ಶುಕ್ರವಾರ, 26 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಂದರ್ಶನ | 'ಕಾಂತಾರ' ಮನಸಿಗೆ ಹತ್ತಿರದ ಸಿನಿಮಾ: ನಟಿ ರುಕ್ಮಿಣಿ ವಸಂತ್‌

Published : 25 ಸೆಪ್ಟೆಂಬರ್ 2025, 23:30 IST
Last Updated : 25 ಸೆಪ್ಟೆಂಬರ್ 2025, 23:30 IST
ಫಾಲೋ ಮಾಡಿ
Comments
‘ಕಾಂತಾರ’ದ ಕನಕವತಿಯಾಗಿ ನಟಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಪಾತ್ರ ಹಾಗೂ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ. 
ಪ್ರ

ಚಿತ್ರದಲ್ಲಿ ನಿಮ್ಮ ಪಾತ್ರ... 

‘ಕಾಂತಾರ–ಅಧ್ಯಾಯ 1’ ಮನಸಿಗೆ ತುಂಬ ಹತ್ತಿರವಾದ ಸಿನಿಮಾ. ಕನಕವತಿಯಾಗಿ ರಿಷಬ್‌ ಅವರ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಪಾತ್ರ ಕುರಿತು ಈಗಲೇ ಹೆಚ್ಚು ವಿವರ ನೀಡಲು ಸಾಧ್ಯವಿಲ್ಲ. ಇಂಥ ಸಿನಿಮಾದಲ್ಲಿ ನಟಿಸುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. 

ಪ್ರ

ಕಾಂತಾರಕ್ಕೆ ಆಯ್ಕೆಯಾದ ಕ್ಷಣ ಹೇಗಿತ್ತು?


ಸಪ್ತಸಾಗರದಾಚೆ ಎಲ್ಲೋ’ ಚಿತ್ರ ನೋಡಿದ ರಿಷಬ್‌ ಅವರು ನನ್ನ ನಟನೆ ಮೆಚ್ಚಿಕೊಂಡರು. ಅದಾದ ಬಳಿಕ ‘ಕಾಂತಾರ’ದ ಪಯಣ ಪ್ರಾರಂಭವಾಯಿತು. ಇದರಲ್ಲಿ ಅವಕಾಶ ಸಿಕ್ಕಿದ್ದು ನನಗೆ ನಂಬಲು ಸಾಧ್ಯವಾಗದಂಥ ಕ್ಷಣ. ನನ್ನ ವೃತ್ತಿಯ ಪ್ರಾರಂಭದಲ್ಲಿಯೇ ಹೊಂಬಾಳೆ ಸಂಸ್ಥೆಯು ಎರಡು ಸಲ ಅವಕಾಶ ನೀಡಿದೆ. ನಿರ್ದೇಶಕರಾಗಿ ರಿಷಬ್‌ ಕೂಡ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಗುಣಮಟ್ಟದ ವಿಚಾರದಲ್ಲಿ ಎಲ್ಲಿಯೂ ರಾಜಿಯಾಗಿಲ್ಲ. ಸಣ್ಣ ಸಣ್ಣ ವಿವರಗಳನ್ನು ಬಿಟ್ಟಿಲ್ಲ. 

ಪ್ರ

ವಿಭಿನ್ನ ಜಗತ್ತಿನಲ್ಲಿನ ಚಿತ್ರೀಕರಣ ಅನುಭವ ಹೇಗಿತ್ತು?

ಕುಂದಾಪುರ ಬಳಿಯ ಕಾಡಿನಂಚಿನಲ್ಲಿ ಚಿತ್ರೀಕರಣ ನಡೆದಿದ್ದು. ಸರಿಯಾಗಿ ನೆಟ್‌ವರ್ಕ್‌ ಇರಲಿಲ್ಲ. ಸಾಕಷ್ಟು ಸವಾಲುಗಳಿತ್ತು. ರಿಷಬ್‌ ಸಣ್ಣ ವಿಚಾರಗಳಲ್ಲಿಯೂ ರಾಜಿಯಾಗುತ್ತಿರಲಿಲ್ಲ. ಆದರೆ ಇಡೀ ತಂಡ ಪ್ರೋತ್ಸಾಹ ನೀಡಿತು. ಹೀಗಾಗಿ ಚಿತ್ರೀಕರಣ ಆಯಾಸ ಅನ್ನಿಸಲಿಲ್ಲ. ಈ ಸಿನಿಮಾದೊಂದಿಗೆ ನಟಿಯಾಗಿ ಮಾತ್ರವಲ್ಲ, ಉತ್ತಮ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ ಎಂದರೆ ತಪ್ಪಾಗಲಾರದು. ಅಷ್ಟು ಅವಿಸ್ಮರಣೀಯ ನೆನಪುಗಳನ್ನು ಈ ಚಿತ್ರ ನೀಡಿದೆ. 

ಪ್ರ

ನಿಮ್ಮ ನಟನೆಯ ನಂಟು ಶುರುವಾಗಿದ್ದು ಹೇಗೆ?

ನಮ್ಮದು ಕಲಾವಿದರ ಕುಟುಂಬ. ಅಜ್ಜಿ, ಅಮ್ಮ ಭರತನಾಟ್ಯ ಕಲಾವಿದೆಯರು. ಹೀಗಾಗಿ ನನಗೂ ಬಾಲ್ಯದಿಂದಲೇ ಭರತನಾಟ್ಯದ ನಂಟು. ಬ್ಯಾಲೆ ಡಾನ್ಸರ್‌ ಆಗಿದ್ದೆ. ಶಾಲಾ ದಿನಗಳಲ್ಲಿ ರಂಗಭೂಮಿ ನಟನೆ ಪ್ರಾರಂಭಿಸಿದೆ. ಓದಿಗಿಂತ ನಟನೆಯಲ್ಲೇ ಆಸಕ್ತಿ, ಖುಷಿ ಹೆಚ್ಚಿತ್ತು. ಆದರೆ ಅಮ್ಮ ಪಿಯುಸಿ ಮುಗಿಯುವ ತನಕ ನಟನೆ ಬೇಡ ಎಂದಿದ್ದರು. ಪಿಯುಸಿ ಮುಗಿಸಿ ರಂಗ ತರಬೇತಿಗೆ ಲಂಡನ್‌ನ ‘ರಾಯಲ್‌ ಅಕಾಡೆಮಿ ಆಫ್‌ ಆರ್ಟ್ಸ್’ ಸೇರಿಕೊಂಡೆ. ನಟನೆಯಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದೆ.

ಪ್ರ

ಈತನಕ ಸಿನಿಮಾ ಪಯಣ ಹೇಗಿತ್ತು?


‘ಸಪ್ತ ಸಾಗರದಾಚೆ ಎಲ್ಲೋ’ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾ. ಚಿತ್ರದಲ್ಲಿನ ಪುಟ್ಟಿಯಾಗಿ ಸಾಕಷ್ಟು ಜನ ಗುರುತಿಸಿದರು. ಅದರಿಂದಲೇ ಒಂದಷ್ಟು ಉತ್ತಮ ಅವಕಾಶಗಳು ಲಭಿಸಿದವು. ಲಂಡನ್‌ನಿಂದ ಬಂದ ಬಳಿಕ ‘ಆಡಿಷನ್‌’ ನೀಡಲು ಆರಂಭಿಸಿದೆ. ‘ಬೀರ್‌ಬಲ್‌’ ಸಿನಿಮಾಕ್ಕೆ ಆಯ್ಕೆಯಾದೆ. 2019ರಲ್ಲಿ ಸಿನಿಮಾ ತೆರೆಗೆ ಬಂತು. ಅಷ್ಟು ಹೊತ್ತಿಗೆ ‘ಸಪ್ತ ಸಾಗರ’ ಆಡಿಷನ್‌ ಕರೆದಿದ್ದರು. ಅಲ್ಲಿಂದ ನಂತರದ್ದು ಒಂದು ರೀತಿ ಇತಿಹಾಸ. ಗಣೇಶ್‌ ಅವರ ಜೊತೆಗಿನ ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಕಾಣಿಸಿಕೊಂಡೆ. ಶಿವರಾಜ್‌ಕುಮಾರ್‌ ಜೊತೆಗೆ ‘ಭೈರತಿ ರಣಗಲ್‌’ ಸಿನಿಮಾದಲ್ಲಿ ನಟಿಸಿದೆ. ವಿಜಯ್‌ ಸೇತುಪತಿ ಜೊತೆ ‘ಏಸ್‌’ ಚಿತ್ರದಲ್ಲಿ ಕಾಣಿಸಿಕೊಂಡೆ. ತೆಲುಗಿನಲ್ಲೊಂದು ಚಿತ್ರ ಮಾಡಿದೆ. ಶಿವಕಾರ್ತಿಕೇಯನ್‌ ಜತೆಗಿನ ‘ಮದರಾಸಿ’ ಚಿತ್ರ ಇತ್ತೀಚೆಗಷ್ಟೆ ತೆರೆ ಕಂಡಿದೆ.

ಪ್ರ

‘ಕಾಂತಾರ’, ‘ಟಾಕ್ಸಿಕ್‌’ ಹೀಗೆ ದೊಡ್ಡ ಸಿನಿಮಾಗಳೇ ನಿಮ್ಮ ಬಳಿ ಇದೆಯಲ್ಲ?

ನಟನೆಯಲ್ಲಿ ದೊಡ್ಡ, ಚಿಕ್ಕ ಸಿನಿಮಾಗಳೆಂದಿಲ್ಲ. ಎಲ್ಲವೂ ಸಿನಿಮಾಗಳೇ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಶ್ರಮವಿರುತ್ತದೆ. ಅವಕಾಶಗಳು ತಾನಾಗಿಯೇ ಬಂದಿರುವಂತದ್ದು. ಒಪ್ಪಿಕೊಂಡು ಮಾಡುತ್ತಿರುವೆ. ಪ್ರಾರಂಭದಲ್ಲಿಯೇ ಉತ್ತಮ ಸಿನಿಮಾಗಳು, ಒಳ್ಳೆ ತಂಡಗಳು ಸಿಗುತ್ತಿವೆ ಎಂಬ ಖುಷಿಯಿದೆ.


ಪ್ರ

ನಿಮ್ಮ ಮುಂದಿನ ಸಿನಿಮಾಗಳು...


‘ತೆಲುಗು ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದೆ. ಬೇರೆ ಒಂದೆರಡು ಕಥೆಗಳನ್ನು ಕೇಳಿರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT