ಕೆಜಿಎಫ್, ಕಾಂತಾರ ನಿರ್ಮಾಪಕರಿಂದ ₹ 3,000 ಕೋಟಿ ಹೂಡಿಕೆ

ಮುಂಬೈ: ಕೆಜಿಎಫ್, ಕಾಂತಾರದಂತಹ ಪ್ಯಾನ್ ಇಂಡಿಯಾ ಸಿನಿಮಾ ನೀಡಿದ ಹೊಂಬಾಳೆ ಫಿಲಂಸ್ ಚಿತ್ರೋದ್ಯಮದಲ್ಲಿ ಮುಂದಿನ 5 ವರ್ಷಗಳಲ್ಲಿ ₹ 3,000 ಕೋಟಿ ಹೂಡಿಕೆ ಗುರಿ ಹೊಂದಿದೆ.
ತೆಲುಗಿನಲ್ಲಿ ಸಲಾರ್, ಮಲೆಯಾಳದಲ್ಲಿ ಧೂಮಂ, ತಮಿಳಿನಲ್ಲಿ ಕೀರ್ತಿ ಸುರೇಶ್ ಅವರ ರಘುರಥ ಸಿನಿಮಾ ಘೋಷಿಸಿರುವ ಹೊಂಬಾಳೆ, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ಚಿತ್ರ ನಿರ್ಮಿಸುವ ಗುರಿ ಹೊಂದಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
‘ಮನರಂಜನೆ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಮುಂದಿನ 5 ವರ್ಷಗಳಲ್ಲಿ ₹ 3,000 ಕೋಟಿ ಹೂಡಿಕೆ ಗುರಿ ಹೊಂದಿದ್ದೇವೆ’ ಎಂದು ವಿಜಯ್ ಪಿಟಿಐಗೆ ಹೇಳಿದ್ದಾರೆ.
‘ಎಲ್ಲ ಬಗೆಯ ಸಿನಿಮಾ ಗುರಿ ಇದೆ. ಪ್ರತಿ ವರ್ಷ 5–6 ಸಿನಿಮಾದೊಂದಿಗೆ ಒಂದು ದೊಡ್ಡ ಸಿನಿಮಾ ಗುರಿ ಹೊಂದಿದ್ದೇವೆ. ಸದ್ಯಕ್ಕೆ ದಕ್ಷಿಣ ಭಾರತದ ಭಾಷೆಗಳನ್ನು ಗುರಿಯಾಗಿಸಿಕೊಂಡಿದ್ದೇವೆ’ ಎಂದು ವಿಜಯ್ ತಿಳಿಸಿದ್ದಾರೆ.
ಸಾಂಸ್ಕೃತಿಕವಾಗಿ ನಾಡು–ನುಡಿಯನ್ನು ಪರಿಚಯಿಸುವ ಕಥೆಗಳೊಂದಿಗೆ ಜಾಗತಿಕ ಪ್ರೇಕ್ಷಕರನ್ನು ತಲುಪುವ ಗುರಿ ಇದೆ. ಯುವ ಜನತೆಯನ್ನು ಆಕರ್ಷಿಸುವ ಕಥೆಗಳನ್ನು ನೀಡುತ್ತೇವೆ. ಭಾರತೀಯ ಆರ್ಥಿಕತೆಗೆ ಕೊಡುಗೆ ನೀಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್‌ನತ್ತ...
ಬೆಂಗಳೂರು ಮೂಲದ ನಿರ್ಮಾಣ ಸಂಸ್ಥೆ ಬಾಲಿವುಡ್ ಬರಹಗಾರರೊಂದಿಗೆ ಕೈಜೋಡಿಸಿದೆ. ಬಾಲಿವುಡ್ ಇಬ್ಬರು ಪ್ರಮುಖ ಬರಹಗಾರರೊಂದಿಗೆ ಕೈ ಜೋಡಿಸಿದ್ದೇವೆ ಎಂದು ಹೊಂಬಾಳೆಯ ಚೆಲುವೆ ಗೌಡ ಹೇಳಿದ್ದಾರೆ.
‘ಕೆಲ ಹಿಂದಿ ಬರಹಗಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಒಮ್ಮೆ ಕಥೆ ಸಿದ್ಧಗೊಂಡ ಬಳಿಕ ನಿರ್ದೇಶಕರು, ನಟರನ್ನು ತೀರ್ಮಾನಿಸುತ್ತೇವೆ. ಕಥೆಯನ್ನು ಸೃಷ್ಟಿಸುವ ಬರಹಗಾರರತ್ತ ನಾವು ಗಮನ ಹರಿಸುತ್ತೇವೆ. ಏಕೆಂದರೆ ಒಂದು ಸಿನಿಮಾ ಪ್ರಯಾಣ ಆರಂಭವಾಗುವುದೇ ಅಲ್ಲಿಂದ’ ಎಂದು ಅವರು ತಿಳಿಸಿದ್ದಾರೆ.
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸಿರುವ ಸಲಾರ್ ಮುಂದಿನ ಸೆಪ್ಟೆಂಬರ್‌ಗೆ ತೆರೆಗೆ ಬರಲಿದೆ. ಪವನ್ ಕುಮಾರ್–ಫಹಾದ್ ಜೋಡಿಯ ಧೂಮಂ ಚಿತ್ರೀಕರಣದಲ್ಲಿದೆ. ಶ್ರೀಮುರಳಿ ‘ಭಗೀರ’ ಕನ್ನಡದಲ್ಲಿ ಹೊಂಬಾಳೆ ನಿರೀಕ್ಷೆ ಇಟ್ಟಿರುವ ದೊಡ್ಡ ಸಿನಿಮಾ.ಯುವ ರಾಜ್‌ಕುಮಾರ್–ಸಂತೋಷ್ ಆನಂದ್‌ರಾಮ್ ಜೋಡಿಯೊಂದಿಗೆ ಸಿನಿಮಾ ಸಿದ್ಧವಾಗುತ್ತಿದೆ. ಡಾಲಿ ಧನಂಜಯ್ ಜೊತೆ ಸರಣಿ ಸಿನಿಮಾಗಳನ್ನು ನಿರ್ಮಿಸುತ್ತಿದೆ.
ಮುಂದಿನ ವರ್ಷಕ್ಕೆ 4–5 ಸಿನಿಮಾಗಳಿವೆ. ಮುಂದಿನ ಎರಡು ವರ್ಷದಲ್ಲಿ 12–14 ಸಿನಿಮಾಗಳ ನಿರ್ಮಾಣವಾಗಲಿದೆ ಎಂದು ವಿಜಯ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.