ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಬರಹ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಶ್ರುತಿ ಹರಿಹರನ್ ಜೊತೆ ‘ಪ್ರಜಾವಾಣಿ’ ಪಟ್ಟಾಂಗ
Last Updated 3 ನವೆಂಬರ್ 2019, 9:02 IST
ಅಕ್ಷರ ಗಾತ್ರ

ಜನಪ್ರಿಯ ಸಿನಿಮಾ ಮಂದಿಯ ಮನೆಗಳಿಗೋ ಕಚೇರಿಗಳಿಗೋ ಹೋದರೆ ಮೊದಲ ನೋಟಕ್ಕೆ ಗಮನಸೆಳೆಯುವುದು ಅವರ ಅಭಿನಯದ ಸಿನಿಮಾದ ಚಿತ್ರಗಳು ಹಾಗೂ ನೆನಪಿನ ಕಾಣಿಕೆಗಳು. ಆದರೆ, ಶ್ರುತಿ ಹರಿಹರನ್ ಅವರ ಮನೆಗೆ ಹೋದಾಗ ಕಾಣಿಸಿದ್ದು ಸಿನಿಮಾ ಪೋಸ್ಟರ್‌ಗಳು!

ಅಲ್ಲಿದ್ದುದು ಶ್ರುತಿ ಅವರ ಅಭಿಯನದ ಚಿತ್ರಗಳ ಪೋಸ್ಟರ್‌ಗಳಲ್ಲ (‘ಲೂಸಿಯಾ’ ಹೊರತುಪಡಿಸಿದಂತೆ). ವಿಶ್ವದ ಅತ್ಯುತ್ತಮ ಸಿನಿಮಾಗಳ ಚಿತ್ರಗಳು. ವಿಶ್ವಸಿನಿಮಾದ ನಾಯಕ ನಾಯಕಿಯರ ಜೊತೆಗೆ ಕನ್ನಡದ ‘ತಿಥಿ’ ಚಿತ್ರದ ಸೆಂಚುರಿಗೌಡ, ಗಡ್ಡಪ್ಪನವರ ಅಬೋಧ ನಗು!

‘ಇವೆಲ್ಲ ನನ್ನ ಮೆಚ್ಚಿನ ಸಿನಿಮಾದ ಪೋಸ್ಟರ್‌ಗಳು’ ಎಂದು ಮಾತು ಆರಂಭಿಸಿದ ಅವರು – ‘ನಾನು ಸಿನಿಮಾ ಮಾಡಿದರೆ ಆ ತರಹದ್ದು ಮಾಡಬೇಕು’ ಎಂದು ‘ಸೆಪರೇಷನ್‌’ ಚಿತ್ರದ ಪೋಸ್ಟರ್‌ ತೋರಿಸಿದರು. ಆ ಕ್ಷಣದಲ್ಲಿ, ಮಾತಿನಲ್ಲಿನ ಪುಲಕ ಕಣ್ಣುಗಳಲ್ಲೂ ಬೆಳಕಾದಂತಿತ್ತು.

ಪೋಸ್ಟರ್‌ಗಳ ಜೊತೆಯಲ್ಲಿಯೇ ಒಂದು ಮಧ್ಯಮಗಾತ್ರದ ಪೋಸ್ಟ್‌ ಬಾಕ್ಸ್‌ ಡಬ್ಬಿ! ಅದರ ಮೇಲೆ ‘ಕ್ಯಾಷ್‌’ ಎನ್ನುವ ಬರಹ. ಸಿನಿಮಾಗಳ ಜೊತೆಗೆ ಗಲ್ಲಾಪೆಟ್ಟಿಗೆ ಕೂಡ ಇದೆಯಲ್ಲ ಎಂದುಕೊಳ್ಳುತ್ತಿರುವಾಗ್ಗೆ, ಶ್ರುತಿ ಹರಿಹರನ್ ‘ಡಬ್ಬಿಯ ಕಥೆ’ ಹೇಳಿದರು.

‘‘ಓಹ್‌, ಅದು ಕದ್ದುಕೊಂಡು ಬಂದದ್ದು. ಫ್ರೆಂಡ್ಸ್‌ ಜೊತೆ ಹೊರಗೆಲ್ಲೋ ಹೋಗಿದ್ದಾಗ ರೆಸ್ಟೋರೆಂಟ್‌ನವರು ಇದರಲ್ಲಿ ಈ ಬಾಕ್ಸ್‌ನಲ್ಲಿ ಬಿಲ್‌ ಕೊಟ್ಟಿದ್ದರು. ನನಗೆ ತುಂಬಾ ಇಷ್ಟವಾಯಿತು. ಇದನ್ನು ತೆಗೆದುಕೊಂಡು ಹೋಗಬಹುದಾ ಎಂದೆ. ‘ತಗೊಂಡು ಹೋಗಿ. ಆದರೆ ಯಾರಿಗೂ ಹೇಳ್ಬೇಡಿ’ ಎಂದರು. ಒಂದು ರೀತಿ ಕದ್ದುಕೊಂಡು ಬಂದಂತೆಯೇ ಈ ಡಬ್ಬಾ ತೆಗೆದುಕೊಂಡು ಬಂದೆ’’ ಎಂದು ಶ್ರುತಿ ಹೇಳಿದರು.

‘ನಿಮಗೆ ಬೋರಾಗುವಂತೆ ನಾನು ಡಬ್ಬಾ ಕಥೆ ಹೇಳುತ್ತಿಲ್ಲವಷ್ಟೇ’ ಎಂದವರು, ಏನನ್ನೋ ನೆನಪಿಸಿಕೊಂಡವರಂತೆ – ‘ನೀರಾದರೂ ಕೊಡಲಿಲ್ಲ ನಾನು’ ಎಂದು ಪೇಚಾಡಿಕೊಳ್ಳುತ್ತ ಒಳಗೆ ಹೋಗಿ ನೀರಿನ ಸೀಸೆ ತೆಗೆದುಕೊಂಡು ಬಂದು ಎದುರಿಗಿಟ್ಟರು.

ತೆರೆಗೆ ಸಿದ್ಧವಾಗಿರುವ ‘ನಾತಿಚರಾಮಿ’ ಚಿತ್ರವನ್ನು ನೆನಪಿಸಿಕೊಂಡರು. ‘‘ಆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ‘ಬ್ಯೂಟಿಫುಲ್ ಮನಸುಗಳು’, ‘ಉರ್ವಿ’ ರೀತಿಯಂತೆಯೇ ‘ನಾತಿಚರಾಮಿ’ ಕೂಡ ಅಸಾಂಪ್ರದಾಯಿಕ ರೀತಿಯ ಸಿನಿಮಾ. ಅದು ನನ್ನ ಪಾಲಿಗೆ ಒಳ್ಳೆಯ ಹುಡುಕಾಟ. ಕಥೆ ವಿಷಯದಲ್ಲಿ, ನಾವು ಏನನ್ನು ಹೇಳಲಿಕ್ಕೆ ಹೊರಟಿದ್ದೇವೆ ಎನ್ನುವ ಬಗೆಯೇ ಕುತೂಹಲಕರವಾಗಿದೆ’’ ಎಂದರು.

ಬಾಲ್ಯದ ಓಣಿಯಿಂದ ಬದುಕಿನ ಹೆದ್ದಾರಿಗೆ...

ತಮ್ಮ ಅಭಿನಯದ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದ ಶ್ರುತಿ ಹರಿಹರನ್‌ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತು ಬದಲಿಸಿದಾಗ ಅರೆ ಕ್ಷಣ ಮೌನವಾದರು. ನಟಿಯಾಗುವ ಮೊದಲಿನ ತಮ್ಮ ಬದುಕನ್ನು ಕೊಂಚ ನಿರ್ಲಿಪ್ತವಾಗಿ ನೆನಪಿಸಿಕೊಳ್ಳತೊಡಗಿದರು.

‘‘ಬೆಂಗಳೂರಿಗೆ ಬರುವ ಮುನ್ನ ಅಪ್ಪ–ಅಮ್ಮ ಸಲಾಲದಲ್ಲಿದ್ದರು. ನಾನು 7 ವರ್ಷಗಳ ಕಾಲ ಅಲ್ಲಿದ್ದೆ. 1996ರಲ್ಲಿ ನಮ್ಮ ಕುಟುಂಬ ಬೆಂಗಳೂರಿಗೆ ಬಂತು – ಅಮ್ಮ, ಅಪ್ಪ, ನಾನು ಮತ್ತು ನನ್ನ ತಮ್ಮ. ನಾವು ಬೆಳೆದಿದ್ದೆಲ್ಲ ಇಂದಿರಾನಗರದಲ್ಲಿ. ಕಲಿತಿದ್ದು ‘ಶಿಶುಗೃಹ’ ಎನ್ನುವ ಶಾಲೆಯಲ್ಲಿ. ಆ ಶಾಲೆ ಬದುಕಿನ ಬಗ್ಗೆ ಅನೇಕ ಸಂಗತಿಗಳನ್ನು ನನಗೆ ತಿಳಿಸಿಕೊಟ್ಟಿತು. ಓದಿನ ಜೊತೆಗೆ ನೃತ್ಯ, ರಂಗಭೂಮಿ ಚಟುವಟಿಕೆಗಳಿಗೆ ಶಾಲೆಯಲ್ಲಿ ಹೆಚ್ಚಿನ ಉತ್ತೇಜನ ಇತ್ತು. ಅನೇಕ ಸ್ಪರ್ಧೆಗಳಿಗೆ ಹೋಗುತ್ತಿದೆ. ಮನೆಯಲ್ಲೂ ಬೆಂಬಲವಿತ್ತು. ನೃತ್ಯ, ನಟನೆಯೆಂದರೆ ನನಗೆ ತುಂಬಾ ಇಷ್ಟ. ಎಂಟನೇ ತರಗತಿಯಲ್ಲಿದ್ದಾಗ ಒಂದು ರಂಗೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದೆ. ಬಹುಶಃ ನಟನೆಯ ಬಗ್ಗೆ ಹೆಚ್ಚು ಪ್ರೀತಿ ಮೊಳೆತದ್ದು ಆಗಲೇ ಇರಬೇಕು. 9ನೇ ತರಗತಿಯಲ್ಲೂ ಮತ್ತೆ ಅತ್ಯುತ್ತಮ ನಟಿ ಪ್ರಶಸ್ತಿ! ಹತ್ತನೇ ತರಗತಿಯಲ್ಲಿ ಬೋರ್ಡ್‌ ಎಕ್ಸಾಂ ಆದುದರಿಂದ ನಾಟಕ ಚಟುವಟಿಕೆಗಳಿಗೆ ಅವಕಾಶವಿರಲಿಲ್ಲ.

ಹತ್ತನೇ ತರಗತಿಯಲ್ಲಿ ಶಾಲೆಗೆ ಮೊದಲಿಗಳಾಗಿದ್ದೆ. ಅದಾದ ಮೇಲೆ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಗೆ ಸೇರಿಕೊಂಡೆ. ಅಲ್ಲಿಯೂ ಅಂತರಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇದ್ದೇ ಇತ್ತು. ಕ್ರೈಸ್ಟ್‌ ಕಾಲೇಜ್‌ನಲ್ಲಿ ಶೇ 98ರಷ್ಟು ಹಾಜರಾತಿ ಕಡ್ಡಾಯ. ಆದರೆ, ನನಗೆ ಹಾಜರಾತಿ ಕೊಡುತ್ತಿದ್ದರು. ನನ್ನ ಬಗ್ಗೆ ಉಪನ್ಯಾಸಕರಿಗೆ ಅದೇನೋ ಪ್ರೀತಿ–ವಿಶ್ವಾಸ.

ಪಿಯುಸಿ ನಂತರ ಬಿಬಿಎಂ ತಗೊಂಡೆ. ಮೆಡಿಸಿನ್‌ಗೆ ಹೋಗಬೇಕು ಎನ್ನುವ ಆಸೆಯಿತ್ತು. ಆದರೆ, ಸಿಇಟಿ ಎಕ್ಸಾಂಗೆ ಸ್ವಲ್ಪ ಮುಂಚೆಯಷ್ಟೇ ನಮ್ಮ ತಂದೆ ತೀರಿಕೊಂಡರು. ಹಾಗಾಗಿ ಆ ಸಮಯದಲ್ಲಿ ಮಾನಸಿಕ, ಭಾವನಾತ್ಮಕ ಒತ್ತಡಕ್ಕೆ ಒಳಗಾಗಿದ್ದೆ. ಫ್ರೀ ಸೀಟ್‌ ಸಿಗುವುದಿಲ್ಲ ಎನ್ನುವುದು ಖಚಿತವಾದ್ದರಿಂದ ಬಿಬಿಎಂ ಆರಿಸಿಕೊಂಡೆ. ಅಮ್ಮ ಕಷ್ಟ ಪಟ್ಟು ಶುಲ್ಕ ಕಟ್ಟಿದರು. ಆ ಮೂರು ವರ್ಷ ಕೂಡ ಡಾನ್ಸ್‌ ಡಾನ್ಸ್‌ ಡಾನ್ಸ್‌. ಆಗಷ್ಟೇ ಕಾರ್ಪೊರೆಟ್‌ ಇವೆಂಟ್‌ಗಳ ಅಬ್ಬರ ಬೆಂಗಳೂರಲ್ಲಿ ಹೆಚ್ಚಾಗಿತ್ತು. ಈ ಕಾರ್ಯಕ್ರಮಗಳಲ್ಲಿನ ನೃತ್ಯ ಪ್ರದರ್ಶನಗಳಲ್ಲಿ ಭಾಗಿಯಾಗುತ್ತಿದ್ದೆ. ಒಳ್ಳೆಯ ಪಾಕೆಟ್‌ ಮನಿ ದೊರೆಯುತ್ತಿತ್ತು.

ಬಿಬಿಎಂ ಮೂರನೇ ವರ್ಷದಲ್ಲಿ ನಾನು ಮೊದಲ ಬಾರಿಗೆ ಫಿಲ್ಮ್‌ ಸೆಟ್ಟೊಂದನ್ನು ನೋಡಿದೆ. ಗಣೇಶ್‌–ರೇಖಾ ಅಭಿನಯದ ‘ಚೆಲ್ಲಾಟ’ ಸಿನಿಮಾದ ಸೆಟ್ಟದು. ‘ವಾಹ್‌! ಹೊಸಲೋಕ’ ಅನ್ನಿಸಿತು. ಆಗ ನನ್ನೊಳಗೆ ನಟಿಯಾಗುವ ಆಸೆಯೇನೂ ಇರಲಿಲ್ಲ. ಇದ್ದುದು ಒಳ್ಳೆಯ ಡಾನ್ಸರ್‌ ಆಗಬೇಕೆನ್ನುವ ಆಸೆಯಷ್ಟೇ. ವೃತ್ತಿಪರವಾಗಿ ಡಾನ್ಸ್‌ ಕಲಿಯುವ ಆಸೆಯಿತ್ತು. ಈ ಹುಡುಕಾಟದಲ್ಲಿಯೇ ‘ಅಟ್ಟಕ್ಕಳರಿ ಇನ್‌ಸ್ಟಿಟ್ಯೂಟ್‌ ಆಫ್‌ ಪರ್ಫಾರ್ಮೆನ್ಸ್‌’ನಲ್ಲಿ ಡಿಪ್ಲೊಮ ಕಲಿಯಲು ಸೇರಿಕೊಂಡೆ. ಶುಲ್ಕ ದುಬಾರಿಯಾಗಿತ್ತು. ಹಾಗಾಗಿ ವೃತ್ತಿಪರ ಪ್ರದರ್ಶನಗಳಲ್ಲೂ ತೊಡಗಿಕೊಂಡೆ. ಆದರೆ, ಮನಸ್ಸಿನಲ್ಲಿ ಏನೋ ಒಂಥರಾ ಕಸಿವಿಸಿ. ಅಪ್ಪ ಹೋದಮೇಲೆ ‘ಚೆನ್ನಾಗಿ ಓದುವ ಹುಡುಗಿ ಡಾನ್ಸ್‌ಗೆ ಏಕೆ ಹೋಗಬೇಕು’ ಎನ್ನುವ ಮಾತು ನಮ್ಮ ಕುಟುಂಬ ವಲಯದಲ್ಲಿ ಕೇಳಿಬರುತ್ತಿತ್ತು. ಈ ಮಾತು ಕೇಳಿದಾಗಲೆಲ್ಲ ಅಮ್ಮನಿಗೆ ಒತ್ತಡ. ಸಿಂಗಲ್‌ ಪೇರೆಂಟ್‌ ಆಗಿ ಅಮ್ಮನಿಗೆ ನನ್ನ ಬಗ್ಗೆ ಸಹಜವಾಗಿಯೇ ಹೆಚ್ಚು ಕಾಳಜಿಯಿತ್ತು. ಕಾರ್ಪೊರೆಟ್‌ ಇವೆಂಟ್‌ಗಳು ನಡೆಯುತ್ತಿದ್ದುದು ಸಂಜೆಗಳಲ್ಲಿ. ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಒಬ್ಬಳೇ ಸ್ಕೂಟರ್‌ನಲ್ಲಿ ಬರುತ್ತಿದ್ದುದು ಅಮ್ಮನ ಆತಂಕಕ್ಕೆ ಕಾರಣವಾಗಿತ್ತು. ಇದೇ ವಿಷಯಕ್ಕೆ ನಮ್ಮಿಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಆ ಸಮಯದಲ್ಲಿ ಅಮ್ಮನೊಂದಿಗೆ ಜಗಳವಾಡಿದ್ದೇನೆ, ಅವರ ಮನಸ್ಸಿಗೆ ಬೇಸರ ಉಂಟು ಮಾಡಿದ್ದೇನೆ. ಆದರೆ, ನಾನು ನನ್ನ ನಿರ್ಣಯಕ್ಕೆ ಅಂಟಿಕೊಂಡಿದ್ದೆ. ನಾನು ಮಾಡುತ್ತಿರುವುದು ಸರಿ ಎನ್ನುವ ನಂಬಿಕೆ ನನಗಿತ್ತು. ನಾನೆಲ್ಲೂ ದಾರಿ ತಪ್ಪಲಿಲ್ಲ. ಕಲಾವಿದೆಯಾಗಿ ನನ್ನ ದಾರಿ ಹುಡುಕಿಕೊಂಡು ಹೊರಟೆ. ಕ್ರಮೇಣ ನನ್ನ ದಾರಿ ಅಮ್ಮನಿಗೂ ಅರ್ಥವಾಯಿತು.

ನೃತ್ಯದ ಹುಡುಕಾಟದ ದಿನಗಳಲ್ಲೇ ‘ಸಂಸ್ಕೃತಿ’ ಎನ್ನುವ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯೊಂದನ್ನು ಆರಂಭಿಸಿದೆ. ಮಾರ್ವಾಡಿ ಕುಟುಂಬಗಳ ಕಾರ್ಯಕ್ರಮಗಳಲ್ಲಿ ಅವಕಾಶಗಳು ದೊರೆಯುತ್ತಿದ್ದವು. ಆ ಸಮಯದಲ್ಲಿ ಕಾರ್ಯಕ್ರಮಗಳಿಗೆಂದು ಬೆಂಗಳೂರು ಸುತ್ತಿದ್ದು, ಮನೆಗಳಿಗೆ ಹೋಗಿ ನೃತ್ಯ ಹೇಳಿಕೊಟ್ಟಿದ್ದು – ಅವೆಲ್ಲ ಗಟ್ಟಿಯಾದ ಅನುಭವಕ್ಕೆ ಕಾರಣವಾದವು. ಆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಸನ್ನಿವೇಶಗಳನ್ನು ಎದುರಿಸಿದೆ. ನಮ್ಮ ಸಮಾಜ ಒಬ್ಬ ಎಂಜಿನಿಯರ್‌ಗೂ ಡಾನ್ಸರ್‌ಗೂ ಕೊಡುವ ಗೌರವ ಬೇರೆಯದೇ ಆಗಿರುತ್ತದೆ. ‘ಇವಳಾ, ಡಾನ್ಸರ್‌’ ಎನ್ನುವ ಭಾವನೆ ನಮ್ಮ ಮನಸ್ಸಿನಲ್ಲೇ ಇರುತ್ತದೆ.

ಆಗ ನನಗೆ ಇಪ್ಪತ್ತು ಇಪ್ಪತ್ತೊಂದು ವರ್ಷವಿರಬೇಕು. ನನ್ನ ಕೆಲಸದ ಬಗ್ಗೆ ನಂಬಿಕೆಯಿದ್ದುದರಿಂದ ಯಾವುದಕ್ಕೂ ಅಳುಕಲಿಲ್ಲ. ಆದರೆ, ಇನ್ನೂ ಹೆಚ್ಚಿನದನ್ನೇನಾದರೂ ಸಾಧಿಸಬೇಕು ಅನ್ನಿಸುತ್ತಿತ್ತು. ನೃತ್ಯ ಸಂಯೋಜಕ ಇಮ್ರಾನ್‌ ಸರ್ದಾರಿಯಾ ಅವರ ತಂಡದಲ್ಲಿ ಫ್ರೀಲಾನ್ಸರ್‌ ಆಗಿ ಕೆಲಸ ಮಾಡತೊಡಗಿದೆ. ಆ ಸಮಯದಲ್ಲಿ ಎರಡು ಸಿನಿಮಾಗಳಿಗೆ ಬ್ಯಾಕ್‌ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದ ಅನುಭವ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ‘ಯಕ್ಷ’ ಸಿನಿಮಾದಲ್ಲಿ ವಿದೇಶಿ ಡಾನ್ಸರ್‌ಗಳ ನಡುವೆ ಗ್ಯಾಪ್‌ ಫಿಲ್‌ ಮಾಡಲು ನನ್ನಂಥವರನ್ನು ಬಳಸಿಕೊಂಡಿದ್ದರು. ಆ ಸಮಯದಲ್ಲಿ ನಡೆದ ಘಟನೆಯೊಂದನ್ನು ಇಮ್ರಾನ್‌ ಸರ್‌ ಇತ್ತೀಚೆಗೆ ನೆನಪಿಸಿದರು. ಕಟ್‌ ಹೇಳಿದ ತಕ್ಷಣ ಡಾನ್ಸರ್‌ಗಳೆಲ್ಲ ರಿಲಾಕ್ಸ್‌ ಆಗುತ್ತಿದ್ದರಂತೆ. ನಾನು ಮಾತ್ರ ಮಾನಿಟರ್‌ನಲ್ಲಿ ಹೋಗಿ ದೃಶ್ಯಗಳನ್ನು ನೋಡುತ್ತಿದ್ದೆನಂತೆ. ಏನು ಶೂಟ್‌ ಮಾಡಿದ್ದಾರೆ, ನಾನು ಕಾಣಿಸಿಕೊಂಡಿದ್ದೇನಾ ಎನ್ನುವ ಕುತೂಹಲ ನನಗೆ. ಇನ್ನೊಂದು ಸಿನಿಮಾ, ರಾಗಿಣಿ ದ್ವಿವೇದಿ ಅವರದು. ‘ತುಪ್ಪ ಬೇಕಾ ತುಪ್ಪಾ..’ ಎನ್ನುವ ಗೀತೆಯೊಂದರಲ್ಲಿ ಕಾಣಿಸಿಕೊಂಡಿದ್ದೆ. ರಾಗಿಣಿ ಅವರನ್ನು ನೋಡಿ ಆಶ್ಚರ್ಯ, ಅದ್ಭುತ ಅನ್ನಿಸಿತ್ತು. ‘ಹೀಗೂ ಇರ್ತಾರಾ’, ‘ನಟಿಯಾದ್ರೆ ಹೀಗೂ ಇರಬಹುದಾ’ ಅನ್ನಿಸಿತ್ತು. ಸ್ಟುಡಿಯೊದಲ್ಲಿ ಅದ್ದೂರಿ ಗೌನ್‌ ಹಾಕಿಕೊಂಡು ಸ್ಟೇರ್‌ಕೇಸ್‌ನಿಂದ ಇಳಿದುಬರುತ್ತಿದ್ದ ರಾಗಿಣಿ ಅವರ ವೈಭವದ ಚಿತ್ರ ಈಗಲೂ ನನ್ನ ಮನಸ್ಸಿನಲ್ಲಿದೆ’’.

ಬೆಳ್ಳಿ ತೆರೆಗೆ ಮರುಳಾದ ದಿನಗಳು...:

ನೃತ್ಯಗಾತಿಯಾಗಿ ಕನಸುಗಳನ್ನು ಕಾಣುತ್ತಿದ್ದ ದಿನಗಳಿಂದ ಬೆಳ್ಳಿತೆರೆಯ ಆರಂಭದ ದಿನಗಳ ನೆನಪುಗಳನ್ನು ಶ್ರುತಿ ಹಂಚಿಕೊಳ್ಳತೊಡಗಿದರು:

‘‘ನಾನು ಮಾಡಿದ ಮೊದಲ ಸಿನಿಮಾ ತಮಿಳಿನದ್ದು. ಅದು ರಿಲೀಸ್‌ ಆಗಿಲ್ಲ. ಕೊಡೈಕೆನಾಲ್‌ನಲ್ಲಿ ಶೂಟಿಂಗ್‌ ಆಗಿದ್ದು. ಮಲಗಲು ಹಾಸಿಗೆ ಕೊಟ್ಟಿರಲಿಲ್ಲ. ಕಬ್ಬಿಣದ ಮಂಚವಷ್ಟೇ ಇತ್ತು. ರೂಮಿನಲ್ಲೆಲ್ಲ ಇಲಿಗಳು ಓಡಾಡುತ್ತಿದ್ದವು. ಅವ್ಯವಸ್ಥೆಗಳ ನಡುವೆಯೂ ಮೊದಲ ಸಿನಿಮಾ ಎನ್ನುವ ಪುಳಕ. ಅದಾದಮೇಲೆ, ‘ಸಿನಿಮಾ ಕಂಪನಿ’ ಎನ್ನುವ ಮಲಯಾಳಂ ಸಿನಿಮಾಗೆ ಆಡಿಷನ್‌ ಕೊಟ್ಟೆ. ಒಂಬತ್ತು ಹೊಸ ಮುಖಗಳು ಚಿತ್ರದಲ್ಲಿದ್ದವು. ಆಡಿಷನ್ ಚೆನ್ನಾಗಿ ಆಯ್ತು. ಮತ್ತೊಮ್ಮೆ ಆಡಿಷನ್‌ಗೆ ಬನ್ನಿ ಎಂದು ಕೊಚ್ಚಿನ್‌ಗೆ ಕರೆದರು. ಅಲ್ಲಿ ಬೋರ್ಡೊಂದರ ಮೇಲೆ ನಾಲ್ಕು ಮುಖಗಳ ಚಿತ್ರ ಬರೆದಿದ್ದರು. ಗುಂಗುರು ಕೂದಲಿನ ಪಾರು ಹೆಸರಿನ ಪಾತ್ರದಲ್ಲಿ ನನ್ನನ್ನು ಕಲ್ಪಿಸಿಕೊಂಡಿದ್ದೆ. ಆಡಿಷನ್‌ ಕೊಟ್ಟು ಬಂದ ಮೇಲೆ ದೊಡ್ಡದೊಂದು ಇವೆಂಟ್‌ ಮೇಲೆ ಬಾಂಬೆಗೆ ಹೋಗಿದ್ದೆ. ಅಲ್ಲಿದ್ದಾಗಲೇ ಕೊಚ್ಚಿನ್‌ನಿಂದ ಫೋನ್‌ ಬಂತು – ‘ತಕ್ಷಣ ಬಂದು ವರ್ಕ್‌ಷಾಪ್‌ಗೆ ಹಾಜರಾಗಿ’. ಅಳೆದೂ ಸುರಿದೂ ಸಿನಿಮಾ ಆಯ್ಕೆ ಮಾಡಿಕೊಂಡೆ. ‘ಸಿನಿಮಾ ಕಂಪನಿ’ ನನ್ನ ಪಾಲಿನ ದೊಡ್ಡ ಸಿನಿಮಾ. ಸಿನಿಮಾ ದೊಡ್ಡದಾದರೂ ಸಿನಿಮಾಕ್ಕೆ ನಾನು ಹೊಸಬಳಷ್ಟೇ – ‘ಮೇಡಂಗೆ ಚೇರ್‌ ಹಾಕಿ’ ಎನ್ನುವ ಸವಲತ್ತೇನೂ ಅಲ್ಲಿರಲಿಲ್ಲ. ನಮ್ಮನ್ನು ಯಾರೂ ಗಮನಿಸುವವರೂ ಇರಲಿಲ್ಲ. ಆದರೆ, ಸಿನಿಮಾದ ಅನುಭವ ಸಮೃದ್ಧವಾಗಿತ್ತು.

‘ಸಿನಿಮಾ ಕಂಪನಿ’ ತೆರೆಕಾಣುವ ಮೊದಲೇ ‘ಲೂಸಿಯಾ’ ಆಡಿಷನ್ ಶುರುವಾಯ್ತು. ಆವರೆಗೆ ನನಗೆ ಕನ್ನಡ ಸಿನಿಮಾದ ಸಂಪರ್ಕ ಅಷ್ಟೇನೂ ಇರಲಿಲ್ಲ. ಬೆಂಗಳೂರಿನಲ್ಲೇ ಬೆಳೆದಿದ್ದರೂ ಕನ್ನಡ ಸಿನಿಮಾ ಹೆಚ್ಚು ನೋಡಿರಲಿಲ್ಲ. ‘ಮುಂಗಾರು ಮಳೆ’ ನಾನು ನೋಡಿದ ಮೊದಲ ಕನ್ನಡ ಸಿನಿಮಾ. ಆಮೇಲೆ ನೋಡಿದ್ದು ‘ಲೈಫು ಇಷ್ಟೇನೆ’. ನನ್ನ ಕನ್ನಡದ ಮಾತು ಕೂಡ ಅಷ್ಟೇನೂ ಚೆನ್ನಾಗಿರಲಿಲ್ಲ. ‘ಲೈಫು ಇಷ್ಟೇನೆ’ ನಿರ್ದೇಶಕರ ಸಿನಿಮಾದ ಆಡಿಷನ್‌ಗೆ ಕರೆಬಂದಾಗ ನರ್ವಸ್‌ ಆಗಿತ್ತು. ಆಡಿಷನ್‌ಗೆ ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವ ಗೊಂದಲ. ನಮ್ಮಂಥ ಕಲಾವಿದರನ್ನು ಯಾವಾಗಲೂ ಕಾಡುವ ಗೊಂದಲವದು. ತೆರೆಯ ಮೇಲೆ ಸೌಂದರ್ಯದಿಂದ ಕಂಗೊಳಿಸುವ ನಾವು ನಿಜ ಜೀವನದಲ್ಲಿ ಹಾಗೇನೂ ಇರುವುದಿಲ್ಲ. ಆದರೆ, ಆ ಸ್ಥಾನವನ್ನು ಸಂಪಾದಿಸಲು ಪ್ರಯತ್ನಪಡಬೇಕಾಗುತ್ತದೆ. (ನಾನಂತೂ ತುಂಬಾ ವರ್ಷ ಪ್ರಯತ್ನಪಟ್ಟಿದ್ದೇನೆ.) ಆಡಿಷನ್‌ ಆಯ್ತು. ಎರಡನೇ ಬಾರಿಗೆ ಆಡಿಷನ್‌ಗೆ ಕರೆದರು. ಕೈನೆಟಿಕ್ ಹೊಂಡಾದಲ್ಲಿ ಹೋಗಿದ್ದೆ. ಆಗ ರಜತ್‌ಮಯಿ ಎನ್ನುವ ಅಸೋಸಿಯೇಟ್‌ ಡೈರೆಕ್ಟರ್‌, ‘ಏನಿದು, ಹೀರೊಯಿನ್‌ ಕೈನೆಟಿಕ್‌ನಲ್ಲಿ ಬರ್ತಿದ್ದಾಳೆ’ ಎಂದು ಹೇಳಿದ್ದರಂತೆ. ಅದೇ ಡೈಲಾಗನ್ನು ನೀನಾಸಂ ಸತೀಶ್ ಕೂಡ ಹೇಳಿದ್ದರಂತೆ. ಸತೀಶ್‌ ಅವರಿಗೆ ನಾಯಕನಾಗಿ ‘ಲೂಸಿಯಾ’ ಮೊದಲನೇ ಸಿನಿಮಾ. ‘ಚೆನ್ನಾಗಿರೋ ಹೀರೊಯಿನ್‌ ಸಿಗಲಿ’ ಎನ್ನುವ ಆಸೆ ಇತ್ತು ಅವರಿಗೆ. ನಾನು ಹೋಗಿ ತಗಲಿಹಾಕ್ಕೊಂಡು ಬಿಟ್ಟೆ ಅವರಿಗೆ.

‘ಲೂಸಿಯಾ’ ಚಿತ್ರವನ್ನು ಮೊದಲು ಡಿವಿಡಿಯಲ್ಲಿ ರಿಲೀಸ್‌ ಮಾಡುವುದು ಎಂದು ಪವನ್‌ ಕುಮಾರ್‌ ಮೊದಲು ಅಂದುಕೊಂಡಿದ್ದರು. ಆದುದೇ ಬೇರೆ. ಎರಡು ವರ್ಷ ಮಾಡಿದ್ವಿ ಆ ಸಿನಿಮಾ. ಚಿಕ್ಕದೊಂದು ಕ್ಯಾಮೆರಾ. ಹತ್ತು ಜನ ಸೆಟ್‌ನಲ್ಲಿ ಇರ್ತಿದ್ದೆವು. ಪವನ್‌ ಸೆಟ್ಟಲ್ಲಿ ಬಂದು ಡೈಲಾಗ್‌ ಬರೀತಿದ್ದರು. ತಮಗೇನು ಬೇಕು ಎನ್ನುವುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ‘ಲೂಸಿಯಾ’ದ್ದು ತುಂಬಾ ಒಳ್ಳೆಯ ಅನುಭವ. ಅದು ತೆರೆಕಾಣುವ ಮೊದಲೇ ಲಂಡನ್‌ ಫಿಲ್ಮ್‌ ಫೆಸ್ಟಿವಲ್‌ಗೆ ಆಯ್ಕೆಯಾಯಿತು. ಆಮೇಲೆ ಬೆಂಗಳೂರಲ್ಲಿ ರಿಲೀಸ್‌ ಆಯ್ತು. ಮೊದಲ ದಿನ ಮೂವಿಲ್ಯಾಂಡ್‌ಗೆ ಸ್ಕೂಟರ್‌ನಲ್ಲೇ ಹೋದೆ. ಸತೀಶ್‌ ಸುತ್ತ ತಮಟೆ ಸಂಭ್ರಮ. ತುಂಬಾ ದಿನಗಳ ನಂತರ ಮೂವೀಲ್ಯಾಂಡ್‌ನಲ್ಲಿ ಕನ್ನಡ ಸಿನಿಮಾ ತೆರೆಕಂಡಿತ್ತು. ಮೀಡಿಯಾದವರೆಲ್ಲ ಅಲ್ಲಿದ್ದರು. ಆವರೆಗೆ ನನ್ನ ಜೀವನದಲ್ಲೇ ನಾನು ಅಷ್ಟೊಂದು ಫೋಟೊಗ್ರಾಫ್‌ ಕೊಟ್ಟಿರಲಿಲ್ಲ. ಅದೊಂದು ಕ್ರೇಜಿ ಮೂಮೆಂಟ್. ಈಗಲೂ ಖುಷಿಕೊಡುವ ಸಂದರ್ಭ.

‘ಲೂಸಿಯಾ’ ತೆರೆಕಾಣುವ ಮೊದಲು ‘ರಾಟೆ’ ಹಾಗೂ ‘ದ್ಯಾವ್ರೇ’ ಸಿನಿಮಾಕ್ಕೆ ಸೈನ್ ಮಾಡಿದ್ದೆ. ‘ಲೂಸಿಯಾ’ ಗೆದ್ದ ಮೇಲೆ ಕೆಲಸಗಳು ಹುಡುಕಿಕೊಂಡು ಬರತೊಡಗಿದವು.

‘ನಾನು ಪರಿಸ್ಥಿತಿಯ ಕೂಸು’ ಎಂದು ಅನೇಕ ಸಲ ಅನ್ನಿಸುತ್ತದೆ. ಹೀಗೇ ಆಗಬೇಕು, ಇದೇ ಆಗಬೇಕು ಎಂದುಕೊಂಡಿದ್ದಕ್ಕಿಂತ ಪರಿಸ್ಥಿತಿಗೆ ತಕ್ಕಂತೆ ಏನೇನೋ ಆಗುತ್ತಾ ಹೋದೆ.

‘ರಾಟೆ’ ಕೂಡ ಎರಡು ವರ್ಷ ತೆಗೆದುಕೊಂಡಿತು. ಮೂರು ವರ್ಷಗಳಲ್ಲಿ ತೆರೆಕಂಡಿದ್ದು ನನ್ನ ಎರಡೇ ಸಿನಿಮಾ. ‘ರಾಟೆ’ ಬಗ್ಗೆ ಅಪಾರ ನಿರೀಕ್ಷೆಗಳಿದ್ದವು. ಆದರೆ, ಅದು ನನ್ನ ಲೈಫಲ್ಲಿ ಮೊದಲ ಫ್ಲಾಪ್ ಸಿನಿಮಾ. ಆಗ ಸೋಲು ಗೆಲುವುಗಳ ಆಟವನ್ನು ಅರ್ಥವನ್ನು ಮಾಡಿಕೊಳ್ಳುವುದು ಗೊತ್ತಿರಲಿಲ್ಲ. ಸಿನಿಮಾ ಸೋತಿದ್ದು ಏಕೆ ಎನ್ನುವ ಪ್ರಶ್ನೆ ಇತ್ತು. ಅದೇ ಸಮಯದಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ನಟಿಸತೊಡಗಿದ್ದೆ. ಒಂದಷ್ಟು ದಿನ ಅವಕಾಶಗಳೇ ಇಲ್ಲದೆ ಕೂತಿದ್ದೆ. ಗೊಂದಲದ ಪರಿಸ್ಥಿತಿ.

ಒಂದು ಕಡೆ ಕಮರ್ಷಿಯಲ್‌ ಸಿನಿಮಾಗಳು, ಇನ್ನೊಂದು ಕಡೆ ‘ಇಂಡಿಪೆಂಡೆಂಟ್’ ಎನ್ನುವ ರೀತಿಯ ಸಿನಿಮಾಗಳು. ‘ಸಿಪಾಯಿ’, ‘ಮಾದ ಮತ್ತು ಮಾನಸಿ’ ಸಿನಿಮಾಗಳಲ್ಲಿ ಅವಕಾಶ ದೊರೆತವು. ‘ಗೋಧಿ ಬಣ್ಣ...’ ತೆರೆಕಂಡು ಯಶಸ್ವಿಯಾಯಿತು. ಕನ್ನಡದಲ್ಲಿ ಆಗ ಹೊಸ ಅಲೆಯ ರೀತಿಯ ಉತ್ಸಾಹ ಕಾಣಿಸಿಕೊಂಡಿತ್ತು. ಸುಮಾರು ವರ್ಷಗಳಿಂದ ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು ಮತ್ತೆ ಥಿಯೇಟರ್‌ಗಳಿಗೆ ಬರತೊಡಗಿದರು’’.

ಆಯ್ಕೆಗಳೇ ಇಲ್ಲದ ದಿನಗಳಿಂದ ಮಾತಿನ ದಿಕ್ಕನ್ನು ಕೊಂಚ ಬದಲಿಸುವಂತೆ, ತಮ್ಮ ಆಯ್ಕೆಗಳ ಕುರಿತು ಮಾತನಾಡತೊಡಗಿದರು ಶ್ರುತಿ.

‘‘ಕಮರ್ಷಿಯಲ್‌ ಸಿನಿಮಾಗಳಲ್ಲಿ ಒಳ್ಳೆಯ ಸಂಭಾವನೆ ದೊರೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಸಣ್ಣ ಬಜೆಟ್‌ನ ‘ಇಂಡಿಪೆಂಡೆಂಟ್’ ಸಿನಿಮಾಗಳಲ್ಲಿ ಹೆಚ್ಚಿನ ಸಂಭಾವನೆ ದೊರೆಯದಿದ್ದರೂ ನಟಿಸುವುದು ನನಗಿಷ್ಟ. ‘ಉಪೇಂದ್ರ ಮತ್ತೆ ಬಾ’, ‘ತಾರಕ್’ ಚಿತ್ರಗಳಲ್ಲಿನ ಸಂಭಾವನೆಯನ್ನು ಬೇರೆ ಸಿನಿಮಾಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ನನಗೆ ನಿಜ ಅನ್ನಿಸುವುದು ‘ನಾತಿಚರಾಮಿ’ಯಂಥ ಸಿನಿಮಾಗಳೇ. ನಾನು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದರೂ ಅವುಗಳೊಂದಿಗೆ ಹೆಚ್ಚು ಕನೆಕ್ಟ್‌ ಆಗಿಲ್ಲ. ಒಂದು ಕಡೆ ವ್ಯಾಪಾರಕ್ಕೆ ಆದ್ಯತೆ, ಇನ್ನೊಂದು ಕಡೆ ಪ್ರೀತಿ–ಬದ್ಧತೆಯಿಂದ ಮಾಡುವ ಪ್ರಯತ್ನಗಳು. ಈ ವ್ಯತ್ಯಾಸ ಸ್ಪಷ್ಟವಾಗಿದೆ’’ ಎನ್ನುವುದು ಅವರ ಅನಿಸಿಕೆ.

ಕನ್ನಡದ ಮುನ್ನುಡಿ ಮತ್ತು ಸಿನಿಮಾ ಕನ್ನಡಿ...

ಶ್ರುತಿ ಹರಿಹರನ್‌ ಅವರದು ಅಸ್ಖಲಿತ ಮಾತುಗಾರಿಕೆ. ಈ ಮಾತುಗಾರಿಕೆ ಅವರದಾಗಿದ್ದರೂ ಹೇಗೆ?

‘‘ಭಾಷೆ ಬದುಕಿನ ಭಾಷೆಯಾದರೆ ಕಲಿಯಲೇಬೇಕಾಗುತ್ತದೆ. ‘ಲೂಸಿಯಾ’ ಸಂದರ್ಭದಲ್ಲಿ ಭಾಷೆ ನನಗೆ ಸುಲಲಿತವಾಗಿರಲಿಲ್ಲ. ‘ರಾಟೆ’ ವೇಳೆಗೆ ಕನ್ನಡ ಸುಲಭವಾಯಿತು. ನಿರ್ದೇಶಕ ಎ.ಪಿ. ಅರ್ಜುನ್ ಹಾಗೂ ನಾಯಕನಟ ಧನಂಜಯ ನನ್ನೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದರು. ಹೆಚ್ಚು ಜನ ನಮ್ಮೊಂದಿಗೆ ಕನ್ನಡ ಮಾತನಾಡಿದಾಗ ಕಲಿಕೆ ಸುಲಭವಾಗುತ್ತದೆ. ಭಾಷೆ ಕಲಿತರೆ ನಟನೆ ಹೆಚ್ಚು ನ್ಯಾಚುರಲ್ ಆಗುತ್ತೆ ಎನ್ನುವ ನಂಬಿಕೆ ಕೂಡ ಕನ್ನಡವನ್ನು ನನ್ನದನ್ನಾಗಿಕೊಳ್ಳಲು ಕಾರಣ. ಭಾಷೆಯ ಬಗೆಗಿನ ಪ್ರೀತಿಯಿಂದಲೇ ‘ಲಾಸ್ಟ್‌ ಕನ್ನಡಿಗ’ ಎನ್ನುವ ಕಿರುಚಿತ್ರ ನಿರ್ಮಿಸಿದೆ. ಒಂದು ಭಾಷೆಯನ್ನಾಡುವ ಜನ ಇಲ್ಲದೆ ಹೋದರೆ ಆ ಭಾಷೆ ಏನಾಗುತ್ತದೆ? ಅನ್ನ ಹಾಕದ, ಉದ್ಯೋಗ ಕೊಡದ ಭಾಷೆಗಳು ಉಳಿಯುವುದು ಹೇಗೆ? ಈ ಜಿಜ್ಞಾಸೆಯಲ್ಲಿ ‘ಲಾಸ್ಟ್‌ ಕನ್ನಡಿಗ’ ಸಿನಿಮಾ ರೂಪುಗೊಂಡಿತು. ‘ನಿನಗೇ ನೆಟ್ಟಗೆ ಕನ್ನಡ ಮಾತನಾಡಲಿಕ್ಕೆ ಬರೊಲ್ಲ. ನೀನ್ಯಾರು ಕನ್ನಡ ಮಾತನಾಡು ಎಂದು ಹೇಳಲಿಕ್ಕೆ’ ಎಂದು ಪ್ರಶ್ನಿಸಿದವರೂ ಇದ್ದರು. ಆಗ ಅವರಿಗೆಲ್ಲ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಈಗ ಸ್ಪಷ್ಟವಾಗಿ ಹೇಳಬಲ್ಲೆ – ನಾನು ಕನ್ನಡವನ್ನು ಪ್ರೀತಿಯಿಂದ ಕಲಿತಿದ್ದೇನೆ ಎನ್ನುವುದನ್ನು. ಕನ್ನಡ ಪುಸ್ತಕ ಓದುವುದೂ ನನಗಿಷ್ಟ. ಜಯತೀರ್ಥ, ಗಿರಿರಾಜ್‌ರಂಥ ನಿರ್ದೇಶಕರು ನನ್ನೊಳಗೆ ಕನ್ನಡದ ಕಿಡಿಯನ್ನು ಹಚ್ಚಿದ್ದಾರೆ. ಈಚೆಗೆ ವೈದೇಹಿ ಅವರ ಕಥೆಗಳನ್ನು ಓದುತ್ತಿರುವೆ. ಎಷ್ಟು ಚಂದ ಬರೀತಾರೆ ಅವರು... ಆ ಕಥೆಗಳಲ್ಲಿ ನಾನು ಕಳೆದುಹೋಗುತ್ತಿರುವೆ ಎನ್ನಿಸುತ್ತದೆ’’.

ನುಡಿಯಿಂದ ಮಾತು ಹೊರಳಿದ್ದು ಕನ್ನಡಿಯತ್ತ...

‘ಈವರೆಗಿನ ಅನುಭವದ ಹಿನ್ನೆಲೆಯಲ್ಲಿ ಸಿನಿಮಾ ಮಾಧ್ಯಮವನ್ನು ನೀವು ಕಂಡುಕೊಂಡಿರುವುದು ಯಾವ ರೀತಿಯಲ್ಲಿ’ ಎನ್ನುವ ಪ್ರಶ್ನೆಗೆ, ಶ್ರುತಿ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುವ ಪ್ರಯತ್ನ ಮಾಡಿದರು. ‘‘ಸಿನಿಮಾ ಒಂದು ಬಗೆಯ ಕನ್ನಡಿ. ಕೆಲವು ವ್ಯಕ್ತಿಗಳ ಭಾವನೆಗಳನ್ನು, ಸಮಾಜದ ಆಗುಹೋಗುಗಳನ್ನು ಅಭಿವ್ಯಕ್ತಿಸುವ ಕನ್ನಡಿ. ಇದೊಂದು ಪರಿಣಾಮಕಾರಿ ಮಾಧ್ಯಮ. ಇದೊಂದು ವ್ಯಾಪಾರ ಎನ್ನುವುದು ನಿಜ. ಆದರೆ, ಕಲೆಯೂ ಅದ್ಭುತವಾಗಿ ಮಿಳಿತಗೊಂಡಿದೆ. ತಂಡವೊಂದು ಒಂದೇ ಕನಸಿನ ಬೆನ್ನುಬೀಳುವ ಅದ್ಭುತ ಕಲೆ ಸಿನಿಮಾ. ಎಲ್ಲ ಸಿನಿಮಾಗಳಲ್ಲೂ ಈ ‘ಸಿನರ್ಜಿ’ಯ ಅನುಭವ ಆಗುತ್ತದಾ ಎಂದರೆ, ಖಂಡಿತವಾಗಿಯೂ ಇಲ್ಲ. ಕೆಲವು ಸಿನಿಮಾಗಳಲ್ಲಿ ಇಂಥ ಅನುಭವ ನನಗಾಗಿದೆ’’ ಎಂದರು.

ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಶ್ರುತಿ ಹರಿಹರನ್‌ ಪ್ರಸಿದ್ಧರಾಗಿದ್ದವರು. ಈ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾಧಾರೆಯಲ್ಲಿ ಮಹಿಳಾಶಕ್ತಿ ಯಾವ ರೀತಿ ಅಭಿವ್ಯಕ್ತಗೊಂಡಿದೆ ಎನ್ನುವ ಪ್ರಶ್ನೆಯನ್ನು ಮುಂದಿರಿಸಿದರೆ – ಉತ್ತರದ ರೂಪದಲ್ಲಿ ಶ್ರುತಿ ತಮ್ಮ ಅನುಭವವೊಂದನ್ನು ಹಂಚಿಕೊಂಡರು.

‘‘ಎಫ್‌ಎಂ ವಾಹಿನಿಯೊಂದು ಸಿನಿಮಾ ಪ್ರಶಸ್ತಿಗಳ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ತೋರಿಸಿದ ವಿಡಿಯೊದಲ್ಲಿ ಕನ್ನಡದ ಎಲ್ಲ ಪ್ರಮುಖ ನಾಯಕನಟರೂ ಇದ್ದರು. ಆದರೆ, ಒಬ್ಬ ನಾಯಕಿಯೂ ಇರಲಿಲ್ಲ. ನನ್ನ ಪ್ರಕಾರ ಪುರುಷಪ್ರಧಾನತೆ ಎನ್ನುವುದು ಚಿತ್ರೋದ್ಯಮದಲ್ಲಿ, ಸಮಾಜದಲ್ಲಿ ತುಂಬಾ ಆಳವಾಗಿದೆ. ನೀವು ನಿಮ್ಮ ಪತ್ನಿಯನ್ನೋ ಮಗಳನ್ನೋ ಉದ್ಯೋಗ ಮಾಡಲು ಬಿಡುವುದಿಲ್ಲ ಎನ್ನುವುದು ಪ್ರೀತಿ ಆಗಿರಬಹುದು, ಅದೇ ಸಮಯದಲ್ಲದು ಪುರುಷಪ್ರಜ್ಞೆಯೂ ಆಗಿರುತ್ತದೆ. ಹೆಣ್ಣುಮಕ್ಕಳನ್ನು ಯಾರಾದರೂ ರಕ್ಷಿಸಬೇಕು ಎನ್ನುವ ಮನೋಭಾವ ಬಂದುಬಿಡುತ್ತದೆ. ಸಿನಿಮಾದಲ್ಲಿ ಕೂಡ ಸ್ಟಾರ್‌ಡಮ್ ಎನ್ನುವುದು ಪುರುಷರನ್ನು ಉದ್ದೇಶಿಯೇ ಇರುತ್ತದೆ. ಅತ್ಯುತ್ತಮ ನಟಿಯರಿದ್ದರೂ ಸೂಪರ್‌ ಸ್ಟಾರ್‌ಡಮ್ ಇರುವುದು ಗಂಡಸರಿಗೆ ಮಾತ್ರ. ಅದೊಂದು ಬಗೆಯ ಮೈಂಡ್‌ ಸೆಟ್‌ ಅನ್ನಿಸುತ್ತದೆ.

ದರ್ಶನ್‌ ಅವರೊಂದಿಗೆ ಕೆಲಸ ಮಾಡುವಾಗ ಒಬ್ಬ ವ್ಯಕ್ತಿ ಪ್ರತಿ ದಿನವೂ ಸೆಟ್‌ಗೆ ಬರುತ್ತಿದ್ದುದನ್ನು ಗಮನಿಸಿದ್ದೆ. ಸೆಟ್‌ನಲ್ಲಿ ಅವರಿಗೆ ಯಾವ ಕೆಲಸವೂ ಇಲ್ಲದಿದ್ದರೂ ಬರುತ್ತಿದ್ದರು, ದೇವಸ್ಥಾನಕ್ಕೆ ಪ್ರತಿದಿನವೂ ಹೋಗುತ್ತಾರಲ್ಲ... ಹಾಗೆ. ಫೇಸ್‌ಬುಕ್‌ನಲ್ಲಿ ದಿನಾ ಫೋಟೊ ಹಾಕಿಕೊಳ್ಳುತ್ತಿದ್ದರು. ನನಗೆ ಅದೆಲ್ಲ ಆಶ್ಚರ್ಯ ಎನ್ನಿಸಿತ್ತು. ಇಂಥ ನಡವಳಿಕೆಗಳು ಅಧ್ಯಯನಕ್ಕೆ ಕುತೂಹಲಕಾರಿ ಅನ್ನಿಸುತ್ತವೆ. ಅಭಿಮಾನಿಗಳ ಮೂಲಕ ರಜನಿಕಾಂತ್‌ ಅವರನ್ನು ಕಟ್ಟಿಕೊಡುವ ಕಿರುಚಿತ್ರವನ್ನು ನೋಡಿದರೆ, ಅಭಿಮಾನಿಗಳ ಭಾವುಕತೆ ದಂಗುಬಡಿಸುತ್ತದೆ...’’

ಪುರುಷಚಿತ್ತ ಸತ್ಯ!:

ಮಾತಿನ ದಿಕ್ಕು ಚೆಲ್ಲಾಪಿಲ್ಲಿಯಾಗದಂತೆ, ‘‘ಹೆಣ್ಣುಮಕ್ಕಳು ಎರಡನೇ ಆದ್ಯತೆ ಎನ್ನುವುದು ತುಂಬಾ ಬೇಸರವನ್ನಿಸುತ್ತದೆ. ಹೆಣ್ಣಿನ ಭಾವಲೋಕವನ್ನು ಪ್ರತಿನಿಧಿಸುವ ಸಿನಿಮಾಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿಲ್ಲ’’ ಎಂದರು. ಚರ್ಚೆಯ ನಡುವೆ, ‘ಬ್ಯೂಟಿಫುಲ್‌ ಮನಸುಗಳು’ ಕಥೆಯನ್ನು ಹೆಣ್ಣಿನ ಸಶಕ್ತ ಅಭಿವ್ಯಕ್ತಿ ಎನ್ನುವುದನ್ನೂ ಅವರು ಒಪ್ಪಿಕೊಳ್ಳಲಿಲ್ಲ. ‘ಆ ಸಿನಿಮಾ ಕೂಡ ಪುರುಷನ ಕಣ್ಣಿನಲ್ಲಿ ಹೆಣ್ಣನ್ನು ನೋಡಿ ಮಾಡಿದ ಕಥೆ’ ಎನ್ನುವ ಅನಿಸಿಕೆ ಅವರದು. ‘‘ನಾತಿಚರಾಮಿ ಸಿನಿಮಾವನ್ನು ನನಗೆ ಎಷ್ಟೇ ಇಷ್ಟ ಎಂದು ಹೇಳಿದರೂ ಅಂತಿಮವಾಗಿ ಅದು ಮಂಸೋರೆ ಅವರ ಚಿತ್ರವೇ. ಈ ನಿಟ್ಟಿನಲ್ಲಿ ಅನನ್ಯಾ ಕಾಸರವಳ್ಳಿಯವರ ‘ಹರಿಕಥಾ ಪ್ರಸಂಗ’ ಹೆಚ್ಚು ಹತ್ತಿರವೆನ್ನಿಸುತ್ತದೆ. ಏಕೆಂದರೆ ಅಲ್ಲಿರುವುದು ಮಹಿಳಾ ದೃಷ್ಟಿಕೋನ. ಹೆಣ್ಣುಮಕ್ಕಳು ಸಿನಿಮಾ ರೂಪಿಸಿದಾಗ ಮೂಡುವ ಚಿತ್ರಗಳು ಬೇರೆಯದಾಗಿರುತ್ತವೆ. ಮಲಯಾಳಂನಲ್ಲಿ ಫೀಮೇಲ್‌ ಫಿಲ್ಮ್‌ ಮೇಕರ್‌ಗಳು ಸಾಕಷ್ಟಿದ್ದಾರೆ. ಹಾಗಾಗಿಯೇ ಸಾಕಷ್ಟು ವಿಭಿನ್ನ ಚಿತ್ರಗಳು ಅಲ್ಲಿ ಬರುತ್ತಿವೆ. ಕನ್ನಡದಲ್ಲಿ ಹೆಣ್ಣುಮಕ್ಕಳ ಕುರಿತ ಸಿನಿಮಾಗಳು ಇತ್ತೀಚೆಗೆ ಬರುತ್ತಿವೆ – ‘ಕಿರಗೂರಿನ ಗಯ್ಯಾಳಿಗಳು’, ‘ಶುದ್ಧಿ’ ರೀತಿಯವು. ಆದರೆ, ಗಮನಾರ್ಹ ಬದಲಾವಣೆಯನ್ನು ಸೂಚಿಸುವ ಸಂಖ್ಯೆಯಲ್ಲಿ ಸಿನಿಮಾಗಳು ಬರುತ್ತಿಲ್ಲ’’ ಎನ್ನುವ ಅನಿಸಿಕೆ ಅವರದು.

ಪಾತ್ರ ಚಿತ್ರಣದಿಂದ ಪುರುಷಚಿತ್ತದತ್ತ ಮಾತು ಬದಲಾಯಿತು. ‘‘ಚಿತ್ರೋದ್ಯಮದಲ್ಲಿ ಮಹಿಳೆಯರನ್ನು ನೋಡುವ ರೀತಿ ಭಿನ್ನವಾಗಿರುತ್ತದೆ. ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್‌ ಕೌಚ್‌) ವಿಷಯ ಪ್ರಸ್ತಾಪಿಸಿದಾಗ ಬಂದ ಪ್ರತಿಕ್ರಿಯೆ ಮಿಶ್ರವಾಗಿತ್ತು. ‘ಇಷ್ಟು ವರ್ಷಗಳ ನಂತರ ಏಕೆ ಹೇಳುತ್ತಿದ್ದೀರಿ’ ಎಂದು ಕೆಲವರು ಕೇಳಿದರು. ಕೆಲವರು ಸಾಕ್ಷಿಗಳನ್ನು ಅಪೇಕ್ಷಿಸಿದರು. ಕನ್ನಡ ಚಿತ್ರರಂಗದ ಬಹುಗಣ್ಯರು ಎನಿಸಿಕೊಂಡ ಕೆಲವರು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದರು. ಹಲವರು ಬೆಂಬಲಿಸಿದರು. ಆದರೆ, ಈ ಪ್ರಕರಣ ನನ್ನನ್ನು ಹೆಚ್ಚು ಗಟ್ಟಿಯಾಗಿಸಿತು. ‘ಸೆಕ್ಸಿಸಂ ಇನ್‌ ಇಂಡಿಯನ್‌ ಸಿನಿಮಾ’ ವಿಷಯದ ಬಗ್ಗೆ ರಾಷ್ಟ್ರೀಯ ವೇದಿಕೆಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಪಾತ್ರಕ್ಕಾಗಿ ಪಲ್ಲಂಗದ (ಕಾಸ್ಟಿಂಗ್‌ ಕೌಚ್‌) ಕುರಿತ ಪ್ರಶ್ನೆಯೊಂದಕ್ಕೆ ನಾನು ಉತ್ತರಿಸಿದ್ದೆ. ಅದುವರೆಗೆ ಯಾರೂ ಕುರಿತು ನನ್ನನ್ನು ಕೇಳಿರಲಿಲ್ಲ. ಆದ್ದರಿಂದ ನಾನೂ ಹೇಳಿರಲಿಲ್ಲ. ಅಂದು ಕೇಳಿದ್ದಕ್ಕೆ ಉತ್ತರಿಸಿದೆ ಅಷ್ಟೆ. ಆದರೆ ಅದೇ ವೇದಿಕೆಯಲ್ಲಿ ನಾನು ಮಾತನಾಡಿದ ಇತರ ವಿಷಯಗಳು ಸುದ್ದಿಯಾಗಲೇ ಇಲ್ಲ.ಪಾತ್ರಕ್ಕಾಗಿ ಪಲ್ಲಂಗದ ಕುರಿತು ನಾನು ಹೇಳಿದ ಮಾತು ಅಷ್ಟೊಂದು ಚರ್ಚೆ ಆಗುತ್ತೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಆ ಸಂದರ್ಭದಲ್ಲಿ ಮಾಧ್ಯಮಗಳ ನಡವಳಿಕೆ ಕೂಡ ನನ್ನನ್ನು ಗಾಬರಿಗೊಳಿಸುವಂತಿತ್ತು. ಕಾರ್ಯಕ್ರಮದ ಮರುದಿನ ಒಂದು ಟಿವಿ ವಾಹಿನಿ ಬೆಳಿಗ್ಗೆ ಆರು ಗಂಟೆಗೆ ನನಗೆ ಕರೆ ಮಾಡಿ ಅಭಿಪ್ರಾಯ ಕೇಳಿದಾಗಲೇ ನನಗೆ ಗೊತ್ತಾಗಿದ್ದು. ಅಂದು ಇಡೀ ದಿನ ನನಗೆ ಎಡಬಿಡದೆ ಮೊಬೈಲ್ ಕರೆಗಳು ಬರುತ್ತಿದ್ದವು. ಅವುಗಳಲ್ಲಿ ಬಹುತೇಕ ಕರೆಗಳು ನನ್ನನ್ನು ಹೆದರಿಸುವ ಉದ್ದೇಶದಿಂದಲೇ ಬರುತ್ತಿದ್ದವು. ಆದರೆ ಇಡೀ ಪ್ರಕರಣವನ್ನು ಒಂದು ಅನುಭವದ ರೀತಿಯಲ್ಲಿಯೇ ನಾನು ಪರಿಗಣಿಸಿರುವೆ’’ ಎಂದು ನೋವಿನಲ್ಲಿಯೇ ತಮ್ಮ ವ್ಯಕ್ತಿತ್ವ ಇನ್ನಷ್ಟು ಗಟ್ಟಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು.

ತಮ್ಮ ನಟನೆಯ ಸಿನಿಮಾಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಉತ್ಸಾಹವೊಂದು ರೂಪುಗೊಂಡಿರುವುದನ್ನೂ ಹಾಗೂ ತಾವು ಈ ಉಲ್ಲಾಸದ ಸಂದರ್ಭದ ಭಾಗವಾಗಿರುವುದನ್ನೂ ಶ್ರುತಿ ಖುಷಿಯಿಂದ ಹೇಳಿಕೊಂಡರು. ಹೊಸ ಪ್ರತಿಭೆಗಳ ಸಂಖ್ಯೆ ಚಿತ್ರೋದ್ಯಮದಲ್ಲಿ ಹೆಚ್ಚುತ್ತಿರುವುದು ಸರಿ. ಆದರೆ, ಇವರು ರೂಪಿಸುತ್ತಿರುವ ಚಿತ್ರಗಳಲ್ಲಿ ‘ಕನ್ನಡತನ’ ಎನ್ನುವುದಿದೆಯೇ? ಎಂದು ಅಡ್ಡಪ್ರಶ್ನೆ ಕೇಳಿದರೆ – ‘ಇಲ್ಲ’ವೆನ್ನಲು ಅವರು ಹಿಂದೆಮುಂದೆ ನೋಡಲಿಲ್ಲ. ಕನ್ನಡದ ಸೊಗಡು ನಮ್ಮ ಸಿನಿಮಾಗಳಲ್ಲಿ ಕ್ಷೀಣವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ‘‘ತಿಥಿ ಸಿನಿಮಾ ಕನ್ನಡದ ಪರಿಸರವನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ಅದು ನಮ್ಮ ಕರ್ನಾಟಕದ ಹುಣ್ಣಿಮೆ. ಕರ್ನಾಟಕವನ್ನು ವಿಶ್ವನಕಾಶೆಯಲ್ಲಿ ಸಮರ್ಥವಾಗಿ ಬಿಂಬಿಸಿತು’’ ಎಂದು ಹೇಳುವುದನ್ನು ಮರೆಯಲಿಲ್ಲ.

‘‘ಸಿನಿಮಾಕ್ಕಾಗಿ ನಮ್ಮದೇ ಆದ ಕಥೆಗಳನ್ನು ಬರೆದುಕೊಳ್ಳಲಾಗುತ್ತಿಲ್ಲ. ಅಂಥ ಕಥೆಗಳನ್ನು ರೂಪಿಸಬೇಕು. ಕರ್ನಾಟಕದ ನಿಜವಾದ ಕಥೆಗಳನ್ನು ಸೂಪರ್‌ ಸ್ಟಾರ್‌ಗಳು ಬೆಂಬಲಿಸಬೇಕು’’ ಎಂದು ಅಭಿಪ್ರಾಯಪಟ್ಟರು.

‘‘ಯಾರಾದರೂ ನಮ್ಮ ಜೊತೆ ತಮಿಳು ಮಾತನಾಡಿದರೆ ಅವರ ಜೊತೆ ಬರೀ ತಮಿಳಿನಲ್ಲೇ ಮಾತನಾಡುತ್ತೇವೆ ಎನ್ನುವ ಹಟ ನಮ್ಮಲ್ಲಿ ಎಷ್ಟು ಜನರಲ್ಲಿದೆ? ಕನ್ನಡ ಕಲಿಯದೆ 15 ವರ್ಷಗಳ ಕಾಲ ನಾನೇ ಬೆಂಗಳೂರಿನಲ್ಲಿ ಬದುಕಿರುವೆ’’ ಎನ್ನುವ ಅವರ ಮಾತಿನಲ್ಲಿ ಸ್ವವಿಮರ್ಶೆಯೂ ಇತ್ತು, ನಾಡು–ನುಡಿಯ ಈ ಹೊತ್ತಿನ ವಸ್ತುಸ್ಥಿತಿಯೂ ಇತ್ತು. ಇದೇ ಮಾತಿನ ಜಾಡು ಹಿಡಿದು – ‘‘ಬ್ಯೂಟಿಫುಲ್‌ ಮನಸುಗಳು ಸಿನಿಮಾ ತೆರೆಕಂಡ ಸಂದರ್ಭದಲ್ಲಿ, ಎರಡು ಹಿಂದಿ ಸಿನಿಮಾಗಳ ನಡುವೆ ನಲುಗಿಹೋಯಿತು. ಮಂಡ್ಯದಲ್ಲಿ ನಮ್ಮ ಸಿನಿಮಾಕ್ಕೆ ಸಿಕ್ಕಿದ್ದು ಎರಡು ಚಿತ್ರಮಂದಿರಗಳಲ್ಲಿ ತಲಾ ಒಂದೊಂದು ಷೋ ಮಾತ್ರ. ಈ ಪರಿಸ್ಥಿತಿಯನ್ನು ಹೇಗೆ ಅರ್ಥೈಸುವುದು?’’ ಎಂದು ಪ್ರಶ್ನಿಸಿದರು.

ನನ್ನಮ್ಮ ಅಂದ್ರೆ ನಂಗಿಷ್ಟ!:

ಮಾತು ಮತ್ತೆ ಅಮ್ಮನನ್ನು ಸುತ್ತುವರೆಯತೊಡಗಿತು.

‘‘ನನ್ನ ಅಮ್ಮನ ಬಗ್ಗೆ ಹೇಳಬೇಕು. ಸಿಂಗಲ್‌ ಪೇರೆಂಟ್‌ ಆಗಿ ಅವರು ನಮ್ಮನ್ನು ಸಾಕಲುಸಾಕಷ್ಟು ಶ್ರಮವಹಿಸಿದ್ದಾರೆ. ತುಂಬಾ ಗಟ್ಟಿಯಾದ ಮಹಿಳೆ. ಪ್ರತಿ ಮಗಳಿಗೂ ತನ್ನ ತಾಯಿಯೊಂದಿಗೆ ವಿಭಿನ್ನವಾದ ಸಂಬಂಧವಿರುತ್ತದೆ. ನನ್ನನ್ನು ಪ್ರೀತಿಸುವ ಹಾಗೂ ಕಿರಿಕಿರಿ ಉಂಟುಮಾಡುವ ವ್ಯಕ್ತಿ ಅಮ್ಮ. ಅವರು ನನ್ನ ಜೀವನದ ದೊಡ್ಡ ವಿಮರ್ಶಕಿ ಕೂಡ. ಬಾಲ್ಯದಲ್ಲಿ ಪುಸ್ತಕವೊಂದರಲ್ಲಿ ಹಾಳೆಯೊಂದನ್ನು ಹರಿದಾಗ ಕೊಟ್ಟ ಪೆಟ್ಟು ಇಂದಿಗೂ ನೆನಪಿನಲ್ಲಿದೆ. ಆರಂಭದಲ್ಲಿ ನಾನು ಧರಿಸುವ ಬಟ್ಟೆಯ ಬಗ್ಗೆಯೂ ಅಮ್ಮನಿಗೆ ಪ್ರಶ್ನೆಗಳಿದ್ದವು. ಅಮ್ಮ ಪರಿಶುದ್ಧ ವ್ಯಕ್ತಿ. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ’’.

ಮಾತು ಮುಗಿಸುವುದಕ್ಕೆ ಮುನ್ನ ಕೇಳಿದ್ದು – ‘ಮುಂದೆ?’

‘‘ಏನೇನೋ ಕನಸಿದೆ. ತುಂಬಾ ಇದೆ. ನಟನೆ ಆಯ್ತು. ಈಗ ನಟನೆಯ ಹುಚ್ಚು ಮೊದಲಿನಷ್ಟಿಲ್ಲ. ನಟನೆಗಿಂತಲೂ ಸಿನಿಮಾ ರೂಪಿಸುವ ಪ್ರಕ್ರಿಯೆ ಹೆಚ್ಚು ಕುತೂಹಲಕಾರಿ ಅನ್ನಿಸುತ್ತಿದೆ. ನಮ್ಮದೇ ಕಥೆಗಳನ್ನು, ವಿಶೇಷವಾಗಿ ಹೆಣ್ಣುಮಕ್ಕಳ ಕಥೆಗಳನ್ನು ಹೇಳಬೇಕು ಎನ್ನುವ ಆಸೆ ಇದೆ. ನಿರ್ದೇಶಕಿ ಆದರೂ ಆಗಬಹುದೇನೊ?

ಈಗಲ್ಲ ಎಂದರೂ ಇನ್ನು ಹತ್ತು ಹದಿನೈದು ವರ್ಷಗಳ ನಂತರವಾದರೂ ಜನರಿಗಾಗಿ ಕೆಲಸ ಮಾಡುವುದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಆಸೆಯಿದೆ’’.

ಶ್ರುತಿ ತಮ್ಮಷ್ಟಕ್ಕೆ ತಾವು ಮಾತಾಡಿಕೊಳ್ಳುತ್ತಿರುವಂತೆ ಕಾಣಿಸಿತು. ಹೊರಟವರನ್ನು ತಡೆದ ಅವರು, ‘‘ಟೀ ಮಾಡುತ್ತೇನೆ. ಸೂಪರ್‌ ಟೀ ಮಾಡ್ತೇನೆ. ಅದು ನನ್ನ ಸೆಕೆಂಡ್‌ ಪ್ರೊಪೆಷನ್‌’’ ಎಂದು ನಗುತ್ತ ಅಡುಗೆಮನೆಗೆ ಹೋದರು.

ಚಹಾ ಸೊಗಸಾಗಿತ್ತು. ಆದರೆ, ಇನ್ನೂ ಹೆಚ್ಚು ರುಚಿ ಅನ್ನಿಸಿದ್ದು ಶ್ರುತಿ ಹರಿಹರನ್ ಅವರ ಮಾತುಗಳು. ಗೇಟಿನವರೆಗೆ ಬಂದು ನಿಂತ ಅವರಿಂದ ಬೀಳ್ಕೊಂಡು ಬರುವಾಗ ಚಹಾದ ಸ್ವಾದ ನಾಲಿಗೆಯಲ್ಲಿಯೂ, ಮಾತುಗಳ ಸ್ವಾದ ಮನಸಲ್ಲಿಯೂ ಆವರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT