ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ: ಎಚ್‌.ಆಂಜನೇಯ

Published 2 ಮೇ 2024, 9:49 IST
Last Updated 2 ಮೇ 2024, 9:49 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆಯಿದ್ದು, 20 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಮಾಜಿ ಸಚಿವರೂ ಆದ ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ಅಭಿಪ್ರಾಯಪಟ್ಟರು.

ಬಿಜೆಪಿ ಅಂದರೆ ಸುಳ್ಳು, ಸುಳ್ಳು ಅಂದರೆ ಬಿಜೆಪಿ. ಹತ್ತು ವರ್ಷಗಳಲ್ಲಿ ಸುಳ್ಳು ಹೇಳಿ ಕಾಲ ಕಳೆದಿದ್ದಾರೆ. ಹತ್ತು ವರ್ಷಗಳ ಮೋದಿ ಆಡಳಿತ, ಹಿಂದಿನ ಮನಮೋಹನ್‌ ಸಿಂಗ್‌ ಅವರ ಹತ್ತು ವರ್ಷಗಳ ಆಡಳಿತವನ್ನು ಹೋಲಿಸಿದರೆ ಸಿಂಗ್ ಕಾಲ ಉತ್ತಮವಾಗಿತ್ತು ಎನ್ನುವುದು ಗೊತ್ತಾಗುತ್ತದೆ. ಸಿಂಗ್‌ ಕಾಲದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿತ್ತು. ಪೆಟ್ರೋಲ್‌ ಪ್ರತಿ ಲೀಟರ್‌ಗೆ ₹ 55 ಇತ್ತು. ಮೋದಿ ಕಾಲದಲ್ಲಿ ಯಾವುದರ ಬೆಲೆಯೂ ನಿಯಂತ್ರಣದಲ್ಲಿಲ್ಲ. ಪೆಟ್ರೋಲ್‌ ಬೆಲೆ ₹ 100ರ ಗಡಿ ದಾಟಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೋದಿ ದುರಾಡಳಿತದಿಂದ ರೈತರು, ಶ್ರಮಿಕರು, ನಿರುದ್ಯೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಮೋದಿ ವಚನ ಭ್ರಷ್ಟರಾಗಿದ್ದಾರೆ. ಅವರು ಕೊಟ್ಟಿದ್ದ ಯಾವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ಆದರೆ, ನಮ್ಮ ಪಕ್ಷ ನುಡಿದಂತೆ ನಡೆದುಕೊಂಡಿದೆ. ಕೊಟ್ಟ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲರಿಗೂ ಅದರ ಪ್ರಯೋಜನ ಸಿಗುತ್ತಿದೆ. ನಮಗೆ ಮತ ಕೇಳುವ ನೈತಿಕ ಹಕ್ಕು ಇದೆ ಎಂದರು.

ಎಲ್ಲದರ ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಗ್ಯಾರಂಟಿಗಳ ಜಾರಿಯಿಂದ ಅವರಿಗೆ ಸ್ವಲ್ಪ ನೆರವಾಗಿದೆ. ಎಲ್ಲರಿಗೂ ಉಚಿತ ವಿದ್ಯುತ್‌ ಕೊಡಲಾಗುತ್ತಿದ್ದು, ಯಾರ ಮನೆಯಲ್ಲೂ ಕತ್ತಲೆ ಇಲ್ಲ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಈಗ ರಾಜ್ಯ ದಿವಾಳಿಯಾಗಿದೆಯೇ? ಎಂದು ಪ್ರಶ್ನಿಸಿದರು.

ಹಿಂದೂಗಳ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಹಾಗಿದ್ದರೆ ದಲಿತರು, ಅಸ್ಪೃಶ್ಯರಿಗೇಕೆ ಏನೂ ಮಾಡುತ್ತಿಲ್ಲ. ಹಿಂದೂ ಹಿಂದೂ ಎಂದು ಶೋಷಿತರು, ಅಸ್ಪೃಶ್ಯರನ್ನು ಹಿಂದೆ ತಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ, ಸಿಂಗ್‌ ಅವರ ಕಾಲದಲ್ಲಿ ಈ ದೇಶದ ಆರ್ಥಿಕ, ಶೈಕ್ಷಣಿಕವಾಗಿ ಮೇಲೆ ಬಂದಿದೆ. ಕಾಂಗ್ರೆಸ್‌ ಕಾಲದಲ್ಲಿ ಆಸ್ಪತ್ರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು, ಅತ್ಯುತ್ತಮ ರಸ್ತೆಗಳು, ಪರಮಾಣು ಬಾಂಬ್‌ ಸೇರಿದಂತೆ ಅನೇಕ ಕೆಲಸಗಳಾಗಿವೆ. ಕಾಂಗ್ರೆಸ್‌ನವರು ಕಟ್ಟಿಸಿದ ಆಸ್ಪತ್ರೆಯಲ್ಲೇ ಮೋದಿ ಕೂಡ ಜನಿಸಿದ್ದಾರೆ. ಮೋದಿಯವರ ಕಾಲದಲ್ಲಿ ಏನಾಗಿದೆ ಬಿಜೆಪಿಯವರೇ ತಿಳಿಸಬೇಕು ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಜಾರ್ಜ್‌ ಫರ್ನಾಂಡಿಸ್‌, ಚಂದ್ರಕಾಂತ ಹಿಪ್ಪಳಗಾಂವ, ರೋಹಿದಾಸ್‌ ಘೋಡೆ, ಸಂಜಯ ಜಾಹಗೀರದಾರ್‌, ಶ್ಯಾಮ್‌, ಅಬ್ದುಲ್‌ ಮನ್ನಾನ್‌ ಸೇಠ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT