ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MLC Elections LIVE | ವಿಧಾನ ಪರಿಷತ್ ಚುನಾವಣೆ: ಮತದಾನ ಮುಕ್ತಾಯ

Published 3 ಜೂನ್ 2024, 4:53 IST
Last Updated 3 ಜೂನ್ 2024, 14:28 IST
ಅಕ್ಷರ ಗಾತ್ರ
04:5203 Jun 2024

ಮತದಾನ ಆರಂಭ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದೆ. ಆರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮಂದಿ ಮತದಾರರಿದ್ದಾರೆ.

04:5403 Jun 2024

ಶಿವಮೊಗ್ಗ ವರದಿ

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಆರು ಜಿಲ್ಲೆಗಳ (ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳು ಮಾತ್ರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು) ವ್ಯಾಪ್ತಿಯನ್ನು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಪದವೀಧರ ಕ್ಷೇತ್ರಕ್ಕೆ 27,412 ಮತದಾರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 4365 ಮತದಾರರು ಇದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆಯನೂರು ಮಂಜುನಾಥ್, ಬಿಜೆಪಿಯ ಡಾ.ಧನಂಜಯ ಸರ್ಜಿ, ಪಕ್ಷೇತರ ಅಭ್ಯರ್ಥಿಗಳಾದ ರಘುಪತಿ ಭಟ್ ಹಾಗೂ ಎಸ್.ಪಿ.ದಿನೇಶ್ ನಡುವೆ ಚತುಷ್ಕೋನ ಪೈಪೋಟಿ ಇದೆ. ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ಕಾಂಗ್ರೆಸ್ ನಿಂದ ಕೆ.ಕೆ.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಅರುಣ್ ಹೊಸಕೊಪ್ಪ ನಡುವೆ ಪೈಪೋಟಿ ಇದೆ.

ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಜೂನ್ 6 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

04:5503 Jun 2024

ಮಂಗಳೂರು ವರದಿ

ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಐದು ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,189 ಮತದಾರರು ಇದ್ದು, ಅವರಲ್ಲಿ 5,539 ಪುರುಷರು, 2,650 ಮಹಿಳೆಯರು ಇದ್ದಾರೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು, ಅವರಲ್ಲಿ 11,596 ಮಹಿಳೆಯರು ಹಾಗೂ 8,375 ಪುರುಷ ಮತದಾರರು‌ ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಹಾಗೂ ಉಪ ವಿಭಾಗಾಧಿಕಾರಿ ಹರ್ಷವರ್ಧನ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ಬೂತ್ ನಲ್ಲಿ ಮತ ಚಲಾಯಿಸಿದರು

04:5903 Jun 2024

ಮೈಸೂರು ವರದಿ

ಮೈಸೂರಿನಲ್ಲಿ ‘ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ’ದ ಚುನಾವಣೆಯ ಮತದಾನವು ಬಿರುಸಿನಿಂದ ಆರಂಭವಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆಯಿಂದಲೇ ಮತಗಟ್ಟೆ ಕೇಂದ್ರಗಳಿಗೆ ಬಂದ ಶಿಕ್ಷಕರು ಉತ್ಸಾಹದಿಂದ ಹಕ್ಕು ಚಲಾಯಿಸಿದರು.

ಶಾರದಾದೇವಿನಗರದ ಇಂದಿರಾ ಪ್ರೌಢಶಾಲೆಯಲ್ಲಿ ಎರಡು ಮತಗಟ್ಟೆಗಳಿದ್ದು, ಬೆಳಿಗ್ಗೆ 10ರ ವೇಳೆಗೆ 250ಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದರು‌. ಈ ಮತಗಟ್ಟೆಗಳಲ್ಲಿ 1,159 ಮತದಾರರು ಇದ್ದಾರೆ. ಸರದಿ ಸಾಲು ಕಂಡು ಬರಲಿಲ್ಲ. ಐದು ನಿಮಿಷದಲ್ಲಿಯೇ ಮತಪತ್ರದಲ್ಲಿ ಪ್ರಾಶಸ್ತ್ಯದ ಮತದಾನ ಮಾಡಿ ಮರಳಿದರು‌.

