ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ ಹಿಡಿತದಿಂದ ರಾಜ್ಯದಲ್ಲಿ ಬಿಜೆಪಿ ನಲುಗುತ್ತಿದೆ: ಈಶ್ವರಪ್ಪ

ಯಡಿಯೂರಪ್ಪ ವಿರುದ್ದ ಈಶ್ವರಪ್ಪ ವಾಗ್ದಾಳಿ
Published 24 ಮಾರ್ಚ್ 2024, 15:34 IST
Last Updated 24 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ಸಾಗರ: ಅಪ್ಪ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ, ಒಬ್ಬ ಮಗ ಸಂಸದ, ಮತ್ತೊಬ್ಬ ಮಗ ಶಾಸಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಈ ರೀತಿ ಕರ್ನಾಟಕದಲ್ಲಿ ಬಿಜೆಪಿ ಒಂದೇ ಕುಟುಂಬದ ಹಿಡಿತದಲ್ಲಿ ಸಿಲುಕಿ ನರಳುತ್ತಿದೆ ಎಂದು ಯಡಿಯೂರಪ್ಪ ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ಭಾನುವಾರ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಕುಟುಂಬಕ್ಕೆ ಒಂದು ಅಧಿಕಾರ ಸ್ಥಾನ ಮಾತ್ರ ಎಂಬ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುತ್ತಿದ್ದಾರೆ. ಈ ಸಿದ್ಧಾಂತದ ಪರವಾಗಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.

‘ಕಾಂಗ್ರೆಸ್ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿದೆ ಎಂದು ಬಿಜೆಪಿ ಮೊದಲಿನಿಂದಲೂ ದೇಶದಾದ್ಯಂತ ಪ್ರಚಾರ ಮಾಡುತ್ತಾ ಬಂದಿದೆ. ಈಗ ಅದೇ ಪರಿಸ್ಥಿತಿ ಕರ್ನಾಟಕದ ಬಿಜೆಪಿಗೆ ಬಂದಿದೆ. ಇದು ನಿಷ್ಠಾವಂತ ಕಾರ್ಯಕರ್ತರಿಗೆ ನೋವು ತಂದಿದ್ದು ಈ ಎಲ್ಲಾ ಕಾರ್ಯಕರ್ತರ ನೋವಿಗೆ ಧ್ವನಿಯಾಗಲು ನಾನು ಮುಂದಾಗಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ಯಾವುದೇ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಆರು ತಿಂಗಳ ಕಾಲ ಖಾಲಿ ಇಟ್ಟ ಉದಾಹರಣೆ ಇಲ್ಲ. ಯಡಿಯೂರಪ್ಪ ಅವರ ಹಠದ ಕಾರಣಕ್ಕೆ ಕರ್ನಾಟಕದಲ್ಲಿ ಹಾಗಾಗಿತ್ತು. ಬಿ.ವೈ.ವಿಜಯೇಂದ್ರ ಕೋರ್ ಕಮಿಟಿ ಸಭೆ ಕರೆಯದೆ ಪಕ್ಷದ ರಾಜ್ಯ ಪದಾಧಿಕಾರಿಗಳನ್ನು ತಮಗೆ ಬೇಕಾದವರಿಗೆ ನೇಮಕ ಮಾಡಿದ್ದಾರೆ. ಟಿಕೆಟ್ ಹಂಚುವಾಗಲೂ ಯಾವೂರ ದಾಸಯ್ಯ ಎಂದು ಕೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಹಿಂದುಳಿದ, ದಲಿತರನ್ನು ಸಂಘಟಿಸಲು ಮುಂದಾಗಿದ್ದೆ. ಇದು ಬಿಜೆಪಿಗೆ ನೆರವಾಗಿತ್ತು. ಆದರೆ ಯಡಿಯೂರಪ್ಪ ಕೇಂದ್ರ ಬಿಜೆಪಿ ನಾಯಕರಿಗೆ ತಪ್ಪು ಮಾಹಿತಿ ನೀಡಿ ಆ ಸಂಘಟನೆಯನ್ನು ಬಂದ್ ಮಾಡಿಸಿದರು. ರಾಯಣ್ಣ ಬ್ರಿಗೇಡ್ ಮುಂದುವರೆದಿದ್ದರೆ ಹಿಂದುಳಿದವರು ಸಿದ್ದರಾಮಯ್ಯ ಅವರ ಹಿಂದೆ ಹೋಗುತ್ತಿರಲಿಲ್ಲ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೆ ನನಗೆ ಟಿಕೆಟ್ ನಿರಾಕರಿಸಿದಾಗ ಚುನಾವಣೆಗೆ ನಿಲ್ಲಲು ಮುಂದಾಗಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಹಾಗೆ ಮಾಡಿದ್ದರೆ ಈಗ ಬಿಜೆಪಿಗೆ ಕೇವಲ 66 ಸ್ಥಾನ ಬರಲು ನಾನೆ ಕಾರಣ ಎಂದು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದರು ಎಂದು ಅವರು ತಿಳಿಸಿದರು.

ಬಿಜೆಪಿಯಲ್ಲಿರುವ ಕೆಲವು ಹಿರಿಯ ನಾಯಕರು ಏನು ಮಾಡಿದರೂ ಕಾರ್ಯಕರ್ತರು, ಪದಾಧಿಕಾರಿಗಳು ಸಹಿಸಿಕೊಳ್ಳುತ್ತಾರೆ ಎಂಬ ಮನೋಭಾವ ಹೊಂದಿದ್ದಾರೆ. ಆದರೆ ಗೆಲ್ಲಿಸುವುದನ್ನು ಕಲಿತಿರುವ ಕಾರ್ಯಕರ್ತರಿಗೆ ಸೋಲಿಸುವುದು ಗೊತ್ತು ಎಂಬ ಅಂಶವನ್ನು ಈ ನಾಯಕರು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಹಲವು ರೀತಿಯ ಪ್ರಮಾದಗಳು ಉಂಟಾಗಿವೆ. ಈ ಕಾರಣಕ್ಕಾಗಿಯೇ ಪಕ್ಷ ಅನೇಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿಗೆ ಮತ್ತೆ ಮರಳಿ ಪ್ರಧಾನಿ ಮೋದಿಯವರ ಕೈಬಲ ಪಡಿಸುತ್ತೇನೆ ಎಂದರು.

ಸ್ಥಳೀಯ ಬಿಜೆಪಿ ನಾಯಕರಿಂದ ನಿಷ್ಠಾವಂತ ಕಾರ್ಯಕರ್ತರ ಅವಗಣನೆ ನಡೆದಿದೆ. ಈ ಕಾರಣಕ್ಕಾಗಿಯೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ. ಇಲ್ಲಿನ ಕೆಲವು ಬಿಜೆಪಿ ನಾಯಕರು ಪಕ್ಷವನ್ನು ಸಂಘಟಿಸುವ ಬದಲು ವೇದಿಕೆ ಭಾಷಣಕ್ಕೆ ಸೀಮಿತರಾಗಿ ತಮ್ಮ ಆಸ್ತಿ ವೃದ್ಧಿಯಲ್ಲಿ ಮಗ್ನರಾಗಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂರ್ತಿ ಟೀಕಿಸಿದರು.

ಬ್ರಾಹ್ಮಣ ಸಮಾಜದ ಪ್ರಮುಖರಾದ ಅಬಸೆ ದಿನೇಶ್ ಕುಮಾರ್ ಜೋಷಿ, ನಮ್ಮ ನಮೋ ವೇದಿಕೆಯ ಪ್ರಮುಖರಾದ ಪ್ರಕಾಶ್ ಕುಂಠೆ, ಕಸ್ತೂರಿ ಸಾಗರ್, ನಾಗರಾಜ್ ಮೊಗವೀರ, ನಗರಸಭೆ ಮಾಜಿ ಸದಸ್ಯ ಎಸ್.ಎಲ್.ಮಂಜುನಾಥ್ ಇದ್ದರು.

‘ಬಿಜೆಪಿ ಕಾರ್ಯಕರ್ತರ ಬಲದಿಂದಲೇ ಗೆಲ್ಲುತ್ತೇನೆ’

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲೆಡೆ ನೊಂದ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಅವರ ಬಲದಿಂದಲೇ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಹಲವು ಕಾಲದಿಂದ ನೋವು ಅನುಭವಿಸುತ್ತಲೇ ಬಂದಿದ್ದು ಅಂತಿಮವಾಗಿ ಚುನಾವಣೆಗೆ ನಿಲ್ಲಲು ಮುಂದಾಗಿದ್ದೇನೆ’ ಎಂದು ಕೆ.ಎಸ್.ಈಶ್ವರಪ್ಪ ಅವರು ಸುದ್ದಿಗಾರರಿಗೆ ಹೇಳಿದರು.

‘ನನ್ನ ಮಗ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ತಪ್ಪಲು ಯಡಿಯೂರಪ್ಪ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಲು ಅವರಿಗೆ ಸಾಧ್ಯವಾಗುವುದಾದರೆ ಕಾಂತೇಶ್‌ಗೆ ಕೊಡಿಸಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT