ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಯಲಬುರ್ಗಾ ಕ್ಷೇತ್ರದಲ್ಲಿ 2,27,883 ಮತದಾರರು

Published 19 ಮಾರ್ಚ್ 2024, 15:15 IST
Last Updated 19 ಮಾರ್ಚ್ 2024, 15:15 IST
ಅಕ್ಷರ ಗಾತ್ರ

ಯಲಬುರ್ಗಾ: ‘ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಒಟ್ಟು 2,27,883 ಮತದಾರರು ಇದ್ದಾರೆ’ ಎಂದು ಸಹಾಯಕ ಚುನಾವಣಾಧಿಕಾರಿ ಟಿ.ಎಸ್. ರುದ್ರೇಶಪ್ಪ ಹೇಳಿದರು.

ಕಂದಾಯಭವನದಲ್ಲಿ ಆಯೋಜಿಸಿದ್ದ ರಾಜಕೀಯ ಮುಖಂಡರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 256 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,13,815 ಪುರಷರು, 1,14,063 ಮಹಿಳೆಯರು, 5 ಇತರೆ ಮತದಾರರಿದ್ದಾರೆ. ಈ ಪೈಕಿ, 4915 ಯುವ ಮತದಾರರು, 3249 ಅಂಗವಿಕಲರು, 85 ವರ್ಷಕ್ಕೂ ಮೇಲ್ಪಟ್ಟ 1564 ಮತದಾರರು ಇದ್ದಾರೆ. ಮತಗಟ್ಟೆಗೆ ಬರಲು ಸಾಧ್ಯವಾಗದ ಹಿರಿಯರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಮುಂಚಿತವಾಗಿಯೇ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ’ ಎಂದರು.

‘ರಾಜಕೀಯ ಪಕ್ಷಗಳು ಚುನಾವಣೆ ಸಂಬಂಧ ನಡೆಸಲಾಗುವ ಸಭೆ– ಸಮಾರಂಭಗಳು, ಪ್ರಚಾರ ಕಾರ್ಯಕ್ರಮಗಳಿಗೆ, ವಾಹನ ಬಳಕೆಗಾಗಿ ಅನುಮತಿ ನೀಡಲು ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಚನೆಯಾದ ಏಕ ಗವಾಕ್ಷಿ ಸಮಿತಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಭಾರತ ಚುನಾವಣಾ ಆಯೋಗವು ಸುವಿಧಾ ಆ್ಯಪ್ ಪರಿಚಯಿಸಿದೆ. ಇದರ ಮೂಲಕ ಅಥವಾ ಖುದ್ದಾಗಿ ಎಆರ್‌ಒ ಕಚೇರಿಗೆ ಭೇಟಿ ನೀಡಿ ಅನುಮತಿ ಪಡೆಯಬಹುದಾಗಿದೆ. ಸ್ಟಾರ್ ಪ್ರಚಾರಕರು ಹಾಗೂ ಪ್ರಚಾರ ಸ್ಥಳಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ’ ಎಂದರು.

‘ಕ್ಷೇತ್ರದ ಬನ್ನಿಕೊಪ್ಪ, ಬಂಡಿಕ್ರಾಸ್ ಹಾಗೂ ಸಂಕನೂರು ಕ್ರಾಸ್ ಬಳಿ ಚೆಕ್‍ಪೋಸ್ಟ್‌ಗಳನ್ನು ರಚಿಸಲಾಗಿದೆ. ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಅಗತ್ಯ ಸಿಬ್ಬಂದಿ ಹಾಗೂ ವಿವಿಧ ಹಂತದ ತಂಡಗಳನ್ನು ರಚಿಸಲಾಗಿದೆ. ಮಾದರಿ ನೀತಿ ಸಂಹಿತೆಯು ಎಲ್ಲ ಪಕ್ಷಗಳು, ಅಭ್ಯರ್ಥಿಗಳಿಗೂ ಅನ್ವಯವಾಗಲಿದ್ದು, ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು’ ಎಂದರು.

‘ಇಟಗಿ ಹೋಬಳಿ ಕೇಂದ್ರಕ್ಕೆ ಆ ಭಾಗದ ಜನರ ಒತ್ತಾಯವಿದೆ. ಜನರೊಂದಿಗೆ ಸಮಾಲೋಚನೆ ನಡೆಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮನವೊಲಿಸುತ್ತೇವೆ. ಮುಂದಿನ ದಿನಗಳಲ್ಲಿ ಜನರ ಬೇಡಿಕೆ ಈಡೇರಿಸಲು ಸರ್ಕಾರದ ಹಂತದಲ್ಲಿ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಪತ್ರಕರ್ತರ ಪ್ರಶ್ನೆಗೆ ತಹಶೀಲ್ದಾರ್‌ ಬಸವರಾಜ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT