ಭಾನುವಾರ, ಮಾರ್ಚ್ 29, 2020
19 °C

ಥಿಯೇಟರ್‌ನಲ್ಲಿ ಶೇಕಡವಾರು ಪದ್ಧತಿ: ನಾಳೆ ಸಭೆ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಚಿತ್ರಮಂದಿರಗಳ ಬಾಡಿಗೆ ಪದ್ಧತಿಗೆ ತಿಲಾಂಜಲಿ ನೀಡಿ ಶೇಕಡವಾರು ಪದ್ಧತಿಯನ್ನು ಜಾರಿಗೊಳಿಸುವ ಸಂಬಂಧ ಚರ್ಚಿಸಲು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಮಾರ್ಚ್ 11ರಂದು ಮೊದಲ ಸಭೆ ನಿಗದಿಯಾಗಿದೆ.

ಈಗಾಗಲೇ, ಹೊಸ ಪದ್ಧತಿ ಜಾರಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಏ.2 ರಂದು ದಿನಾಂಕ ನಿಗದಿಪಡಿಸಿದೆ. ಹಾಗಾಗಿ, ಅಂದಿನ ಸಭೆಯಲ್ಲಿ ಚರ್ಚಿಸಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಥಿಯೇಟರ್‌ಗಳ ದುಬಾರಿ ಬಾಡಿಗೆ ದರಕ್ಕೆ ನಿರ್ಮಾಪಕರ ಸಮೂಹ ತತ್ತರಿಸಿದೆ. ಮತ್ತೊಂದೆಡೆ ಚಿತ್ರರಂಗ ಪ್ರವೇಶಿಸುತ್ತಿರುವ ಹೊಸಬರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಶೇಕಡವಾರು ಪದ್ಧತಿ ಜಾರಿಯಾದರೆ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಪೂರಕವಾಲಿದೆ ಎಂಬುದು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ನಿರ್ಧಾರ.

‘ಈಗಾಗಲೇ, ಮಲ್ಟಿಫ್ಲೆಕ್ಸ್‌ಗಳಲ್ಲಿ ಶೇಕಡ ವಾರು ಪದ್ಧತಿಯಿದೆ. ಚಿತ್ರಮಂದಿರಗಳ ಹಲವು ಮಾಲೀಕರು ಈ ಪದ್ಧತಿ ಜಾರಿಗೆ ಒಲವು ತೋರಿದ್ದಾರೆ. ಪ್ರದರ್ಶಕರ ಸಂಘದ ಅಧ್ಯಕ್ಷರೊಟ್ಟಿಗೂ ಚರ್ಚಿಸಿದ್ದೇವೆ’ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ‘ಪ್ರಜಾ‍ಪ್ಲಸ್‌’ಗೆ ತಿಳಿಸಿದರು.

‘ಕೆಲವು ಚಿತ್ರಮಂದಿರಗಳ ಬಾಡಿಗೆ ದರ ವಾರಕ್ಕೆ ₹ 4ರಿಂದ 5 ಲಕ್ಷವಿದೆ. ಸ್ಟಾರ್‌ ನಟರ ಸಿನಿಮಾಗಳು ಮೊದಲ ವಾರದಲ್ಲಿ ಹೆಚ್ಚಿನ ಗಳಿಕೆ ಮಾಡುತ್ತವೆ. ಆದರೆ, ಎರಡು ಮತ್ತು ಮೂರನೇ ವಾರದಲ್ಲಿ ಗಳಿಕೆ ಕಡಿಮೆ ಇರುತ್ತದೆ. 60:40ರ ಅನುಪಾತದಡಿ ಗಳಿಕೆ ಹಂಚಿಕೆಯಾದರೆ ಥಿಯೇಟರ್‌ ಮಾಲೀಕರಿಗೆ ಹೆಚ್ಚಿನ ಲಾಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಲಾಭವನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗುವುದು. ಸಂಘದ ಮನವಿಗೆ ವಾಣಿಜ್ಯ ಮಂಡಳಿಯೂ ಸ್ಪಂದಿಸಿದೆ’ ಎಂದು ಮಾಹಿತಿ ನೀಡುತ್ತಾರೆ.

‘ಬಾಡಿಗೆ ದರ ಪದ್ಧತಿ ಪರಿಣಾಮ ಸಿನಿಮಾಗಳು ಎಷ್ಟು ಗಳಿಕೆ ಮಾಡುತ್ತವೆ ಎಂಬ ಅರಿವು ನಟ, ನಟಿಯರಿಗೂ ಇರುವುದಿಲ್ಲ. ಗಳಿಕೆ ಮೇಲೆ ಅವರಿಗೂ ಅನುಮಾನಗಳಿರುತ್ತವೆ. ಕೆಲವು ಬಾರಿ ಮಾಧ್ಯಮಗಳಲ್ಲೂ ತಪ್ಪು ವರದಿಗಳಾಗುತ್ತಿವೆ. ಶೇಕಡವಾರು ಪದ್ಧತಿ ಅನುಷ್ಠಾನಗೊಂಡರೆ ಚಿತ್ರದ ಗಳಿಕೆ ಎಲ್ಲರಿಗೂ ತಿಳಿಯಲಿದೆ. ಇದರಿಂದ ನಿರ್ಮಾಪಕರು, ಪ್ರದರ್ಶಕರು, ನಿರ್ದೇಶಕರಿಗೂ ಅನುಕೂಲವಾಗಲಿದೆ’ ಎಂಬುದು ಅವರ ವಿವರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು