ಮಂಗಳವಾರ, ಸೆಪ್ಟೆಂಬರ್ 21, 2021
26 °C

ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ವೆಬ್‌ ಒರಿಜಿನಲ್‌?

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ನಂತಹ ಒಟಿಟಿ (ಸ್ಮಾರ್ಟ್‌ಫೋನ್‌ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ) ವೇದಿಕೆಗಳು, ಪ್ರಾದೇಶಿಕ ಭಾಷೆಗಳಲ್ಲಿ ಒಳ್ಳೊಳ್ಳೆ ಕಾರ್ಯಕ್ರಮ ನಿರ್ಮಾಣ ಮಾಡಲು ತಮ್ಮ ಒಟ್ಟು ಬಜೆಟ್‌ನಲ್ಲಿ ಅಂದಾಜು ಶೇಕಡ 30ರಷ್ಟು ಹಣ ತೆಗೆದಿರಿಸುತ್ತಿವೆಯಂತೆ.

ಈ ವೇದಿಕೆಗಳ ಮುಂದಿನ ಹಂತದ ಬೆಳವಣಿಗೆಗೆ ಪ್ರಾದೇಶಿಕ ಭಾಷೆಗಳು ನೆರವಾಗಲಿವೆಯಂತೆ. ಇಂತಹ ವೇದಿಕೆಗಳಲ್ಲಿ ಸಿಗುವ ಕಾರ್ಯಕ್ರಮ ವೀಕ್ಷಿಸುವವರ ಪ್ರಾದೇಶಿಕ ಭಾಷೆಗಳ ಜನರ ಸಂಖ್ಯೆ ಹೆಚ್ಚುತ್ತಿದೆಯಂತೆ... ಇವೆಲ್ಲ ಅಂಕಿ–ಅಂಶಗಳನ್ನು ಆಧರಿಸಿದ ಮಾತುಗಳು. ಆದರೆ, ಒಟಿಟಿ ವೇದಿಕೆಗಳಲ್ಲಿ ಕನ್ನಡ ಎಷ್ಟಿದೆ? ವಿಶ್ವದೆಲ್ಲೆಡೆ ಮುಂಚೂಣಿಯಲ್ಲಿರುವ ‘ನೆಟ್‌ಫ್ಲಿಕ್ಸ್‌’ನಲ್ಲಿ ಕನ್ನಡದ ವೆಬ್‌ ಒರಿಜಿನಲ್‌ ಇದುವರೆಗೆ ಒಂದೂ ಬಂದಿಲ್ಲವಲ್ಲ? ಆದರೆ...

ಈಗ ಬಂದಿರುವ ಸುದ್ದಿಯ ಪ್ರಕಾರ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್ತ ಗಾಣಿಗ ಅವರು ನೆಟ್‌ಫ್ಲಿಕ್ಸ್‌ಗಾಗಿಯೇ ಕನ್ನಡದ ವೆಬ್‌ ಒರಿಜಿನಲ್‌ ಸಿದ್ಧಪಡಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಅಂದಾಜು ಇಪ್ಪತ್ತು ನಿಮಿಷಗಳ ಪ್ರಾಯೋಗಿಕ ಕಂತನ್ನು ಸಿದ್ಧಪಡಿಸಲಿದ್ದಾರೆ. ವೆಬ್‌ ಒರಿಜಿನಲ್‌ನಲ್ಲಿ ಅಂದಾಜು ಏಳು ಕಂತುಗಳು ಇರಲಿವೆ. ಆರಂಭದ ಮೂರು ಕಂತುಗಳಿಗೆ ಅಗತ್ಯವಿರುವ ಬರವಣಿಗೆಯ ಕೆಲಸ ಕೂಡ ಪೂರ್ಣಗೊಂಡಿದ್ದು, ಅದಕ್ಕೆ ನೆಟ್‌ಫ್ಲಿಕ್ಸ್‌ ಕಡೆಯಿಂದ ಒಪ್ಪಿಗೆ ದೊರೆತಿದೆ.

ಗುರುದತ್ ಅವರು ಈ ವೆಬ್ ಒರಿಜಿನಲ್‌ಗೆ ಇನ್ನೂ ಹೆಸರಿಟ್ಟಿಲ್ಲ. ಅಲ್ಲದೆ, ಯಾವ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನೆಟ್‌ಫ್ಲಿಕ್ಸ್‌ನ ಪ್ರತಿನಿಧಿಗಳೂ ಪಾಲ್ಗೊಳ್ಳಬಹುದು. ಕನ್ನಡದ ನಟರು ಮಾತ್ರವಲ್ಲದೆ ತಮಿಳು ಹಾಗೂ ತೆಲುಗಿನಿಂದ ಕೂಡ ಒಂದಿಷ್ಟು ನಟ ನಟಿಯರು ಬರಬಹುದು ಎನ್ನುತ್ತಿವೆ ಮೂಲಗಳು.

‘ಈ ವೆಬ್ ಒರಿಜಿನಲ್‌ನಲ್ಲಿ ಥ್ರಿಲ್ಲರ್ ಕಥಾಹಂದರ ಇರಲಿದೆ. ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಸೇಕ್ರೆಡ್ ಗೇಮ್ಸ್ ಮಾದರಿಯಲ್ಲಿ, ಕನ್ನಡದ ಸೊಗಡು ಹೊಂದಿರುವ ಸರಣಿ ಇದಾಗಲಿದೆ. ಇದರ ಬಜೆಟ್ ಕೂಡ ದೊಡ್ಡದಾಗಿಯೇ ಇರುತ್ತದೆ. ಈ ಕೆಲಸದಲ್ಲಿ ನೆಟ್‌ಫ್ಲಿಕ್ಸ್‌ ಮಾತ್ರವಲ್ಲದೆ ಕನ್ನಡದ ನಿರ್ಮಾಣ ಸಂಸ್ಥೆಯೊಂದು ಕೂಡ ಕೈಜೋಡಿಸಿದೆ’ ಎಂದು ಈ ಕೆಲಸದಲ್ಲಿ ತೊಡಗಿಕೊಂಡಿರುವ ತಂತ್ರಜ್ಞರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.

ಮೊದಲು ಕನ್ನಡದಲ್ಲಿ ಸಿದ್ಧವಾಗಲಿರುವ ಈ ವೆಬ್‌ ಒರಿಜಿನಲ್‌ಅನ್ನು ನಂತರದ ದಿನಗಳಲ್ಲಿ ಬೇರೆ ಭಾಷೆಗಳಿಗೆ ಕೂಡ ಡಬ್ ಮಾಡುವ ಆಲೋಚನೆ ಇದೆ ಎನ್ನಲಾಗಿದೆ.

ಸಿನಿಮಾ–ಸ್ಮಾರ್ಟ್‌ಫೋನ್‌:

ಅಧ್ಯಯನವೊಂದರ ಪ್ರಕಾರ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಶೇಕಡ 16ರಷ್ಟು ಸಮಯವನ್ನು ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಕಳೆಯುತ್ತಿದ್ದಾನೆ. ಅಂದರೆ, ಸಿನಿಮಾ ಮಂದಿರಗಳಿಗೆ ಹೋಗುವಷ್ಟು ಸಮಯ ಇಲ್ಲದವರೂ, ಸ್ಮಾರ್ಟ್‌ಫೋನ್‌ ಮೂಲಕ ಮನರಂಜನೆ ಪಡೆಯಲು ಅವಕಾಶವಿದೆ.

‘ಭಾರತದಲ್ಲಿ ಈಗ 30 ಒಟಿಟಿ ವೇದಿಕೆಗಳು ಇವೆ. ದೇಶದ ಒಟ್ಟು 50 ಕೋಟಿ ಜನ ಈ ವೇದಿಕೆಗಳ ಮೂಲಕ ಮನರಂಜನಾ ಕಾರ್ಯಕ್ರಮ ವೀಕ್ಷಿಸುವ ದಿನ ಹತ್ತಿರದಲ್ಲಿದೆ. ಈ ವೇದಿಕೆಗಳ ಇಂದಿನ ವಾರ್ಷಿಕ ಆದಾಯ ₹ 3 ಸಾವಿರ ಕೋಟಿ. ಅದು 2023ರ ಹೊತ್ತಿಗೆ ₹ 13 ಸಾವಿರ ಕೋಟಿಗೆ ಹೆಚ್ಚುವ ಅಂದಾಜು ಇದೆ. ಇಂತಹ ವೇದಿಕೆಗಳನ್ನು ಬಳಕೆ ಮಾಡುತ್ತಿರುವವರಲ್ಲಿ ಶೇಕಡಾ 30ರಷ್ಟು ಜನ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ’ ಎಂಬ ಅಭಿಪ್ರಾಯ ಈಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ವ್ಯಕ್ತವಾಗಿತ್ತು. ನೆಟ್‌ಫ್ಲಿಕ್ಸ್‌ನಂತಹ ದೈತ್ಯ ಕಂಪನಿಗಳು ಕನ್ನಡ ಕಾರ್ಯಕ್ರಮಗಳ ಮೇಲೆ ಹೂಡಿಕೆಗೆ ಆಸಕ್ತಿ ತೋರಿಸಿರುವುದರ ಹಿಂದೆ ಈ ಲೆಕ್ಕಾಚಾರಗಳ ಪ್ರಭಾವವೂ ಇದ್ದಿರಬಹುದೇ?!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು