ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಪಶ್ಚಿಮ ಬಂಗಾಳದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳುವುದೇ ಬಿಜೆಪಿ? 

ಉತ್ತರ ಬಂಗಾಳ: ಕಳೆದ ಬಾರಿ ಎಂಟರಲ್ಲಿ ಏಳು ಸ್ಥಾನ ಗೆದ್ದಿದ್ದ ಕಮಲ ಪಾಳೆಯ
Published 7 ಏಪ್ರಿಲ್ 2024, 12:27 IST
Last Updated 7 ಏಪ್ರಿಲ್ 2024, 12:27 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಎರಡು ಚುನಾವಣಾ ರ್‍ಯಾಲಿಗಳನ್ನು ನಡೆಸಿದ್ದಾರೆ. ಅದರ ಬೆನ್ನಲ್ಲೇ, ಬಿಜೆಪಿಯು 2019ರಲ್ಲಿ ಉತ್ತರ ಬಂಗಾಳದಲ್ಲಿ ಗಳಿಸಿದ್ದ ದೊಡ್ಡ ಮಟ್ಟದ ಗೆಲುವನ್ನು ಈ ಬಾರಿಯೂ ಪುನರಾವರ್ತಿಸುವುದೇ ಎನ್ನುವ ಪ್ರಶ್ನೆ ಮೂಡಿದೆ. ಈ ಭಾಗದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿಯ ಭದ್ರಕೋಟೆಯನ್ನು ಭೇದಿಸಬೇಕೆನ್ನುವ ಹಟದೊಂದಿಗೆ ಚುನಾವಣಾ ಕಣಕ್ಕಿಳಿದಿದೆ.

2019ರಲ್ಲಿ ಉತ್ತರ ಬಂಗಾಳದ ಎಂಟು ಲೋಕಸಬಾ ಕ್ಷೇತ್ರಗಳಲ್ಲಿ ಬಿಜೆಪಿ ಏಳು ಗೆದ್ದರೆ, ಟಿಎಂಸಿ ಒಂದು ಕ್ಷೇತ್ರವನ್ನಷ್ಟೇ ಗೆದ್ದಿತ್ತು. ಆದರೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ತನ್ನ ಬಲವನ್ನು ವೃದ್ಧಿಸಿಕೊಂಡಿತ್ತು.   

ಕಳೆದ ಎರಡು ವರ್ಷಗಳಿಂದ ಟಿಎಂಸಿ ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಬಡವರಿಗಾಗಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪ್ರಾಂತ್ಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಜಲಪೈಗುರಿಯಲ್ಲಿ ಬಿರುಗಾಳಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸುವ ಜತೆಗೆ ಅವರು, ಚಹಾ ತೋಟದ ಕಾರ್ಮಿಕರು ಮತ್ತು ಹಳ್ಳಿಗರನ್ನು ಮಾತನಾಡಿಸುತ್ತ, ವಿಶಿಷ್ಟ ರೀತಿಯಲ್ಲಿ ಜನರನ್ನು ತಲುಪುತ್ತಿದ್ದಾರೆ.

ಡಾರ್ಜಿಲಿಂಗ್‌ ಉತ್ತರದಲ್ಲಿ, ಕುರ್ಸ್ಯಾಂಗ್ ಬಿಜೆಪಿ ಶಾಸಕರಾಗಿದ್ದ ವಿಷ್ಣು ಪ್ರಸಾದ್ ಶರ್ಮಾ ಅವರಿಗೆ ಪಕ್ಷವು ಲೋಕಸಭಾ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಲೀಪುರ್‌ದೌರ್‌ನಲ್ಲಿ ಕಳೆದ ಬಾರಿ 2.4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಜಾನ್ ಬಾರ್ಲಾ ಅವರಿಗೆ ಕಳಪೆ ಸಾಧನೆಯ ನೆಪವೊಡ್ಡಿ ಟಿಕೆಟ್ ನಿರಾಕರಿಸಲಾಗಿದೆ. ಸ್ಥಳೀಯ ಬುಡಕಟ್ಟು ಜನರ ಬೆಂಬಲ ಹೊಂದಿರುವ ಬಾರ್ಲಾ ಚುನಾವಣಾ ಪ್ರಚಾರದಿಂದ ದೂರವುಳಿದಿದ್ದು, ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಅಸಮಾಧಾನಗೊಂಡಿದ್ದಾರೆ. 

ಪಕ್ಷದ ಒಂದು ವಲಯದಿಂದ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಕೇಸರಿ ಪಾಳಯವು ರಾಯ್‌ಗಂಜ್ ಸಂಸದ, ಕೇಂದ್ರ ಸಚಿವ ದೇಬಶ್ರೀ ಚೌಧರಿ ಅವರನ್ನು ಕೋಲ್ಕತ್ತ (ದಕ್ಷಿಣ) ಕ್ಷೇತ್ರಕ್ಕೆ ಬದಲಾಯಿಸಿದೆ. ಕೆಲವು ತಿಂಗಳ ಹಿಂದೆ, ರಾಯ್‌ಗಂಜ್ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಅವರು ದೇಬಶ್ರೀ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಟಿಎಂಸಿ ಸೇರ್ಪಡೆ ಆಗಿದ್ದರು. ನಂತರ ಅವರಿಗೆ ಟಿಎಂಸಿ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದೆ.    

ಈ ರೀತಿಯ ಬೆಳವಣಿಗೆಗಳು ನಡೆಯುತ್ತಲೇ ಇದ್ದು, ಉತ್ತರ ಬಂಗಾಳದಲ್ಲಿ ಬಿಜೆಪಿ–ಟಿಎಂಸಿ ತೀವ್ರ ಜಿದ್ದಾಜಿದ್ದಿ ನಡೆಸುತ್ತಿವೆ.

ಕೂಚ್ ಬೆಹಾರ್‌ಗಾಗಿ ತೀವ್ರ ಸೆಣಸಾಟ

ಕೂಚ್ ಬೆಹಾರ್ ಹಿಂದೊಮ್ಮೆ ಫಾರ್ವಡ್ ಬ್ಲಾಕ್‌ನ ಭದ್ರಕೋಟೆಯಾಗಿತ್ತು. ಅದು 2014ರಲ್ಲಿ ಟಿಎಂಸಿ ಪಾಲಾದರೆ 2019ರಲ್ಲಿ ಬಿಜೆಪಿ ಪಾಲಾಗಿತ್ತು. ಇಲ್ಲಿನ ಹಾಲಿ ಸಂಸದ ನಿಶಿತ್ ಪ್ರಾಮಾಣಿಕ್ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಈ ಕ್ಷೇತ್ರವನ್ನು ಪುನಃ ಗೆದ್ದುಕೊಳ್ಳಲು ಟಿಎಂಸಿ ನಿರಂತರ ಕಾರ್ಯತಂತ್ರದಲ್ಲಿ ತೊಡಗಿದೆ. ಇತ್ತೀಚೆಗೆ ಪ್ರಾಮಾಣಿಕ್ ಮತ್ತು ಟಿಎಂಸಿ ಮುಖಂಡ ಹಾಗೂ ಸಚಿವ ಉದಯನ್ ಗುಹಾ ಅವರ ಬೆಂಬಲಿಗರ ಸಂಘರ್ಷದಿಂದ ಸುದ್ದಿಯಾಗಿದ್ದ ಕೂಚ್‌ ಬೆಹಾರ್ ‌‌ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು ಇದನ್ನು ಗೆಲ್ಲಲು ಎರಡೂ ಪಕ್ಷಗಳು ಸರ್ವಪ್ರಯತ್ನಗಳನ್ನೂ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT