ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ ಸಿನಿಮಾ ಡಬ್ಬಾ ಅನಿಸಿದೆಯೇ?

Last Updated 24 ಅಕ್ಟೋಬರ್ 2019, 12:23 IST
ಅಕ್ಷರ ಗಾತ್ರ

ಬಾಲಿವುಡ್‌ನ ಭಾರಿ ಬಜೆಟ್‌ ಸಿನಿಮಾ ‘ದಬಾಂಗ್‌–3’ ಕನ್ನಡದಲ್ಲಿ ಕೂಡ ಡಬ್‌ ಆಗಿ ಬಿಡುಗಡೆ ಆಗಲು ಸಜ್ಜಾಗಿ ನಿಂತಿದೆ. ಕನ್ನಡದವರೇ ಆದ ಸುದೀಪ್‌, ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ಪ್ರಮುಖ ‍ಪಾತ್ರ ನಿಭಾಯಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಸಲ್ಮಾನ್‌ ಅವರ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.

ಆದರೆ, ಡಬ್ ಆಗಿ ಕನ್ನಡಕ್ಕೆ ಬರುತ್ತಿರುವ ಸಿನಿಮಾಗಳನ್ನು ಜನ ಸ್ವೀಕರಿಸುತ್ತ ಇದ್ದಾರೆಯೇ? ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’, ಚಿರಂಜೀವಿ ಅಭಿನಯದ ‘ಸೈರಾ’ ಚಿತ್ರಗಳ ಕನ್ನಡ ಆವೃತ್ತಿ ಈಚೆಗೆ ಚಿತ್ರಮಂದಿರಗಳ ಮೂಲಕ ಬಿಡುಗಡೆ ಕಂಡಿತ್ತು. ಪ್ರಭಾಸ್ ಅಭಿನಯದ ‘ಸಾಹೊ’ ಚಿತ್ರದ ಕನ್ನಡ ಆವೃತ್ತಿ ಅಮೆಜಾನ್‌ ಪ್ರೈಮ್‌ ಮೂಲಕ ತೆರೆಗೆ ಬಂದಿದೆ. ಈಚೆಗೆ, ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟ ಜಗ್ಗೇಶ್ ಡಬ್ ಆದ ಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಡಬ್ ಚಿತ್ರಗಳನ್ನು ಜನ ಸಾರಾಸಗಟಾಗಿ ತಿರಸ್ಕರಿಸಿ, ಪಾಠ ಕಲಿಸಿದ್ದಾರೆ’ ಎಂದು ಹೇಳಿದ್ದಾರೆ. ಹಾಗಾದರೆ, ‘ಡಬ್ಬಿಂಗ್ ಚಿತ್ರಗಳನ್ನು ಕನ್ನಡಿಗರು ಒಪ್ಪಿಲ್ಲ’ ಎನ್ನಲು ಆಧಾರಗಳು ಇವೆಯೇ?

‘ಸೈರಾ ಚಿತ್ರವು ಕನ್ನಡದಲ್ಲೇ ₹ 2 ಕೋಟಿ ಗಳಿಸಿದೆ. ಜನ ಸ್ವೀಕರಿಸುತ್ತಿಲ್ಲ ಎಂದು ಹೇಳುವುದು ಬೇರೆ ಭಾಷೆಯ ಚಿತ್ರಗಳು ಡಬ್ ಆಗಿ ಕನ್ನಡಕ್ಕೆ ಬರಬಾರದು ಎಂಬ ಉದ್ದೇಶದಿಂದ ಸೃಷ್ಟಿಸುತ್ತಿರುವ ಸಂಕಥನ. ಇಂತಹ ಸಂಕಥನ ಕಟ್ಟಲು ಕೆಲವರು ಯತ್ನಿಸುತ್ತಿದ್ದಾರೆ’ ಎನ್ನುತ್ತಾರೆ ಡಬ್ಬಿಂಗ್ ಪರ ಕಾರ್ಯಕರ್ತ ಗಣೇಶ್ ಚೇತನ್. ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶ ಬೇಕು ಎಂದು ಕಾನೂನು ಹೋರಾಟ ನಡೆಸಿದ್ದವರು ಇವರು.

‘ನಾವು ಒಂದಿಷ್ಟು ಜನ ಮಲ್ಟಿಪ್ಲೆಕ್ಸ್‌ಗಳಿಗೆ ತೆರಳಿ, ಸೈರಾ ಚಿತ್ರದ ಕನ್ನಡ ಆವೃತ್ತಿಯ ಬಿಡುಗಡೆಗೆ ಹಕ್ಕೊತ್ತಾಯ ಮಂಡಿಸಿದೆವು. ಡಬ್ ಆದ ಸಿನಿಮಾಗಳನ್ನು ಜನ ನೋಡುತ್ತಿದ್ದಾರೆ ಎಂಬ ಕಾರಣಕ್ಕೆ ಇಂತಹ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿದೆ. ಸೈರಾ ಚಿತ್ರವು ಕನ್ನಡದಲ್ಲಿ ಯಶಸ್ಸು ಕಂಡ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ’ ಎಂದರು ಅವರು.

ಬೇರೆ ಭಾಷೆಗಳ ಎಲ್ಲ ಒಳ್ಳೆಯ ಚಿತ್ರಗಳು ಕನ್ನಡದಲ್ಲಿ ಬರುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅದು ಸಾಧ್ಯವಾದ ನಂತರವಷ್ಟೇ, ಡಬ್ಬಿಂಗ್ ಕನ್ನಡದಲ್ಲಿ ಯಶಸ್ಸು ಕಂಡಿದೆಯೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯ ಎನ್ನುವುದು ಗಣೇಶ್ ಅವರ ಮಾತು. ‘ಡಬ್ಬಿಂಗ್‌ ಕನ್ನಡದಲ್ಲಿ ಒಂದು ವೇಳೆ ಇಲ್ಲದಿದ್ದರೂ, ಕನ್ನಡ ಸಿನಿಮಾಗಳ ಯಶಸ್ಸಿನ ಪ್ರಮಾಣ ಎಷ್ಟು? ಕನ್ನಡ ಸಿನಿಮೋದ್ಯಮದವರೇ ಹೇಳುವಂತೆ ಅದು ಶೇಕಡ 5ರ ಆಸುಪಾಸಿನಲ್ಲಿ ಇದೆ’ ಎಂಬ ಮಾತು ಸೇರಿಸಿದರು ಗಣೇಶ್.

ಯಾವುದೇ ಉತ್ಪನ್ನ ಮಾರುಕಟ್ಟೆಯಲ್ಲಿ ಒಂದು ಚಕ್ರೀಯ ಚಲನೆ ಕಾಣುತ್ತದೆ ಎಂಬುದು ಆಡಳಿತ ನಿರ್ವಹಣೆ ಹಾಗೂ ಮಾರುಕಟ್ಟೆಗೆ ಸಂಬಂಧಿಸಿದ ಪಠ್ಯಗಳಲ್ಲಿ ಹೇಳುವ ಮಾತು. ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸುವುದು, ಆ ವಸ್ತು ಮಾರುಕಟ್ಟೆಯಲ್ಲಿ ಬೆಳವಣಿಗೆ ಕಾಣುವುದು, ಅಲ್ಲಿ ಪಕ್ವವಾದ ನೆಲೆ ಕಂಡುಕೊಳ್ಳುವುದು, ನಂತರ ಅದಕ್ಕೆ ಬೇಡಿಕೆ ಕುಸಿಯುವುದು... ಇದು ಸಹಜ ಪ್ರಕ್ರಿಯೆ.

ಡಬ್‌ ಮಾಡಿದ ಸಿನಿಮಾಗಳನ್ನು ಕನ್ನಡದಲ್ಲಿ ಪ್ರದರ್ಶಿಸುವುದು ಕನ್ನಡದಲ್ಲಿ ಹೊಸದೊಂದು ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಅಂದರೆ, ಕನ್ನಡಕ್ಕೆ ಡಬ್ ಆಗಿರುವ ಸಿನಿಮಾಗಳು ಈಗಷ್ಟೇ ಮಾರುಕಟ್ಟೆಗೆ ಪರಿಚಯ ಆಗುತ್ತಿವೆ. ಈ ಹಂತದಲ್ಲಿ ಅದರ ಯಶಸ್ಸನ್ನು ತೀರ್ಮಾನಿಸುವುದು ಸರಿಯಲ್ಲ ಎಂಬ ವಾದವನ್ನು ಡಬ್ಬಿಂಗ್ ಪರ ಕಾರ್ಯಕರ್ತರು ಮಂಡಿಸುತ್ತಿದ್ದಾರೆ.

‘ನಾನು ಕನ್ನಡ ಡಬ್ಬಿಂಗ್ ಉದ್ಯಮದಲ್ಲಿ ತೊಡಗಿಕೊಂಡಿರುವವ. ಇಲ್ಲಿ ಈಗ ಬಹಳ ಒಳ್ಳೆಯ ಪ್ರಗತಿ ಕಾಣುತ್ತಿದ್ದೇವೆ. ಜನ ಡಬ್ಬಿಂಗ್ ಸಿನಿಮಾಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುತ್ತ ಇದ್ದಾರೆ. ಸೈರಾ ಸಿನಿಮಾ ಬಿಡುಗಡೆ ಆದ ದಿನ 100ಕ್ಕೂ ಹೆಚ್ಚಿನ ಪ್ರದರ್ಶನಗಳು ಕನ್ನಡದಲ್ಲಿ ಆದವು. ಎರಡನೆಯ ವಾರದಲ್ಲಿ ಐವತ್ತಕ್ಕೂ ಹೆಚ್ಚಿನ ಪ್ರದರ್ಶನಗಳು ಕನ್ನಡದಲ್ಲಿ ಆಗಿದ್ದವು’ ಎಂದು ತಿಳಿಸಿದರು ‘ಹರಿವು ಕ್ರಿಯೇಷನ್ಸ್‌’ನ ಪ್ರತಿನಿಧಿ ರತೀಶ್ ರತ್ನಾಕರ್. ಇವರ ಕಂಪನಿಯು ಬೇರೆ ಭಾಷೆಯ ಮನರಂಜನಾ ಹೂರಣವನ್ನು ಕನ್ನಡಕ್ಕೆ ತರುವ ಕೆಲಸ ಮಾಡುತ್ತಿದೆ.

‘ಕನ್ನಡಕ್ಕೆ ಡಬ್ ಆದ ಮೊದಲ ಚಿತ್ರವೇ ಮಾರುಕಟ್ಟೆಯಲ್ಲಿ ಗೆಲುವು ಸಾಧಿಸಬೇಕು ಎಂಬ ನಿರೀಕ್ಷೆ ಸರಿಯಲ್ಲ. ಎಷ್ಟೋ ವರ್ಷಗಳಿಂದ ಕನ್ನಡಿಗರಿಗೆ ಡಬ್ ಸಿನಿಮಾಗಳು ಸಿಕ್ಕಿರಲಿಲ್ಲ. ಹೊಸ ಉತ್ಪನ್ನವೊಂದು ಮಾರುಕಟ್ಟೆಗೆ ಬಂದಾಗ, ಜನಕ್ಕೆ ಅದರ ಪರಿಚಯ ಸರಿಯಾಗಿ ಆಗಬೇಕು. ಉತ್ಪನ್ನದ ಪರಿಚಯ ಸರಿಯಾಗಿ ಆದ ನಂತರ, ಅದನ್ನು ಬಳಕೆ ಮಾಡುವ ವರ್ಗ ಸೃಷ್ಟಿಯಾಗುತ್ತದೆ. ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ನೋಡುವವರ ನೆಲೆ ವಿಸ್ತಾರ ಆಗುತ್ತಿದೆ’ ಎಂದರು ರತೀಶ್.

ಸಿನಿಮಾ ಕಥೆ, ಚಿತ್ರಕಥೆ ಚೆನ್ನಾಗಿದ್ದು, ಚಿತ್ರಕ್ಕೆ ಬೇಕಿರುವ ಪ್ರಚಾರ ಚೆನ್ನಾಗಿ ನಡೆದರೆ, ಇತರ ಸಿನಿಮಾಗಳಂತೆಯೇ ಇವು ಕೂಡ ಲಾಭ ಮಾಡುತ್ತವೆ. ಕನ್ನಡ ಮಾರುಕಟ್ಟೆ ಈಗ ಅಷ್ಟು ತೆರೆದುಕೊಂಡಿದೆ ಎಂದರು.

ಅವರ ಪ್ರಕಾರ, ಸೈರಾ ಚಿತ್ರದ ಕನ್ನಡ ಅವತರಣಿಕೆ ಕನ್ನಡದಲ್ಲಿ ಬಿಡುಗಡೆ ಕಂಡಿದ್ದು ಡಬ್ಬಿಂಗ್ ಸಿನಿಮಾಗಳ ಮಾರುಕಟ್ಟೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು.

ಡಬ್ ಆದ ಸಿನಿಮಾಗಳನ್ನು ಜನ ತಿರಸ್ಕರಿಸುತ್ತ ಇದ್ದಾರೆ ಎಂಬ ಮಾತನ್ನು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ಒಪ್ಪುವುದಿಲ್ಲ. ‘ಜನ ಒಪ್ಪದೆ ಇದ್ದಿದ್ದರೆ ಸೈರಾ ಚಿತ್ರದ ಪ್ರದರ್ಶನವು ಚಿತ್ರಮಂದಿರಗಳಲ್ಲಿ ಎರಡು ವಾರ ನಡೆಯುತ್ತಿರಲಿಲ್ಲ’ ಎಂದು ಮಂಜು ಹೇಳಿದರು. ಇಂದಿನ ಸ್ಥಿತಿಯಲ್ಲಿ ಡಬ್ಬಿಂಗ್‌ನಿಂದಾಗಿ ಚಿತ್ರಮಂದಿರಗಳು ಉಳಿಯುವ ಅವಕಾಶ ಲಭ್ಯವಾಗುತ್ತದೆ ಎನ್ನುವುದು ಮಂಜು ಅವರ ಅಭಿಪ್ರಾಯ.

ತುಟಿ ಚಲನೆಯ ಸಮಸ್ಯೆ
‘ನಾನು ಈಚೆಗೆ ಸೈರಾ ಸಿನಿಮಾ ಕನ್ನಡದಲ್ಲಿ ನೋಡಿದೆ. ತುಟಿ ಚಲನೆ ಹಾಗೂ ಧ್ವನಿಯ ನಡುವೆ ಕಿರಿಕಿರಿ ಅನಿಸುವಂಥದ್ದು ನನಗೆ ಏನೇನೂ ಕಾಣಿಸಲಿಲ್ಲ. ಸಿನಿಮಾವನ್ನು ನಾನು ಪೂರ್ತಿಯಾಗಿ ಖುಷಿಯಿಂದ ನೋಡಲು ಸಾಧ್ಯವಾಯಿತು. ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡವರು ಡಬ್ಬಿಂಗ್ ಕಲಾವಿದರಾಗಿ, ಸಂಭಾಷಣೆ ಬರೆಯುವವರಾಗಿ ಬರಬೇಕು. ಆಗ ಡಬ್ಬಿಂಗ್ ವಿಚಾರದಲ್ಲಿ ನಾವು ಇನ್ನೂ ಒಂದು ಹಂತ ಮೇಲಕ್ಕೆ ತಲುಪುತ್ತೇವೆ’ ಎನ್ನುತ್ತಾರೆ ಐ.ಟಿ. ತಂತ್ರಜ್ಞ ಹಾಗೂ ಡಬ್ಬಿಂಗ್ ಪರ ಕಾರ್ಯಕರ್ತ
ವಸಂತ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT