ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

ಯಶಸ್ಸು ಕೆಲಸಕ್ಕೆ ಮುಖ್ಯ, ವ್ಯಕ್ತಿಗಲ್ಲ: ನಟ ವಿಜಯ ರಾಘವೇಂದ್ರ ಸಂದರ್ಶನ

Published : 29 ಆಗಸ್ಟ್ 2025, 0:06 IST
Last Updated : 29 ಆಗಸ್ಟ್ 2025, 0:06 IST
ಫಾಲೋ ಮಾಡಿ
Comments
ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್‌ ಸ್ವಾಮಿ’ ಚಿತ್ರ ಇಂದು (ಆ.29) ತೆರೆ ಕಾಣುತ್ತಿದೆ. ಚಿಕ್ಕಮಗಳೂರಿನ ಎಸ್ಟೇಟ್‌ನಲ್ಲಿ ನಡೆದ ಒಂದು ನೈಜ ಘಟನೆಯನ್ನೇ ಕಥೆಯಾಗಿ ಹೊಂದಿರುವ ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಎರಡೂವರೆ ದಶಕಗಳ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ.
ಪ್ರ

ಚಿತ್ರದಲ್ಲಿ ತಮ್ಮ ಪಾತ್ರ...

‘ರಿಪ್ಪನ್‌ ಸ್ವಾಮಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಫಸ್ಟ್‌ಲುಕ್‌, ಟೀಸರ್‌, ಟ್ರೇಲರ್‌ನಲ್ಲಿ ನೋಡಿದಂತೆ ಕ್ರೌರ್ಯವನ್ನು ಹೊಂದಿರುವ ಪಾತ್ರ. ಸಕಾರಾತ್ಮವಲ್ಲ, ಆದರೆ ತುಂಬ ಗ್ರೇ ಶೇಡ್‌ ಇರುವ ಪಾತ್ರ. ಆತ ತೋಟದ ಮಾಲೀಕ. ಕುಟುಂಬದ ಜತೆ ಜೀವನ ನಡೆಸುತ್ತ ಇರುತ್ತಾನೆ. ಯಾವಾಗಲೂ ಕೋಪ, ಸಿಡುಕ. ಆತ ಸ್ವಭಾತಃ ಹಾಗೆ. ಅವನನ್ನು ಕಂಡರೆ ಊರಲ್ಲಿ ಯಾರಿಗೂ ಆಗುವುದಿಲ್ಲ. ಆದರೆ ಆತ ತಾನು ಸರಿಯಿದ್ದೇನೆ, ಸಮಾಜವೇ ಸರಿಯಿಲ್ಲ ಎಂದುಕೊಂಡಿರುವ ವ್ಯಕ್ತಿ.

ಪ್ರ

ಯಾವ ಜಾನರ್‌ನ ಸಿನಿಮಾ? 

ತೋಟದ ಮಾಲೀಕ ನಿಗೂಢವಾಗಿ ಸಾವನ್ನಪ್ಪುತ್ತಾನೆ. ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ  ಎಂಬುದು ಚಿತ್ರದ ಸಾರಾಂಶ ಎನ್ನುವುದನ್ನು ಪೋಸ್ಟರ್‌ ಒಂದರಲ್ಲಿ ಹೇಳಿದ್ದೆವು. ಇದರ ನಡುವೆ ಬರುವ ಸನ್ನಿವೇಶಗಳನ್ನು ಬಹಳ ಸಹಜವಾಗಿ, ನಿಜಜೀವನಕ್ಕೆ ಹತ್ತಿರವಾಗುವಂತೆ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ. ಡಾರ್ಕ್‌ ಆ್ಯಕ್ಷನ್‌ ಥ್ರಿಲ್ಲರ್‌ ಜಾನರ್‌ ಎನ್ನಬಹುದು. ಸಸ್ಪೆನ್ಸ್‌ ಥ್ರಿಲ್ಲರ್‌ ಎಂತಲೂ ಕರೆಯಬಹುದು. ಆದರೆ ಹಾಗೇ ಹೇಳಿದರೆ ಜನ ತಾವೇ ಒಂದಷ್ಟು ನಿರೀಕ್ಷೆಗಳೊಂದಿಗೆ ಬರುತ್ತಾರೆ. ಜನ ಕಥೆಯ ಜತೆ ಸಾಗಬೇಕು. ಹೀಗಾಗಿ ಇದನ್ನು ನಾವು ಸಸ್ಪೆನ್ಸ್‌ ಥ್ರಿಲ್ಲರ್‌ ಎನ್ನುತ್ತಿಲ್ಲ. 

ಪ್ರ

ಇದು ‘ಕೇಸ್‌ ಆಫ್‌ ಕೊಂಡಾಣ’ ರೀತಿಯ ಸಿನಿಮಾವೇ?

‘ಕೇಸ್‌ ಆಫ್‌ ಕೊಂಡಾಣ’, ‘ಸೀತಾರಾಮ್‌ ಬಿನೋಯ್‌’ ರೀತಿಯದ್ದೇ ಜಾನರ್‌. ಆದರೆ ಕಥೆ ಬೇರೆಯೇ ಇದೆ. ಒಂದು ಸರಳವಾದ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಆಸಕ್ತಿದಾಯಕ, ಬಹಳ ಹಿಡಿತ ಹೊಂದಿದ ಕಥೆ. ಅಲ್ಲಲ್ಲಿ ಸಣ್ಣ ನಗುವಿನೊಂದಿಗೆ ಕೊನೆಗೆ ಕುತೂಹಲಭರಿತರಾಗಿ ನೋಡಬಹುದಾದ ಸಿನಿಮಾ. ಜನ ನೋಡಿ ಹೇಳಿದ ನಂತರ ಇದನ್ನು ಅದ್ಬುತ ಎನ್ನಬಹುದು. ನಾವೇ ಇದನ್ನು ಅತ್ಯದ್ಭುತ ಸಿನಿಮಾ ಎಂದುಕೊಳ್ಳಲು ಆಗುವುದಿಲ್ಲ. ನಾವೊಂದು ಒಳ್ಳೆ ಕಥೆ ಹೇಳಿದ್ದೇವೆ. ಬಂದು ಕುಳಿತು ನೋಡಿ ಎಂದು ಜನರನ್ನು ಕರೆಯುತ್ತಿದ್ದೇವೆ. ಹಿಂದಿನ ಸಿನಿಮಾಗಳ ರೀತಿಯದ್ದೇ ಕಥೆಯಲ್ಲ.

ಪ್ರ

ಜನಪ್ರಿಯ ನಾಯಕನಾಗಿದ್ದರೂ ಸಿದ್ಧಸೂತ್ರಕ್ಕೆ ಅಂಟಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಮಾಡುವುದು, ಹೊಸ ಕಥೆಗಳನ್ನು ಹುಡುಕುವುದರ ಗುಟ್ಟೇನು?

ವೃತ್ತಿಜೀವನ ಪ್ರಾರಂಭವಾದಾಗಿನಿಂದ ನಾನೊಬ್ಬ ಒಳ್ಳೆಯ ಕಲಾವಿದ ಆಗಬೇಕು ಎಂದುಕೊಂಡವನು. ಹೀಗಾಗಿ ಯಾವುದೋ ಒಂದು ಸೂತ್ರಕ್ಕೆ ಸೀಮಿತವಾಗಿಲ್ಲ. ಆದ್ದರಿಂದಲೇ ಅಭಿಮಾನಿಗಳು ಆರಾಧಿಸುವ ನಟ ನಾನಾಗಲಿಲ್ಲ. ನನ್ನ ಎಲ್ಲ ಪಾತ್ರಗಳಲ್ಲಿಯೂ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತ ಹೋಗುತ್ತೇನೆ. ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಐಷಾರಾಮಿತನವನ್ನು ಬದುಕು ನೀಡಿಲ್ಲ. ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ನನಗಾಗಿ ಸಿನಿಮಾ ಮಾಡುವೆ, ಕೆಲವು ಸಲ ವೃತ್ತಿಗಾಗಿ, ಇನ್ನು ಕೆಲವು ಸಲ ಅನಿವಾರ್ಯತೆಗೆ ಸಿನಿಮಾ ಮಾಡುತ್ತೇನೆ.

ಪ್ರ

ಈತನಕದ ವೃತ್ತಿ ಬದುಕು ಹೇಗಿತ್ತು?

ನಾಯಕನಾಗಿ ಎರಡೂವರೆ ದಶಕಗಳು ಕಳೆದಿವೆ. ಈ ಪಯಣ ಬಹಳ ಖುಷಿ ಎನ್ನಿಸುತ್ತದೆ. ಯಾವುದೋ ಒಂದು ಪಾತ್ರ ಮನಸಿನಲ್ಲಿ ಉಳಿದುಕೊಳ್ಳುವುದು, ಆ ಪಾತ್ರದ ಮೂಲಕ ಜನ ನನ್ನನ್ನು ಗುರುತಿಸುವುದು ಸಂತಸದ ಸಂಗತಿಗಳು. ‘ಚಿನ್ನಾರಿ ಮುತ್ತ’ ಹಾಕಿಕೊಟ್ಟ ಅಡಿಪಾಯ ಎಷ್ಟು ಗಟ್ಟಿಯಾಗಿದೆ ಎಂದರೆ, ಇಡೀ ಜನ್ಮಕ್ಕಾಗುವಷ್ಟು ಜನಮನ್ನಣೆಯನ್ನು ನೀಡಿದೆ. ಜನರ ಮನಸ್ಸಿನಲ್ಲಿ ಆ ಪಾತ್ರ ಈಗಲೂ ಹಾಗೆ ಇದೆ.

ಪ್ರ

ನೀವು ಮಾಡಲೇಬೇಕು ಅಂಥ ತೀವ್ರವಾಗಿ ಅನಿಸಿರುವ ಪಾತ್ರಗಳು...

ಬುದ್ಧಿಮಾಂಧ್ಯರು ಅಥವಾ ಅಂಗವಿಕಲ ಪಾತ್ರ ಮಾಡಬೇಕು ಎಂಬ ಆಸೆಯಿದೆ. ಸ್ವಾಧೀನ ಇಲ್ಲದ ದೇವರ ಮಕ್ಕಳ ಪಾತ್ರ ಎನ್ನುತ್ತಾರಲ್ಲ, ಆ ರೀತಿಯದ್ದು. ನಾನು ಚೆನ್ನೈನಲ್ಲಿ ನಟನೆ ತರಗತಿಯಲ್ಲಿ ಈ ಪಾತ್ರ ಮಾಡಿದ್ದೆ. ಈ ಪಾತ್ರಕ್ಕಾಗಿ ಕಾಯುತ್ತಿರುವೆ. 

ಪ್ರ

ನಿಮ್ಮ ಮುಂದಿನ ಸಿನಿಮಾಗಳು?

ಪಿ.ಸಿ.ಶೇಖರ್‌ ನಿರ್ದೇಶನದ ‘ಮಹಾನ್‌’ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದೆ. ನಟೇಶ್‌ ಹೆಗಡೆ ಅವರ ‘ಕುರ್ಕ’ ಚಿತ್ರದಲ್ಲಿ ನಟಿಸಿರುವೆ. ‘ಸೀತಾರಾಮ್‌ ಬಿನೋಯ್‌–2’ ಸಿನಿಮಾ ಮುಗಿದಿದೆ. ‘ರುದ್ರಾಭಿಷೇಕಂ’ ಚಿತ್ರ ಸಿದ್ಧವಾಗುತ್ತಿದೆ. ಇನ್ನೊಂದು ಸಿನಿಮಾ ಕಥೆ ಅಂತಿಮವಾಗಿದೆ. ಅಕ್ಟೋಬರ್‌ನಲ್ಲಿ ಶುರುವಾಗಲಿದೆ. ಅನಂತರಾಜು ನಿರ್ದೇಶನದ ಚಿತ್ರವಿದು.

ಪ್ರ

ನೀವು ಚಿತ್ರರಂಗದಿಂದ ಕಲಿತಿದ್ದೇನೆ ಎಂದುಕೊಳ್ಳುವ ಸಂಗತಿಗಳು ಯಾವುವು?

ಬೇರೆ ಬೇರೆ ಆಯಾಮಗಳಿಂದ ನಟನೆಯನ್ನು ಕಲಿಯುತ್ತ ಇರುತ್ತೇನೆ. ಮುಖ್ಯವಾಗಿ ಕಲಿತಿದ್ದು ತಾಳ್ಮೆ ಮತ್ತು ನಂಬಿಕೆ. ಇವೆರಡೂ ಇದ್ದಾಗ ಸೋಲು, ಗೆಲುವು ಎರಡನ್ನೂ ತಡೆದುಕೊಳ್ಳುವ ಶಕ್ತಿ ಬರುತ್ತದೆ. ಕೆಲಸ ಮಾಡಿಕೊಂಡು ಮುಂದಕ್ಕೆ ಹೋಗುತ್ತಿರಬೇಕು. ಜನರ ಮನಸಿನಲ್ಲಿ ಉಳಿದುಕೊಳ್ಳಬೇಕು ಎಂದಾಗ ಯಶಸ್ಸು ಮುಖ್ಯವಾಗುತ್ತದೆ. ಆದರೆ ಯಶಸ್ಸು ಕೆಲಸಕ್ಕೆ ಮುಖ್ಯ, ವ್ಯಕ್ತಿಗಲ್ಲ. ಅದನ್ನೇ ನಂಬಿಕೊಂಡಿದ್ದರೆ ವ್ಯಕ್ತಿ ಬೆಳೆಯಲು ಸಾಧ್ಯವಿಲ್ಲ. ಅದನ್ನು ಮೀರಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. 

ಪ್ರ

ನಟನೆ ಹೊರತಾಗಿ ನಿಮ್ಮ ಮುಂದಿನ ಯೋಜನೆಗಳು?

ನಿರ್ದೇಶನದ ಕನಸಿದೆ, ಆದರೆ ಸದ್ಯಕ್ಕಲ್ಲ. ದೆವ್ವದ ಸಿನಿಮಾ ಮಾಡಬೇಕು. ಆದರೆ ಕಥೆ ಸಿದ್ಧವಾಗಿಲ್ಲ. ಯಾವಾಗ ಆಗುತ್ತದೆ ಎಂದು ಗೊತ್ತಿಲ್ಲ. 

ಪ್ರ

ನಿಮ್ಮ ಪ್ರಕಾರ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಬಾರದಿರಲು ಕಾರಣ?

ಗಟ್ಟಿಯಾದ ಬರವಣಿಗೆ ಕೊರತೆ ಇದೆ. 1970–80ರ ದಶಕಗಳಲ್ಲಿ ನೆನಪಿನಲ್ಲಿ ಉಳಿವಂಥ ಪಾತ್ರಗಳನ್ನು ಬರೆಯುತ್ತಿದ್ದರು. ಸಿನಿಮಾ ಮುಗಿದಾಗ ಒಂದು ಸಂದೇಶ ಸಿಗುತ್ತಿತ್ತು. ಸಿನಿಮಾ ಬಗ್ಗೆ, ಸ್ಕ್ರಿಪ್ಟ್‌ ಕುರಿತು ಕಲಿಕೆ ಇತ್ತು. ಮೊದಲ ಆದ್ಯತೆ ಸ್ಕ್ರಿಪ್ಟ್‌ಗೆ ಇತ್ತು. ಮೇರು ನಟರು ಸ್ಕ್ರಿಪ್ಟ್‌ ವಿಚಾರದಲ್ಲಿ ಜಗಳ ಆಡುತ್ತಿದ್ದರು. ಈಗ ಆ ಜಗಳ ಕಡಿಮೆ ಆಗಿದೆ. ಆ ಗುಣಮಟ್ಟವೂ ಇಲ್ಲ. ಪೋಸ್ಟರ್‌, ಟೀಸರ್‌ ಹಾಕಿ ಬ್ರಹ್ಮಾಂಡ ತೋರಿಸುತ್ತೇನೆ ಎಂದು ಪ್ರೇಕ್ಷಕರಿಗೆ ಸುಳ್ಳು ಹೇಳಿದರೆ ಜನ ನಿರಾಸೆಗೊಳ್ಳುತ್ತಾರೆ. ಜನಕ್ಕೆ ಬೇಕಿರುವುದು ಸರಳವಾದ ಇಡ್ಲಿ, ಸಾಂಬಾರ್‌. ಅದನ್ನು ಎಷ್ಟು ರುಚಿಕರವಾಗಿ, ಅಚ್ಚುಕಟ್ಟಾಗಿ ನೀಡುತ್ತೇವೆ ಎಂಬುದು ಮುಖ್ಯ. ‘ರಿಪ್ಪನ್‌ ಸ್ವಾಮಿ’ ಆ ರೀತಿ ಬರವಣಿಗೆ ಹೊಂದಿರುವ ಪಾತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT