ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Politics | ರಾಜ್ಯ ರಾಜಕಾರಣಕ್ಕೆ ಡಿ.ಕೆ. ಸುರೇಶ್?

ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆ: ಗರಿಗೆದರಿದ ಚರ್ಚೆ
Published 6 ಜೂನ್ 2024, 4:00 IST
Last Updated 6 ಜೂನ್ 2024, 4:00 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋತಿರುವ ಡಿ.ಕೆ. ಸುರೇಶ್ ರಾಜ್ಯ ರಾಜಕಾರಣ ಪ್ರವೇಶಿಸಲಿದ್ದಾರೆಯೇ? 

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಇಂತಹದ್ದೊಂದು ಚರ್ಚೆ ಜಿಲ್ಲೆಯಲ್ಲಿ ಇದೀಗ ಆರಂಭವಾಗಿದೆ. 

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಚ್‌.ಡಿ. ಕುಮಾರಸ್ವಾಮಿ ಸಹಜವಾಗಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಮೂಲಕ ಸುರೇಶ್ ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಗ್ರಾಮಾಂತರದಲ್ಲಿ ಸುರೇಶ್ ಕಂಡಿರುವ ಸೋಲು ಕೇವಲ ಅವರಿಗಷ್ಟೇ ಅಲ್ಲ ವರ ಅಣ್ಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖಭಂಗಕ್ಕೂ ಕಾರಣವಾಗಿದೆ. ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಡಿ.ಕೆ. ಸಹೋದರರಿಗೆ ಎದುರಾಗಿದೆ. 

ಸದ್ಯ ಸುರೇಶ್ ಮುಂದಿರುವುದು ಎರಡೇ ಆಯ್ಕೆ. ಪಕ್ಷದಲ್ಲಿ ಯಾವುದಾದರೂ ಸ್ಥಾನಮಾನ ಪಡೆದು ಮುಂದಿನ ಚುನಾವಣೆವರೆಗೆ ಕಾಯಬೇಕು. ಇಲ್ಲದಿದ್ದರೆ, ಚನ್ನಪಟ್ಟಣದಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಬೇಕು.

ಸುಮ್ಮನೆ ಕೂರಲ್ಲ: 

‘ಅಣ್ಣನ ಬೆನ್ನೆಲುಬಾಗಿರುವ ಸುರೇಶ್ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಸೋಲಿನ ಸೇಡು ತೀರಿಸಿಕೊಳ್ಳಲು ಸಿಗುವ ಯಾವ ಅವಕಾಶವನ್ನೂ ಅವರು ಬಿಡುವುದಿಲ್ಲ. ಚನ್ನಪಟ್ಟಣದಲ್ಲಿ ಅವರು ಸ್ಪರ್ಧಿಸಿದರೆ ಗೆಲ್ಲಲು ಪೂರಕ ವಾತಾವರಣವಿದೆ. ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪಡೆದಿರುವ ಮತಗಳೇ ಇದಕ್ಕೆ ಸಾಕ್ಷಿ’ ಎಂದು ಚನ್ನಪಟ್ಟಣ ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಒಂದು ಕಾಲದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಸದ್ಯ ಬಿಜೆಪಿಯಲ್ಲಿರುವ ಸಿ.ಪಿ. ಯೋಗೇಶ್ವರ್ 2004 ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2018 ಮತ್ತು 2023ರಿಂದ ಎಚ್‌.ಡಿ. ಕುಮಾರಸ್ವಾಮಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಕುಸಿಯುತ್ತಾ ಬಂದಿದೆ.

ಗೆಲುವು ಖಚಿತ: 

‘ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಪಡೆದಿರುವುದು 85,357 ಮತಗಳು. ಇದು ‘ಕೈ’ ಚೇತರಿಸಿಕೊಂಡಿರುವ ಲಕ್ಷಣ ಸೂಚಿಸುತ್ತದೆ. ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ 1,06,971 ಮತಗಳೊಂದಿಗೆ 21,614 ಮತಗಳ ಮುನ್ನಡೆಯಷ್ಟೇ ಪಡೆಯಲು ಸಾಧ್ಯವಾಗಿದೆ. ಸುರೇಶ್ ಪ್ರಯತ್ನವು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತಬ್ಯಾಂಕ್‌ ವೃದ್ಧಿಸಿದೆ. ಹಾಗಾಗಿ, ಉಪ ಚುನಾವಣೆಯಲ್ಲಿ ಸುರೇಶ್ ಸ್ಪರ್ಧಿಸಿದರೆ ಗೆಲುವು ಖಚಿತ’ ಎಂದು ಮತ್ತೊಬ್ಬ ಕಾಂಗ್ರೆಸ್ ಮುಖಂಡ ವಿಶ್ವಾಸ ವ್ಯಕ್ತಪಡಿಸಿದರು.

ವರ್ಷದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 96,592 ಮತ ಪಡೆದು ಗೆದ್ದ ಎಚ್‌.ಡಿ.ಕುಮಾರಸ್ವಾಮಿ ಲೀಡ್ ಕೇವಲ 15,915. ಬಿಜೆಪಿಯ ಯೋಗೇಶ್ವರ್ 80,677 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ 15,374 ಮತ ಪಡೆದಿದ್ದರು’ ಎಂದು ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡರು ಹೇಳಿದರು.

ಮತ ಲೆಕ್ಕಾಚಾರ

ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಕ್ಕಲಿಗರ ಮತಗಳು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ನಡುವೆ ವಿಭಜನೆಯಾಗಿದ್ದವು. ಅಲ್ಪಸಂಖ್ಯಾತರು ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದರಿಂದ ಗೆಲುವಿನ ದಡ ಸೇರಿದ್ದರು. ಕಮಲ–ದಳ ಮೈತ್ರಿ ಬಳಿಕ ಅಲ್ಪಸಂಖ್ಯಾತರ ಒಲವು ಕಾಂಗ್ರೆಸ್‌ ಕಡೆಗೆ ತಿರುಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳ ಹಲವು ಮುಖಂಡರು ‘ಕೈ’ ಹಿಡಿದಿದ್ದಾರೆ. ಹಾಗಾಗಿ ಸುರೇಶ್ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಸುರೇಶ್ ಬೆಂಬಲಿಗರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT