ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಗೆ ಗುಡಿ ಕಟ್ಟಿ ಸ್ಮರಿಸಿದ ಅಭಿಮಾನಿಗಳು!

Last Updated 24 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ರೆಬಲ್‌ಸ್ಟಾರ್‌ ಅಂಬರೀಷ್‌ ಎಂದರೆ ಅಭಿಮಾನವನ್ನೂ ಮೀರಿದ ಪ್ರೇಮ. ಅಂಬರೀಷ್‌ ಮೃತಪಟ್ಟು 2 ವರ್ಷ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗಿಲ್ಲ. ಈಗಲೂ ಹಳ್ಳಿಹಳ್ಳಿಗಳಲ್ಲಿ ಅಂಬರೀಷ್‌ ಭಾವಚಿತ್ರ, ಕಟೌಟ್‌ಗಳು ರಾರಾಜಿಸುತ್ತವೆ. ಮದ್ದೂರು ತಾಲ್ಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮಸ್ಥರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪ್ರೀತಿಯ ರೆಬಲ್‌ಸ್ಟಾರ್‌ಗೆ ಗುಡಿಯೊಂದನ್ನು ನಿರ್ಮಿಸಿದ್ದಾರೆ, ಪುಟ್ಟ ಗುಡಿಯೊಳಗೆ ಅಂಬರೀಷ್‌ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ.

ಅಂಬರೀಷ್‌ ಅವರ 2ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಮಂಡ್ಯ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳು ಜರುಗಿದವರು. ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ‘ಅಂಬಿಗುಡಿ’ ಉದ್ಘಾಟಿಸುವ ಮೂಲಕ ಸ್ಮರಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಹೊಟ್ಟೆಗೌಡನದೊಡ್ಡಿ ಗ್ರಾಮವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಗ್ರಾಮದುದ್ದಕ್ಕೂ ಅಂಬರೀಷ್‌, ಸಂಸದೆ ಸುಮಲತಾ ಅಂಬರೀಷ್‌, ಅಂಬಿ ಪುತ್ರ ಅಭಿಷೇಕ್‌ , ನಟ ದರ್ಶನ್‌ ಮುಂತಾದ ನಟರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಗ್ರಾಮದ ರಸ್ತೆಗಳಲ್ಲಿ ತಳಿರು, ತೋರಣ ಕಟ್ಟಲಾಗಿತ್ತು.

ಗ್ರಾಮದ ಹೆಬ್ಬಾಗಿಲಿನಿಂದ ತೆರೆದ ವಾಹನದಲ್ಲಿ ಸುಮಲತಾ, ದರ್ಶನ್‌, ಅಭಿಷೇಕ್‌ ಅವರನ್ನು ಅಂಬಿ ಗುಡಿಯವರೆಗೆ ಕರೆದೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾ ತಂಡಗಳು ಸಾಥ್‌ ಕೊಟ್ಟವು. ರಸ್ತೆಯ ಇಕ್ಕೆಲಗಳಲ್ಲಿ ಹೂವಿನ ಮಳೆಸುರಿಸುವ ಮೂಲಕ ಸ್ವಾಗತ ಕೋರಲಾಯಿತು. ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಮೆರವಣಿಗೆ ಅಂಬಿ ಗುಡಿ ತಲುಪುತ್ತಿದ್ದಂತೆ ಜಯಘೋಷಗಳ ಸದ್ದು ಮುಗಿಲು ಮುಟ್ಟಿತ್ತು.

₹ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಬಿ ಗುಡಿಯನ್ನು ದರ್ಶನ್‌ ಅನಾವರಣಗೊಳಿಸಿದರು. ಕಂಚಿನ ಪುತ್ಥಳಿ ಮುಂದೆ ಕೈಮುಗಿದು ನಿಂತಿದ್ದ ದರ್ಶನ್‌ ಕೆಲಕಾಲ ಭಾವುಕರಾಗಿದ್ದರು. ‘ಅಂಬರೀಷ್‌ ಅವರು ಮೃತಪಟ್ಟಿದ್ದಾರೆ ಎಂದು ಯಾವಾಗಲೂ ಅನ್ನಿಸಿಲ್ಲ. ಅವರು ಸದಾ ನನ್ನ ಹೃದಯಲ್ಲಿದ್ದಾರೆ. ಸುಂದರ ಪುತ್ಥಳಿ ನಿರ್ಮಿಸಿರುವ ಹೊಟ್ಟೆಗೌಡನದೊಡ್ಡಿ ಜನರನ್ನು ಅಭಿನಂದಿಸುತ್ತೇನೆ’ ಎಂದರು. ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್‌ ‘ರಾಬರ್ಟ್’ ಚಿತ್ರದ ಡೈಲಾಗ್‌ ಹೇಳಿ ರಂಜಿಸಿದರು.

ಯಶ್‌ ವಿಡಿಯೊ ಸಂದೇಶ: ಕಾರ್ಯಕ್ರಮದಲ್ಲಿ ನಟ ಯಶ್‌ ಅವರ ಗೈರುಹಾಜರಿ ಎದ್ದುಕಾಣುತ್ತಿತ್ತು. ಇವರಿಬ್ಬರು ಕಳೆದ ಲೋಕಸಭಾ ಚುನಾವಣೆ ವೇಳೆ ಜೋಡೆತ್ತು ಎಂದೇ ಪ್ರಸಿದ್ಧಿ ಪಡೆದಿದ್ದರು.

ಅಭಿಮಾನಿಗಳು ಕೂಡ ಯಶ್‌, ಯಶ್‌ ಎಂದು ಕೂಗಿದರು. ಅವರು ಕಳಿಸಿದ್ದ ವಿಡಿಯೊ ಸಂದೇಶವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ‘ಅಂಬಿ ಅಣ್ಣನಿಗೆ ಅಪಾರ ಪ್ರೀತಿಕೊಟ್ಟು ಅವರು ಇಲ್ಲ ಎಂಬ ಕೊರಗು ನೀಗಿಸಿದ್ದೀರಿ. ಗುಡಿ ಕಟ್ಟಿ ಅವರ ನೆನಪುಗಳನ್ನು ಜೀವಂತವಾಗಿ ಇರಿಸಿದ್ದೀರಿ’ ಎಂದು ಯಶ್‌ ಹೇಳಿದರು.

ಅಂಬಿ ಗುಡಿಯವರೆಗೆ ಸಮಲತಾ, ದರ್ಶನ್‌, ಅಭಿಷೇಕ್‌ ಅವರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT