ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ‘ಗ್ಯಾರಂಟಿ’ಗಳಿಗೆ ಕೈ ಹಾಕಿದರೆ ಬಿಡುವುದಿಲ್ಲ: ಡಿ.ಕೆ. ಶಿವಕುಮಾರ್

Published 17 ಏಪ್ರಿಲ್ 2024, 15:36 IST
Last Updated 17 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ‘ಗ್ಯಾರಂಟಿ’ಗಳನ್ನು ಮುಟ್ಟಲು ಬಿಡುವುದಿಲ್ಲ. ಬಿಜೆಪಿಯವರು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಏನೂ ಮಾಡಲು ಆಗುವುದಿಲ್ಲ. ಇನ್ನೂ ಒಂಬತ್ತು ವರ್ಷ ‘ಗ್ಯಾರಂಟಿ’ಗಳು ಮುಂದುವರಿಯಲಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳು ರಾಜ್ಯದ ಹೆಣ್ಣುಮಕ್ಕಳ ಸ್ವಾಭಿಮಾನದ ಪ್ರಶ್ನೆ‌. ಅದಕ್ಕೆ ಕೈ ಹಾಕಿದರೆ ಬಿಡುವುದಿಲ್ಲ’ ಎಂದು ಎಚ್ಚರಿಕೆಯನ್ನೂ ನೀಡಿದರು.‌

‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾಕೆ ಮತ ಹಾಕಬೇಕು’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಬಿಜೆಪಿಗೆ ಏಕೆ ಮತ ಹಾಕಬೇಕು’ ಎಂದು ಮರುಪ್ರಶ್ನೆಯ ಮೂಲಕ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಆಪರೇಷನ್ ಕಮಲ’ ಮಾಡಿ ಅವರು ಸರ್ಕಾರ ರಚನೆ ಮಾಡಿದ್ದರು. ಅಧಿಕಾರ ಸಿಕ್ಕಿದಾಗ ಕೊಟ್ಟ ಮಾತು ಈಡೇರಿಸಿದ್ದಾರಾ? ಮಹದಾಯಿ, ಮೇಕೆದಾಟು ವಿಚಾರದಲ್ಲಿ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಗೆಲ್ಲುವ ಮುಖ ಇಲ್ಲವೆಂದು ಹಾಲಿ ಸಂಸದರಿಗೇ ಟಿಕೆಟ್‌ ನೀಡಿಲ್ಲ’ ಎಂದು ಕುಟುಕಿದರು.

‘ನಿಮ್ಮ ಕಾಟದಿಂದ ದೊಡ್ಡ ಉದ್ಯಮಿಗಳು ದೇಶ ಬಿಟ್ಟು ಹೋಗುತ್ತಿದ್ದಾರೆ. ವಿಪಕ್ಷಗಳ ನಾಯಕರ ಮೇಲೆ ಐ.ಟಿ, ಇ.ಡಿ ದಾಳಿ ಮಾಡಲಾಗುತ್ತಿದೆ. ನಿಮ್ಮ ಪಕ್ಷದವರು ಹರಿಶ್ಚಂದ್ರ ಮಕ್ಕಳಾ? ಎನ್​ಡಿಎಯವರು ಎಷ್ಟು ಜನ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಪಟ್ಟಿ ಕೊಡಲಾ? ಎಲ್ಲರನ್ನೂ ಹೆದರಿಸಿ, ಬೆದರಿಸಿ ಗೆಲ್ಲಲು ಹೊರಟಿದ್ದೀರಾ... ತೆರಿಗೆ ಹಂಚಿಕೆ ಅನ್ಯಾಯದ ಕುರಿತು ಡಿ.ಕೆ. ಸುರೇಶ್ ನೀಡಿದ್ದ ಹೇಳಿಕೆಯಲ್ಲಿ ಏನು ತಪ್ಪಿದೆ’ ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಪ್ರಶ್ನಿಸಿದರು.

‘ಐ.ಟಿ, ಇ.ಡಿಯವರಿಗೆ ನನ್ನ ಮತ್ತು ನನ್ನ ಪಕ್ಷದವರ ಬಗ್ಗೆಯೇ ಚಿಂತೆ. ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ, ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ಬಿಜೆಪಿಯವರ ಕಡೆ ನೋಡುತ್ತಿಲ್ಲ. ಅವರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಒಕ್ಕಲಿಗ ನಾಯಕನಾಗಲು ಇಷ್ಟ ಅಲ್ಲ: ‘ಎಚ್​.ಡಿ. ಕುಮಾರಸ್ವಾಮಿ ಮತ್ತು ನಿಮ್ಮ ನಡುವೆ ಒಕ್ಕಲಿಗ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆಯಲ್ಲವೇ’ ಎಂಬ ಪ್ರಶ್ನೆಗೆ, ‘ಒಕ್ಕಲಿಗ ನಾಯಕನಾಗಲು ನನಗೆ ಇಷ್ಟ ಇಲ್ಲ.‌ ನಾನು ಸಮುದಾಯದ ನಾಯಕನಲ್ಲ. ನನಗೆ ಜಾತಿ ಇಲ್ಲ, ನೀತಿ ಇದೆ.‌ ನಾನು ‌ಕಾಂಗ್ರೆಸ್ ನಾಯಕ. ಅವರು (ಕುಮಾರಸ್ವಾಮಿ) ಬೆನ್ನಿಗೆ ಚಾಕು ಹಾಕಿದವರನ್ನು ಕರೆದುಕೊಂಡು ಹೋಗಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ’ ಎಂದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್‌ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಉಪಸ್ಥಿತರಿದ್ದರು.

‘ಎನ್​ಡಿಎ ಅಧಿಕಾರಕ್ಕೆ ಬರಲ್ಲ’

‘ಬೇರೆ ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ. ನಾನು ವೈಯಕ್ತಿಕವಾಗಿ ಸಮೀಕ್ಷೆ ಮಾಡಿಸಿದರೆ ಒಂದೊಂದು ಕ್ಷೇತ್ರದಲ್ಲಿ 50 ಸಾವಿರದಿಂದ 1 ಲಕ್ಷ ಜನರ ಸಮೀಕ್ಷೆ ಮಾಡಿಸುತ್ತೇನೆ. ನನಗೆ ನನ್ನ ರಾಜಕೀಯ ಅನುಭವದ ಮೇಲೆ ನಂಬಿಕೆ ಇದೆ. ನನ್ನ ಜನರನ್ನು ನೋಡಿದರೆ ತಿಳಿಯುತ್ತದೆ. ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬರಲಿದೆ’ ಎಂದು ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT