ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರ | ಒಗ್ಗೂಡಿದ ಬಲ: ‘ಮೈತ್ರಿ’ಗೆ ಸಿಕ್ಕಿತು ಫಲ

ಜೆಡಿಎಸ್‌ ಪ್ರಾಬಲ್ಯದ ತಾಲ್ಲೂಕುಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ
Published 6 ಜೂನ್ 2024, 6:44 IST
Last Updated 6 ಜೂನ್ 2024, 6:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಚುನಾವಣಾ ಪೂರ್ವ ಹೊಂದಾಣಿಕೆ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಬಣಕ್ಕೆ ಅನುಕೂಲ ಮಾಡಿಕೊಟ್ಟಿತು. ಬಿಜೆಪಿ ಮತ್ತು ಜೆಡಿಎಸ್‌ ಮತಗಳು ಒಗ್ಗೂಡಿದ ಫಲವಾಗಿ ‘ಮೈತ್ರಿ’ ಅಭ್ಯರ್ಥಿ ಗೋವಿಂದ ಕಾರಜೋಳ ನಿರಾಯಾಸ ಗೆಲುವು ಸಾಧ್ಯವಾಯಿತು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಪ್ರಬಲ ಹಿಡಿತ ಹೊಂದಿವೆ. ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಗೆದ್ದು ಬಿಗಿ ಹಿಡಿತ ಸಾಧಿಸಿತ್ತು. ಗೆಲುವಿನ ವಿಶ್ವಾಸದಲ್ಲಿ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ ಅಭ್ಯರ್ಥಿಯನ್ನು ‘ಮೈತ್ರಿ’ ಪಕ್ಷಗಳು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿವೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಲೋಕಸಭಾ ಕ್ಷೇತ್ರವು ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಪಾವಗಡ, ಶಿರಾ, ಹಿರಿಯೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ ಪ್ರಾಬಲ್ಯ ಬಿಜೆಪಿಗಿಂತ ಹೆಚ್ಚಿದೆ. ಚಿತ್ರದುರ್ಗ ಸೇರಿ ಇತರೆಡೆಯೂ ಜೆಡಿಎಸ್‌ ಪ್ರಭಾವ ಬೀರಿರುವುದು ಫಲಿತಾಂಶದಲ್ಲಿ ಗೋಚರಿಸುತ್ತಿದೆ.

ಕ್ಷೇತ್ರ ಹಂಚಿಕೆ ಸೂತ್ರದಲ್ಲಿ ಚಿತ್ರದುರ್ಗ ಬಿಜೆಪಿ ಪಾಲಾಗಿತ್ತು. ಅಭ್ಯರ್ಥಿ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ಬಳಸಿಕೊಂಡ ಬಿಜೆಪಿ, ಸಂಸದರಾಗಿದ್ದ ಎ.ನಾರಾಯಣಸ್ವಾಮಿ ಬದಲಾಗಿ ‘ಎಡಗೈ’ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಟಿಕೆಟ್‌ ನೀಡಿತು. ಅಭ್ಯರ್ಥಿ ಅಂತಿಮಗೊಳಿಸುವ ಹಂತದಲ್ಲಿ ‘ಮೈತ್ರಿ’ ಪಕ್ಷವನ್ನು ವಿಶ್ವಾಸಕ್ಕೆ ಪಡೆಯಲಿಲ್ಲ ಎಂಬ ಅಪಸ್ವರಗಳು ಕೇಳಿಬಂದರೂ ಜೆಡಿಎಸ್‌ ಇದನ್ನು ಬಹಿರಂಗವಾಗಿ ತೋರಿಸಿಕೊಳ್ಳಲಿಲ್ಲ.

ಅಭ್ಯರ್ಥಿ ಘೋಷಣೆಗೂ ಮುನ್ನವೇ ಜೆಡಿಎಸ್‌ ಚುನಾವಣಾ ತಾಲೀಮು ಆರಂಭಿಸಿತ್ತು. ವರಿಷ್ಠರ ಸೂಚನೆಯಂತೆ ವಿಧಾನಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರು ಫೆ.17ರಂದೇ ಕ್ಷೇತ್ರಕ್ಕೆ ಧಾವಿಸಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ‘ಕಾಂಗ್ರೆಸ್‌ ಕಟ್ಟಿಹಾಕಲು ಬಿಜೆಪಿ ಜೊತೆಗಿನ ಹೊಂದಾಣಿಕೆ ಅನಿವಾರ್ಯ. ಮೈತ್ರಿಗೆ ಧಕ್ಕೆ ಆಗದ ರೀತಿಯಲ್ಲಿ ಗೆಲುವಿನ ಹಿತದೃಷ್ಟಿಯಿಂದ ದುಡಿಯೋಣ’ ಎಂದು ಕಿವಿಮಾತು ಹೇಳಿದ್ದರು. ಪಕ್ಷದ ಶಕ್ತಿಯನ್ನು ಒಗ್ಗೂಡಿಸಿದ ಜೆಡಿಎಸ್‌, ‘ಮೈತ್ರಿ’ ಅಭ್ಯರ್ಥಿಗೆ ಧಾರೆ ಎರೆದಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನತಾ ಪರಿವಾರ ಪ್ರಭಾವ ಉಳಿಸಿಕೊಂಡಿದೆ. 1996ರಲ್ಲಿ ಜನತಾ ದಳ, 1999ರಲ್ಲಿ ಜೆಡಿಯು ಈ ಕ್ಷೇತ್ರವನ್ನು ಪ್ರತಿನಿಧಿಸಿವೆ. ಜನತಾ ಪರಿವಾರ ಇಬ್ಭಾಗವಾದ ಬಳಿಕವೂ ಜೆಡಿಎಸ್‌ ಪ್ರಭಾವ ಕಡಿಮೆ ಆಗಿಲ್ಲ. 2004ರಲ್ಲಿ 2.8 ಲಕ್ಷ, 2009ರಲ್ಲಿ 1.4 ಲಕ್ಷ ಹಾಗೂ 2014ರಲ್ಲಿ 2 ಲಕ್ಷ ಮತಗಳನ್ನು ಜೆಡಿಎಸ್‌ ಪಡೆದಿದೆ.

ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡ ಮತ್ತು ಚಳ್ಳಕೆರೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಎರಡನೇ ಸ್ಥಾನ ಪಡೆದಿದ್ದರು. ಹಿರಿಯೂರು ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಗಣನೀಯ ಮತಗಳನ್ನು ಗಳಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ ಮತಗಳು ಒಗ್ಗೂಡಿಸುವ ನಿಟ್ಟಿನಲ್ಲಿ ಎರಡು ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಿದವು. ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಮತಗಳು ‘ಕೈ’ ತಪ್ಪುವುದಿಲ್ಲ ಎಂಬ ಕಾಂಗ್ರೆಸ್‌ ವಿಶ್ವಾಸ ಸಂಪೂರ್ಣ ತಲೆಕೆಳಗಾಗಿದೆ.

ಜೆಡಿಎಸ್‌ ಸರ್ವನಾಶ ಮಾಡುವ ಕುತಂತ್ರವನ್ನು ಕಾಂಗ್ರೆಸ್‌ ಹೆಣೆದಿತ್ತು. ಪಕ್ಷದ ಅಸ್ತಿತ್ವಕ್ಕಾಗಿ ಬಿಜೆಪಿ ಜೊತೆಗಿನ ಮೈತ್ರಿ ಅನಿವಾರ್ಯವಾಗಿತ್ತು. ಪಕ್ಷದ ಉಳಿವಿಗೆ ಕಾರ್ಯಕರ್ತರು ಶ್ರಮಿಸಿದ್ದಾರೆ

-ಎಂ.ಜಯಣ್ಣ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

‘ಮೈತ್ರಿ’ಗೆ ಸಿಕ್ಕ ಮನ್ನಣೆ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಇದು ಎರಡನೇ ಬಾರಿಯ ಹೊಂದಾಣಿಕೆ. 2019ರಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಈ ಬಾರಿ ನಿಷ್ಠೆ ಬದಲಿಸಿ ಕಮಲ ಪಾಳೆಯ ಸೇರಿತ್ತು. ಕಾಂಗ್ರೆಸ್‌ಗಿಂತ ಬಿಜೆಪಿ ಜೊತೆಗಿನ ಹೊಂದಾಣಿಕೆಗೆ ಮತದಾರರು ಮನ್ನಣೆ ನೀಡಿರುವಂತೆ ಕಾಣುತ್ತಿದೆ. ಪಕ್ಷದ ನಾಯಕರು ‘ಮೈತ್ರಿ’ಗೆ ಸಹಮತ ಸೂಚಿಸಿದರೂ ತಳಹಂತದ ಕಾರ್ಯಕರ್ತರ ಒಲವು ಗಳಿಸುವುದು ಸವಾಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡರೂ ಜೆಡಿಎಸ್‌ ಮತಗಳು ‘ಕೈ’ ತಪ್ಪಿದ್ದವು. ಆದರೆ ಬಿಜೆಪಿ ಜೊತೆಗೆ ಈ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ.

ಮಂಕಾದ ಪ್ರಭಾವಿ ನಾಯಕರು

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಪ್ರತಿನಿಧಿಸುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಭಾರಿ ಭರವಸೆ ಹೊಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭಗೊಂಡಿದ್ದ ಮಾಜಿ ಶಾಸಕಿ ಕೆ.ಪೂರ್ಣಿಮಾ ಕಾಂಗ್ರೆಸ್‌ ಸೇರಿದ್ದು ‘ಕೈ’ ಪಡೆಯ ಹುಮ್ಮಸ್ಸು ಹೆಚ್ಚಿಸಿತ್ತು. ಇಬ್ಬರು ಪ್ರಭಾವಿ ನಾಯಕರ ಮತಗಳು ಒಗ್ಗೂಡಿದರೆ ಪಕ್ಷಕ್ಕೆ ಹೆಚ್ಚು ಮತ ಸಿಗಬಹುದು ಎಂಬ ಕಾಂಗ್ರೆಸ್‌ ಲೆಕ್ಕಾಚಾರ ತಪ್ಪಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಭಾವಿ ನಾಯಕರಿಲ್ಲ. ಪಕ್ಷದ ಕಾರ್ಯಕರ್ತರ ಪಡೆ ಕೂಡ ಛಿದ್ರವಾಗಿದೆ. ಜೆಡಿಎಸ್‌ ನೇತೃತ್ವದಲ್ಲಿ ‘ಮೈತ್ರಿ’ ಅಭ್ಯರ್ಥಿ ಇಟ್ಟ ಹೆಜ್ಜೆಗಳು ಮತಗಳಾಗಿ ಪರಿವರ್ತನೆ ಹೊಂದಿವೆ. ಬಿಜೆಪಿ ಮತ್ತು ಜೆಡಿಎಸ್‌ ಮತಗಳು ಒಗ್ಗೂಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT