ಸೋಮವಾರ, ಜೂನ್ 21, 2021
30 °C
ಇಂದು ವಿಶ್ವ ಆನೆ ದಿನಾಚರಣೆ

ಆನೆ ಸಂಕುಲದ ಉಳಿವಿಗೆ ಕರೆ ನೀಡಿದ ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನುಷ್ಯರಂತೆಯೇ ಆನೆಯೂ ಸಂಘ ಜೀವಿ. ಅವುಗಳದ್ದು ಮಾತೃಪ್ರಧಾನ ಕೌಟುಂಬಿಕ ವ್ಯವಸ್ಥೆ. ಒಂದು ಕುಟುಂಬದಲ್ಲಿ 60ರಿಂದ 90 ಆನೆಗಳಿರುತ್ತವೆ. ಹಿರಿಯ ಹೆಣ್ಣಾನೆಯೇ ಆ ಗುಂಪಿಗೆ ಅಧಿನಾಯಕಿ. ಕಾಡಿನಲ್ಲಿ ಸಂಚರಿಸುವ ವೇಳೆ ಅಪಾಯದ ಸೂಚನೆ ದೊರೆತ ತಕ್ಷಣವೇ ಗುಂಪಿನ ಉಳಿದ ಎಲ್ಲಾ ಆನೆಗಳು ಮುಖ್ಯಸ್ಥೆಯ ಆದೇಶ ಪಾಲಿಸುತ್ತವೆ.

ಕಾನನದ ವಿಸ್ತಾರವಾದ ಪ್ರದೇಶದಲ್ಲಿ ಅಂಡಲೆಯುವ ಅವುಗಳು ಎಂದಿಗೂ ದಾರಿ ತಪ್ಪುವುದಿಲ್ಲ. ಕಾಲಾಂತರದಿಂದಲೂ ತನ್ನ ವಂಶಸ್ಥರು ಉಪಯೋಗಿಸುತ್ತಿದ್ದ ಕಾರಿಡಾರ್‌ಗಳ ಮೂಲಕವೇ ಅವು ಸಂಚರಿಸುತ್ತವೆ; ಅದೇ ಮಾರ್ಗವಾಗಿಯೇ ಮೂಲ ಸ್ಥಾನಕ್ಕೆ ಮರಳುತ್ತವೆ. ತನ್ನ ಮುತ್ತಜ್ಜಿಯಿಂದ ಅವುಗಳಿಗೆ ಸಿದ್ಧಿಸಿರುವ ಜ್ಞಾನ ಇದಾಗಿದೆ. ಕುಟುಂಬದಿಂದ ಕುಟುಂಬಕ್ಕೆ, ವಂಶದಿಂದ ವಂಶಕ್ಕೆ ಈ ಅಮೂಲ್ಯ ಜ್ಞಾನ ನಿರಂತರವಾಗಿ ಪ್ರವಹಿಸುತ್ತಿರುತ್ತದೆ.

ಆನೆ ನಡೆದಿದ್ದೇ ದಾರಿ... ಎನ್ನುವ ಮಾತು ಜನಜನಿತ. ಆದರೆ, ಮಾನವರ ದುರಾಶೆಯಿಂದ ಅವುಗಳ ಬದುಕು ದಿಕ್ಕು ತಪ್ಪಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾರಿಡಾರ್‌ಗಳು ಹರಿದು ಹಂಚಿಹೋಗಿವೆ. ಇದರಿಂದ ಅವು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ. ಇದರಿಂದ ಮಾನವರು ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚುತ್ತಲೇ ಇದೆ. ಇದಕ್ಕೆ ಪರಿಹಾರ ಮರೀಚಿಕೆಯಾಗಿದೆ. ಮೊಗಸಾಲೆಗಳನ್ನು ಸದೃಢಗೊಳಿಸುವ ಕೆಲಸವೂ ನಡೆಯುತ್ತಿಲ್ಲ.

ಮತ್ತೊಂದೆಡೆ ದಂತಕ್ಕಾಗಿ ಆನೆಗಳ ಹತ್ಯೆ ಅವ್ಯಾಹತವಾಗಿದೆ. ಹಾಗಾಗಿ, ಅವುಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಚೀನಾ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಜನರ ದಂತ ವ್ಯಾಮೋಹದಿಂದ ಆನೆಸಂಕುಲ ಅಪಾಯದ ಸುಳಿಗೆ ಸಿಲುಕಿದೆ.

ಆಗಸ್ಟ್‌ 12ರಂದು ವಿಶ್ವ ಆನೆಗಳ ದಿನ. ಅವುಗಳ ದಯನೀಯ ಬದುಕನ್ನು ಅವಲೋಕಿಸಿದರೆ ಸಂಭ್ರಮಪಡುವ ಸ್ಥಿತಿಯಲ್ಲಿ ನಾವಿಲ್ಲ. ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಪರಿಸರ ಪ್ರೇಮಿ. ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಹೌದು. ವನ್ಯಜೀವಿ ಛಾಯಾಗ್ರಹಣದ ಮೇಲೂ ಅವರಿಗೆ ಅಪಾರ ಆಸಕ್ತಿ ಇದೆ. ತಾವು ಕ್ಲಿಕ್ಕಿಸಿದ ವನ್ಯಜೀವಿಗಳ ಫೋಟೊಗಳನ್ನು ಮಾರಾಟ ಮಾಡಿ ಆ ಹಣವನ್ನು ಅರಣ್ಯ ಸಂರಕ್ಷಣೆಗೆ ನೀಡುತ್ತಾರೆ.

ಆನೆಗಳ ದಿನದಂದು ಈ ಅಪರೂಪದ ಸಂಕುಲದ ಉಳಿವಿಗೆ ಶ್ರಮಿಸುವಂತೆ ನಾಡಿನ ಜನರಿಗೆ ಅವರು ಕರೆ ನೀಡಿದ್ದಾರೆ. ‘ಇಂದು ಆಗಸ್ಟ್ 12. ‘ವಿಶ್ವ ಆನೆ ದಿನ’. ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ’ ಎಂದು ಟ್ವೀಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು