ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸುಳ್ಳುಗಳ ಪ್ರಚಾರದ ಬಗ್ಗೆ ಜನರಿಗೆ ಭ್ರಮ ನಿರಸನ: ಬಿ.ವೈ. ವಿಜಯೇಂದ್ರ

Published 31 ಮಾರ್ಚ್ 2024, 15:47 IST
Last Updated 31 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇವಲ ಸುಳ್ಳುಗಳ ಪ್ರಚಾರದಿಂದ ಪ್ರಯೋಜನ ಆಗದು ಎಂಬುದು ಕಾಂಗ್ರೆಸ್‌ಗೆ ಜ್ಞಾನೋದಯವಾಗಿದೆ. 9 ತಿಂಗಳಲ್ಲೇ ಅತಿ ಕೆಟ್ಟ ಸರ್ಕಾರ ಎಂಬ ಹೆಸರನ್ನೂ ಪಡೆದಿದೆ. ಜನರು ಹತಾಶರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

‘ಕೇಂದ್ರದ ಬಿಜೆಪಿ ಸರ್ಕಾರದ ಜನಪ್ರಿಯತೆ ಬಳಸಿಕೊಂಡು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು’ ಎಂದು ಅವರು ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ತಿಳಿಸಿದರು.

‘ಕಾಂಗ್ರೆಸ್‌ ಸರ್ಕಾರ ಇಲ್ಲಿಯವರೆಗೆ ಸುಳ್ಳುಗಳ ಮೂಲಕ ಜನರನ್ನು ನಂಬಿಸಲು ಹೋದರು. ಜನರಿಗೆ ಅದು ಮನವರಿಕೆ ಆಗಿದೆ. 9 ತಿಂಗಳ ಹಿಂದೆ ಅಧಿಕಾರ ಪಡೆದ ಕಾಂಗ್ರೆಸ್‌ ಸರ್ಕಾರ ಭ್ರಮೆಯಲ್ಲಿ ತೇಲುತ್ತಿತ್ತು. ಮುಖ್ಯಮಂತ್ರಿಯವರಿಗೂ ಸತ್ಯ ಸಂಗತಿಗಳು ಮನವರಿಕೆ ಆಗುತ್ತಿವೆ’ ಎಂದು ಹೇಳಿದರು.

‘ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ತಯಾರಿಗಾಗಿ 10–15 ಜನ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಆದರೆ, ಯಾವ ಒಬ್ಬ ಸಚಿವರೂ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ತಯಾರಾಗಲಿಲ್ಲ. ಮೋದಿಯವರ ಜನಪ್ರಿಯತೆ ಕಾರಣಕ್ಕಾಗಿ ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಮತ್ತು ಜನರಿಂದ ತಿರಸ್ಕೃತರಾದರೆ ಎಂಬ ಭಯದಿಂದ ಸ್ಪರ್ಧಿಸಲು ತಯಾರಾಗಲಿಲ್ಲ’ ಎಂದರು.

‘ಪ್ರಧಾನಿ ಮೋದಿಯವರ ಜನಪ್ರಿಯತೆ ಉತ್ತುಂಗದಲ್ಲಿದೆ. ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಸವಾಲು ನಮ್ಮ ಕಾರ್ಯಕರ್ತರು ಸ್ವೀಕರಿಸಿ ಅದರಲ್ಲಿ ಯಶಸ್ಸು ಕಾಣಬೇಕಿದೆ’ ಎಂದು ವಿಜಯೇಂದ್ರ ಹೇಳಿದರು.

‘ಪಕ್ಷದ ಕಾನೂನು ಘಟಕವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಕೇಸು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲವಾದರೆ, ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ’ ಎಂದರು.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಮಾತನಾಡಿ, ಕಳೆದ 12 ದಿನಗಳಲ್ಲಿ ಸುಮಾರು 25 ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಪ್ರಧಾನಿಯವರ ವಿರುದ್ಧ ಮಾತನಾಡಿದ ಶಿವರಾಜ ತಂಗಡಗಿ ವಿರುದ್ಧ ಕಾರಟಗಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT