ಮಂಗಳವಾರ, ಏಪ್ರಿಲ್ 13, 2021
29 °C

‘ಸಿಂಗ’ನ ಚಹರೆ

ಸಂದರ್ಶನ: ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

‘ಬಣ್ಣದ ಲೋಕದಲ್ಲಿ ನನ್ನ ಪಯಣ ಇಷ್ಟೇ ಅಲ್ಲ. ಇನ್ನೂ ಇದೆ ಅನಿಸುತ್ತಿದೆ’ ಹೀಗೆಂದು ಸ್ಪಷ್ಟವಾಗಿ ಹೇಳಿದರು ನಟ ಚಿರಂಜೀವಿ ಸರ್ಜಾ. ‘ಒಂದು ದಶಕ ಪೂರೈಸಿದ ನಿಮ್ಮ ವೃತ್ತಿಬದುಕಿನ ಹಾದಿಯತ್ತ ಒಮ್ಮೆ ಹಿಂದಿರುಗಿ ನೋಡಿದರೆ ಏನನಿಸುತ್ತದೆ’ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

‘ಕನ್ನಡ ಚಿತ್ರರಂಗದ ದಂತಕಥೆಗಳಿಗೆ ಹೋಲಿಸಿದರೆ ನನ್ನ ಕೊಡುಗೆ ಅತ್ಯಲ್ಪ. ಸಾಧನೆ ಮಾಡುವುದು ತುಂಬಾ ಇದೆ. ಪ್ರತಿದಿನವೂ ನಾನು ಹೊಸದನ್ನು ಕಲಿಯುತ್ತಲೇ ಇದ್ದೇನೆ’ ಎಂದು ಮತ್ತಷ್ಟು ವಿಸ್ತರಿಸಿ ಹೇಳಿದರು. 

ಇಲ್ಲಿಯವರೆಗೂ ಸಾಫ್ಟ್‌ ಹಾಗೂ ಅಂಡರ್‌ ಫ್ಲೇ ಇರುವಂತಹ ಪಾತ್ರಗಳಲ್ಲಿಯೇ ನಟಿಸುತ್ತಿದ್ದ ಚಿರು, ‘ಸಿಂಗ’ ಚಿತ್ರದ ಮೂಲಕ ವೃತ್ತಿಬದುಕಿನ ಹೊಸ ತಿರುವಿನಲ್ಲಿ ನಿಂತಿದ್ದಾರೆ. ‘ಸಿಂಗ’ನದು ಹೈವೋಲ್ಟೇಜ್‌ ಗತ್ತು. ಜೊತೆಗೆ, ಆ್ಯಂಗ್ರಿ ಯಂಗ್‌ಮನ್‌ ಲುಕ್. ‘ಈ ಸಿನಿಮಾ ಪ್ರೇಕ್ಷಕರು, ಅಭಿಮಾನಿಗಳಿಗೆ ಹಬ್ಬದೂಟ ಇದ್ದಂತೆ’ ಎಂದು ಹೆಮ್ಮೆಯಿಂದಲೇ ಹೇಳಿದರು. 

*‘ಸಿಂಗ’ ಚಿತ್ರದ ವಿಶೇಷ ಏನು?

ಒಬ್ಬರಿಗೆ ವೆಜ್‌ ಇಷ್ಟವಾದರೆ ಮತ್ತೊಬ್ಬರಿಗೆ ನಾನ್‌ವೆಜ್‌ ಇಷ್ಟವಾಗಬಹುದು. ಕೆಲವರಿಗೆ ಒಬ್ಬಟ್ಟು ಎಂದರೆ ಬಹುಪ್ರೀತಿ. ಮತ್ತೆ ಕೆಲವರಿಗೆ ಉಪ್ಸಾರು ಇಷ್ಟ. ಮುದ್ದೆ, ಚಪಾತಿ ಇಷ್ಟಪಡುವವರೂ ಇದ್ದಾರೆ. ನಾವು ಜನರ ಅಭಿರುಚಿಯನ್ನು ಅಂದಾಜಿಸುವುದು ತುಸು ಕಷ್ಟ. ಹಾಗಾಗಿಯೇ ನಾನು ‘ಸಿಂಗ’ ಚಿತ್ರ ಹಬ್ಬದೂಟ ಇದ್ದಂತೆ ಎಂದಿದ್ದು. ಈ ಊಟದಲ್ಲಿ ನಾವು ನಿರ್ದಿಷ್ಟ ರುಚಿಯನ್ನಷ್ಟೇ ಲೆಕ್ಕ ಹಾಕುವುದಿಲ್ಲ. ಅಲ್ಲಿ ಎಲ್ಲವೂ ಇರುತ್ತದೆ. ಭಾವನಾತ್ಮಕ ಸನ್ನಿವೇಶಗಳು, ಮನರಂಜನೆ ಮಿಶ್ರಿತ ಸಿನಿಮಾ ಇದು.

*ಈ ಚಿತ್ರದ ‘ಶ್ಯಾನೆ ಟಾಪ್‌ ಆಗವ್ಳೆ...’ ಹಾಡು ಸೂಪರ್‌ ಹಿಟ್‌ ಆಗಿರುವ ಬಗ್ಗೆ ನಿಮಗೆ ಏನನಿಸುತ್ತದೆ?

ಇದು ಟೀಮ್‌ವರ್ಕ್‌ನ ಫಲ ಅಷ್ಟೇ. ನಿರ್ದೇಶಕರ ಮನೋಭಿಲಾಷೆ, ಯುವಜನರ ನಾಡಿಮಿಡಿತ ಅರ್ಥೈಸಿಕೊಂಡು ಸಂಗೀತ ನಿರ್ದೇಶಕ ಧರ್ಮವಿಶ್‌ ಒಳ್ಳೆಯ ಸಂಗೀತ ನೀಡಿದ್ದಾರೆ. ಈ ಹಾಡು ಬಳಸಿಕೊಂಡು ಟಿಕ್‌ಟಾಕ್‌ನಲ್ಲಿ 3.50 ಲಕ್ಷಕ್ಕೂ ಹೆಚ್ಚು ವಿಡಿಯೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ. ಅಭಿಮಾನಿಗಳಿಗೆ ನಾನು ಆಭಾರಿ.

*‘ಸಿಂಗ’ ಚಿತ್ರವು ನಿಮ್ಮ ಉಳಿದ ಚಿತ್ರಗಳಿಗಿಂತ ಹೇಗೆ ಭಿನ್ನ?

ಈ ಸಿನಿಮಾ ‍ಪಾತ್ರಕ್ಕೂ ಮತ್ತು ನನ್ನ ಬದುಕಿಗೂ ಸಾಕಷ್ಟು ಸಾಮತ್ಯೆ ಇದೆ. ಈ ಪಾತ್ರದ ಕೆಲವು ತುಣುಕುಗಳು ನನ್ನ ಜೀವನಕ್ಕೂ ಹೊಂದಾಣಿಕೆಯಾಗುತ್ತವೆ. ಸಿಂಗನಿಗೆ ತನ್ನದೇ ಆದ ಎಥಿಕ್‌ ಇದೆ. ಆತ ಆದರ್ಶವಾದಿ. ತನ್ನ ಆದರ್ಶಗಳಿಗೆ ಘಾಸಿಯಾದಾಗ ರೆಬೆಲ್‌ ಆಗುತ್ತಾನೆ. ಆದರೆ, ಎಷ್ಟೇ ಒರಟನಾದರೂ ಆತ ಎಲ್ಲರಿಗೂ
ಅಚ್ಚುಮೆಚ್ಚು.

*ಈ ಪಾತ್ರ ಮಾಡುವಾಗ ಎದುರಾದ ಸವಾಲು ಏನು?

ಈ ಹಿಂದೆ ನಾನು ಸಿನಿಮಾ ಮಾಡುವಾಗ ಇದ್ದಂತಹ ಟ್ರೆಂಡ್‌ ಈಗ ಇಲ್ಲ. ಆಗ ಜನರ ಅಭಿರುಚಿಯೂ ಭಿನ್ನವಾಗಿತ್ತು. ‘ರಂಗಿತರಂಗ’, ‘ಆಟಗಾರ’ದಂತಹ ಸಿನಿಮಾ ನೋಡಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದರು. ನಾನೂ ಅದೇ ಲೀಗ್‌ನಲ್ಲಿದ್ದೆ. ಈ ನಡುವೆ ಕಮರ್ಷಿಯಲ್ ಸಿನಿಮಾ ಮಾಡುವಂತೆ ಅಭಿಮಾನಿಗಳು, ಹಿತೈಷಿಗಳು ಒತ್ತಾಯಿಸುತ್ತಿದ್ದರು. ಅವರೆಲ್ಲರ ಕೂಗಿನ ಫಲದಿಂದ ‘ಸಿಂಗ’ ಈಗ ತೆರೆಯ ಮೇಲೆ ಘರ್ಜಿಸಲು ಸಜ್ಜಾಗಿದ್ದಾನೆ.

*ನೀವು ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ.

ಕಥೆಗೆ ನನ್ನ ಪ್ರಥಮ ಆದ್ಯತೆ. ಬಳಿಕ ನಿರ್ದೇಶಕ, ನಿರ್ಮಾಪಕರಿಗೆ ಪ್ರಾಧಾನ್ಯ ನೀಡುತ್ತೇನೆ. ಪ್ರೇಕ್ಷಕರಿಗೆ ಅರ್ಥವಾಗುವಂತೆ ಕಥೆ ನಿರೂಪಿಸುವ ನಿರ್ದೇಶಕ ಇರಬೇಕು. ಜನರಿಗೆ ಇಷ್ಟವಾಗುವಂತೆ ಚಿತ್ರ ನಿರ್ಮಿಸುವ ನಿರ್ಮಾಪಕರೂ ಇರಬೇಕಲ್ಲವೇ. 

*ನಿರ್ದೇಶಕ ವಿಜಯ್‌ ಕಿರಣ್‌ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ನನ್ನ ಮತ್ತು ಅವರದು ತುಂಬಾ ಕಂಪರ್ಟಬಲ್‌ ಆದ ಜರ್ನಿ. ಅವರೊಟ್ಟಿಗೆ ನನ್ನದು ಎರಡೇ ಚಿತ್ರ. ಈ ಹಿಂದೆ ‘ರಾಮ್‌ಲೀಲಾ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು.

*ನಟನೆಗೆ ಪತ್ನಿ ಮೇಘನಾ ರಾಜ್‌ ಸಹಕಾರ ಹೇಗಿದೆ?

ನಮಗೆ ನಾವೇ ಪ್ರೇರಣೆಯಾಗಬೇಕು. ಚಿತ್ರ ಒಪ್ಪಿಕೊಳ್ಳುವಾಗ ಮನೆಯಲ್ಲಿ ಎಲ್ಲರ ಸಹಕಾರ ಇರುತ್ತದೆ. ಮೇಘನಾ ಕೂಡ ಒಳ್ಳೆಯ ಸಲಹೆ ನೀಡುತ್ತಾರೆ. 

*‘ಜುಗಾರಿ ಕ್ರಾಸ್‌’ ಸಿನಿಮಾ ಬಗ್ಗೆ ಹೇಳಿ.

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ‘ಜುಗಾರಿ ಕ್ರಾಸ್‌’ ಕಾದಂಬರಿ ಆಧಾರಿತ ಚಿತ್ರ ಇದು. ಒಳ್ಳೆಯ ಮೌಲ್ಯ ಇರುವ ಕಥೆ. ಕಾದಂಬರಿ ಓದಿದ್ದೇನೆ. ಈಗಲೇ ಇದರ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು