ಚಾಮರಾಜನಗರ: ಹನೂರು ಸಮೀಪದ ಕೊಂಗರಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ನರೇಂದ್ರ ಪರವಾಗಿ ಮತಯಾಚನೆ ಮಾಡಲು ಮುಖಂಡರು ಹೋದಾಗ ವಾರ್ಡಿನ ಜನರು ದಿಕ್ಕಾರ ಕೂಗಿರುವ ಘಟನೆ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
‘ಕಾಂಗ್ರೆಸ್ ಪಕ್ಷದಿಂದ ಗೆದ್ದು ಆಯ್ಕೆಯಾದ ನಾಲ್ಕು ಜನ ಸದಸ್ಯರು ಇದ್ದರು ವಾರ್ಡಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಗಲ್ಲಿ ಮತ್ತು ರೋಡು ವ್ಯವಸ್ಥೆ ಇಲ್ಲ ಎಂದು ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡಿನ ಮುಖಂಡರಾದ ಮಹೇಶ್ ಕೃಷ್ಣ, ಪುಟ್ಟಣ್ಣ, ನಂಜುಂಡಸ್ವಾಮಿ, ಶಾಸಕ ನರೇಂದ್ರ ಪುತ್ರ ನವನೀತ್ ಗೌಡ ಮತಯಾಚನೆ ಮಾಡಲು ಬಂದಾಗ ಮತದಾರರು ಪ್ರಶ್ನೆಗಳ ಸುರಿಮಳೆಗೈದರು.
‘ಹದಿನೈದು ವರ್ಷಗಳಿಂದ ಮೂರು ಬಾರಿ ಶಾಸಕರಾಗಿ ಒಮ್ಮೆಯೂ ಭೇಟಿ ಮಾಡಿಲ್ಲ. ನಮ್ಮ ಕಾಲೊನಿಗೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಯಾವ ಮುಖ ತೆಗೆದುಕೊಂಡು ಬಂದಿದ್ದೀರಾ’ ಎಂದು ಗ್ರಾಮದ ಯಜಮಾನರು ಮುಖಂಡರು ನರೇಂದ್ರ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.