ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಿ ಲಿವರ್‌ ಕುಡಿತ ಬಿಟ್ಟದ್ದು ಹೀಗೆ

Last Updated 23 ನವೆಂಬರ್ 2020, 8:05 IST
ಅಕ್ಷರ ಗಾತ್ರ

ನಾನೂ ಮದ್ಯ ಸೇವಿಸುವ ಅಭ್ಯಾಸಕ್ಕೆ ಬಿದ್ದುಬಿಟ್ಟಿದ್ದೆ. ಆದರೆ ಅದು ನನ್ನ ಪ್ರತಿಭೆ ಮತ್ತು ಸೃಜನಶೀಲತೆಗೆ ಕುತ್ತು ತರುತ್ತದೆ ಎಂದು ಗೊತ್ತಾದಾಗ ಅದನ್ನು ಬಿಟ್ಟುಬಿಟ್ಟೆ...

-ಹೀಗೆಂದು ವ್ಯಸನ ಬದುಕಿನ ಬಗ್ಗೆ ಬೇಸರ ಹೊರ ಹಾಕಿದವರು ಬಾಲಿವುಡ್‌ನ ಹಾಸ್ಯ ನಟ ಜಾನಿಲಿವರ್‌.

ಹಾಸ್ಯನಟಿ ಭಾರತಿ ಸಿಂಗ್‌ ಮತ್ತುಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿರುವ ವಿದ್ಯಮಾನಕ್ಕೆ ಬೇಸರ ವ್ಯಕ್ತಪಡಿಸಿರುವ ಜಾನಿ ಲಿವರ್‌, ʼಡ್ರಗ್ಸ್‌ ಸೇವನೆ ಎನ್ನುವುದು ಈ ಹಿಂದೆ ಆಲ್ಕೋಹಾಲ್‌ನಂತೆ ಟ್ರೆಂಡ್‌ ಆಗುತ್ತಿದೆ. ಆಲ್ಕೊಹಾಲ್‌ ಸುಲಭವಾಗಿ ಸಿಗುತ್ತದೆ. ಮಾತ್ರವಲ್ಲ ಪಾರ್ಟಿಗಳಲ್ಲಿ ಸಾಕಷ್ಟು ಬಳಕೆಯೂ ಆಗುತ್ತಿದೆ. ನಾನೂ ಆಲ್ಕೋಹಾಲ್‌ ಸೇವಿಸುವ ತಪ್ಪು ಮಾಡಿದ್ದೆ. ಆದರೆ, ಅದು ನನ್ನ ಪ್ರತಿಭೆ ಮತ್ತು ಸೃಜನಶೀಲತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಾದಾಗ ಅದನ್ನು ತ್ಯಜಿಸಿದೆʼ ಎಂದು ಪತ್ರಿಕೆಯೊಂದರ ಜತೆ ಹೇಳಿಕೊಂಡಿದ್ದಾರೆ.

‘ಡ್ರಗ್ಸ್‌ ಸೇವನೆ ಇಂದಿನ ತಲೆಮಾರಿನ ಸೃಜನಶೀಲ ವ್ಯಕ್ತಿಗಳಲ್ಲಿ ಕಂಡುಬರುತ್ತಿದೆ. ಅವರು ತಮ್ಮ ಮಿತಿ ಮೀರುತ್ತಿದ್ದಾರೆ. ಒಮ್ಮೆ ನೀವು ಡ್ರಗ್ಸ್‌ ಸೇವನೆಯಲ್ಲಿ ತೊಡಗಿ ಸಿಕ್ಕಿಹಾಕಿಕೊಂಡಿರಿ ಎಂದು ಊಹಿಸಿಕೊಳ್ಳಿ. ಆಗ ನಿಮ್ಮ ಕುಟುಂಬದ ಪರಿಸ್ಥಿತಿ ಏನಾಗುತ್ತದೆ? ಸುದ್ದಿ ವಾಹಿನಿಗಳಲ್ಲಿ ಎಲ್ಲರೂ ನಿಮ್ಮದೇ ಕಥೆಯನ್ನು ವೀಕ್ಷಿಸುತ್ತಾರೆ. ಎಲ್ಲ ಬಗೆಯ ಮಾದಕ ವಸ್ತು ಸೇವಿಸುವವರ ಪರಿಸ್ಥಿತಿಯೂ ಇದೇ. ಇದೇ ಪ್ರವೃತ್ತಿ ಮುಂದುವರಿದರೆ ನಮ್ಮ ಉದ್ಯಮ (ಬಾಲಿವುಡ್‌) ಸಂಪೂರ್ಣ ಕೆಟ್ಟು ಹೋಗುತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಬಂಧಿತ ನಟರಿಗೆ (ಭಾರತಿ ಮತ್ತುಅವರ ಪತಿ ಹರ್ಷ್ ಲಿಂಬಾಚಿಯಾ) ಮನವಿ ಮಾಡಿದ ಜಾನಿ, ‘ಒಮ್ಮೆ ನೀವು ಹೊರಬನ್ನಿ. ಬಳಿಕ ನೀವು ಡ್ರಗ್ಸ್‌ ಸೇವನೆಗೆ ಒಳಗಾಗಿರುವ ನಿಮ್ಮ ಹಿರಿ ಕಿರಿಯ ಸಹೋದ್ಯೋಗಿಗಳ ಜತೆ ಮಾತನಾಡಿ. ನಿಮ್ಮ ತಪ್ಪುಗಳನ್ನೂ ಒಪ್ಪಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳು ಡ್ರಗ್ಸ್‌ ಚಟದಿಂದ ಮುಕ್ತರಾಗುವಂತೆ ಪ್ರಮಾಣ ಮಾಡಿಸಿಕೊಳ್ಳಿ. ಉದಾಹರಣೆಗೆ ಸಂಜಯ್‌ ದತ್‌ ಅವರನ್ನು ನೋಡಿ. ಅವರು ಇಡೀ ಜಗತ್ತಿಗೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು. ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ? ಈ ಪ್ರಕರಣದಲ್ಲಿ ಯಾರೂ ನಿಮಗೆ ಹೂಗುಚ್ಚ ಕೊಡಲು ಮುಂದಾಗುವುದಿಲ್ಲ’ ಎಂದು ಕಿವಿಮಾತು ಹೇಳಿದ್ದಾರೆ.

ಜಾನಿ ಅವರು ಡ್ರಗ್ಸ್‌ ತೆಗೆದುಕೊಳ್ಳುವುದರ ವಿರುದ್ಧ ತಮ್ಮ ವಿದ್ಯಾರ್ಥಿಗಳಿಗೂ ಎಚ್ಚರಿಕೆ ರವಾನಿಸಿದ್ದಾರೆ. ಜೈಲು ಸೃಜನಶೀಲ ವ್ಯಕ್ತಿಗಳಿಗಲ್ಲ. ಡ್ರಗ್ಸ್‌ ಎನ್ನುವುದು ಒಂದು ದೌರ್ಬಲ್ಯದ ಸಂಕೇತ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT