ಭಾನುವಾರ, ಸೆಪ್ಟೆಂಬರ್ 26, 2021
21 °C

ಬಾಲಿವುಡ್‌ 2019: ಪೌರುಷ ಮೆರೆದ ಚಿತ್ರಗಳದ್ದೇ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಕ್ಸ್‌ ಆಫೀಸ್‌ ಗಳಿಕೆಯೇ ಸಿನಿಮಾ ಯಶಸ್ಸಿನ ಮಾನದಂಡ ಎನ್ನುವುದಾದರೆ, ‘ಪೌರುಷ’ದ ಸಿನಿಮಾಗಳಿಗೆ ಮಣೆ ಹಾಕುವ ಪದ್ಧತಿ ಹಿಂದಿಯಲ್ಲಿ 2019ರಲ್ಲೂ ಮುಂದುವರಿದಿದೆ. 2019ರ ಟಾಪ್‌–5 ಸಿನಿಮಾಗಳ ಪೈಕಿ ನಾಲ್ಕು ಸಿನಿಮಾಗಳು ಪೌರುಷವನ್ನು ವಿಜೃಂಭಿಸುವ ಕಥಾಹಂದರ ಹೊಂದಿವೆ. ಈ ಚಿತ್ರಗಳಲ್ಲಿ ‘ಹೆಣ್ಣು’ ಒಂದು ಪೂರಕ ಪಾತ್ರ ನಿಭಾಯಿಸಿದ್ದಾಳೆ, ಅಷ್ಟೇ.

‘ವಾರ್‌’, ‘ಕಬೀರ್‌ ಸಿಂಗ್‌’, ‘ಉರಿ’, ‘ಭಾರತ್‌’ ಮತ್ತು ‘ಮಿಷನ್ ಮಂಗಲ್’ ಚಿತ್ರಗಳ ಪೈಕಿ ಕೊನೆಯ ಚಿತ್ರ (ಮಿಷನ್‌ ಮಂಗಲ್‌) ಮಾತ್ರ ಮಹಿಳೆಯ ಸಾಧನೆಯನ್ನು ಸಂಭ್ರಮಿಸುವ ಕಥೆ ಹೊಂದಿದೆ. ಇದು ಮಂಗಳಯಾನದ ಯಶಸ್ಸಿನ ಹಿಂದಿನ ಮಹಿಳಾ ವಿಜ್ಞಾನಿಗಳ ಕುರಿತ ಸಿನಿಮಾ ಆದರೂ, ಇದರ ಹೆಚ್ಚಿನ ಗಮನ ಕೇಂದ್ರೀಕೃತ ಆಗಿರುವುದು ನಟ ಅಕ್ಷಯ್ ಕುಮಾರ್ ಅವರ ಮೇಲೆ.

‘ಬಾಲಿವುಡ್‌ ಎನ್ನುವುದು ಪುರುಷ ಪ್ರಾಧಾನ್ಯದ ಉದ್ಯಮ. ಇದು ಯಾವಾಗಲೂ ಹೀಗೇ ಇತ್ತು. ಶ್ರೀದೇವಿ, ಮಾಧುರಿ ದೀಕ್ಷಿತ್ ಅವರಂತಹ ನಟಿಯರು ದೊಡ್ಡ ನಟರಿಗೆ ಸಾಟಿಯಾಗುವಂತೆ ಜನರನ್ನು ಆಕರ್ಷಿಸುತ್ತಿದ್ದರು. ಆದರೆ, ಸಾಮಾನ್ಯವಾಗಿ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದ ಸಿನಿಮಾಗಳೆಲ್ಲ ದೊಡ್ಡ ನಟರನ್ನು ಹೊಂದಿದ್ದವು’ ಎನ್ನುತ್ತಾರೆ ಖ್ಯಾತ ಸಿನಿಮಾ ವಿಮರ್ಶಕ ಸೈಬಲ್ ಚಟರ್ಜಿ.

‘ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಮಾತ್ರ ಹೀಗೆ ಇರುವುದಲ್ಲ. ಸಣ್ಣ ಸಿನಿಮಾಗಳು ಕೂಡ ಹೀಗೇ ಇವೆ, ಅವುಗಳಲ್ಲಿಯೂ ಪ್ರಾಧಾನ್ಯ ಇರುವುದು ಪುರುಷರಿಗೇ. ದುರದೃಷ್ಟಕರ ವಿಚಾರ ಅಂದರೆ, ಕೆಲವು ಸಂದರ್ಭಗಳಲ್ಲಿ ಸಿನಿಮಾ ಹೂರಣವನ್ನು ಕೂಡ ಮುಖ್ಯವೆಂದು ಭಾವಿಸುವುದಿಲ್ಲ. ಸಿನಿಮಾ ಬಿಡುಗಡೆ ಆದ ಮೊದಲ ಎರಡು–ಮೂರು ವಾರಗಳ ಅವಧಿಯಲ್ಲಿ ಸಿನಿಮಾ ಮಂದಿರಗಳಿಗೆ ಜನರನ್ನು ಸೆಳೆಯುವ ಶಕ್ತಿ ಇರುವ ನಾಯಕ ನಟರು ಇದ್ದರೆ ಸಾಕು ಎಂಬ ಧೋರಣೆ ಇದೆ’ ಎಂದು ಚಟರ್ಜಿ ಹೇಳುತ್ತಾರೆ.

ಬಾಕ್ಸ್‌ ಆಫೀಸ್‌ನಲ್ಲಿ ₹ 500 ಕೋಟಿಗಿಂತ ಹೆಚ್ಚು ಗಳಿಸಿರುವ ‘ವಾರ್‌’ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ವಾಣಿ ಕಪೂರ್ ಮತ್ತು ಅನುಪ್ರಿಯಾ ಗೋಯೆಂಕಾ ಅವರು ಕೂಡ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರಾದರೂ, ಅವರ ಪಾತ್ರಗಳು ನಾಯಕನ ಅಜೆಂಡಾವನ್ನು ಮುಂದಕ್ಕೆ ಒಯ್ಯುವುದಕ್ಕೆ ಸೀಮಿತವಾಗಿವೆ. ಈ ಇಬ್ಬರು ಮಹಿಳೆಯರಿಗೆ ತೆರೆಯ ಮೇಲೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ.

2019ರ ಹಿಟ್‌ ಚಿತ್ರಗಳಲ್ಲಿ ‘ಉರಿ’ ಕೂಡ ಒಂದು. ಇದು, ಗಡಿ ನಿಯಂತ್ರಣ ರೇಖೆಯ ಆಚೆಗೆ ಇದ್ದ ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಭಾರತ ನಡೆಸಿದ ನಿರ್ದಿಷ್ಟ ದಾಳಿ ಕುರಿತ ಕಥೆ ಹೊಂದಿದೆ. ವರ್ಷದ ಆರಂಭದಲ್ಲಿ ಬಿಡುಗಡೆ ಆದ ಈ ಚಿತ್ರವು ₹ 342 ಕೋಟಿ ಗಳಿಸಿತು. ಚಿತ್ರದ ಮಹಿಳಾ ಪಾತ್ರಗಳನ್ನು (ಅವುಗಳನ್ನು ನಿಭಾಯಿಸಿದ್ದು ಯಾಮಿ ಗೌತಮ್ ಮತ್ತು ಕೀರ್ತಿ ಕುಲ್ಹಾರಿ) ನಿರ್ದೇಶಕ ಆದಿತ್ಯ ಧರ್ ಅವರು ಚೆನ್ನಾಗಿಯೇ ಕಟ್ಟಿದ್ದಾರಾದರೂ, ಆ ಪಾತ್ರಗಳು ಚಿತ್ರವನ್ನು ಮುನ್ನಡೆಸುವಂಥವುಗಳಲ್ಲ.

‘ಭಾರತ್’ ಸಿನಿಮಾ ₹ 325.58 ಕೋಟಿ ಗಳಿಸಿತು. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೆ ಇದ್ದರೂ ಸಲ್ಮಾನ್ ಖಾನ್ ಅವರು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸು ಕಂಡರು. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ದಿಶಾ ಪಟಾನಿ ಅವರೂ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರಿಬ್ಬರೂ ಮಿಂಚಲು ಅವಕಾಶ ಕೊಟ್ಟಿದೆ ಈ ಸಿನಿಮಾ. ಹೀಗಿದ್ದರೂ ಇದು ‘ಸಲ್ಮಾನ್‌ ಖಾನ್‌ ಸಿನಿಮಾ’ ಆಗಿಯೇ ಕಾಣಿಸುತ್ತದೆ.

2019ರಲ್ಲಿ ಅತ್ಯಂತ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ಐದನೆಯ ಸ್ಥಾನದಲ್ಲಿ ಇರುವುದು ‘ಮಿಷನ್ ಮಂಗಲ್’. ಇದು ಗಳಿಸಿದ ಮೊತ್ತ ₹ 290 ಕೋಟಿ. ಈ ಸಿನಿಮಾದಲ್ಲಿ ಐವರು ನಾಯಕಿಯರು, ಒಬ್ಬ ನಾಯಕ ನಟ ಎಂದು ಹೇಳುವ ಮೂಲಕ ಚಿತ್ರಕ್ಕೆ ಪ್ರಚಾರ ನೀಡುವ ಯತ್ನವನ್ನು ನಿರ್ಮಾಪಕರು ನಡೆಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುವ, ಮಂಗಳಯಾನ ಯೋಜನೆಯ ಬೆನ್ನೆಲುಬಿನ ರೀತಿಯಲ್ಲಿ ಇದ್ದ ಮಹಿಳೆಯರ ಬಗ್ಗೆ ಈ ಸಿನಿಮಾ. ಆದರೆ, ವಿದ್ಯಾ ಬಾಲನ್, ತಾಪ್ಸೀ ಪನ್ನು, ನಿತ್ಯಾ ಮೆನನ್, ಕೀರ್ತಿ ಕುಲ್ಹಾರಿ ಮತ್ತು ಸೋನಾಕ್ಷಿ ಸಿನ್ಹಾ ಅವರಿಗಿಂತ ದೊಡ್ಡದಾದ ಹಾಗೂ ಪ್ರಧಾನವಾದ ಪಾತ್ರ ಇರುವುದು ಅಕ್ಷಯ್ ಕುಮಾರ್ ಅವರಿಗೆ ಎಂದು ಈ ಚಿತ್ರವನ್ನು ವೀಕ್ಷಿಸಿದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ತಾರಾ ಮೌಲ್ಯ’ ಎಂಬುದು ಸಿನಿಮಾ ಉದ್ಯಮದ ಕಟು ಸತ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು, ಅದಕ್ಕೆ ಹೊಂದಿಕೊಳ್ಳಬೇಕು ಎಂದು ತಾಪ್ಸೀ ಹೇಳಿದ್ದಾರೆ. ‘ಈ ತಾರಾ ಮೌಲ್ಯ ಎಂಬುದು ಹೇಗಿರುತ್ತದೆ ಅಂದರೆ, ಅದನ್ನು ನಾವು ಒಪ್ಪಿಕೊಳ್ಳಬೇಕು ಹಾಗೂ ಅದನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಬೇಕು. ಆದರೆ, ನಾವು ಇದನ್ನು ಬದಲಿಸಬೇಕು’ ಎನ್ನುವ ನಿಲುವು ತಾಪ್ಸೀ ಅವರದ್ದು.

‘ಈ ಚಿತ್ರದಲ್ಲಿ ಒಬ್ಬ ಸೂಪರ್ ಸ್ಟಾರ್‌ ಇದ್ದಾರೆ. ನಾವು ಐದು ಜನ ಈ ಸಿನಿಮಾದ ಭಾಗ ಆದ ಪರಿಣಾಮವಾಗಿ ಚಿತ್ರ ಇನ್ನೊಂದಿಷ್ಟು ಎತ್ತರಕ್ಕೆ ಬೆಳೆಯಿತು. ನಾವು ಐದು ಜನ ಇದರಲ್ಲಿ ಇರದಿದ್ದರೂ ಬಾಕ್ಸ್‌ ಆಫೀಸ್‌ ಗಳಿಕೆ ಕಡಿಮೆಯೇನೂ ಆಗುತ್ತಿರಲಿಲ್ಲ’ ಎಂದೂ ಅವರು ಹೇಳಿದ್ದಿದೆ.

ಕತ್ರೀನಾ ಅವರು ಹೇಳಿರುವಂತೆ ಸಮಸ್ಯೆ ಇರುವುದು ಚಿತ್ರ ನಿರ್ಮಾಪಕರು ಹಾಗೂ ವೀಕ್ಷಕರ ಮನಸ್ಸಿನಲ್ಲಿರುವ ನಂಬಿಕೆಯಲ್ಲಿ. ಒಳ್ಳೆಯ ಕಥೆ ಇದ್ದು, ಒಳ್ಳೆಯ ನಿರ್ದೇಶಕರನ್ನು ಇಟ್ಟುಕೊಂಡು, ಹೆಣ್ಣನ್ನು ಮುಖ್ಯ ಪಾತ್ರವನ್ನಾಗಿಸಿಕೊಂಡು ಸಿನಿಮಾ ಮಾಡಿದರೆ, ‘ಪುರುಷ ಪಾತ್ರ ಪ್ರಧಾನವಾಗಿರುವ ಸಿನಿಮಾ ಎಷ್ಟು ಹಣ ಗಳಿಸುತ್ತದೆಯೋ, ಇದೂ ಅಷ್ಟೇ ಗಳಿಸಬಲ್ಲದು’ ಎನ್ನುವುದು ಕತ್ರಿನಾ ಅವರಲ್ಲಿನ ನಂಬಿಕೆ. ‘ಚಿತ್ರ ನಿರ್ಮಾಪಕರಲ್ಲಿ ಈ ವಿಶ್ವಾಸ ಮೂಡಬೇಕು’ ಎಂದು ಕತ್ರಿನಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು