ಸೋಮವಾರ, ಜುಲೈ 4, 2022
21 °C

ಸೂಪರ್ 30: ಯಶೋಗಾಥೆಯ ಎಳೆದ ಮೆಲೋಡ್ರಾಮಾ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಚಿತ್ರ: ಸೂಪರ್ 30 (ಹಿಂದಿ)
ನಿರ್ಮಾಣ: ಫ್ಯಾಂಟಮ್ ಫಿಲ್ಮ್ಸ್, ನಾಡಿಯಾದ್‌ವಾಲಾ ಗ್ರ್ಯಾಂಡ್‌ಸನ್‌ ಎಂಟರ್‌ಟೇನ್‌ಮೆಂಟ್‌, ರಿಲಯನ್ಸ್‌ ಎಂಟರ್‌ಟೇನ್‌ಮೆಂಟ್
ನಿರ್ದೇಶನ: ವಿಕಾಸ್ ಬೆಹ್ಲ್
ತಾರಾಗಣ: ಹೃತಿಕ್ ರೋಷನ್, ಮೃಣಾಲ್ ಠಾಕೂರ್, ಪಂಕಜ್ ತ್ರಿಪಾಠಿ, ವೀರೇಂದ್ರ ಸಕ್ಸೇನಾ

 **

ಶೈಕ್ಷಣಿಕ ವಸ್ತುವಿನ ಯಶಸ್ವಿ ವಸ್ತುವನ್ನು ವಿಡಂಬನೆ ಹಾಗೂ ಸಮಕಾಲೀನ ಪ್ರಜ್ಞೆಯಿಂದ ಪ್ರಸ್ತುತಪಡಿಸುವುದು ಸವಾಲು. ಅದರಲ್ಲೂ ವ್ಯಕ್ತಿಯ ಯಶೋಗಾಥೆ ಹೇಳಲು ಹೊರಟರೆ ಅದು ಡಾಕ್ಯುಮೆಂಟರಿ ಆಗಿಬಿಡುವ ಅಪಾಯವಿದೆ. ವಿಕಾಸ್ ಬೆಹ್ಲ್‌ ಹಾಗೆ ಆಗದಂತೆ ಎಚ್ಚರ ವಹಿಸಿಯೇ ಅಂಥ ವಸ್ತುವಿಗೆ ಮೆಲೋಡ್ರಾಮಾದ ಪೊರೆ ತೊಡಿಸಿದ್ದಾರೆ.

ಪಟ್ನಾದ ಗಣಿತಜ್ಞ ಆನಂದ್ ಕುಮಾರ್ 30 ಬಡಮಕ್ಕಳಿಗೆ ಪಾಠ ಹೇಳಿ, ಐಐಟಿ ಪರೀಕ್ಷೆಗೆ ಆಯ್ಕೆಯಾಗುವಂತೆ ಮಾಡಿದ ನಿಜ ಪ್ರಸಂಗ ಸಿನಿಮಾದ ದ್ರವ್ಯ. ಅದನ್ನು ರಿಯಲಿಸ್ಟಿಕ್‌ ಸಿನಿಮಾ ಆಗಿಸುವ ಪ್ರಯೋಗಕ್ಕೆ ವಿಕಾಸ್‌ ಕೈಹಾಕದೆ, ಅತಿ ನಾಟಕೀಯ ದೃಶ್ಯಗಳ ಮನರಂಜನೆಯ ದಾರಿಯಲ್ಲಿ ನಡೆದಿದ್ದಾರೆ. ಇದರಿಂದಾಗಿಯೇ ಅಗತ್ಯಕ್ಕಿಂತ ಹೆಚ್ಚು ಸುದೀರ್ಘವಾದ ಚಿತ್ರಪಟ (155 ನಿಮಿಷಗಳು) ಇದಾಗಿದೆ.

ಗಣಿತದ ಉನ್ನತ ಅಧ್ಯಯನಕ್ಕಾಗಿ ಕೇಂಬ್ರಿಜ್‌ನಿಂದ ಅವಕಾಶ ಗಿಟ್ಟಿಸಿಕೊಳ್ಳುವ ಕಥಾನಾಯಕ ಹಾಸಿ ಹೊದೆಯುವಂತಹ ಬಡತನದಿಂದಾಗಿ ವಿಮಾನ ಹತ್ತಲಾಗುವುದಿಲ್ಲ. ಶಿಕ್ಷಣ ಸಚಿವರ ಹುಸಿ ಭರವಸೆ, ಅಪ್ಪ–ಅಮ್ಮನ ಕಕ್ಕುಲತೆ, ಕಾಳಜಿಯ ಹೊರತಾಗಿಯೂ ಭವಿಷ್ಯ ನಲುಗುತ್ತದೆ. ಅಮ್ಮ ಮಾಡುವ ಹಪ್ಪಳವನ್ನು ತನ್ನ ಆಫರ್‌ ಲೆಟರ್‌ ಸುತ್ತಿಯೇ ಮಾರುವ ಹೃದಯವಿದ್ರಾವಕ ಪ್ರಸಂಗವನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಸಿನಿಮಾದ ಮೊದಲರ್ಧ ಇಂಥ ಭಾವುಕ ಸನ್ನಿವೇಶಗಳಿಂದ ಇಡುಕಿರಿದಿದೆ. ಅಕಸ್ಮಾತ್ತಾಗಿ ಐಐಟಿ ತರಬೇತಿ ಕೇಂದ್ರದಲ್ಲಿ ಪಾಠ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುವ ನಾಯಕ, ಆಮೇಲೆ ಪಥ ಬದಲಿಸುತ್ತಾನೆ. ಬಡ ಮಕ್ಕಳಿಗೆ ಉಚಿತವಾಗಿ ಅದೇ ರೀತಿಯಲ್ಲಿ ಬೋಧಿಸಿ ಐಐಟಿಗೆ ಆಯ್ಕೆ ಆಗುವಂತೆ ಮಾಡುವ ಅಪರೂಪದ ಸಂಕಲ್ಪ ಅದು. ಎರಡನೇ ಅರ್ಧದಲ್ಲಿ ಸಿನಿಮಾ ಇನ್ನಷ್ಟು ಮೆಲೋಡ್ರಾಮಾ. ಆಗೀಗ ಅಳಿಸಬೇಕು, ಬಡತವನ್ನು ಎದ್ದುಕಾಣುವಂತೆ ತೋರಲೇಬೇಕು ಎನ್ನುವ ನಿರ್ದೇಶಕರ ಧೋರಣೆಯಿಂದಾಗಿ ಗಣಿತ ಕಲಿಕೆಯ ಸೂಕ್ಷ್ಮಗಳು ನಾಜೂಕಾಗಿ ಅನಾವರಣಗೊಂಡಿಲ್ಲ; ಪ್ರಾಸಂಗಿಕವಾಗಿ ಪ್ರಕಟಗೊಂಡವೆಯಷ್ಟೆ.

ನಾಯಕ ಹೃತಿಕ್ ರೋಷನ್ ಅಸಹಜ ನಿಯಂತ್ರಿತ ಅಭಿನಯಕ್ಕೆ ಮುಂದಾಗಿದ್ದಾರೆ. ಅವರ ಕಂದು ಮೇಕಪ್ ಅಸಹನೀಯ. ಶಿಕ್ಷಣ ಮಂತ್ರಿಯ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಅಭಿನಯ ಹೆಚ್ಚು ಪರಿಣಾಮಕಾರಿ. ಅನಯ್ ಗೋಸ್ವಾಮಿ ಸಿನಿಮಾಟೊಗ್ರಫಿ ಬಡತನದ ಕತ್ತಲ ಮೇಲೆ ಬೆಳಕು ಬೀರಿದೆ. ಅಜಯ್–ಅತುಲ್ ಸಂಗೀತ ಔಚಿತ್ಯಕ್ಕೆ ಒದಗಿಬಂದಿಲ್ಲ.

‘ಬೋಧನೆ ಸಿನಿಮಾದ ಕೆಲಸವಲ್ಲ’ ಎಂದು ನಂಬಿರುವ ವೈಯಾಕರಣಿಗಳಿದ್ದಾರೆ. ಅದೂ ಸಿನಿಮಾದ ರಂಜನೆಯ ದಾರಿಯಾಗಬಲ್ಲದು ಎನ್ನುವುದು ಮಾರುಕಟ್ಟೆ ಪ್ರಣೀತ ನಿರ್ದೇಶಕ ವಿಕಾಸ್ ನಂಬುಗೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು