‘ಕೇಸರಿ’ ಸಿನಿಮಾ ವಿಮರ್ಶೆ: ಸಾರಾಗಡಿ ಯುದ್ಧದ ಭಾವುಕ ಸಿನಿಮಾ

ಸೋಮವಾರ, ಏಪ್ರಿಲ್ 22, 2019
29 °C
ಅಕ್ಷಯ್‌ ಕುಮಾರ್‌–ಪರಿಣೀತಿ ಚೋಪ್ರಾ

‘ಕೇಸರಿ’ ಸಿನಿಮಾ ವಿಮರ್ಶೆ: ಸಾರಾಗಡಿ ಯುದ್ಧದ ಭಾವುಕ ಸಿನಿಮಾ

Published:
Updated:
Prajavani

ಚಿತ್ರ: ಕೇಸರಿ (ಹಿಂದಿ)
ನಿರ್ಮಾಣ: ಕರಣ್ ಜೋಹರ್, ಅರುಣಾ ಭಾಟಿಯಾ, ಹೀರೂ ಯಶ್‌ ಜೋಹರ್, ಅಪೂರ್ವ ಮೆಹ್ತಾ, ಸುನಿರ್ ಕ್ಷೇತ್ರಪಾಲ್
ನಿರ್ದೇಶನ: ಅನುರಾಗ್‌ ಸಿಂಗ್
ತಾರಾಗಣ: ಅಕ್ಷಯ್‌ ಕುಮಾರ್, ಪರಿಣೀತಿ ಚೋಪ್ರಾ, ಜಸ್‌ಪ್ರೀತ್‌ ಸಿಂಗ್‌, ವಿವೇಕ್‌ ಸೈನಿ, ಮೀರ್‌ ಸರ್ವಾರ್

**
1897ರಲ್ಲಿ ನಡೆದ ಸಾರಾಗಡಿ ಯುದ್ಧದ ಐತಿಹಾಸಿಕ ಸಾರವನ್ನು ನಿರ್ದೇಶಕ ಅನುರಾಗ್‌ ಸಿಂಗ್ ದುರ್ಬಲಗೊಳಿಸಿ, ಜನಪ್ರಿಯ ಮಾರುಕಟ್ಟೆ ತಂತ್ರಕ್ಕೆ ಒಗ್ಗಿಸಿರುವ ಸಿನಿಮಾ ‘ಕೇಸರಿ’.

‘ಉರಿ’ ಸಿನಿಮಾದ ನುಗ್ಗಿ ಹೊಡೆಯುವ ಜಾಯಮಾನಕ್ಕೆ ಅನಿರೀಕ್ಷಿತ ಜನಮೆಚ್ಚುಗೆ ವ್ಯಕ್ತವಾಗಿರುವ ಸಂದರ್ಭದಲ್ಲಿ ‘21 ಸಿಖ್ ಸೈನಿಕರು 10 ಸಾವಿರಕ್ಕೂ ಹೆಚ್ಚು ಅಫ್ಗನ್ನರ ಎದುರು ಹೋರಾಡುವ ಅನೂಹ್ಯ ಕಥನ’ ಎಂಬ ಏಕಸಾಲಿನ ಹಿಂಸಾಕರ್ಷಣೆಯನ್ನು ಅನುರಾಗ್‌ ಸಿಂಗ್‌ ಉಜ್ಜಿ ಹೊಳಪು ಮೂಡಿಸಿದ್ದಾರೆ. ಬ್ರಿಟಿಷರಿಗೆ ಸೇರಿದ 36ನೇ ರೆಜಿಮೆಂಟಿನ 21 ಸಿಖ್‌ ಯೋಧರು ಸಾರಾಗಡಿ ಕೋಟೆಯನ್ನು ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕೆ ಇಡುವ ಹೋರಾಟದ ಕಥೆಯನ್ನು ನಿಧಾನಗತಿಯ ಆರಂಭ ಹಾಗೂ ಮೆಲೋಡ್ರಾಮಾ, ಹಿಂಸೆ ತುಂಬಿದ ಉತ್ತರಾರ್ಧದ ಮೂಲಕ ಕಟ್ಟಿಕೊಟ್ಟಿದ್ದಾರೆ.

ಯುದ್ಧಕ್ಕೆ ಒದಗಿಬರುವ ಸಂದರ್ಭವನ್ನು ಗಟ್ಟಿಯಾಗಿ ತೋರಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ. 36ನೇ ರೆಜಿಮೆಂಟಿನ ಬಹುಪಾಲು ಸಿಖ್‌ ಯೋಧರು ಸಮವಸ್ತ್ರವನ್ನೂ ತೊಡದ ಜೋಭದ್ರರು (ಇತಿಹಾಸ ಬಲ್ಲವರು ಹೇಳುವಂತೆ ಇದು ಸಿನಿಮಾಕ್ಕಾಗಿ ಮಾಡಿಕೊಂಡಿರುವ ಮಾರ್ಪಾಟಷ್ಟೆ. ನಿಜಕ್ಕೂ ಆ ಯೋಧರು ಹಾಗೆ ಇರಲಿಲ್ಲ). ಅವರನ್ನೆಲ್ಲ ಶಿಸ್ತಿನ ಪರಿಧಿಗೆ ಎಳೆದು ತರುವುದು ನಾಯಕ ಅಕ್ಷಯ್‌ ಕುಮಾರ್, ಆ ರೆಜಿಮೆಂಟಿನ ಮುಖ್ಯಸ್ಥ. ನಾಯಕನಿಗೆ ನೋಡುಗರಿಂದ ಉಘೇ ಸಿಗುವಂತೆ ಮಾಡಬಹುದಾದ ಸೂತ್ರವೂ ಇದಾಗಿದೆ.

ಯುದ್ಧಭಿತ್ತಿಯ ಹಲವು ಸಿನಿಮಾಗಳನ್ನು ಪ್ರೇಕ್ಷಕರು ಕಳೆದ ಐದಾರು ವರ್ಷಗಳಲ್ಲಿ ನೋಡಿದ್ದಾರೆ. ತೆಲುಗಿನ ‘ಬಾಹುಬಲಿ’ಯಿಂದ ಹಿಡಿದು ಇತ್ತೀಚಿನ ‘ಮಣಿಕರ್ಣಿಕಾ’ವರೆಗೆ (ಹಿಂದಿ) ಕೆಲವು ಮಾದರಿಗಳು ಎದುರಲ್ಲಿವೆ. ಯುದ್ಧ ಸನ್ನಿವೇಶಗಳ ಸೃಷ್ಟಿಯಲ್ಲಿ ‘ಕೇಸರಿ’ ಚಿತ್ರವು ‘ಮಣಿಕರ್ಣಿಕಾ’ಗಿಂತ ದುರ್ಬಲವಾಗಿದೆ. ಬಜೆಟ್‌ ಉಳಿಸುವ ತಂತ್ರಗಾರಿಕೆಯ ಕಾರಣಕ್ಕೆ ‘ಯುದ್ಧ ಕೌಶಲ’ ಅಮುಖ್ಯವಾಗಿದೆ. ಇದರ ಹೊರತಾಗಿಯೂ 21 ಯೋಧರ ಭಾವುಕ ನೆಲೆಗಟ್ಟಿನ ಮೇಲೆಯೇ ಸಿನಿಮಾವನ್ನು ಪರಿಣಾಮಕಾರಿಯಾಗಿಸಲು ನಿರ್ದೇಶಕರು ಶ್ರಮಿಸಿದ್ದಾರೆ. ಅನ್ಶುಲ್ ಚೌಬೆ ಕ್ಯಾಮೆರಾ ಕಾಣ್ಕೆ ಇದರಲ್ಲಿ ತುಂಬಾ ಮುಖ್ಯ. ಆರ್ಕೊ ಪ್ರವೋ ಮುಖರ್ಜಿ ಕಂಠದ ಕೊನೆಯ ಹಾಡಿಗೆ ಕಣ್ಣೀರು ಜಿನುಗಿಸುವಂತೆ ಮಾಡುವ ತಾಕತ್ತಿದೆ.

ಹವಾಲ್ದಾರ್‌ ಇಶಾರ್ ಸಿಂಗ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ್ ವೇಷಭೂಷಣ ಕೃತಕವೆನ್ನಿಸುತ್ತದೆ. ಗಡ್ಡ, ಮೀಸೆಯ ಹಿಂದೆ ಅವರ ಮುಖ ಹುದುಗಿದಂತಾಗಿದೆ. ಶಾರೀರ ಕೂಡ ಪಾತ್ರದ ತೂಕಕ್ಕೆ ಸಾಲದು. ಉಳಿದ ಜಾಟ್‌ ಸಿಖ್ ಪಾತ್ರಧಾರಿಗಳೇ ಹೆಚ್ಚು ಸಹಜವಾಗಿ ನಟಿಸಿದ್ದಾರೆ. ಅವರ ವೇಷಭೂಷಣ, ಗಡ್ಡ–ಕೂದಲು ಸಹ ಸಹಜವೆನ್ನಿಸುತ್ತದೆ. ಪರಿಣೀತಿ ಪಾತ್ರವು ಪೋಷಣೆಯಿಲ್ಲದೆ ಸೊರಗಿದೆ.

ತಲೆಮೇಲೆ ಕೇಸರಿ ಪಗಡಿ ಇಟ್ಟುಕೊಂಡು, ಆ ಬಣ್ಣವು ಧೈರ್ಯದ ಸಂಕೇತ ಎಂದು ನಾಯಕ ವೀರಾವೇಶದಿಂದ ಹೇಳುವ ಒಂದು ಸನ್ನಿವೇಶವಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಈ ಬಣ್ಣ ಒಂದು ಜನಪ್ರಿಯ ಸಂಕೇತವೂ ಹೌದು. ಅದನ್ನೇ ಮಾರುಕಟ್ಟೆಯಾಗಿಸಿಕೊಳ್ಳಲು ಚಿತ್ರಕ್ಕೆ ಆ ಶೀರ್ಷಿಕೆ ಇಟ್ಟಿರಲೂಬಹುದು. ಕರಣ್ ಜೋಹರ್ ಮಾರುಕಟ್ಟೆ ತಂತ್ರಕ್ಕಿದು ನಿದರ್ಶನ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !