ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ; ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ

Published 30 ಮಾರ್ಚ್ 2024, 10:55 IST
Last Updated 30 ಮಾರ್ಚ್ 2024, 10:55 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಲಂಡನ್ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಪಂದ್ಯದ ಕಂಚಿನ ಪದಕ ವಿಜೇತೆಯೂ ಆಗಿರುವ ಬಿಜೆಪಿಯ ಸೈನಾ ನೆಹ್ವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ನೆಹ್ವಾಲ್, ‘ಮಹಿಳೆಯನ್ನ ಅಡುಗೆ ಕೋಣೆಗೆ ಸೀಮಿತಿಗೊಳಿಸಬೇಕು ಎಂದು ಕಾಂಗ್ರೆಸ್‌ನ ಕರ್ನಾಟಕದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಯಸಿದ್ದಾರೆ. ಆದರೆ ಪ್ರತಿ ಮಹಿಳೆಯೂ ಹೋರಾಡಬಲ್ಲಳು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ ಅವರು ಕಣದಲ್ಲಿದ್ದಾರೆ’ ಎಂದಿದ್ದಾರೆ.

‘ಬ್ಯಾಡ್ಮಿಂಟನ್‌ನಲ್ಲಿ ನಾನು ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ನಾನೇನಾಗಬೇಕು ಎಂದು ಕಾಂಗ್ರೆಸ್ ಬಯಸಿತ್ತೋ ಗೊತ್ತಿಲ್ಲ. ಮಹಿಳೆಯರು ದೊಡ್ಡದನ್ನು ಸಾಧಿಸಲು ಹೊರಟಾಗ ಇಂಥ ಹೇಳಿಕೆಗಳನ್ನು ನೀಡುತ್ತಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.

‘ಒಂದು ಕಡೆ ನಾರಿ ಶಕ್ತಿಗೆ ವಂದನೆ ಅರ್ಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲಾಗಿದೆ. ಆದರೆ ಮತ್ತೊಂದೆಡೆ ಸಮಾಜದ ಕೆಲವರು ಮಹಿಳೆಯರ ಶಕ್ತಿಯನ್ನೇ ಅವಮಾನಿಸುವ ಹೇಳಿಕೆಗಳನ್ನು ನೀಡುತ್ತಿರುವುದು ವಿಪರ್ಯಾಸ’ ಎಂದು ನೆಹ್ವಾಲ್ ಹೇಳಿದ್ದಾರೆ.

ದಾವಣಗೆರೆಯ ಬಂಟರ ಭವನದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ‘ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಪ್ರಧಾನಿ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಾರೆ. ಈ ಹಿಂದೆ ಗೆದ್ದಿದ್ದು ನೀವೇ (ಜಿ.ಎಂ.ಸಿದ್ದೇಶ್ವರ) ಅಲ್ಲವೇ? ಆಗ ಹೂವನ್ನು ಕಳುಹಿಸಿದ್ರಾ’ ಎಂದು ಪ್ರಶ್ನಿಸಿದ್ದರು. 

‘ಹೂವನ್ನು ಕಳುಹಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು, ಕೇವಲ ಮೋದಿ ಮೋದಿ ಎನ್ನುವುದಲ್ಲ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಬರಲ್ಲ, ಅವರು ಕೇವಲ ಅಡುಗೆ ಮಾಡಲು ಲಾಯಕ್ಕು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT