ಗುರುವಾರ , ಫೆಬ್ರವರಿ 25, 2021
30 °C

‘ಬಿಗ್‌ಬಾಸ್‌ ಸ್ಪರ್ಧಿಗಳು ಬರೀ ನಾಟಕ ಆಡ್ತಾರೆ’

ಸಂದರ್ಶನ: ಮಾನಸ ಬಿ.ಆರ್‌. Updated:

ಅಕ್ಷರ ಗಾತ್ರ : | |

Deccan Herald

ಬಾ ಡಿಬಿಲ್ಡಿಂಗ್, ಸಿನಿಮಾ, ಆದಾಯ ತೆರಿಗೆ ಇಲಾಖೆ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ವಿಭಿನ್ನವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ‘ಜಿಮ್‌ ರವಿ’ ಎಂದೇ ಖ್ಯಾತರಾಗಿದ್ದವರು. ಬಿಗ್‌ಬಾಸ್‌ನ ಆರನೇ ಆವೃತ್ತಿಯಲ್ಲಿ ಆರು ವಾರ ತಮ್ಮದೇ ಛಾಪು ಮೂಡಿಸಿ ಹೊರಬಂದಿದ್ದಾರೆ. ರಿಯಾಲಿಟಿ ಶೋ ಮತ್ತು ಬಾಳ ಪಯಣದ ಬಗ್ಗೆ ಅವರೇ ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಬಿಗ್‌ಬಾಸ್‌ ಮನೆಗೆ ಹೋದ ಮೇಲೆ ಎಷ್ಟು ಕೆ.ಜಿ ಕಡಿಮೆಯಾಗಿದ್ದೀರಿ?

ಹ್ಹ ಹ್ಹ ಹ್ಹ.. 11 ಕೆ.ಜಿ ಕಡಿಮೆಯಾಗಿದ್ದೀನಿ. ಹೋಗುವಾಗ 93ಕೆ.ಜಿ ಇದ್ದೆ. ಈಗ 81ಕ್ಕೆ ಇಳಿದಿದ್ದೀನೆ. 

ಯಾಕೆ ಸರಿಯಾಗಿ ವರ್ಕ್‌ಔಟ್ ಮಾಡಲಿಲ್ವಾ?

ದಿನಾ ಬೆಳಿಗ್ಗೆ ಆರು ಗಂಟೆಗೇ ಏಳುತ್ತಿದ್ದೆ. ಎಲ್ಲರಿಗೂ ವರ್ಕ್‌ಔಟ್ ಮಾಡುವುದನ್ನು ಹೇಳಿಕೊಡ್ತಿದ್ದೆ. ಒಂದು ದಿನವೂ ಹಾಡು ಹಾಕಿಸಿಕೊಂಡು ಎದ್ದವನು ನಾನಲ್ಲ. ಬಿಗ್‌ಬಾಸ್‌ಗೇ ಎಬ್ಬಿಸಿದವನು ನಾನು. ನಾನು ಮಾಡುತ್ತಿದ್ದ ವರ್ಕ್‌ಔಟ್‌ಗಳನ್ನು ಟಿ.ವಿಯಲ್ಲಿ ಸರಿಯಾಗಿ ತೋರಿಸಿಲ್ಲ ಅಷ್ಟೇ. ದಿನಾ ಹಾಡು ಕೇಳಿಬಂದಾಗ ನಾನು ಜಿಮ್‌ನಲ್ಲೇ ಇರುತ್ತಿದ್ದೆ. ಒಬ್ಬ ಕ್ರೀಡಾಪಟುವಿಗೆ ಏನೆಲ್ಲಾ ಶಿಸ್ತು ಇರಬೋಕೋ ಹಾಗೇ ಇದ್ದೆ.

ಊಟ, ಚಿಕನ್‌, ಮಟನ್‌, ಮೊಟ್ಟೆ ಎಲ್ಲಾ ಕಡಿಮೆಯಾಗಿರಬೇಕು ಅಲ್ವಾ?

ನೋಡಿ, ಇದನ್ನೇ ಎಲ್ಲರೂ ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ನಾನು ಕೆ.ಜಿ ಗಟ್ಟಲೆ ಮಟನ್‌, ಚಿಕನ್‌ ತಿನ್ನಲ್ಲ. ಮೊಟ್ಟೆ ಕೂಡ ತೀರಾ ಕಡಿಮೆ. ಊಟವನ್ನೂ ಎಲ್ಲರಂತೆಯೇ ಮಾಡುತ್ತೇನೆ. ನೈಸರ್ಗಿಕವಾಗಿ ದೇಹದಾರ್ಡ್ಯ ಬೆಳೆಸಿಕೊಂಡಿದ್ದೇನೆ. ಬಿಗ್‌ಬಾಸ್‌ಗೆ ಹೋಗುವ ಮೊದಲು ಮಾಡಿದ ಸಂದರ್ಶನದಲ್ಲೂ ನನಗೆ ಊಟದ ಕುರಿತು ಪ್ರಶ್ನೆ ಕೇಳಿದ್ದರು. ಊಟ ಕಡಿಮೆಯಾದರೆ ಇರ್ತೀರಾ, ಪ್ರೊಟೀನ್‌ ಡ್ರಿಂಕ್ ಬೇಕಾಗಲ್ವಾ ಎಂದು ಕೇಳಿದ್ದರು. ನಾನು ಅದೆಲ್ಲಾ ತಗೊಳೋದಿಲ್ಲ. ಶೇ 90ರಷ್ಟು ಸಸ್ಯಹಾರಿ. ಉಳಿದಂತೆ ಶೇ 10ರಷ್ಟು ಮಾತ್ರ ಮಾಂಸ ತಿನ್ನುವುದನ್ನು ರೂಢಿಸಿಕೊಂಡಿದ್ದೀನಿ. ಪ್ರತಿದಿನ ರಾಗಿಮುದ್ದೆ ತಿನ್ನುತ್ತೇನೆ. ಇದೇ ನನ್ನ ಫಿಟ್‌ನೆಸ್‌
ಮಂತ್ರವಾಗಿದೆ.

ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ಎಷ್ಟು  ದುಡ್ಡು ಸಿಕ್ಕಿರಬಹುದು?

ಅಯ್ಯೋ ಇಲ್ಲಪ್ಪಾ, ನಾನು ದುಡ್ಡು ತಗೊಂಡಿಲ್ಲ. ಒಂದು ವಾರಕ್ಕೆ ಇಷ್ಟು ಅಂತ ಎಲ್ಲರಿಗೂ ಕೊಡ್ತಾರೆ. ಆದರೆ ನಾನು ಆದಾಯ ತೆರಿಗೆ ವಿಭಾಗದಲ್ಲೇ ಕೆಲಸ ಮಾಡೋದ್ರಿಂದ ಈ ರೀತಿ ಮಾಡೋ ಹಾಗಿಲ್ಲ. ದೇವರಾಣೆ ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಅವಕಾಶ ಸಿಕ್ಕಿದ್ದೇ ಹೆಚ್ಚು. ಹಾಗಾಗಿ ಉಚಿತವಾಗಿ ಹೋಗುತ್ತೇನೆ ಅಂತ ಮೊದಲೇ ಹೇಳಿದ್ದೆ.

ಬಿಗ್‌ಬಾಸ್‌ ಮನೆ ಏನೆಲ್ಲಾ ಪಾಠ ಕಲಿಸಿತು?

ಸಾಕಷ್ಟು ಕಲಿಸಿದೆ. ಅಲ್ಲಿ ನಾನು , ನಾನಾಗಿಯೇ ಇರುವುದೇ ದೊಡ್ಡ ಸವಾಲು ಇತ್ತು. ಹೀಗೆ ಇದ್ದವರಲ್ಲಿ ನಾನು ಮತ್ತು ಮುರಳಿ ಅವರು ಮಾತ್ರ. ಅವರೂ ಕಷ್ಟದ ಹಿನ್ನೆಲೆಯಿಂದ ಬಂದವರು. ನಾನು ಸಾಕಷ್ಟು ಸಾಧಿಸಿ ಅಲ್ಲಿಗೆ ಹೋಗಿದ್ದೆ. ನಾಟಕ ಮಾಡೋದು, ಕ್ಯಾಮೆರಾ ತಿರುಗಿದಾಗ ಒಂದು ರೀತಿಯಲ್ಲಿ ಆಡುವುದು ನಮಗೆ
ಬರಲಿಲ್ಲ. 

ಹಾಗಾದ್ರೆ ಅಲ್ಲಿರೋರೆಲ್ಲಾ ನಾಟಕ ಮಾಡ್ತಾರಾ?

ಹೌದು ಖಂಡಿತಾ. ಪೂರ್ತಿ ನಾಟಕನೇ ಮಾಡೋದು. ಸುಮ್ಮನಿದ್ದರೂ ನಮ್ಮನ್ನು ಬಿಡಲ್ಲ. ಕೆಣಕಿ ಮಾತಿಗೆ ಎಳೆಯುತ್ತಾರೆ. ಇಡೀ ದಿನ ಗಲಾಟೆ ಮಾಡಿದ್ರೆ ಒಂದು ತಾಸು ಆದ್ರೂ ನಮ್ಮನ್ನೇ ತೋರಿಸ್ತಾರೆ ಅನ್ನೋದು ಅವರ ಮನಸ್ಸಲ್ಲಿ ಕೂತುಬಿಟ್ಟಿದೆ. ನನಗೆ ಕಪ್‌ ಗೆಲ್ಲೋದು ಒಂದೇ ಉದ್ದೇಶ ಆಗಿರಲಿಲ್ಲ. ಅವರೆಲ್ಲಾ ಉಪ್ಪಿಗೂ, ಮೊಟ್ಟೆಗೂ ಜಗಳ ಆಡ್ತಾರೆ. ನಮ್ಮ ಮನೆಯಲ್ಲಿ ಇದಕ್ಕೆಲ್ಲಾ ಜಗಳ ಆಡ್ತೀವಾ ಹೇಳಿ. ಅಲ್ಲಿ ಯಾಕೆ ಆಡಬೇಕು.. ಸಹಜವಾಗಿಯೇ ಇದ್ದರೆ ಆಗಲ್ವಾ

ನೀವು ‘ಹೀರೊ’ ಆಗ್ತೀರಂತೆ ಹೌದಾ?

ಹೌದು ಮೂರು ಮಂದಿ ನಿರ್ಮಾಪಕರು ನಾಯಕನ ಪಾತ್ರಕ್ಕೆ ಒಪ್ಪಿಕೊಳ್ಳುವಂತೆ ಕೇಳಿದ್ದಾರೆ. ಅದರಲ್ಲಿ ಒಂದು ಕಥೆಯನ್ನೂ ಈಗಾಗಲೇ ಕೇಳಿದ್ದೇನೆ. ಒಬ್ಬ ಕ್ರೀಡಾಪಟುವಾಗಿ ನನ್ನ ಅರ್ಹತೆಗೆ ತಕ್ಕ ಪಾತ್ರ ಸಿಕ್ಕರೆ ಮಾತ್ರ ಮಾಡಬೇಕು ಅಂದುಕೊಂಡಿದ್ದೀನಿ. ನೀವೇ ಹೇಳಿ ಅರ್ಹವಲ್ಲದ್ದನ್ನು ಯಾಕೆ ಮಾಡಬೇಕು?.. ನಾನು ಈಗಾಗಲೇ 110ಕ್ಕೂ ಹೆಚ್ಚು ಪಾತ್ರಗಳಲ್ಲಿ ಮಾಡಿದ್ದೇನೆ. ಭಿನ್ನ ಪಾತ್ರದ ಹುಡುಕಾಟದಲ್ಲಿದ್ದೇನೆ.

ನಿಮಗೆ ಕೋಪ ಜಾಸ್ತಿ ಅಂತ ಕೇಳಿದ್ದೀವಿ. ಹೇಗೆ ತಡೆದುಕೊಂಡ್ರಿ?

ಹೌದು ಕೋಪ ಸ್ವಲ್ಪ ಜಾಸ್ತಿನೇ. ಸಂದರ್ಶನದಲ್ಲೂ ಅದನ್ನೇ ಕೇಳಿದ್ದರು. ಯಾರ ಮೇಲೂ ಕೈ ಮಾಡದಂತೆ ಎಚ್ಚರಿಕೆ ನೀಡಿದ್ದರು. ನಾನು ಸುಮ್ಮಸುಮ್ಮನೆ ಯಾಕೆ ಕೈ ಮಾಡಲಿ. ಬಿಗ್‌ಬಾಸ್‌ ಮನೆಯೊಳಗೆ 18 ವ್ಯಕ್ತಿತ್ವಗಳೂ ಒಂದೊಂದು ರೀತಿ ವಿಚಿತ್ರ. ಅವರಲ್ಲಿ ಬಹುತೇಕರನ್ನು ನೋಡಿದರೆ ನನಗೆ ಕೋಪ ಬರ್ತಿತ್ತು. ನನ್ನ ಕೂದಲನ್ನು ಹೇಗೆ ಹೇಗೋ ಕತ್ತರಿಸಿದ್ದರು. ಆಗ ಸ್ವಲ್ಪ ಬೇಸರ ಆಯ್ತು. ಆದರೂ ತಡೆದುಕೊಂಡೆ. ಎಲ್ಲಾದಕ್ಕೂ ಕೋಪ ಮಾಡ್ಕೊಳೋದ್ರಿಂದ ಏನೂ ಪ್ರಯೋಜನ ಇಲ್ಲ. ಈ ತಾಳ್ಮೆಯನ್ನು ನನಗೆ ‘ಬಿಗ್‌ ಮನೆ’
ಕಲಿಸಿತು.

ಹೊರಗೆ ಬಂದಮೇಲೆ ಏನೆಲ್ಲಾ ಮಿಸ್‌ ಮಾಡಿಕೊಂಡ್ರಿ?

ಮುರಳಿ ಅವರನ್ನು ಬಿಟ್ಟರೆ ಅಲ್ಲಿ ಯಾರೂ ನನಗೆ ಅಷ್ಟು ಇಷ್ಟ ಆಗಲಿಲ್ಲ. ಅವರನ್ನು ಸ್ವಲ್ಪ ಮಿಸ್ ಮಾಡ್ಕೊಂಡೆ. ಸುದೀಪ್‌ ಅವರ ಮಾತುಗಳನ್ನು ಇನ್ನೂ ಕೇಳಬೇಕಿತ್ತು ಅನಿಸುತ್ತಿತ್ತು.

ಅವರು ವೇದಿಕೆ ಮೇಲೆ ನನಗೆ ಒಂದು ಮಾತು ಹೇಳಿದರು ‘ಇದೇ ರೀತಿ ತಮಾಷೆ ಮಾಡಿಕೊಂಡು ಇದ್ದಿದ್ದರೆ ಅಲ್ಲಿ ಇನ್ನಷ್ಟು ದಿನ ಇರ್ಬೋದಿತ್ತು ಅಂದರು’. ಆದರೆ ಅಲ್ಲಿ ನಾವು ಮಾಡುವ ತಮಾಷೆಗೆ ಯಾರೂ ನಗಲ್ಲ. ನಕ್ಕರೆ ನಾವು ಎಲ್ಲಿ ಹೀರೊ ಆಗಿ ಬಿಡ್ತೀವೋ ಅಂತ ಅನುಮಾನದಿಂದಲೇ ನೋಡ್ತಾರೆ. ಎಲ್ಲಾ ಲೆಕ್ಕಾಚಾರ ಹಾಕಿಕೊಂಡೇ
ಬಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು