ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು

Last Updated 28 ಏಪ್ರಿಲ್ 2022, 7:21 IST
ಅಕ್ಷರ ಗಾತ್ರ

ಮುಂಬೈ: ‘ಹಿಂದಿ ರಾಷ್ಟ್ರೀಯ ಭಾಷೆ’ (?) ಎಂಬ ವಿವಾದಕ್ಕೆ ಸಂಬಂಧಿಸಿ ಬಾಲಿವುಡ್‌ ನಟ ಸೋನು ಸೂದ್‌ ಅವರು ಸಹ ನಟ ಅಜಯ್‌ ದೇವ್‌ಗನ್‌ಗೆ ತಿರುಗೇಟು ನೀಡಿದ್ದಾರೆ.

‘ಹಿಂದಿಯನ್ನು ನಾವು ರಾಷ್ಟ್ರ ಭಾಷೆ ಎಂದು ಪರಿಗಣಿಸಲು ಆಗುವುದಿಲ್ಲ. ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ. ನೀವು ಯಾವ ಚಿತ್ರರಂಗಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಪ್ರೇಕ್ಷಕರನ್ನು ರಂಜಿಸಿದರೆ ಅವರು ನಿಮ್ಮನ್ನು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಜನ ನಿಮ್ಮನ್ನು ಪ್ರೀತಿಸಲು ಶುರು ಮಾಡುತ್ತಾರೆ’ ಎಂದು ಸೋನು ಸೂದ್‌ ಪ್ರತಿಕ್ರಿಯಿಸಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಚಿತ್ರ ನಿರ್ಮಾಪಕರು ಮತ್ತು ನಟರು ‘ಜನರ ಸಂವೇದನೆಯನ್ನು ಹೇಗೆ ಗೌರವಿಸಬೇಕು’ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸೂದ್‌ ತಿಳಿಸಿದ್ದಾರೆ.

‘ಕೆಜಿಎಫ್– 2’, ‘ಆರ್‌ಆರ್‌ಆರ್’ ಮತ್ತು ‘ಪುಷ್ಪ’ ಸಿನಿಮಾಗಳ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿರುವ ಸೂದ್, ‘ಹಿಂದಿ ಚಲನಚಿತ್ರಗಳನ್ನು ನಿರ್ಮಿಸುವ ವಿಧಾನವನ್ನು ಬದಲಾಯಿಸಿವೆ’ ಎಂದಿದ್ದಾರೆ.

ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

‘ಪ್ರಸ್ತುತ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ’ ಎಂದು ಕಿಚ್ಚ ಸುದೀಪ್‌ ಹೇಳಿದ್ದ ಮಾತಿಗೆ ಬಾಲಿವುಡ್‌ ನಟ ಅಜಯ್‌ ದೇವ್‌ಗನ್‌ ಕಿಡಿಕಾರಿದ್ದರು.

'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿದೆ. ಜನ ಗಣ ಮನ' ಎಂದು ಸುದೀಪ್‌ ಅವರನ್ನು ಟ್ಯಾಗ್‌ ಮಾಡಿ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್‌, ‘ಆ ನನ್ನ ಹೇಳಿಕೆಯ ಹಿನ್ನೆಲೆಗೂ ಅದು ನಿಮಗೆ ತಲುಪಿರುವುದಕ್ಕೂ ಸಂಪೂರ್ಣ ವ್ಯತ್ಯಾಸವಾಗಿದೆ. ನಾನು ನಿಮ್ಮನ್ನು ನೇರವಾಗಿ ಭೇಟಿಯಾದಾಗ ಆ ಹೇಳಿಕೆಯ ಬಗ್ಗೆ ವಿವರಿಸುತ್ತೇನೆ. ಇದು ಯಾರಿಗೂ ನೋವುಂಟು ಮಾಡಲು, ಪ್ರಚೋದಿಸಲು ಅಥವಾ ಚರ್ಚೆಯನ್ನು ಹುಟ್ಟುಹಾಕಲು ನೀಡಿದ ಹೇಳಿಕೆಯಲ್ಲ. ಹಾಗೇಕೆ ನಾನು ಮಾಡಲಿ ಸರ್‌,' ಎಂದು ಅಜಯ್‌ ದೇವಗನ್‌ ಅವರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು.

ನಮ್ಮ ರಾಷ್ಟ್ರದ ಎಲ್ಲ ಭಾಷೆಗಳನ್ನೂ ನಾನು ಪ್ರೀತಿಸುವೆ ಹಾಗೂ ಗೌರವಿಸುವೆ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದು, 'ಈ ವಿಷಯವು ಇಲ್ಲಿಗೇ ನಿಲ್ಲಲು ಬಯಸುತ್ತೇನೆ....ಮೇಲೆ ತಿಳಿಸಿರುವಂತೆ ನನ್ನ ಹೇಳಿಕೆಯು ಸಂಪೂರ್ಣ ಭಿನ್ನವಾದ ಸನ್ನಿವೇಶದಲ್ಲಿ ಹೇಳಿರುವುದಾಗಿದೆ. ನಿಮ್ಮ ಮೇಲೆ ಅಪಾರ ಪ್ರೀತಿಯಿದೆ ಮತ್ತು ಸದಾ ಶುಭವನ್ನು ಹಾರೈಸುತ್ತೇನೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದರು.

ಸುದೀಪ್‌ ವಿವರಣೆಗೆ ಮತ್ತೆ ಪ್ರತಿಕ್ರಿಯಿಸಿರುವ ಅಜಯ್‌ ದೇವ್‌ಗನ್‌, ‘ಗೆಳೆಯ, ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ಸರಿಪಡಿಸಿದ್ದಕ್ಕೆ ಧನ್ಯವಾದಗಳು. ಚಿತ್ರರಂಗವು ಯಾವಾಗಲೂ ಒಂದೂ ಎಂದು ಕಾಣುವವನು ನಾನು. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸುವುದನ್ನು ನಿರೀಕ್ಷಿಸುತ್ತೇವೆ....’ಎಂದಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT