ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಾಂಗ್ರೆಸ್‌ ಪ್ರಣಾಳಿಕೆಗೆ ನಗರ ನಕ್ಸಲರ ನೆರವು: ಸಿ.ಟಿ.ರವಿ ವಾಗ್ದಾಳಿ

Published 8 ಏಪ್ರಿಲ್ 2024, 8:49 IST
Last Updated 8 ಏಪ್ರಿಲ್ 2024, 8:49 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್‌, ಲೋಕಸಭಾ ಚುನಾವಣೆಯ ಪ್ರಣಾಳಿಕೆ ರೂಪಿಸಲು ನಗರ ನಕ್ಸಲರ ಸಹಾಯ ಪಡೆದಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಾತಿ, ಪ್ರಾದೇಶಿಕತೆ, ಮತೀಯವಾದದ ಮೂಲಕ ದೇಶ ವಿಭಜಿಸುವ ರೋಗ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕಾಂಗ್ರೆಸ್‌ಗೆ ಹೋಗಿಲ್ಲ’ ಎಂದರು.

‘ನರೇಂದ್ರ ಮೋದಿ ಸರ್ಕಾರವು ಕಳೆದ 10 ವರ್ಷದಲ್ಲಿ ರಾಜ್ಯಕ್ಕೆ ₹ 4.91 ಲಕ್ಷ ಕೋಟಿ ಅನುದಾನ ನೀಡಿದೆ. ಯುಪಿಎ ಅವಧಿಯಲ್ಲಿ ₹1.42 ಲಕ್ಷ ಕೋಟಿ ನೀಡಲಾಗಿತ್ತು. ಇದು ಸುಳ್ಳೆಂದು ಚಾಮುಂಡೇಶ್ವರಿ ಮುಂದೆ ಸಿದ್ದರಾಮಯ್ಯ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ಬಹಿರಂಗ ಚರ್ಚೆಯಲ್ಲಿ 2004–14ರ ಅವಧಿಯಲ್ಲಿ ನಡೆಸಿರುವ‌ ಹಗರಣಗಳ ಚರ್ಚೆಯನ್ನೂ ನಡೆಸಲಿ. ರಾಜ್ಯಕ್ಕೆ ‌ಅನುದಾನ ಹಂಚಿಕೆ ಕುರಿತ ಎಲ್ಲ ಪ್ರಶ್ನೆಗಳಿಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೇ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ದೃಷ್ಟಿದೋಷ ನಿವಾರಿಸಿಕೊಳ್ಳಲಿ’ ಎಂದರು.

‘ಬರಪರಿಹಾರ ನಿಧಿಯನ್ನು ಬಿಜೆಪಿ ಆಡಳಿತವಿರುವ ಅಸ್ಸಾಂ, ಮಹಾರಾಷ್ಟ್ರಕ್ಕೂ ನೀಡಿಲ್ಲ. ನೀತಿ ಸಂಹಿತೆ ಮುಗಿದ ನಂತರ ಅನುದಾನ ಬಿಡುಗಡೆಯಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಾಂಗ್ರೆಸ್‌ ಕೋಮುವಾದಿಯಾಗಿ ಬದಲಾಗಿದೆ. ಜನರ ನಂಬಿಕೆ ಕಳೆದುಕೊಂಡಿದ್ದು ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ಬಿಜೆಪಿಯು ರಾಜ್ಯದ 28 ಕ್ಷೇತ್ರಗಳಲ್ಲದೇ ನೆರೆಯ ತಮಿಳುನಾಡಿನಲ್ಲೂ ಗೆಲುವು ದಾಖಲಿಸಲಿದೆ. ಅಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ’ ಎಂದು ಹೇಳಿದರು.

‘ಒಕ್ಕಲಿಗರು ರಾಷ್ಟ್ರವಾದಿಗಳು’: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರೆಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಅವರನ್ನು ಅವರ ಪಕ್ಷದವರೇ ಲೂಸ್‌ ಟಾಕರ್‌ ಎಂದು ಕರೆಯುತ್ತಾರೆ. ಒಕ್ಕಲಿಗ ಸಮುದಾಯವು ರಾಷ್ಟ್ರವಾದಿಯಾಗಿದ್ದು, ಲಕ್ಷ್ಮಣ್‌ಗೆ ಮತ ಕೊಡುವುದಿಲ್ಲ. ಯದುವೀರ್‌ ಅವರನ್ನು ಗೆಲ್ಲಿಸಲಿದೆ’ ಎಂದು ಸಿ.ಟಿ.ರವಿ ಹೇಳಿದರು.

‘ಲಕ್ಷ್ಮಣ್ ಅವರು ಪಾಲಿಕೆ, ವಿಧಾನಪರಿಷತ್‌ ಚುನಾವಣೆಗಳಲ್ಲಿ ನಿಂತು ಸೋತಿದ್ದಾರೆ. ಅವರನ್ನು ಅಭ್ಯರ್ಥಿ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಚುನಾವಣೆಗೆ ಮುಂಚೆಯೇ ಸೋಲು ಒಪ್ಪಿಕೊಂಡಿದ್ದಾರೆ’ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್‌.ಶ್ರೀವತ್ಸ, ಮುಖಂಡ ಸಂದೇಶ್ ಸ್ವಾಮಿ, ನಗರ ವಕ್ತಾರ ಎಂ.ಎ.ಮೋಹನ್, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ದಯಾನಂದ ಪಟೇಲ್, ಪರೀಕ್ಷಿತ ರಾಜ ಅರಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT