ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಜಯಂತಿ ಆಸ್ಪತ್ರೆಗೆ ದಾಖಲು

Last Updated 8 ಜುಲೈ 2020, 5:02 IST
ಅಕ್ಷರ ಗಾತ್ರ

ಬೆಂಗಳೂರು: ‘ಉಸಿರಾಟದ ತೊಂದರೆಯಿಂದಾಗಿ ಅಮ್ಮ ಐಸಿಯು ನಲ್ಲಿದ್ದಾರೆ. ವೆಂಟಿಲೇಟರ್‌ ನೆರವು ಪಡೆಯಲಾಗಿದೆ. ಗಾಬರಿ ಆಗುಂಥದ್ದೇನಿಲ್ಲ. ಅಸ್ತಮಾ ಹಲವು ವರ್ಷಗಳಿಂದ ಅವರನ್ನು ಕಾಡುತ್ತಿದೆ. ಈಗ ಹವಾಮಾನದಲ್ಲಿ ವ್ಯತ್ಯಾಸ ಆಗಿರುವುದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿರುವುದು ಸಹಜ'ಎಂದು 'ಅಭಿನಯ ಶಾರದೆ'ಜಯಂತಿ ಅವರ ಮಗ ಕೃಷ್ಣಕುಮಾರ್ ‌ಹೇಳಿದ್ದಾರೆ.

75ರ ಇಳಿವಯಸ್ಸಿನಲ್ಲಿ ಅಸ್ತಮಾ ಇರುವವರು ಬೆಂಗಳೂರಿನಲ್ಲಿ ಕಷ್ಟ ಪಡುವುದು ಸಹಜವೇ. ಅದರಲ್ಲೂ ಮಳೆಗಾಲದ ಆರಂಭದ ಅವಧಿಯಲ್ಲಿ ಅಸ್ತಮಾದಿಂದ ಉಸಿರಾಟದ ತೊಂದರೆ ಹೆಚ್ಚಾಗುತ್ತದೆ. ‘ನಮಗೆ ಕೋವಿಡ್‌ ಭಯವಿತ್ತು. ಆದರೆ ಅದರ ತಪಾಸಣೆಯಲ್ಲಿ ನೆಗೆಟಿವ್‌ ಬಂದಿರುವುದು ಸಮಾಧಾನ ತಂದಿದೆ. ಅಸ್ತಮಾದಿಂದ ಉಸಿರಾಟದ ತೊಂದರೆ ಆಗಿದ್ದಾಗ ಎರಡು ವರ್ಷಗಳ ಹಿಂದೆ ಇದೇ ವಿಕ್ರಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣವಾಗಿದ್ದರು. ಈಗಲೂ ಡಾ. ಸತೀಶ್‌ ಅವರೇ ನೋಡಿಕೊಳ್ಳುತ್ತಿದ್ದಾರೆ‘ ಎಂದು ಕೆ.ಕೆ., ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಬೆಳಿಗ್ಗೆ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆಗೆ ಜಯಂತಿಯವರು ಸ್ಪಂದಿಸುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆಯ ಕುರಿತು ವೈದ್ಯರು ಇನ್ನೊಮ್ಮೆ ವಿವರ ನೀಡಲಿದ್ದಾರೆ ಎಂದು ಕೆ.ಕೆ. ಹೇಳಿದರು.

ಅಸ್ತಮಾಗೆ ಸಂಬಂಧಿಸಿ ಮನೆಯಲ್ಲೇ ಅಗತ್ಯ ಬಿದ್ದಾಗ ನೆಬುಲೈಷೇಷನ್‌ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಅಮ್ಮ ಎಚ್ಚರವಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಗಾಬರಿ ಆಗುವಂಥದ್ದೇನಿಲ್ಲ ಎನ್ನುವುದು ಕೆ.ಕೆ. ವಿವರಣೆ.

1968ರಲ್ಲಿ ತೆರೆ ಕಂಡ ವೈ.ಆರ್‌.ಸ್ವಾಮಿ ನಿರ್ದೇಶನದ ’ಜೇನುಗೂಡು‘ ಜಯಂತಿಯವರು ಅಭಿನಯಿಸಿರುವ ಮೊದಲ ಚಿತ್ರ. ಕಮಲ ಕುಮಾರಿ ಎನ್ನುವ ಮೂಲಹೆಸರು ಆಗ ಜಯಂತಿ ಎಂದು ಬದಲಾಯಿತು. ಆರು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಜಯಂತಿ, 1965ರಲ್ಲೇ ‘ಮಿಸ್‌ ಲೀಲಾವತಿ‘ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದವರು. 1969ರಿಂದ 86ರವರೆಗೆ ಐದು ಬಾರಿ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಅದರಲ್ಲಿ ಪುಟ್ಣಣ್ಣ ಕಣಗಾಲ್‌ ನಿರ್ದೇಶನದ ‘ಮಸಣದ ಹೂವು‘ ಚಿತ್ರದ ಪ್ರಶಸ್ತಿಯೂ ಸೇರಿಕೊಂಡಿದೆ. ಕನ್ನಡದಲ್ಲಿ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ 190ಕ್ಕೂ ಹೆಚ್ಚು. ‘ಎಡಕಲ್ಲು ಗುಡ್ಡದ ಮೇಲೆ‘ ಚಿತ್ರದಲ್ಲಿ ಅವರು ನಿರ್ವಹಿಸಿದ ಅತೃಪ್ತ ಗೃಹಿಣಿಯ ಪಾತ್ರ ಇವತ್ತಿಗೂ ಚಿತ್ರರಸಿಕರ ಅಚ್ಚುಮೆಚ್ಚಿನ ಪಾತ್ರ. ‘ನಾಗರಹಾವು‘ ಚಿತ್ರದ ಒನಕೆ ಓಬವ್ವನ ಪಾತ್ರದಲ್ಲಿ ಅವರು ನಟಿಸಿದ ‘ಕನ್ನಡ ನಾಡಿನ ವೀರರಮಣಿಯ..‘ ಹಾಡಂತೂ ಮನೆಮಾತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT