ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರು ಮತ್ತು ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ: ಡಿ.ಕೆ.ಶಿವಕುಮಾರ್

Published 10 ಏಪ್ರಿಲ್ 2024, 10:01 IST
Last Updated 10 ಏಪ್ರಿಲ್ 2024, 10:01 IST
ಅಕ್ಷರ ಗಾತ್ರ

ಬೆಂಗಳೂರು: 'ಒಕ್ಕಲಿಗರು ಮತ್ತು ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ. ತಮ್ಮ ಬಳಿ ಬರುವವರಿಗೆ ಸ್ವಾಮೀಜಿ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರ, ಅವರ ಪರ ಇಬ್ಬರ ಪರವೂ ಪ್ರಚಾರ ಮಾಡುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಒಕ್ಕಲಿಗರ ಸ್ವಾಮೀಜಿಗಳನ್ನು ಭೇಟಿ ಮಾಡಿದರೆ ಸಮುದಾಯದ ಮತಗಳು ವಿಭಜನೆ ಆಗುತ್ತವೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸ್ವಾಮೀಜಿಗಳು ಬುದ್ಧಿವಂತರು. ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ. ಜೆಡಿಎಸ್‌ನವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ನಮ್ಮ ಜನ ಕೂಡ ಇದನ್ನು ಗಮನಿಸುತ್ತಾರೆ. ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸಮಾಜದ ಮುಖ್ಯಮಂತ್ರಿಯವರನ್ನು ಇಳಿಸಿ ಬಿಟ್ಟಿರಲ್ಲ ಎಂದು ಸ್ವಾಮೀಜಿಗಳು ಬಿಜೆಪಿಯರನ್ನು ಪ್ರಶ್ನಿಸಬಹುದಿತ್ತಲ್ಲವೇ? ಇದನ್ನು ಕೇಳುವ ಶಕ್ತಿ ಸ್ವಾಮೀಜಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನೇ ಇಂದು ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ಕುಮಾರಸ್ವಾಮಿ ಆಶೀರ್ವಾದ ಪಡೆಯುತ್ತಿದ್ದಾರಲ್ಲವೇ?' ಎಂದರು

'ಕುಮಾರಸ್ವಾಮಿ ಅವರು ತಮ್ಮ ಮಾತಿಗೆ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ ಮಾತಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಕುಮಾರಸ್ವಾಮಿ ಮಾಡಿರುವ ಟೀಕೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, 'ಕುಮಾರಸ್ವಾಮಿ ಅವರು ಯಾರನ್ನು ಟೀಕೆ ಮಾಡಿಲ್ಲ ಹೇಳಿ. ಪ್ರಣಾಳಿಕೆ ಬಿಡಿ, ಕುಮಾರಸ್ವಾಮಿ ಅವರು ನಮ್ಮ ಪ್ರತಿ ವಿಚಾರವನ್ನು ಟೀಕೆ ಮಾಡುತ್ತಾರೆ. ಮೇಕೆದಾಟು ಪಾದಯಾತ್ರೆ ಟೀಕೆ ಮಾಡಿದ್ದವರು ಈಗ ಮೇಕೆದಾಟು ಯೋಜನೆ ಜಾರಿಗೆ ಶಪಥ ಮಾಡುವುದಾಗಿ ಹೇಳಿದ್ದಾರೆ. ಮಠದ ಸ್ವಾಮೀಜಿಗಳನ್ನು ಬಿಟ್ಟಿಲ್ಲ. ಎರಡು ಮಠ ಮಾಡಿದ್ದಾರೆ. ಈಗ ದಿನಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ. ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು, ಕುಮಾರಸ್ವಾಮಿ ಬಗ್ಗೆ ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರ ಬಗ್ಗೆ ದೇವೇಗೌಡ ಅವರು ಮಾತನಾಡಿದ್ದನ್ನು ನಾವು ನೋಡಿದ್ದೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಇದೇ ಯೋಗೇಶ್ವರ್, ಅಶ್ವತ್ಥ್ ನಾರಾಯಣ, ಅಶೋಕ್ ಅವರೇ ಸರ್ಕಾರ ಕೆಡವಿದರು. ಕುಮಾರಸ್ವಾಮಿಯವರು ಈಗ ಅವರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸರ್ಕಾರ ಕೆಡವಿದವರು ಅವರು. ಆದರೆ, ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

'ವಿಧಾನಸಭೆಯಲ್ಲಿ ದೇವೇಗೌಡರು, ಕುಮಾರಸ್ವಾಮಿಯವರ ಬಗ್ಗೆ ಯಡಿಯೂರಪ್ಪ ಅವರು ಏನು ಹೇಳಿದರು ಗೊತ್ತಿದೆಯೇ? ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲವಲ್ಲ. ಎಂತೆಂಥಾ ಪದಗಳನ್ನು ಉಪಯೋಗಿಸಿದರು. ನಾನು ಎಂದಿಗೂ ಅವರು ಬಳಸಿರುವ ಪದಗಳನ್ನು ಬಳಸಿಲ್ಲ.

ಎಂಟು ಒಕ್ಕಲಿಗೆ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆ ಟಿಕೆಟ್

ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳು ನಮಗೆ ಏಕೆ? ನಮ್ಮ ಸಮಾಜದವರು ದಡ್ಡರಲ್ಲ' ಎಂದರು.

ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, 'ಎಲ್ಲರೂ ಅವರವರ ಬದುಕು ನೋಡಿಕೊಳ್ಳುತ್ತಾರೆ. ನಾವು ಈಗಾಗಲೇ ಅಧಿಕಾರದಲ್ಲಿದ್ದೇವೆ. ಅದಾದ ನಂತರ ಮುಂದಿನ ಐದು ವರ್ಷವೂ ನಾವೇ ಇರುತ್ತೇವೆ. ಮುಂದೆ ನಾವು ಗೆಲ್ಲುವುದಿಲ್ಲ ಎಂದು ಈ ರೀತಿ ಹೇಳುತ್ತಿದ್ದಾರೆ. ನಮ್ಮಿಂದಾಗಿ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸಿದ್ಧಾಂತವನ್ನೇ ಕುಮಾರಸ್ವಾಮಿ ಅವರು ಮಾರಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ವಿಚಾರ ಬಿಡಿ. ಆದರೆ, ದೇವೇಗೌಡರಿಗೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡಿ ಬೇಸರವಾಗುತ್ತದೆ' ಎಂದು ತಿಳಿಸಿದರು.

'ಮೈತ್ರಿ ಸರ್ಕಾರ ಬೀಳಿಸಿದವರು ಬಿಜೆಪಿಯಲ್ಲ ಕಾಂಗ್ರೆಸಿಗರು' ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ವಿಶ್ವನಾಥ್, ನಾರಾಯಣ ಗೌಡರನ್ನು ಭೇಟಿ ಮಾಡಿದ್ದಾರೆ. ಯೋಗೇಶ್ವರ್, ಅಶ್ವತ್ಥ್ ನಾರಾಯಣ, ಯಡಿಯೂರಪ್ಪ ಅವರನ್ನು ತಬ್ಬಾಡುತ್ತಿದ್ದಾರೆ. ಜನಕ್ಕೆ ಇದಕ್ಕಿಂತ ಸಾಕ್ಷಿ ಬೇರೇನು ಬೇಕು? ಕುಮಾರಸ್ವಾಮಿ ಅವರು ಆಗ ಏನು ಮಾತನಾಡಿದ್ದರು' ಎಂದು ಕೇಳಿದರು.

ಪಾದಯಾತ್ರೆ ಮಾಡಿದ್ದು ನಿಜವಲ್ಲವೇ..?

'ಮೇಕೆದಾಟು ಪಾದಯಾತ್ರೆ ವೇಳೆ ನಾನು ತೂರಾಡಿದ್ದೇನೆಯೇ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಏನಾದರೂ ಹೇಳಿಕೊಳ್ಳಲಿ. ಜನಕ್ಕೆ ಎಲ್ಲವೂ ಗೊತ್ತಿದೆ. ನಾನು ಪಾದಯಾತ್ರೆ ಮಾಡಿದ್ದೇನೆ ತಾನೆ, ಅವರು ಮಾಡಲಿ. ನಾನು ಕುಡಿದು ತೂರಾಡಿದ್ದೇನೆಯೇ? ನಾನು ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ನಡೆದಿದ್ದರೆ ಅವರಿಗೆ ಗೊತ್ತಾಗುತ್ತಿತ್ತು. ಈ ನಾಡು, ಕಾವೇರಿ ಜಲಾನಯನ ಪ್ರದೇಶದ ಜನರಿಗಾಗಿ ಈ ಹೋರಾಟ ಮಾಡಿದ್ದೇನೆ. ನಾನು ಈ ವಿಚಾರದಲ್ಲಿ ಅವರಿಗೆ ಸವಾಲು ಹಾಕುವುದಿಲ್ಲ. ನಾನು ಸವಾಲು ಹಾಕಿ ಅವರ ಆರೋಗ್ಯ ಹೆಚ್ಚುಕಮ್ಮಿ ಆದರೆ ನಾನು ಜವಾಬ್ದಾರಿ ತೆಗುಕೊಳ್ಳುವುದಿಲ್ಲ. ಅವರು ಧೈರ್ಯವಾಗಿ ಚುನಾವಣೆ ಮಾಡುತ್ತಿದ್ದಾರೆ ಅದಕ್ಕೆ ಶುಭ ಕೋರುತ್ತೇನೆ' ಎಂದರು.

ಜೆಡಿಎಸ್ ಒಂದೂ ಸ್ಥಾನವನ್ನೂ ಗೆಲ್ಲುವುದಿಲ್ಲ

'ದೇವೇಗೌಡರು ನಾಲ್ಕು ಸೀಟ್ ಬಗ್ಗೆ ಹೇಳುತ್ತಾ ಇದ್ದಾರೆ. ಒಂದು ಸ್ಥಾನವೂ ಗೆಲ್ಲುವುದಿಲ್ಲ. ಬಿಜೆಪಿಯ ಸೀಟನ್ನು ಜೆಡಿಎಸ್ ಸೀಟ್ ಎಂದು ಹೇಳುತ್ತಿದ್ದಾರೆ. ಮಂಜುನಾಥ್ ಅವರು ಈ ತೀರ್ಮಾನ ನನ್ನದಲ್ಲ ಅವರಿಬ್ಬರದೇ ಎಂದಿದ್ದಾರೆ. ಜೆಡಿಎಸ್ ನಾಲ್ಕು ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಿದ್ದ ತಜ್ಞರು ಮತ್ತು ಮಾಧ್ಯಮದವರು ಏಕೆ ಮಾತನಾಡುತ್ತಿಲ್ಲ?. ಮಾಧ್ಯಮದವರು ಸಹ ವಸ್ತುನಿಷ್ಠವಾಗಿ ವರದಿ ಮಾಡುತ್ತಿಲ್ಲ. ಇದನ್ನು ಖಡಾಖಂಡಿತವಾಗಿ ಹೇಳುತ್ತಿದ್ದೇನೆ ಹಾಗೂ ಬಹಳ ತಾಳ್ಮೆಯಿಂದ ವೀಕ್ಷಣೆ ಮಾಡುತ್ತಿದ್ದೇನೆ' ಎಂದರು.

'ಮಂಡ್ಯದಲ್ಲಿ ಸುಮಲತಾ ಆದಿಯಾಗಿ ಎಲ್ಲರೂ ಒಂದಾಗಿರುವ ಕಾರಣ ಕುಮಾರಸ್ವಾಮಿ ಗೆಲ್ಲುತ್ತಾರೆ, ಕೇಂದ್ರ ಸಚಿವರಾಗುತ್ತಾರೆ' ಎಂದಾಗ "ಕೇಂದ್ರ ಸಚಿವರೂ ಆಗಲಿ, ಇನ್ನು ಏನಾದರೂ ದೊಡ್ಡದು ಸಿಕ್ಕರೂ ಸಿಗಲಿ, ಒಳ್ಳೆಯದಾಗಲಿ. ನಾವು ಕುಮಾರಸ್ವಾಮಿ ಅವರಿಗೆ ಕೇವಲ ಶುಭಾಶಯ ಕೋರುವವರು ಮಾತ್ರ‘ ಎಂದರು.

ಈಗ ಊಟ ಹಾಕಿಸುತ್ತಿದ್ದಾರೆ...

ಕುಮಾರಸ್ವಾಮಿ ಅವರ ತೋಟದಮನೆ ಭೋಜನ ಕೂಟದ ಬಗ್ಗೆ ಕೇಳಿದಾಗ, 'ಕುಮಾರಸ್ವಾಮಿ ಅವರು ಈಗಲಾದರೂ ಮುಂದೆ ಬಂದು ಜನರಿಗೆ ಊಟ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಏನೂ ಮಾಡಲಿಲ್ಲ. ಈಗಲಾದರೂ ಮಾಡುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಚುನಾವಣಾ ಆಯೋಗ ತಲೆಕೆಡಿಸಿಕೊಳ್ಳಬೇಕು. ಚುನಾವಣಾ ಆಯೋಗ ನಿಜವಾಗಲೂ ಕಾರ್ಯಪ್ರವೃತ್ತವಾಗಿದ್ದರೆ ಅವರು ಕ್ರಮ ಕೈಗೊಳ್ಳಲಿದ್ದಾರೆ‘ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ತಯಾರಿ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ತಲೆಕೆಡಿಸಿಕೊಂಡಿದೆಯೇ ಎಂದು ಕೇಳಿದಾಗ, 'ನಮ್ಮ ಪಕ್ಷದ ಮೊದಲ ಗೆಲುವು ನಮ್ಮ ಪಕ್ಷದ ಒಗ್ಗಟ್ಟು, ಅವರ ಮೊದಲ ಸೋಲು ಅವರ ಪಕ್ಷದಲ್ಲಿನ ಭಿನ್ನಮತ. ಇನ್ನು ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದು ಸೋಲುವ ಕಾರಣಕ್ಕೆ 15 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಇದು ಕಮಲ ಬಾಡುತ್ತಿರುವುದಕ್ಕೆ ಸಾಕ್ಷಿ' ಎಂದರು.

ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಬಿಜೆಪಿಗಿಂತ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, 'ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕುಮಾರಸ್ವಾಮಿ ತಮ್ಮ ಸರ್ಕಾರ ಬೀಳಿಸಿದವರ ಜತೆ ಕೈಜೋಡಿಸಿ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ' ಎಂದು ಪ್ರಶ್ನಿಸಿದರು.

ಖರ್ಗೆ ಅವರ ಜತೆ ಚುನಾವಣಾ ತಯಾರಿ ಬಗ್ಗೆ ಚರ್ಚೆ

ಎಐಸಿಸಿ ಅಧ್ಯಕ್ಷರ ಭೇಟಿ ಬಗ್ಗೆ ಕೇಳಿದಾಗ, 'ಎಐಸಿಸಿ ಅಧ್ಯಕ್ಷರ ರಾಜ್ಯ ಪ್ರವಾಸದ ಬಗ್ಗೆ ನಿರ್ಧಾರ ಚರ್ಚೆ ಮಾಡಿ ರಾಜ್ಯದಲ್ಲಿನ ಚುನಾವಣಾ ತಯಾರಿ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದೇನೆ. ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಬರಲಿದ್ದಾರೆ. ನಾನು ಕೂಡ ಅಂದು ಕಲಬುರ್ಗಿಗೆ ತೆರಳುತ್ತಿದ್ದೇನೆ. ಕೋಲಾರ ಸೇರಿದಂತೆ ಕೆಲವು ಭಾಗಗಳಿಗೆ ಭೇಟಿ ನೀಡಲು ದಿನಾಂಕಗಳನ್ನು ನೀಡಿದ್ದಾರೆ. ನಾವು ಅದರ ಆಧಾರದ ಮೇಲೆ ಅಂತಿಮ ತೀರ್ಮಾನ ಮಾಡುತ್ತೇವೆ' ಎಂದರು.

ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತೀರಾ ಎಂದು ಕೇಳಿದಾಗ, 'ನಾವು ಬೆಂಬಲಿಸುವುದಾದರೇ ನೇರವಾಗಿಯೇ ಬೆಂಬಲ ನೀಡುತ್ತೇವೆ. ಪರೋಕ್ಷವಾಗಿ ಯಾಕೆ ಬೆಂಬಲಿಸೋಣ. ನಾವು ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿ ಬಿ ಫಾರಂ ನೀಡಿದ್ದೇವೆ. ಸ್ವಾಮೀಜಿಗಳು ಮುಂಚಿತವಾಗಿ ಈ ನಿರ್ಧಾರ ಮಾಡಿದ್ದರೆ ವಿಚಾರ ಬೇರೆ ಆಗುತ್ತಿತ್ತು. ನಮ್ಮ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ನಮಗೆ ಶ್ರೀಗಳ ಬಗ್ಗೆ ಗೌರವವಿದೆ. ಅವರು ಸದಾ ಜಾತ್ಯತೀತ ತತ್ವದ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಮ್ಮ ಅಭ್ಯರ್ಥಿ ಕೂಡ ಸೌಮ್ಯ ಸ್ವಭಾವದವರಾಗಿದ್ದಾರೆ' ಎಂದರು.

ಮೈತ್ರಿ ಸರ್ಕಾರ ಪತನ ವಿಚಾರದಲ್ಲಿ ನಿಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಗ್ಗೆ ಕೇಳಿದಾಗ, 'ಈ ವಿಚಾರವಾಗಿ ನನ್ನ ವಿರುದ್ದ ಆರೋಪ ಮಾಡಿದರೆ ಅದನ್ನು ಜನ ಒಪ್ಪುವುದಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ, ಉಪಮುಖ್ಯಮಂತ್ರಿ. ನಮ್ಮ ಸಮಾಜ ಹಾಗೂ ರಾಜ್ಯದ ಜನರಿಗೆ ಅಧಿಕಾರದಲ್ಲಿದ್ದಾಗ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ಜನಕ್ಕೆ, ಸಮಾಜಕ್ಕೆ ಸಹಾಯ ಮಾಡಬೇಕು. ಮಠಕ್ಕೆ ಸೇರಿದಂತೆ ಇನ್ನು ಏನೇನು ಸಹಾಯ ಮಾಡಬಹುದು ಎಂದು ಯೋಚನೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ದೂರದ ಬೆಟ್ಟ ಬಗ್ಗೆ ಅಂದರೆ ಇನ್ನು ನಾಲ್ಕು ವರ್ಷ ಎರಡು ತಿಂಗಳು ಆದ ನಂತರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಏನು ಮಾಡಿತು. ಬರ ಪರಿಹಾರದ ಬಗ್ಗೆ ಇವರು ದನಿ ಎತ್ತಿದ್ದಾರಾ? ಶೋಭಕ್ಕ ಏನು ಮಾಡಿದರು? ಯಾರಾದರೂ ಒಬ್ಬರು ಬರ ಪರಿಹಾರ, ಮೇಕೆದಾಟು, ಮಹದಾಯಿ ವಿಚಾರವಾಗಿ ಮಾತನಾಡಿದ್ದಾರಾ?' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT