾತಿಗಳ ಜಾತಿವಾರಿ ಜನಸಂಖ್ಯೆ ಪರಿಗಣಿಸಿ ನಾಲ್ಕು ಗುಂ‍ಪುಗಳಾಗಿ ವರ್ಗೀಕರಿಸಿ, ಶೇಕಡವಾರು ಮೀಸಲಾತಿ ನಿಗದಿಪಡಿಸಿ ಕೇಂದ್ರಕ್ಕೆ ಶಿಫಾರಸು

‘ಶೇ 50 ಮಿತಿ ತೆರವಿಗೆ ಸಂವಿಧಾನ ತಿದ್ದುಪಡಿ’

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಸಾಮಾಜಿಕ– ಆರ್ಥಿಕ ಜಾತಿಗಣತಿ ನಡೆಸುವುದು, ಈಗ ಇರುವ ಮೀಸಲಾತಿಯ ಶೇ 50ರ ಮಿತಿ ತೆಗೆದು ಹಾಕಿ ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿ ಹೆಚ್ಚಿಸುವುದು, ಎಲ್ಲ ಜಾತಿಗಳು ಮತ್ತು ಸಮುದಾಯಗಳಿಗೆ ಇಡಬ್ಲ್ಯುಎಸ್‌ ಮೀಸಲಾತಿ ವಿಸ್ತರಿಸುವುದು ಮುಂತಾದ ಭರವಸೆಗಳನ್ನು  ಪ್ರಣಾಳಿಕೆಯಲ್ಲಿ ಘೋಷಿಸಿದೆ. ‘ಮೀಸಲಾತಿ ಮಿತಿಯನ್ನು ಈಗಿರುವ ಶೇ 50ರಿಂದ ಶೇ 75ಕ್ಕೆ ಏರಿಸಲಾಗುವುದು. ಜನಸಂಖ್ಯೆಯ ಆಧಾರದಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ನೀಡಲಾಗುವುದು’  ಎಂದು ಸಿದ್ದರಾಮಯ್ಯ ಈ ಹಿಂದೆಯೇ ಭರವಸೆ ನೀಡಿದ್ದರು. ರಾಜ್ಯದಲ್ಲಿ ಎಚ್‌. ಕಾಂತರಾಜ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ವರದಿ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯವೂ ಮಾನ್ಯತೆ ನೀಡಲಿದೆ ಎನ್ನುವುದು ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT