ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ| ಟಿಕೆಟ್‌ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ ದೊಡ್ಡನಗೌಡ ಪಾಟೀಲ

ಕೇಂದ್ರ– ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತ ಕೇಳುತ್ತಿರುವ ದೊಡ್ಡನಗೌಡ
Last Updated 8 ಏಪ್ರಿಲ್ 2023, 5:04 IST
ಅಕ್ಷರ ಗಾತ್ರ

ಕುಷ್ಟಗಿ: ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿ ವಾರ ಕಳೆದರೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಅಧಿಕೃತವಾಗಿ ಖಚಿತವಾಗಿಲ್ಲ. ಆದರೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರೇ ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್‌ ಅಧಿಕೃತ ಘೋಷಣೆ ಮಾಡಿದೆ.

ಬಿಜೆಪಿ ಅಭ್ಯರ್ಥಿ ಘೋಷಣೆ ಯಾಗದಿದ್ದರೂ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಪರ್ಯಾಯ ಆಯ್ಕೆಗಳಿಲ್ಲ ಎಂದೇ ಹೇಳಲಾಗುತ್ತಿದೆ. ದೊಡ್ಡನಗೌಡರು 2004ರಿಂದ 2018ರ ಅವಧಿಯಲ್ಲಿ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದು, ಎರಡು ಬಾರಿ ಶಾಸಕರಾಗಿದ್ದಾರೆ.

ಆದರೂ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು ಕೂಡ ಆಕಾಂಕ್ಷಿಯಾಗಿ ಟಿಕೆಟ್‌ ಗಿಟ್ಟಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿ ಒಬ್ಬ ಪಂಚಮಸಾಲಿ ಸಮುದಾಯದ ವ್ಯಕ್ತಿಗೆ ಟಿಕೆಟ್‌ ನೀಡುವ ಯೋಚನೆ ಬಿಜೆಪಿಯಲ್ಲಿದೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಪಂಚಮಸಾಲಿ ಸಮುದಾಯದ ವ್ಯಕ್ತಿಗೆ ಮಣೆ ಹಾಕಿದರೆ ಅವಕಾಶ ಸಿಗಬಹುದು ಎನ್ನುವ ಆಶಾಭಾವನೆಯಿಂದ ಬೆಂಗಳೂ ರಿನಲ್ಲಿ ಹಳ್ಳೂರು ಠಿಕಾಣಿ ಹೂಡಿದ್ದಾರೆ.

ತಾವೇ ಅಭ್ಯರ್ಥಿ ಎಂದೆ ಈಗಾಗಲೇ ಪ್ರತಿನಿತ್ಯ ಹಳ್ಳಿಗಳಿಗೆ ಭೇಟಿ ನೀಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿರುವ ದೊಡ್ಡನಗೌಡ ಪಾಟೀಲ, ಚುನಾವಣೆ ಬಂದಾಗಷ್ಟೇ ಹಳ್ಳಿಗೆ ಹೋಗುತ್ತಾರೆ ಎಂಬ ಕಾಂಗ್ರೆಸ್‌ ಪಕ್ಷದವರು ಹೊರಿಸುತ್ತಿರುವ ಆರೋಪವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಜನಮನಕ್ಕೆ ಹತ್ತಿರವಾಗುವ ಪ್ರಯತ್ನದಲ್ಲಿರುವ ದೊಡ್ಡನಗೌಡ ಅದೇ ವೇದಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ಅವರು ಶಾಸಕರಾಗಿದ್ದ ಅವಧಿಯಲ್ಲಿನ ಲೋಪದೋಷಗಳ ಪಟ್ಟಿಯನ್ನು ಜನರ ಮುಂದಿಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ಜಾರಿಗೆ ಬಂದ ಯೋಜನೆಗಳನ್ನು ಮತ್ತು ಪಕ್ಷದ ಸಾಧನೆ ಗಳನ್ನು ಜನರಿಗೆ ಮನವರಿಕೆ ಮಾಡಿಕೊ ಡುತ್ತಿದ್ದಾರೆ. ನೀರಾವರಿ ವಿಷಯದಲ್ಲಿ ಬಯ್ಯಾಪುರ ಮುತುವರ್ಜಿ ವಹಿಸಿಲ್ಲ. ಮುಂದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸವಿದ್ದು, ತಮ್ಮನ್ನು ಬೆಂಬಲಿಸಬೇಕು. ಅದರ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ತಮಗೆ ಶಕ್ತಿ ತುಂಬುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.

ಇತಿಹಾಸದ ಬಲ: ಅಭ್ಯರ್ಥಿ ಘೋಷಣೆಗೂ ಮೊದಲೇ ದೊಡ್ಡನಗೌಡ ಪಾಟೀಲ ಅತೀವ ಉತ್ಸಾಹದಿಂದ ಪ್ರಚಾರ ಮಾಡುತ್ತಿರುವುದರ ಹಿಂದೆ ‘ಇತಿಹಾಸದ ಬಲ’ ಕೂಡ ಇದೆ.

ಕುಷ್ಟಗಿ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾದವರು ಮುಂದಿನ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದ ಇತಿಹಾಸವಿಲ್ಲ. ಇದು ದೊಡ್ಡನಗೌಡರ ಶಕ್ತಿ ಹೆಚ್ಚಿಸಿದೆ. ಆದರೆ, ಬಯ್ಯಾಪುರ ಅವರು ‘ಇತಿಹಾಸ ಬದಲಿಸುತ್ತೇನೆ’ ಎನ್ನುತ್ತಿದ್ದು, ಜನರ ನಾಡಿಮಿಡಿತ ಅರಿಯುವ ನಿಟ್ಟಿನಲ್ಲಿ ಇಬ್ಬರೂ ಟೊಂಕಕೊಟ್ಟಿ ನಿಂತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT