ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯಲ್ಲಿ ಅರಳಿದ ಹೂವು ಅನುಪಮಾ

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

ಅನುಪಮಾ ಗೌಡ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ‘ಬೆಂಕಿಯಲ್ಲಿ ಅರಳಿದ ಹೂವು' ಚಿತ್ರ ಪೂರ್ಣಗೊಂಡಿದ್ದು ಸದ್ಯದಲ್ಲೆ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಹಾಡುಗಳ ಧ್ವನಿ ಸುರುಳಿ ಬಿಡುಗಡೆಯಾಗಿದ್ದು,ಹಾಡುಗಳು ಕೇಳಲು ಹಿತವಾಗಿವೆ.

ಸಾಹಿತಿ ದೊಡ್ಡರಂಗೇಗೌಡ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ವಿ. ಮನೋಹರ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಅನುರಾಧಾ ಭಟ್ ಹಾಡಿದ್ದಾರೆ.

ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರ ತಂಡದೊಂದಿಗೆ ಸುದ್ದಿ ಗೋಷ್ಠಿಗೆ ಹಾಜರಾಗಿದ್ದರು.

‘ಎಂಬತ್ತರ ದಶಕದಲ್ಲಿ ಸುಹಾಸಿನಿ ಅವರು ನಟಿಸಿ, ಬಾಲಚಂದರ್ ನಿರ್ದೇಶಿದ ಅದ್ಭುತ ಚಿತ್ರ ಬೆಂಕಿಯಲ್ಲಿ ಅರಳಿದ ಹೂವು. ಇದೇ ಶೀರ್ಷಿಕೆ ಇಟ್ಟುಕೊಂಡು ಗಾರ್ಮೆಂಟ್ಸ್ ನಲ್ಲಿ ದುಡಿಯುವ ಮಧ್ಯಮ ವರ್ಗದ ಹೆಣ್ಣುಮಗಳ ಬದುಕನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಲೆಜೆಂಡ್ ಚಿತ್ರದ‌ ಹೆಸರಿಗೆ ಯಾವುದೇ ಧಕ್ಕೆಯಾಗಬಾರದು ಎಂದು ಹಿತೈಷಿಗಳು ಸಲಹೆ ಕೊಟ್ಟಾಗ ಅಳುಕಿನಿಂದ ಶೀರ್ಷಿಕೆ ಬದಲಿಸುವ ಯೋಚನೆ ಮಾಡಿದ್ದೆವು. ಆದರೆ ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ನಂಬಿಕೆ‌ ಇತ್ತು. ಹಾಗಾಗಿ ಅದನ್ನು ಉಳಿಸಿಕೊಂಡು ಶೀರ್ಷಿಕೆಗೆ ನ್ಯಾಯ ಸಲ್ಲಿಸಿರುವ ಪ್ರಯತ್ನ ಮಾಡಿದ್ದೇವೆ. ಇದೊಂದು ಭಾವುಕತೆ ಉಕ್ಕಿಸುವ ಸಿನಿಮಾ ಎಂದು ಹೇಳಿದರು.

ನಾಯಕಿ ಪ್ರಧಾನ ಚಿತ್ರವಾದ ಈ ಚಿತ್ರದಲ್ಲಿ ಅನುಪಮಾ ಗೌಡಡಿಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‘ನನ್ನ ತಾಯಿ ಕೂಡ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಹಾಗಾಗಿ ನನಗೆ ಅಲ್ಲಿನ ಕಷ್ಟದ ಬದುಕಿನ ಪರಿಚಯವಿದೆ. ಚಿತ್ರದ ಕಥಾವಸ್ತು ನಮ್ಮ ಬದುಕಿಗೂ ಎಲ್ಲೋ ಒಂದುಕಡೆ ಕನೆಕ್ಟ್ ಆಗಿರುತ್ತದೆ. ಈ ಚಿತ್ರವನ್ನು ಕಾಲೇಜು ಹುಡುಗ– ಹುಡುಗಿಯರು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಗಾರ್ಮೆಂಟ್ಸ್‌ ನೌಕರರು ನೋಡಬೇಕೆನ್ನುವುದು ನಮ್ಮ ಆಶಯ. ಈ ಚಿತ್ರವನ್ನು ನೋಡಿ ಒಂದೇ ಒಂದು ಕುಟುಂಬವಾದರೂ ಬದಲಾದರೆ ಚಿತ್ರತಂಡಕ್ಕೆ ಸಾರ್ಥಕತೆ ಬರುತ್ತದೆ’ ಎಂದರು.

ದೊಡ್ಡರಂಗೇಗೌಡ, ‘ಹೆಣ್ಣಿನ ಬವಣೆ ಅಷ್ಟೇ ಬೆಂಕಿಯಲ್ಲಿ ಅರಳಿದ ಹೂವಲ್ಲ. ಬಡವರ ಬದುಕು ಕೂಡ ಪ್ರತಿ ಕ್ಷಣವೂ ಕಾವಲಿಯ ಮೇಲೆ ಕೊತಕೊತ ಕುದಿಯುವಂತೆ ಇರುತ್ತದೆ. ಮಧ್ಯಮ ವರ್ಗದ ಕುಟುಂಬಗಳ ಬವಣೆಯ ಮುಖವನ್ನು ಇದರಲ್ಲಿ ಅನಾವರಣಗೊಂಡಿದೆ. ಚಿತ್ರತಂಡ ತನ್ನದ ಆಶಯದ ಗುರಿಯನ್ನು ಮುಟ್ಟಿದೆ. ಇದೊಂದು ಸಾಂಸಾರಿಕ ಚಿತ್ರ. ಇದರಲ್ಲಿಮಚ್ಚು ಲಾಂಗುಗಳ ಝಳಪಿಸುವಿಕೆ ಇಲ್ಲ.ಪಾತ್ರಕ್ಕೆ ಅನುಪಮಾಗೌಡ ನ್ಯಾಯ ಸಲ್ಲಿಸಿದ್ದಾರೆ’ ಎಂದರು.

ಚಿತ್ರಕ್ಕೆ ಸಂಗೀತ ನೀಡಿರುವ ವಿ.ಮನೋಹರ್‌, ನಾಯಕಿ ಪ್ರಧಾನ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿದ್ದವು. ಸುಹಾಸಿನಿ, ಶ್ರುತಿ ಅವರಿಗೆ ಸಿಗುತ್ತಿದ್ದ ಇಡೀ ಚಿತ್ರವನ್ನು ಆವರಿಸಿಕೊಳ್ಳುವಂತಹ ಪಾತ್ರ ಅನುಪಮಾಗೌಡ ಅವರಿಗೆ ಈ ಚಿತ್ರದಲ್ಲಿ ಸಿಕ್ಕಿದೆ. ಅವರು ಹೆಸರಿಗೆ ತಕ್ಕಂತೆ ಅನುಪಮಾವಾದ ಅಭಿನಯ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್‌, ‘ಇದೊಂದು ಸದಭಿರುಚಿಯ ಚಿತ್ರ. ಪ್ರೇಕ್ಷಕನ ಮನಸ್ಸು ತಟ್ಟುತ್ತದೆ. ಮಹಿಳೆಯರು ಟಿ.ವಿ ಧಾರಾವಾಹಿಗೆ ಅಂಟಿಕೊಂಡು ಕೂರದೆ ಚಿತ್ರಮಂದಿರಕ್ಕೆ ಬಂದರೆ ಈ ಚಿತ್ರ ಖಂಡಿತ ಯಶಸ್ವಿಯಾಗುತ್ತದೆ’ ಎಂದರು.

ಎಚ್ಎಎ ಸಿನಿ ಕ್ರಿಯೇಷನ್ ಅಡಿ ಈ ಚಿತ್ರಕ್ಕೆ ವಿಶು ವಿ.ಆಚಾರ್ ಬಂಡವಾಳ ಹೂಡಿದ್ದಾರೆ.ಛಾಯಾಗ್ರಹಣ ಹರೀಶ್ ಶಿಂದೆ, ಸಂಕಲನ ಶಾಂತಕುಮಾರ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT