ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Yash Cinema | ಡಿ.8ಕ್ಕೆ #ಯಶ್‌19 ಶೀರ್ಷಿಕೆ ರಿಲೀಸ್‌

Published 5 ಡಿಸೆಂಬರ್ 2023, 0:06 IST
Last Updated 5 ಡಿಸೆಂಬರ್ 2023, 0:06 IST
ಅಕ್ಷರ ಗಾತ್ರ

‘ಕೆ.ಜಿ.ಎಫ್‌. ಚಾಪ್ಟರ್‌–2’ ರಿಲೀಸ್‌ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್‌ ಯಾವುದು ಎನ್ನುವ ಸಣ್ಣ ಸುಳಿವನ್ನೂ ನಟ ಯಶ್‌ ಬಿಟ್ಟುಕೊಟ್ಟಿರಲಿಲ್ಲ. ಇದೀಗ, ಕೆವಿಎನ್‌ ಪ್ರೊಡಕ್ಷನ್ಸ್‌ನ ಹೊಸ ಪ್ರಾಜೆಕ್ಟ್‌ ತಮ್ಮ 19ನೇ ಸಿನಿಮಾ ಎನ್ನುವುದನ್ನು ಯಶ್‌ ಘೋಷಿಸಿದ್ದಾರೆ. ಡಿ.8ರಂದು ಬೆಳಿಗ್ಗೆ 9.55ಕ್ಕೆ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಳ್ಳಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಯಶ್‌ ತಿಳಿಸಿದ್ದಾರೆ. 

ಜಗತ್ತಿನಾದ್ಯಂತ ಸುಮಾರು ₹1,200 ಕೋಟಿ ಬಾಚಿದ್ದ ‘ಕೆ.ಜಿ.ಎಫ್‌ ಚಾಪ್ಟರ್‌–2’ ಯಶ್‌ ಅವರ ಸಿನಿಗ್ರಾಫ್‌ಗೆ ಅತಿ ದೊಡ್ಡ ತಿರುವು ನೀಡಿತ್ತು. ಹೀಗಾಗಿ ಅವರ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಭಿಮಾನಿಗಳಿಗೆ, ಜನರಿಗೆ ನಿರೀಕ್ಷೆ, ಕುತೂಹಲ ಹೆಚ್ಚಿದೆ. ‘ಕೆ.ಜಿ.ಎಫ್‌’ ಸರಣಿಗೇ ಐದಾರು ವರ್ಷಗಳನ್ನು ಮೀಸಲಿಟ್ಟಿದ್ದ ಯಶ್‌, ಇದೀಗ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ತಮ್ಮ 19ನೇ ಸಿನಿಮಾದ ತಯಾರಿಯಲ್ಲೇ ಯಶ್‌ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಶ್ರೀಲಂಕಾ, ಲಂಡನ್‌ಗೂ ಅವರು ತೆರಳಿದ್ದರು. ಯಶ್‌ ಅವರ 19ನೇ ಸಿನಿಮಾದ ನಿರ್ದೇಶಕರು ಯಾರೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ, ಗೀತು ಮೋಹನ್‌ದಾಸ್‌ ಅವರ ಹೆಸರು ಕೇಳಿಬರುತ್ತಿದೆ.   

‘ಆರ್‌.ಆರ್‌.ಆರ್‌’, ‘ಸಪ್ತ ಸಾಗರದಾಚೆ ಎಲ್ಲೋ’, ‘ಟೋಬಿ’, ‘ಕೌಸಲ್ಯ ಸುಪ್ರಜಾ ರಾಮ’, ‘ಅನಿಮಲ್‌’ ಸಿನಿಮಾಗಳನ್ನು ‘ಕೆವಿಎನ್‌’ ವಿತರಣೆ ಮಾಡಿ ಹೆಸರು ಪಡೆದಿದೆ. ‘ಸಖತ್‌’ ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಇಳಿದಿದ್ದ ‘ಕೆವಿಎನ್‌’, ‘ಬೈ2ಲವ್‌’, ಜೋಗಿ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘KD’, ನಟ ದರ್ಶನ್‌ ಜೊತೆಗೂ ಸಿನಿಮಾವೊಂದನ್ನು ಮಾಡುತ್ತಿದೆ. ಇದೀಗ ಯಶ್‌ ಅವರ ಬಹುನಿರೀಕ್ಷಿತ ಸಿನಿಮಾದ ಚುಕ್ಕಾಣಿಯನ್ನು ‘ಕೆವಿಎನ್‌’ ಹಿಡಿದಿದೆ. 2024ರಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. 

ತಾಳ್ಮೆ ಇರಲಿ ಎಂದಿದ್ದ ಯಶ್‌

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯಶ್‌, ‘ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಹೊಸ ಪೀಳಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಅವರನ್ನು ಪ್ರೋತ್ಸಾಹಿಸಿ. ಪ್ರೇಕ್ಷಕರು ಬೆನ್ನು ತಟ್ಟಿದ ಕಾರಣಕ್ಕೆ, ನಾನು ಧೈರ್ಯವಾಗಿ ಕುಳಿತಿದ್ದೇನೆ. ಹಾಗೆಂದು ನಾನು ವಿಶ್ರಮಿಸುತ್ತಿದ್ದೇನೆ ಎಂದಲ್ಲ. ನೀವು ಕೊಟ್ಟಿರುವ ಯಶಸ್ಸನ್ನು ಜವಾಬ್ದಾರಿ ಎಂದು ತಿಳಿದುಕೊಂಡು. ಮುಂದಿನ ಹಂತಕ್ಕೆ ಹೆಜ್ಜೆ ಇಟ್ಟಿದ್ದೇನೆ. ನಾನು ಯಾವತ್ತೂ ಈ ಹಬ್ಬಕ್ಕೆ ಘೋಷಣೆ, ಆ ತಿಂಗಳಲ್ಲಿ ಘೋಷಣೆ ಎಂದಿರಲಿಲ್ಲ. ಅಡುಗೆ ಬೆಂದ ಮೇಲೆಯೇ ಬಡಿಸಬೇಕು. ಕೊಂಚ ತಾಳ್ಮೆ ಇರಲಿ’ ಎಂದಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT