ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರದಲ್ಲಿ ಮತ ಯಾಚನೆಗೆ ಆಕ್ಷೇಪ: ಶಾಸಕ ಕಾಮತ್–ಮೊಕ್ತೇಸರ ನಡುವೆ ಮಾತಿನ ಚಕಮಕಿ

Published 18 ಏಪ್ರಿಲ್ 2024, 14:32 IST
Last Updated 18 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಉರ್ವ ಚಿಲಿಂಬಿಯ ಶಿರ್ಡಿ ಸಾಯಿಬಾಬಾ ದೇವಸ್ಥಾನದ ಬಳಿ ಮತ ಯಾಚನೆ ಮಾಡುವ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಮಂದಿರದ ಮೊಕ್ತೇಸರ ವಿಶ್ವಾಸ್‌ದಾಸ್‌ ನಡುವೆ ಗುರುವಾರ ಸಂಜೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಬೆಂಬಲಿಗರು ಹಾಗೂ ಸಾಯಿ ಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪರಸ್ಪರ ತಳ್ಳಾಡಿದರು.

ಸಾಯಿ ಬಾಬಾ ಮಂದಿರದಲ್ಲಿ ರಾಮನಮಮಿ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದವ್ಯಾಸ ಕಾಮತ್‌ ಅವರು ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿಗೆ ಮತ ಯಾಚಿಸಲು ತೆರಳಿದ್ದರು. ಆಗ ವಿಶ್ವಾಸದಾಸ್‌, ‘ಮಂದಿರದ ಬಳಿ ನೀವು ಮತ ಯಾಚಿಸುವುದು ಬೇಡ. ನಾವೂ ಯಾವ ಪಕ್ಷಕ್ಕೂ ಮತ ಯಾಚಿಸಲು ಅವಕಾಶ ನೀಡಿಲ್ಲ. ನೀವು ಬೇಕಿದ್ದರೆ ಬೇರೆ ಕಡೆ ಮತ ಕೇಳಿ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಇದು ಸರ್ಕಾರದ ಜಾಗ. ಸಾರ್ವಜನಿಕ ಜಾಗದಲ್ಲಿ ಯಾರು ಬೇಕಾದರೂ ಮತ ಯಾಚಿಸಬಾರದು’ ಎಂದು ಏರಿದ ಧ್ವನಿಯಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ವಿಶ್ವಾಸ್‌ದಾಸ್‌, ‘ಕಾರ್ಯಕ್ರಮ ಮಾಡಿ, ನೀವು ಮಾಡಿದ ಕೆಲಸದ ಆಧಾರದಲ್ಲಿ ಮತ ಯಾಚಿಸಿ. ಮನೆ ಮನೆಗೆ ಹೋಗಿ ಮತ ಕೇಳಿ. ನಮ್ಮ ಅಭ್ಯಂತರ ಇಲ್ಲ. ಆದರೆ ದೇವಸ್ಥಾನದ ಜಾಗದಲ್ಲಿ ಮತ ಯಾಚಿಸಲು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇದು ನಿಮ್ಮ ರಸ್ತೆಯಾ? ಇದಕ್ಕೆ ಡಾಂಬರು ಹಾಕಿಸಿದ್ದು ನೀವಾ? ನಾವು ನರೇಂದ್ರ ಮೋದಿಯವರು ಸಾಗಿದ ಮಾರ್ಗದಲ್ಲಿ ಮತ ಕೇಳುತ್ತೇವೆ. ರಸ್ತೆಯಲ್ಲಿ ನಿಂತು ಯಾರು ಬೇಕಾದರೂ ಮತ ಕೇಳಬಹುದು’ ಎಂದು ವೇದವ್ಯಾಸ್ ಸಮರ್ಥಿಸಿಕೊಂಡರು.

ಅಷ್ಟರಲ್ಲಿ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ, ‘ಜಗಳ ಬೇಡ’ ಎಂದು ‌ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ದೇವಸ್ಥಾನದ ಮೊಕ್ತೇಸರರಾದ ವಿಶ್ವಾಸದಾಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಅವರು ಮೊಕ್ತೇಸರರಾಗಿರುವ ಸಾಯಿ ಮಂದಿರದ ಬಳಿ ಗಲಾಟೆ ನಡೆಯುತ್ತಿರುವ ಮಾಹಿತಿ ತಿಳಿದು ಕಾಂಗ್ರೆಸ್‌ ಮುಖಂಡರಾದ ಮಿಥುನ್‌ ರೈ, ಶಶಿಧರ ಹೆಗ್ಡೆ ಮೊದಲಾದವರು ಬೆಂಬಲಿಗರೊಂದಿಗೆ ಸ್ಥಳಕ್ಕೆ ದೌಡಾಯಿಸಿದರು. ಮಾತಿನ ಚಕಮಕಿ ತಾರಕಕ್ಕೇರಿದಾಗ ಎರಡೂ ಗುಂಪುಗಳ ನಡುವೆ ತಳ್ಳಾಟ ನಡೆಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

‘ಚಿಲಿಂಬಿ ಸಾಯಿಬಾಬಾ ಮಂದಿರದ ಬಳಿ ನಡೆದ ಘಟನೆ ಬಗ್ಗೆ ಮಾಹಿತಿ ಬಂದಿದೆ. ನಮ್ಮ ಸಂಚಾರ ತಂಡದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ, ಸಂಚಾರ ತಂಡದವರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಗಿರೀಶ್‌ ನಂದನ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT