ಇನ್ನಮ್ಯಾಗಿಂದ 'ಫುಲ್ ಗುದ್ದಾಮ್ ಗುದ್ದಿ’ ಎಂದ ರಮ್ಯಾ! ಏನದು ಗುದ್ದಾಮ್ ಗುದ್ದಿ?
ಬೆಂಗಳೂರು: ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ತಮ್ಮದೇ ನಿರ್ಮಾಣದ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದು ರಮ್ಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು.
ಇನ್ನು ಕಮ್‌ಬ್ಯಾಕ್ ಬಗ್ಗೆ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಜೋಶ್‌ನಿಂದ ಮಾತನಾಡಿರುವ ರಮ್ಯಾ, 'ಇನ್ನಮ್ಯಾಗಿಂದ ಫುಲ್ ಗುದ್ದಾಮ್ ಗುದ್ದಿ' ಎಂದು ಹೇಳಿದ್ದಾರೆ.
'10 ವರ್ಷಗಳ ಬಳಿಕ ಉತ್ತರಕಾಂಡ ಸಿನಿಮಾ ಮೂಲಕ ನಾನು ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ರತ್ನನ್ ಪ್ರಪಂಚ ಮಾಡೋಕೆ ಆಗ್ಲಿಲ್ಲ ಎಂದು ಬೇಸರವಿತ್ತು. ಆದ್ರೆ ಈಗ ಅದೇ ತಂಡದ ಜೊತೆ ಸಿನಿಮಾ ಮಾಡ್ತಿರೋದು ತುಂಬಾ ಸಂತೋಷದ ವಿಚಾರ' ಎಂದು ಟ್ವೀಟ್ ಮಾಡಿದ್ದಾರೆ.
The wait is finally over! The comeback- #UttaraKaanda ♥️
@KRG_Studios @VKiragandur @Dhananjayaka @Karthik1423 @yogigraj #RohitPadaki pic.twitter.com/NIoCo4J2co
— Ramya/Divya Spandana (@divyaspandana) November 7, 2022
'ಸ್ಕ್ರಿಫ್ಟ್ ಚಿಂದಿಯಾಗಿದೆ. ಧನು, ಕಾರ್ತಿಕ್, ಯೋಗಿ ನನಗೆ ತುಂಬಾ ಹತ್ತಿರವಾದವರು. ರೋಹಿತ್ ಪದಕಿ, ಅರವಿಂದ್ ಕಶ್ಯಪ್, ಚರಣ್ ರಾಜ್, ವಿಶ್ವಾಸ್, ದೀಪು ಈ ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯ್ತಾ ಇದೀನಿ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ತುದಿಗಾಲ ಮೇಲೆ ನಿಂತಿದ್ದೇನೆ. ಇನ್ನಮ್ಯಾಗಿಂದ್ ಫುಲ್ ಗುದ್ದಾಮ್ ಗುದ್ದಿ (ಇನ್ನುಂದೆ ಸಿನಿಮಾರಂಗದಲ್ಲಿ ಕ್ರಿಯಾಶೀಲ ಎಂಬ ಅರ್ಥದಲ್ಲಿ)' ಎಂದು ರಮ್ಯಾ ಹೇಳಿದ್ದಾರೆ.
‘ರತ್ನನ್ ಪ್ರಪಂಚ’ದ ನಿರ್ದೇಶಕ ರೋಹಿತ್ ಪದಕಿ ಚಿತ್ರವಿದು. ವಿಜಯ್ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆ ಕೆ.ಆರ್.ಜಿ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದ್ದು, ಮುಹೂರ್ತ ಭಾನುವಾರ ನೆರವೇರಿತು.
ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ‘ಉತ್ತರಕಾಂಡ’ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ ರಮ್ಯಾ. ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನಿಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ತಂಡದ ಜೊತೆ ಕೈ ಜೋಡಿಸಲು ಖುಷಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಒಳ್ಳೆಯ ಜಾಗದಲ್ಲಿರುವೆ ಎಂಬ ಭಾವನೆ ನೀಡುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.
‘ಈ ಚಿತ್ರ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ. ಉತ್ತರಕರ್ನಾಟಕದ ಅದ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ’ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ, ಭಾಷೆಯಲ್ಲಿ ಇರುತ್ತದೆ ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ.
ಅರವಿಂದ ಕಶ್ಯಪ್ ಕ್ಯಾಮೆರಾ, ಚರಣ್ ರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.