'25 ವರ್ಷದಿಂದ ಪರಿಷತ್ ಚುನಾವಣೆಗಳಲ್ಲಿ ಹಕ್ಕು ಚಲಾಯಿಸುತ್ತಿರುವೆ‌. ಕೆಲವೇ ನಿಮಿಷದಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಿತು' ಎಂದು ಗಂಗೋತ್ರಿ ಪ್ರೌಢಶಾಲೆಯ ಶಿಕ್ಷಕ, ವಿಜಯನಗರದ ನಿವಾಸಿ ಮಹೇಶ ಹೇಳಿದರು.

ಮತಗಟ್ಟೆ ಕೇಂದ್ರದ ಸಮೀಪ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು, ಪಕ್ಷದ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.

ರಾಮಕೃಷ್ಣನಗರದ ರಾಮಕೃಷ್ಣವಿದ್ಯಾಕೇಂದ್ರ, ನಜರಾಬಾದ್ ನ ಸರ್ಕಾರಿ ಪಿಯು ಕಾಲೇಜು, ಕುವೆಂಪುನಗರದ ಕಾಗಿನೆಲೆ ಬಿ.ಇಡಿ ಕಾಲೇಜು, ಗೋಕುಲಂನ ಲಯನ್ಸ್ ಸೇವಾನಿಕತನ ಶಾಲೆ ಸೇರಿದಂತೆ ನಗರದಲ್ಲಿನ 12 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ಮತಚಲಾಯಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 20 ಮತಗಟ್ಟೆಗಳಿವೆ. ಕ್ಷೇತ್ರದ ಒಟ್ಟು 21,549 ಮತದಾರರಲ್ಲಿ ಜಿಲ್ಲೆಯ 10,439 ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ.

ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ‘ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ’ ಒಳಗೊಂಡಿದ್ದು, ಸತತ 5ನೇ ಬಾರಿಗೆ ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಮತ್ತು ಜೆಡಿಎಸ್‌–ಬಿಜೆಪಿ ಬೆಂಬಲದೊಂದಿಗೆ ಇದೇ ಮೊದಲಿಗೆ ಸ್ಪರ್ಧಿಸಿರುವ ಕೆ. ವಿವೇಕಾನಂದ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

05:0003 Jun 2024

ಕಲಬುರಗಿ ವರದಿ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಕಲಬುರಗಿಯ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.

ನಗರದ ತಹಶೀಲ್ದಾರ್ ಕಚೇರಿಯ ಎರಡು, ನಗರೇಶ್ವರ ಶಾಲೆಯ ಮೂರು ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ 47 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ

ಕಲಬುರಗಿ ತಹಶೀಲ್ದಾರ್ ಕಚೇರಿ ಮತಗಟ್ಟೆಯಲ್ಲಿನ ಒಟ್ಟು 1,810 ಮತದಾರರ ಪೈಕಿ ಬೆಳಿಗ್ಗೆ 9.30 ಗಂಟೆಗೆ 78 ಜನ ಮತ ಚಲಾಯಿಸಿದ್ದರು.

ನಗರೇಶ್ವರ ಶಾಲೆಯ ಮತಗಟ್ಟೆಯಲ್ಲಿ 1389 ಮತದಾರರ ಪೈಕಿ 102 ಮತದಾರರು ಬೆಳಿಗ್ಗೆ 10 ಗಂಟೆವರೆಗೆ ಮತ ಚಲಾಯಿಸಿದ್ದರು.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ‌ಪಾಟೀಲ ನಗರೇಶ್ವರ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಆಕ್ಷೇಪ: ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪರೆಡ್ಡಿ ಪರವಾಗಿ ಮತಗಟ್ಟೆಯ ಪಕ್ಕದಲ್ಲಿ ಅವರ ಏಜೆಂಟರು ಮತದಾರರ ಸ್ಲಿಪ್ ಕೊಡುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

05:0203 Jun 2024

ರಾಮನಗರ ವರದಿ

ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬೆಳಿಗ್ಗೆ ಬಿರುಸಿನ ಮತದಾನ ನಡೆಯಿತು.

ರಾಮನಗರದ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಕಚೇರಿಯಲ್ಲಿ ಎರಡು ಮತಗಟ್ಟೆಗಳಿದ್ದು, ಪದವೀಧರ ಮತದಾರರು ಮತಗಟ್ಟೆಗೆ ಬಂದು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಮತಗಟ್ಟೆಗಳ ಹೊರಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ‌ ಬೆಂಬಲಿಗರು ಬೀಡು ಬಿಟ್ಟಿದ್ದಾರೆ. ಮತಗಟ್ಟೆಗೆ ಬರುವ ಮತದಾರರ ನೋಂದಣಿ ಸಂಖ್ಯೆ ಹುಡುಕಿ ಅವರ ಮತಗಟ್ಟೆಗೆ ಕಳಿಸುತ್ತಿದ್ದ ದೃಶ್ಯ ಕಂಡುಬಂತು.

ರಾಮನಗರ ಜಿಲ್ಲಾ ವ್ಯಾಪ್ತಿಯ 28 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಪ್ರತಿ ಮತಗಟ್ಟೆಯಲ್ಲಿ 800 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಮೂರು ಜಿಲ್ಲೆಗಳ 36 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ 1,21,860 ಮತದಾರರಿದ್ದಾರೆ. ಈ ಪೈಕಿ, ರಾಮನಗರ ಜಿಲ್ಲೆಯಲ್ಲಿ 18,997 ಸಾವಿರ ಮಂದಿ ಇದ್ದಾರೆ. ಪರಿಷತ್‌ ಚುನಾವಣೆಯ ಮತ ಎಣಿಕೆಯು ಜೂನ್ 6ರಂದು ಬೆಂಗಳೂರಿನಲ್ಲಿ ನಡೆಯಲಿದೆ.

05:2703 Jun 2024

ಕೊಪ್ಪಳ ವರದಿ

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸೋಮವಾರ ಮತದಾನ ಆರಂಭವಾಗಿದ್ದು ಬೆಳಿಗ್ಗೆ 10 ಗಂಟೆಯ ಅಂತ್ಯಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಶೇ. 8.72ರಷ್ಟು ಮತದಾನವಾಗಿದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 6 ಮತಗಟ್ಟೆಗಳಲ್ಲಿ ವಿಡಿಯೊಗ್ರಾಫಿ ವ್ಯವಸ್ಥೆ ಮಾಡಲಾಗಿದೆ. .

ಜಿಲ್ಲೆಯಲ್ಲಿ 9,162 ಪುರುಷ ಹಾಗೂ 4,581 ಮಹಿಳಾ ಮತದಾರರು ಇದ್ದಾರೆ. 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತಾದರೂ ಮೋಡಕವಿದ ವಾತಾವರಣವಿದ್ದ ಕಾರಣ ಆರಂಭದಲ್ಲಿ ಮಂದಗತಿಯಿಂದ ಸಾಗಿತ್ತು. ಈಗ ನಿಧಾನವಾಗಿ ಮತದಾನ ಚುರುಕು ಪಡೆದುಕೊಳ್ಳುತ್ತಿದೆ.

05:3103 Jun 2024

ಮೈಸೂರು ವರದಿ

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೊದಲ ಎರಡು ತಾಸಿನಲ್ಲಿ ಅಂದರೆ ಬೆಳಿಗ್ಗೆ 8ರಿಂದ 10ರವರೆಗೆ ಶೇ 14.09ರಷ್ಟು ಮತದಾನವಾಗಿದೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಶೇ 12.71 ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 14.76ರಷ್ಟು ಮತದಾನವಾಗಿದೆ.

05:4303 Jun 2024

ವಿಜಯನಗರ ವರದಿ

ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಮತದಾನ ವಿಜಯನಗರ ಜಿಲ್ಲೆಯ 21 ಮತಗಟ್ಟೆಗಳಲ್ಲಿ ಸೋಮವಾರ ಬೆಳಿಗ್ಗೆ ಬಿರುಸಿನಿಂದ ಆರಂಭವಾಯಿತು.

ಹೊಸಪೇಟೆಯಲ್ಲಿ ಎರಡು, ಕಮಲಾಪುರ, ಮರಿಯಮ್ಮನಹಳ್ಳಿಗಳಲ್ಲಿ ತಲಾ ಒಂದು ಸಹಿತ ಒಟ್ಟು ನಾಲ್ಕು ಮತಗಟ್ಟೆಗಳು ಹೊಸಪೇಟೆ ತಾಲ್ಲೂಕಿನಲ್ಲಿವೆ.

ಜಿಲ್ಲೆಯಲ್ಲಿ 18,233 ಮತದಾರರಿದ್ದಾರೆ.

05:4503 Jun 2024

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಿಂದ ಮತದಾನ

ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಾಗಿ ಮತದಾನ ಆರಂಭವಾಗಿದೆ.

ಮಡಿಕೇರಿಯ ನಗರಸಭೆಯಲ್ಲಿರುವ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡಿದರು‌.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ ಕುಮಾರ್ ಕುಶಾಲನಗರ ಮಾದರಿ‌ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬೆಳಿಗ್ಗೆ 10 ಗಂಟೆಯ ನಂತರ ಮತದಾನ ಬಿರುಸು ಪಡೆದಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 1,578 ಮತದಾರರು ಇದ್ದು, ಇವರಲ್ಲಿ 543 ಪುರುಷರು ಮತ್ತು 1,035 ಮಹಿಳಾ ಮತದಾರರು ಇದ್ದಾರೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 234, ಕುಶಾಲನಗರ ತಾಲ್ಲೂಕಿನಲ್ಲಿ 337, ಮಡಿಕೇರಿ ತಾಲ್ಲೂಕಿನಲ್ಲಿ 441, ವಿರಾಜಪೇಟೆ ತಾಲ್ಲೂಕಿನಲ್ಲಿ 268 ಮತ್ತು ಪೊನ್ನಂಪೇಟೆ ತಾಲ್ಲೂಕಿನ 298 ಮಂದಿ ಮತದಾರರು ಇದ್ದಾರೆ.

ಇವರಿಗಾಗಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ನಗರಸಭೆ ಸಭಾಂಗಣ (ಬಲಭಾಗ), ವಿರಾಜಪೇಟೆ ಪುರಸಭೆ ಕಚೇರಿ, ಪೊನ್ನಂಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 3,909 ಮತದಾರರು ಇದ್ದು, ಇವರಲ್ಲಿ 1,699 ಪುರುಷ ಮತ್ತು 2,210 ಮಹಿಳಾ ಮತದಾರರು ಇದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 811, ಕುಶಾಲನಗರ ತಾಲ್ಲೂಕಿನಲ್ಲಿ 795, ಮಡಿಕೇರಿ ತಾಲ್ಲೂಕಿನಲ್ಲಿ 1,143, ವಿರಾಜಪೇಟೆ ತಾಲ್ಲೂಕಿನಲ್ಲಿ 630 ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 530 ಮಂದಿ ಮತದಾರರು ಇದ್ದಾರೆ.

ಇವರಿಗಾಗಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ನಗರಸಭೆ ಸಭಾಂಗಣ (ಬಲಭಾಗ), ನಗರಸಭೆ ಸಭಾಂಗಣ (ಎಡಭಾಗ), ವಿರಾಜಪೇಟೆ ಪುರಸಭೆ ಕಚೇರಿ ಹಾಗೂ ಪೊನ್ನಂಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.