ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಕ್ಷ್ಮಿ ಕರೆತಂದು ನಡುನೀರಲ್ಲಿ ಕೈಬಿಟ್ಟ ಜೆಡಿಎಸ್‌’

ಐಆರ್‌ಎಸ್‌ ಹುದ್ದೆ ವಾಪಸ್‌ ಕೊಡಿಸುವಂತೆ ಕೇಳಿಲ್ಲ
Last Updated 26 ಮಾರ್ಚ್ 2019, 4:38 IST
ಅಕ್ಷರ ಗಾತ್ರ

ಮಂಡ್ಯ: ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಐಆರ್‌ಎಸ್‌ ಹುದ್ದೆ ತ್ಯಜಿಸಿ ಜೆಡಿಎಸ್‌ ಸೇರಿದ್ದ ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಜೆಡಿಎಸ್‌ ಮುಖಂಡರು ನಿರಾಸೆ ಉಂಟು ಮಾಡಿದ್ದಾರೆ. ರಾಜಕೀಯಕ್ಕೆ ತರೆತಂದು ನಡುನೀರಲ್ಲಿ ಕೈಬಿಟ್ಟಿದ್ದಾರೆ ಎಂದು ಲಕ್ಷ್ಮಿ ಹಿತೈಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಬಿಬಿಎಸ್‌ ಪದವಿ ಪೂರೈಸಿ ಐಆರ್‌ಎಸ್‌ ಹುದ್ದೆಗೇರಿದ್ದ ಅವರ ರಾಜೀನಾಮೆ ಕೊಡಿಸಿ, ಚುನಾವಣೆಗೆ ಟಿಕೆಟ್‌ ಕೊಡುವುದಾಗಿ ನಂಬಿಸಿ ಜೆಡಿಎಸ್‌ ಮುಖಂಡರು ಕರೆತಂದಿದ್ದರು. ಕಳೆದ ವಿಧಾನಸಭೆ, ಲೋಕಸಭಾ ಉಪಚುನಾವಣೆ ಹಾಗೂ ಈಗಿನ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್‌ ಕೊಟ್ಟಿಲ್ಲ. ಕೇವಲ ಒಂದೂವರೆ ವರ್ಷದಲ್ಲಿ ಜಿಲ್ಲೆಯಾದ್ಯಂತ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದು, ಜೆಡಿಎಸ್‌ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿ ಮಾತಿಗೆ ನೋವು: ಲಕ್ಷ್ಮಿ ಅವರು ಹುದ್ದೆ ತೊರೆದು ಬಂದ ನಂತರ ಎಂದೂ ಹುದ್ದೆಗೆ ಮರಳುವ ಮಾತುಗಳನ್ನಾಡಿಲ್ಲ. ಅನ್ಯಾಯವಾಗಿದ್ದರೂ ಪಕ್ಷಕ್ಕೆ ನಿಷ್ಠರಾಗಿಯೇ ಇದ್ದಾರೆ. ಆದರೆ, ಈಚೆಗೆ ನಗರದಲ್ಲಿ ನಡೆದ ಜೆಡಿಎಸ್‌ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಲಕ್ಷ್ಮಿ ಅವರಿಗೆ ಮತ್ತೆ ಐಆರ್‌ಎಸ್‌ ಹುದ್ದೆ ಕೊಡಿಸಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಅವರ ಪತಿ ಅಶ್ವಿನ್‌ಗೌಡ ನಮ್ಮ ಕಚೇರಿಯಲ್ಲೇ ಇದ್ದಾರೆ ಎಂದು ಹೇಳಿರುವುದು ಲಕ್ಷ್ಮಿ ಅವರಿಗೆ ಅಪಾರನೋವು ತಂದಿದೆ’ ಎಂದು ಮೂಲಗಳು ತಿಳಿಸಿವೆ.

‘ವಾಪಸ್‌ ಕೆಲಸಕ್ಕೆ ತೆರಳಲು ರಾಜಕಾರಣಕ್ಕೆ ಬಂದವರಲ್ಲ. ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಐಆರ್‌ಎಸ್‌ ಹುದ್ದೆಯನ್ನು ವಾಪಸ್‌ ಕೊಡಿಸಿ ಎಂದು ಕುಮಾರಸ್ವಾಮಿ ಅವರನ್ನು ಎಂದೂ ಕೇಳಿಲ್ಲ. ಲೋಕಸಭೆ ಉಪ ಚುನಾವಣೆ ಟಿಕೆಟ್‌ ವಂಚಿತರಾದ ನಂತರ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಯಾವ ಮುಖಂಡರೂ ಮಾತನಾಡಿಸಿ, ಸಮಾಧಾನ ಮಾಡಿಲ್ಲ. ಅವರ ಪತಿ ಅಶ್ವಿನ್‌ಗೌಡ ತಮ್ಮ ಸಾಮರ್ಥ್ಯದ ಮೂಲಕ ಮುಖ್ಯಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿ ಹುದ್ದೆ ಪಡೆದಿದ್ದಾರೆ. ಅದು ಮುಖ್ಯಮಂತ್ರಿ ಕೊಡಿಸಿರುವ ಕೆಲಸವಲ್ಲ. ಅವರ ಮಾತಿನಿಂದ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ’ ಎಂದು ಲಕ್ಷ್ಮಿ ಹಿತೈಷಿ ವಿನಯ್‌ ತಿಳಿಸಿದರು.

*
ನಿಖಿಲ್ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ. ಮನಸ್ಸಿಗೆ ನೋವಾಗಿದೆ. ಹೆಚ್ಚಿಗೆ ಮಾತನಾಡುವುದಿಲ್ಲ.
-ಲಕ್ಷ್ಮಿಅಶ್ವಿನ್‌ಗೌಡ, ಜೆಡಿಎಸ್‌ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT