ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪು ಮೊದಲ ತಿಂಗಳ ಪುಣ್ಯಸ್ಮರಣೆ; ಪುನೀತ್‌ ಸಮಾಧಿಗೆ ದೊಡ್ಮನೆ ಕುಟುಂಬದಿಂದ ಪೂಜೆ

Last Updated 29 ನವೆಂಬರ್ 2021, 6:46 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ತಿಂಗಳು ಕಳೆದಿದೆ.ಸೋಮವಾರ ಅವರ ಮೊದಲ ತಿಂಗಳ ಪುಣ್ಯಸ್ಮರಣೆ ಸಂದರ್ಭದಲ್ಲಿ ನಟರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ಅವರ ಪತ್ನಿ ಅಶ್ವಿನಿ ಸೇರಿದಂತೆ ದೊಡ್ಮನೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

46 ವರ್ಷದ ಪುನೀತ್‌, ಕಳೆದ ಅ.29ರಂದು ಹೃದಯ ಸ್ತಂಭನದಿಂದ ನಿಧನರಾಗಿದ್ದರು. ನೆಚ್ಚಿನ ನಟನ ಪುಣ್ಯಸ್ಮರಣೆ ದಿನದಂದು ರಾಜ್ಯದಾದ್ಯಂತ ಸಾವಿರಾರು ಅಭಿಮಾನಿಗಳು ಪುನೀತ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹಲವೆಡೆ ನೇತ್ರದಾನ, ರಕ್ತದಾನ ಮಾಡುವ ಮುಖಾಂತರ ಅಪ್ಪುವನ್ನು ನೆನೆದರು.

ಶೀಘ್ರದಲ್ಲೇ ‘ಗಂಧದ ಗುಡಿ’

ಪುನೀತ್‌ ಅವರ ಕನಸಿನ ಪ್ರಾಜೆಕ್ಟ್‌ ಕುರಿತು ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌, ‘ಗಂಧದ ಗುಡಿ ಒಂದು ಸಾಕ್ಷ್ಯಚಿತ್ರ. ಅದನ್ನು ಅಪ್ಪು ಪುನೀತ್‌ ರಾಜ್‌ಕುಮಾರ್‌ ಆಗಿ ಮಾಡಿಲ್ಲ. ಬದಲಾಗಿ ಸಾಮಾನ್ಯ ವ್ಯಕ್ತಿಯಾಗಿ ಯಾವುದೇ ಮೇಕ್‌ಅಪ್‌ ಇಲ್ಲದೆ ನಟಿಸಿ ಒಂದು ಉತ್ತಮ ಸಂದೇಶವನ್ನು ನೀಡಿದ್ದಾನೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವನ್ಯಜೀವಿ, ವನ್ಯಲೋಕ ಎಷ್ಟು ಪ್ರಮುಖ ಹಾಗೂ ಅದರ ರಕ್ಷಣೆ ಎಷ್ಟು ಮುಖ್ಯ ಎನ್ನುವುದು ಇದರಲ್ಲಿದೆ. ಜೊತೆಗೆ ಕಾಡು ನಾಶ ತಡೆ ಹಾಗೂ ಬುಡಕಟ್ಟು ಜನರ ಬಗ್ಗೆಯೂ ಇಲ್ಲಿ ಮಾಹಿತಿ ಇದೆ. ಇದು ಅಪ್ಪು ಬಿಟ್ಟುಹೋಗಿರುವ ಕೊನೆಯ ಆಸ್ತಿ. ಇದು ಇಡೀ ಪ್ರಪಂಚಕ್ಕೆ ಅನ್ವಯಿಸುತ್ತದೆ’ ಎಂದರು.

‘ತಿಂಗಳ ಪೂಜೆ ಮಾಡಿದೆವು. ಹೀಗೆ ತಿಂಗಳು ವರ್ಷ ಆಗುತ್ತಲೇ ಇರುತ್ತದೆ. ಸಮಾಧಿಗೆ ಪೂಜೆ ಸಲ್ಲಿಸಿ ಮನೆಯಲ್ಲೂ ಪೂಜೆ ಮಾಡುತ್ತೇವೆ. ಅವನ ನೆನಪಿನಲ್ಲಿ ಅವನು ಏನು ಮಾಡುತ್ತಿದ್ದನೋ ಅದನ್ನು ಮುಂದುವರಿಸಿಕೊಂಡು ಹೋಗಲೇಬೇಕು. ಅದೇ ನಮ್ಮ ಕೆಲಸ. ಹೇಗೆ ಮುಂದುವರಿಸಬೇಕೆಂದು ಅವನೇ ದಾರಿ ತೋರಿಸಬೇಕು. ಪುನೀತ್‌ ವ್ಯಕ್ತಿತ್ವ ಹಾಗೂ ಸೇವೆ ಮಾಡಿದಾಗ ಅದರ ಬಗ್ಗೆ ಮೌನವಾಗಿದ್ದು ಎಲ್ಲರ ಗಮನ ಸೆಳೆದಿದೆ. ಈ ಗುಣವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪು ಪಡೆದಿದ್ದ. ಅದು ತಂದೆಯದ್ದೇ ಗುಣ. ಇದೇ ಜನರನ್ನು ಸಮಾಧಿಯತ್ತ ಸೆಳೆಯುತ್ತಿದೆ. ಇಷ್ಟು ಬೇಗ ಬಿಟ್ಟು ಹೋಗಲು ನಮ್ಮ ಪ್ರೀತಿ ಜಾಸ್ತಿ ಆಯ್ತಾ ಅಥವಾ ಅವನಿಗೆ ಪ್ರೀತಿ ಸಾಲಲಿಲ್ಲವೇ ಎಂದು ತಿಳಿಯುತ್ತಿಲ್ಲ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT