ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಆಪರೇಷನ್‌ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

Published 13 ಮೇ 2024, 10:32 IST
Last Updated 13 ಮೇ 2024, 10:32 IST
ಅಕ್ಷರ ಗಾತ್ರ

ಬೆಂಗಳೂರು: ಎನ್‌ಡಿಎ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಸೋಲಲಿದೆ. ರಾಜ್ಯದಲ್ಲಿ ಆಪರೇಷನ್‌ ಕಮಲದ ಮೂಲಕ ಸರ್ಕಾರ ಪತನಗೊಳಿಸುವುದು ಬಿಜೆಪಿಯ ಹಗಲುಗನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಪದವೀಧರ ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ ಅವರ ನಾಮಪತ್ರ ಸಲ್ಲಿಕೆಯಲ್ಲಿ ಸೋಮವಾರ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ. ಮಹಾರಾಷ್ಟ್ರದಲ್ಲಿ ಆದಂತೆ ಆಪರೇಷನ್‌ ಕಮಲ ಕರ್ನಾಟಕದಲ್ಲೂ ನಡೆಯಲಿದೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಮ್ಮ ಶಾಸಕರಲ್ಲಿ ಮಾರಾಟವಾಗಲು ಯಾರೂ ತಯಾರಿಲ್ಲ. ಒಂದು ವರ್ಷದಿಂದ ಇಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ? ಮಾಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗಲು ಸಾಧ್ಯವಿಲ್ಲ’ ಎಂದರು.

ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಗೆಲ್ಲಲಿದ್ದು, ನಮ್ಮವರೇ ಪ್ರಧಾನಮಂತ್ರಿಯಾಗಲಿದ್ದಾರೆ’ ಎಂದು ಹೇಳಿದರು.

ಗೆಲುವು ಖಚಿತ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ರಾಮೋಜಿಗೌಡ ಮತ್ತು ಡಿ. ಟಿ. ಶ್ರೀನಿವಾಸ್ ಗೆಲುವು ಖಚಿತ. ಆರು ತಿಂಗಳ ಹಿಂದೆಯೇ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

‘ಇಬ್ಬರೂ ಸಮರ್ಥ ಅಭ್ಯರ್ಥಿಗಳು. ಶ್ರೀನಿವಾಸ್ ಅವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು. ರಾಮೋಜಿ ಗೌಡ ಅವರೂ ಶಿಕ್ಷಕರಾಗಿ ಕೆಲಸ ಮಾಡಿದ್ದವರು. ಅವರಿಗೂ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ಬಗೆಹರಿಸುವ ಶಕ್ತಿ ಅವರಿಗಿದೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಕೆ. ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ನಾಮಪತ್ರ ಸಲ್ಲಿಕೆ ವೇಳೆ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT