ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ | ತಮಟೆ ಕಲಾವಿದರಿಗೆ ಹೆಚ್ಚಿದ ಬೇಡಿಕೆ

Published 1 ಮೇ 2023, 13:03 IST
Last Updated 1 ಮೇ 2023, 13:03 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾದ ನಂತರ, ಮೂಲೆಗುಂಪಾಗಿದ್ದ ತಮಟೆ ವಾದನ ಮಾಡುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದ್ದು, ಆಧುನಿಕತೆಯ ನಡುವೆಯೂ ಜಾನಪದ ಶೈಲಿಯ ತಮಟೆವಾದನಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದ್ದು, ತಮಟೆ ಕಲಾವಿದರು ಕೈ ತುಂಬಾ ಸಂಪಾದನೆ ಮಾಡುವಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಕೇವಲ ಊರ ಹಬ್ಬಗಳು, ಜಾತ್ರೆಗಳು, ಯಾರಾದರೂ ಮೃತಪಟ್ಟಾಗ ಅಂತ್ಯಸಂಸ್ಕಾರದ ವೇಳೆ ತಮಟೆಗಳ ವಾದನ ನಡೆಯುತ್ತಿತ್ತು. ಈಗ ಚುನಾವಣೆಯ ಸಮಯವಾದ್ದರಿಂದ ಪ್ರತಿನಿತ್ಯ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ. ದಿನಕ್ಕೆ ತಮಟೆ ಭಾರಿಸುವ ಕಲಾವಿದನಿಗೆ 1 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತದೆ. ಒಂದು ತಂಡದಲ್ಲಿ 15 ಕ್ಕೂ ಹೆಚ್ಚು ಮಂದಿ ಕಲಾವಿದರಿರುತ್ತಾರೆ. ಟೆಂಪೋ ಬಾಡಿಗೆ ಸೇರಿ ದಿನಕ್ಕೆ 20 ಸಾವಿರದವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮತಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಪ್ರಚಾರ ಕಾರ್ಯಕ್ಕೆ ಮತ್ತಷ್ಟು ಮೆರಗು ನೀಡಬೇಕು, ಜನರನ್ನು ಉತ್ಸಾಹಭರಿತರನ್ನಾಗಿಸಬೇಕು ಎನ್ನುವ ಕಾರಣಕ್ಕೆ, ಮತಯಾಚನೆ ಮಾಡುವ ಹಳ್ಳಿಗಳಿಗೆ ಜಾನಪದ ಸಂಸ್ಕೃತಿಯ ಒಂದು ಭಾಗವಾಗಿರುವ ತಮಟೆ ವಾದಕರನ್ನು ಕರೆಯಿಸಿಕೊಳ್ಳುತ್ತಿದ್ದಾರೆ.

'ರಾಜಕೀಯ ಪಕ್ಷಗಳ ನಾಯಕರುಗಳು, ತಾವು ಹೋದಲೆಲ್ಲಾ ಹಳ್ಳಿ, ಹಳ್ಳಿಯಲ್ಲೂ ಚುನಾವಣಾ ಪ್ರಚಾರ ಆರಂಭಕ್ಕೆ ತಮಟೆ ವಾದನ ಮಾಡಿಸಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಲಾವಿದರಿಗಾಗಿ ಪ್ರತ್ಯೇಕವಾದ ವಾಹನದ ವ್ಯವಸ್ಥೆಯನ್ನು ಮಾಡಿಕೊಟ್ಟು, ಊರಿಂದ ಊರಿಗೆ ಕರೆದೊಯ್ಯುತ್ತಿದ್ದಾರೆ. ಬಹಿರಂಗ ಪ್ರಚಾರ ಅಂತ್ಯವಾಗುವವರೆಗೂ ಪ್ರಚಾರದ ಒಂದು ಭಾಗವಾಗಿ ತಮಟೆವಾದನ ಕಲಾವಿದರು ತೊಡಗಿಸಿಕೊಳ್ಳಲಿದ್ದಾರೆ' ಎಂದು ಕಲಾವಿದ ಮಹೇಶ್ ಹೇಳುತ್ತಾರೆ.

ಒಂದು ದಿನ ಕಾಂಗ್ರೆಸ್, ಮತ್ತೊಂದು ದಿನ ಬಿಜೆಪಿ, ಮಗದೊಂದು ದಿನ ಜೆಡಿಎಸ್ ಹೀಗೆ ದಿನಕ್ಕೊಂದು ಪಕ್ಷದ ಅಭ್ಯರ್ಥಿಯೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 10-15 ಜನರ ತಂಡವನ್ನು ಹೊಂದಿರುವ ಕಲಾವಿದರು, ದಿನಕ್ಕೆ 25 ರಿಂದ 30 ಸಾವಿರ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೆ ರಜೆ ಇರುವ ಕಾರಣ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಕಲಾವಿದರೂ ಕೂಡಾ ತಮಟೆ ವಾದನಗಳಲ್ಲಿ ತೊಡಗಿಸಿಕೊಂಡು ಹಣ ಸಂಪಾದನೆಗೆ ಇಳಿದಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕಲಾವಿದರು ಪಾಳಿ ಮಾಡಿಕೊಂಡು ತಮಟೆ ವಾದನ ಮಾಡುತ್ತಿದ್ದಾರೆ. ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳನ್ನು ಅಡ್ಡಗಟ್ಟಿಕೊಂಡು ಅವರಿಂದಲೂ ಒಂದಷ್ಟು ಹಣವನ್ನು ತಮ್ಮ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಈ ಮೊದಲು, ತಮಟೆ ಬಾರಿಸುವ ಕಲಾವಿದರಿಗೆ ಊಟ ಕೊಟ್ಟು, ಸಂಜೆಯಾದರೆ ಒಂದಷ್ಟು ಮದ್ಯವನ್ನು ಕೊಟ್ಟು ಕಳುಹಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ತಮಟೆ ಕಲಾವಿದರೂ ಕೂಡಾ ದಿನಕ್ಕೆ 1 ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡಿಕೊಂಡು ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ. ಅವರ ಮಕ್ಕಳಿಗೂ ಕೂಡಾ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT