ಶುಕ್ರವಾರ, ಆಗಸ್ಟ್ 19, 2022
27 °C
PV Web Exclusive

ಸ್ಟ್ರೀಟ್ ರೇಸಿಂಗ್‌ನಿಂದ ‘ಬಾಹ್ಯಾಕಾಶ’ಕ್ಕೆ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಕತೆ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ರೇಸಿಂಗ್‌ ಕಾರ್– ಸಾಂದರ್ಭಿಕ ಚಿತ್ರ

ಫಾಸ್ಟ್‌ ಆ್ಯಂಡ್ ಫ್ಯೂರಿಯಸ್‌. ಹಾಲಿವುಡ್‌ನಲ್ಲಿ ಒಂದೇ ಹೆಸರಿನಲ್ಲಿ ಹಲವು ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಫಾಸ್ಟ್‌ ಆ್ಯಂಡ್ ಪ್ಯೂರಿಯಸ್ ತಂಡದ್ದು. ಈ ಸರಣಿಯಲ್ಲಿ ಈಗಾಗಲೇ ಒಂಬತ್ತು ಸಿನಿಮಾಗಳು ಬಿಡುಗಡೆಯಾಗಿವೆ. ಹಣಗಳಿಕೆಯಲ್ಲಿ ಎಲ್ಲವೂ ದೊಡ್ಡ ಯಶಸ್ಸು ಸಾಧಿಸಿವೆ. ಕೊರೊನಾದ ಹಾವಳಿ ಇಲ್ಲದಿದ್ದರೆ, ಈ 2020ರಲ್ಲಿ ಈ ಸರಣಿಯ 14ನೇ ಚಿತ್ರ ಫಾಸ್ಟ್‌ ಆ್ಯಂಡ್ ಫ್ಯೂರಿಯಸ್ 9 ಅಥವಾ ಎಫ್‌9 ಬಿಡುಗಡೆಯಾಗಬೇಕಿತ್ತು. ಆದರೆ ಈ ಚಿತ್ರ 2021ರಲ್ಲಿ ಬಿಡುಗಡೆಯಾಗಲಿದೆ.

ಈವರೆಗೆ ಬಿಡುಗಡೆಯಾಗಿರುವ 9 ಚಿತ್ರಗಳಲ್ಲೂ ಕತೆ ಭಿನ್ನವಾದರೂ, ಅದು ಕಾರುಗಳ ಸುತ್ತವೇ ಸುತ್ತುತ್ತದೆ. ಈ ಚಿತ್ರದ ಕಥೆಗಿಂತ ಅಲ್ಲಿನ ಕಾರುಗಳು ಮತ್ತು ಕಾರುಗಳ ಚಾಲನೆಯ ಸಾಹಸದ ದೃಶ್ಯಸಂಯೋಜನೆಗಾಗಿ ಚಿತ್ರ ನೋಡುವವರಿದ್ದಾರೆ. ಈ ಸಿನಿಮಾದ ಅಭಿಮಾನದ ಉತ್ತುಂಗ ಎಷ್ಟಿದೆಯಂದರೆ, ಕರ್ನಾಟಕದ ಯಾವುದೋ ಮೋಲೆಯಲ್ಲಿ ಓಡುವ ಟ್ಯಾಕ್ಸಿಗಳ ಮೇಲೂ ಫಾಸ್ಟ್‌ ಆ್ಯಂಡ್ ಫ್ಯೂರಿಯಸ್ ಎಂದು ಸ್ಟಿಕ್ಕರ್ ಬರೆಸಲಾಗಿರುತ್ತದೆ. ನಗರ ಪ್ರದೇಶಗಳಲ್ಲಂತೂ ಇದು ಯಥೇಚ್ಛವಾಗಿದೆ. ಈ ಚಿತ್ರಗಳಲ್ಲಿ ಬರುವಂತಹ ಕಾರುಗಳ ರೀತಿಯಲ್ಲೇ ತಮ್ಮ ಕಾರುಗಳನ್ನು ಮಾರ್ಪಾಡು ಮಾಡಿಸುವವರ ಸಂಖ್ಯೆ ದೊಡ್ಡದಿದೆ. ಇಷ್ಟರಮಟ್ಟಿಗೆ ಈ ಚಿತ್ರಗಳು ಜನಪ್ರಿಯತೆ ಪಡೆದಿವೆ.

ಈ ಸರಣಿಯ ಮೊದಲ ಚಿತ್ರ ಫಾಸ್ಟ್‌ ಆ್ಯಂಡ್ ಫ್ಯೂರಿಯಸ್‌ ಸಂಪೂರ್ಣ ಸ್ಟ್ರೀಟ್‌ ರೇಸಿಂಗ್‌ಗೆ ಸಂಬಂಧಿಸಿದ್ದು. ಅಮೆರಿಕ, ದಕ್ಷಿಣ ಅಮೆರಿಕ, ಯೂರೂಪ್ ಆಗ್ನೇಯ ಏಷ್ಯಾದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಇದು. ಆದರೆ ಕಾನೂನುಬಾಹಿರ. ಇಂತಹ ಸ್ಟ್ರೀಟ್‌ ರೇಸಿಂಗ್‌ನ ಸ್ವರೂಪ, ಅದರ ಹಿಂದೆ ಕೆಲಸ ಮಾಡುವ ಮಾಫಿಯಾಗಳು, ಅದರಲ್ಲಿರುವ ಇನ್ನಿತರೇ ಅಪಾಯಗಳನ್ನು ಈ ಚಿತ್ರ ತೆರೆದಿಡುತ್ತದೆ. ಚಿತ್ರದ ಹಲವು ಟೀಸರ್‌ಗಳು ಯುಟ್ಯೂಬ್‌ನಲ್ಲಿವೆ. ಆದರೆ ಹೆಚ್ಚು ವೀಕ್ಷಿಸಲಾದ ಟೀಸರ್‌, ವಿನ್‌ ಡೀಸಲ್ ಮತ್ತು ಪಾಲ್‌ ವಾಕರ್ ನಡುವೆ ನಡೆಯುವ ರೈಲ್ವೆ ಕ್ರಾಸಿಂಗ್ ಡ್ರ್ಯಾಗ್‌ ರೇಸ್‌ನದ್ದು. ಚಿತ್ರ ಬಿಡುಗಡೆಯಾಗಿ 19 ವರ್ಷ ಕಳೆದರೂ, ಈ ದೃಶ್ಯವನ್ನು ಅಭಿಮಾನಿಗಳು ಈಗಲೂ ನೋಡುತ್ತಾರೆ.

ಈ ಚಿತ್ರ ಸರಣಿಯ ವಿಶೇಷವೆಂದರೆ ಹಿಂದಿನ ಚಿತ್ರಗಳಿಗೂ, ಮುಂದಿನ ಚಿತ್ರಗಳಿಗೂ ಕಥೆಯಲ್ಲಿ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಮುಖ್ಯ ಭೂಮಿಕೆಯ ಪಾತ್ರಗಳು ಬದಲಾಗುವುದಿಲ್ಲ. ಪ್ರತಿ ಹೊಸ ಚಿತ್ರದಲ್ಲಿ ಬರುವ ಪಾತ್ರಗಳು, ಮುಂದಿನ ಚಿತ್ರದಲ್ಲಿ ಸ್ಥಾನ ಪಡೆಯುತ್ತಾ ಬಂದಿವೆ. ಪ್ರಮುಖ ಬದಲಾವಣೆ ಇರುವುದು ಖಳನಾಯಕರ ಪಾತ್ರಗಳಲ್ಲಿ ಮತ್ತು ಕಥೆಯ ಭೂಮಿಕೆಯಲ್ಲಿ.

ಮೊದಲ ಸರಣಿಯ ಚಿತ್ರದಲ್ಲಿ ಸ್ಟ್ರೀಟ್‌ ರೇಸಿಂಗ್‌ ಭೂಮಿಕೆ. ಎರಡನೇ ಚಿತ್ರ 2 ಫಾಸ್ಟ್‌ 2 ಫ್ಯೂರಿಯಸ್‌ನಲ್ಲಿ ಭೂಗತ ದೊರೆಯೊಬ್ಬನನ್ನು ಹಿಡಿಯುವಲ್ಲಿ ಸ್ಟ್ರೀಟ್‌ ರೇಸರ್‌ಗಳು ನೆರವಾಗುವುದು ಚಿತ್ರದ ಕಥೆ. ಇದರ ಸುತ್ತಲೇ ಕಥೆ ಗಿರಕಿ ಹೊಡೆಯುತ್ತದೆ. ಸಾಹಸಮಯ ಚಾಲನೆ, ಡ್ರ್ಯಾಗ್‌ ರೇಸಿಂಗ್‌, ವಿಪರೀತ ಎನಿಷುವಷ್ಟು ಮಾರ್ಪಡಿಸಿದ ಕಾರುಗಳು ಈ ಚಿತ್ರದ ಆಕರ್ಷಣೆ. ಅಂತ್ಯದಲ್ಲಿ ಯಾಚ್ ಜೊತೆ ಅಮೆರಿಕನ್ ಮಸಲ್ ಕಾರು ಸ್ಪರ್ಧಿಸುವ ದೃಶ್ಯ ಹೆಚ್ಚು ಜನಪ್ರಿಯತೆ ಪಡೆದಿದೆ. ಮೂರನೇ ಸರಣಿಯ ಚಿತ್ರದಲ್ಲಿ ಕಥೆ ಜಪಾನ್‌ಗೆ ವರ್ಗವಾಗುತ್ತದೆ. ಜಪಾನ್ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಡ್ರಿಫ್ಟಿಂಗ್‌ ರೇಸ್‌ ಹೆಚ್ಚು ಜನಪ್ರಿಯತೆ ಪಡೆದಿದೆ. ಡ್ರಿಫ್ಟಿಂಗ್‌ ರೇಸ್‌ಗೆ ಸಂಬಂಧಿಸಿದ ಅಪಾಯಗಳು, ಮಾಫಿಯಾ ಮೊದಲಾದ ಅಂಶಗಳನ್ನು ಚಿತ್ರ ತೆರೆದಿಡುತ್ತದೆ. ಚಿತ್ರದ ಹೆಸರು ಫಾಸ್ಟ್‌ ಆ್ಯಂಡ್ ಫ್ಯೂರಿಯಸ್ ಟೋಕಿಯೊ ಢ್ರಿಫ್ಟ್‌.

ನಾಲ್ಕನೇ ಚಿತ್ರ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಸಹ ಒಬ್ಬ ಭೂಗತ ದೊರೆಯನ್ನು ಹಿಡಿಯುವ ಕಥಾಹಂದರದ್ದು. ಆದರೆ ಚಿತ್ರದ ಬಹುತೇಕ ದೃಶ್ಯಗಳು ಮರುಭೂಮಿಯಲ್ಲಿ ಚಿತ್ರಿತವಾಗಿವೆ. ಆಫ್ರಿಕಾದ ದಟ್ಟಕಾಡು, ಮಾದಕವಸ್ತು ದಂಧೆ, ಮಾಫಿಯಾ ಮೊದಲಾದವುಗಳ ಸುತ್ತ ಕತೆ ತೆರೆದುಕೊಳ್ಳುತ್ತದೆ. ಐದನೇ ಚಿತ್ರವೂ ಬ್ರೆಜಿಲ್‌ನ ಭೂಗತ ದೊರೆಯೊಬ್ಬನ ಹಣವನ್ನು ದೋಚುವ ಕಥೆಯದ್ದು. ಎರಡೂ ಚಿತ್ರಗಳಲ್ಲಿ ಬಳಸಿರುವ ಕಾರುಗಳು, ಹೊಸ ಸ್ವರೂಪದ ಕಾರುಗಳು, ಕಾರಿನ ಚಾಲನೆಯ ಸ್ವರೂಪ ತೀರಾ ರೋಚಕವಾಗಿದೆ. ಭೂಗತ ದೊರೆಯ ತಿಜೋರಿಯನ್ನು ಕಾರುಗಳು ಎಳೆದೊಯ್ಯುವ ದೃಶ್ಯವನ್ನು ಆಕರ್ಷಕವಾಗಿ ಸಂಯೋಜಿಸಲಾಗಿದೆ. ಈ ದೃಶ್ಯವು ಚಿತ್ರದ ಹೆಗ್ಗಳಿಕೆ.

ಆರನೇ ಚಿತ್ರವೂ ಮತ್ತೊಬ್ಬ ಭೂಗತ ದೊರೆಯನ್ನು ಹಿಡಿಯುವ ಕಥೆಯದ್ದೇ. ಇದು ಯೂರೋಪ್‌ನಲ್ಲಿ ನಡೆಯುತ್ತದೆ. ಅಂತಿಮ ದೃಶ್ಯದಲ್ಲಿ ಸ್ಟ್ರೀಟ್ ರೇಸರ್‌ಗಳು ವಿಮಾನದ ಜತೆ ಸೆಣೆಸಬೇಕಿರುತ್ತದೆ. ಏಳು ಮತ್ತು ಎಂಟನೇ ಚಿತ್ರವೂ ಇದೇ ಸ್ವರೂಪದ ಕಥಾ ಹಂದರದ್ದು. ಕಥೆ ನಡೆಯುವ ಸ್ಥಳಗಳು ಬದಲಾಗಿವೆ ಅಷ್ಟೆ. ಕಾರುಗಳೂ ಬದಲಾಗಿವೆ. ಮಿಲಿಟರಿ ಗ್ರೇಡ್‌ನ ಕಾರುಗಳನ್ನು ಚಿತ್ರತಂಡ ಬಳಸಿದೆ. ಕೆಲವು ದೃಶ್ಯಗಳು ತೀರಾ ಅಸಹಜ ಎಂಬಂತೆ ಮೂಡಿಬಂದಿವೆ. ಆದರೂ ಈ ಚಿತ್ರಗಳು ಜಗತ್ತಿನಲ್ಲಿ ಹೆಚ್ಚು ಹಣ ಗಳಿಸಿದ ಚಿತ್ರಗಳ ಸಾಲಿಗೆ ಸೇರಿವೆ.

ಫಾಸ್ಟ್ ಆ್ಯಂಡ್ ಫ್ಯೂರಿಯಸ್ 9 ಚಿತ್ರವು ಬಿಡುಗಡೆಯಾಗಬೇಕಿದೆ. ಈ ಚಿತ್ರದಲ್ಲಿ ಡಾಮಿನಿಕ್ ಟೊರೆಟ್ಟೋ (ವಿನ್ ಡೀಸಲ್‌) ಮತ್ತು ಅವನ ಕ್ರಿಮಿನಲ್ ಗುಂಪು ಬಾಹ್ಯಾಕಾಶದಲ್ಲಿ ಸೆಣೆಸುತ್ತದೆ. ಬಾಹ್ಯಾಕಾಶದಲ್ಲಿ ಕಾರುಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ. ಚಿತ್ರದಲ್ಲಿ ಯಾವೆಲ್ಲಾ ನಟರು ಇರಲಿದ್ದಾರೆ. ಕಥೆಯಲ್ಲಿ ಖಳನಾಯಕ ಯಾರು ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ. ಈ ಎಲ್ಲಾ ಕುತೂಹಲಗಳನ್ನು ತಣಿಸಿಕೊಳ್ಳಲು 2021ರ ಏಪ್ರಿಲ್‌ವರೆಗೆ ಕಾಯಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು