ಬುಧವಾರ, ಡಿಸೆಂಬರ್ 1, 2021
21 °C

‘ದಳಪತಿ’ ವಿಜಯ್‌ಗೆ ತಲೆನೋವು ತಂದ ಕೊರಿಯನ್‌ ‘ಮಾಸ್ಟರ್’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಿ‌‌ಗಿಲ್’ ಚಿತ್ರದ ಬಳಿಕ ಕಾಲಿವುಡ್ ನಟ ‘ದಳಪತಿ’ ವಿಜಯ್‌ ಅಭಿನಯಿಸಿರುವ ಸಿನಿಮಾ ‘ಮಾಸ್ಟರ್‌’. ಇದಕ್ಕೆ ಲೋಕೇಶ್‌ ಕನಕರಾಜ್‌ ಆ್ಯಕ್ಷನ್‌ ಹೇಳಿದ್ದಾರೆ. ಕೋವಿಡ್‌–19 ಕಾಣಿಸಿಕೊಳ್ಳದಿದ್ದರೆ ಏಪ್ರಿಲ್‌ 9ರಂದು ಈ ಚಿತ್ರ ಥಿಯೇಟ‌ರ್‌ಗೆ ಅಪ್ಪಳಿಸಬೇಕಿತ್ತು. ಕೊರೊನಾ ಸೋಂಕು ಹೆಚ್ಚಳದ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಈ ನಡುವೆಯೇ ‘ಮಾಸ್ಟರ್‌’ ಸಿನಿಮಾ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಈ ಚಿತ್ರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿದೆ ಎಂದು ವಿಜಯ್‌ ಅಭಿಮಾನಿಗಳೂ ಸಂತಸದ ಅಲೆಯಲ್ಲಿ ತೇಲುತ್ತಿದ್ದರು. ಆದರೆ, ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿರುವ ಸೆವೆನ್ ಸ್ಟಾರ್‌ ಸ್ಟುಡಿಯೊದ ಲಲಿತ್‌ ಕುಮಾರ್‌ ಈ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು ಅಮೆಜಾನ್‌ ಪ್ರೈಮ್‌ನಲ್ಲಿ ಹಂಚಿಕೊಂಡಿರುವ ಕೊರಿಯನ್‌ ಸಿನಿಮಾದ ಪೋಸ್ಟರ್‌. ಅಂದಹಾಗೆ ಈ ಚಿತ್ರದ ಟೈಟಲ್‌ ಕೂಡ ‘ಮಾಸ್ಟರ್‌’ ಎಂದಿದೆ.

‘ಮಾಸ್ಟರ್‌ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಅಮೆಜಾನ್‌ ಪ್ರೈಮ್‌ನ ಪೋಸ್ಟರ್‌ನಲ್ಲಿರುವುದು 2016ರಲ್ಲಿ ನಿರ್ಮಾಣವಾಗಿರುವ ಕೊರಿಯನ್‌ ‘ಮಾಸ್ಟರ್‌’ ಸಿನಿಮಾ. ಅದು ತಮಿಳು ಮಾಸ್ಟರ್‌ ಸಿನಿಮಾವಲ್ಲ’ ಎಂದು ಲಲಿತ್‌ ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದಲ್ಲಿ ಚಿತ್ರದ ನಿರ್ಮಾಪಕ ಕ್ಸೇವಿಯರ್ ಬ್ರಿಟ್ಟೊ, ‘ಒಟಿಟಿಯಲ್ಲಿ ಯಾವುದೇ ಕಾರಣಕ್ಕೂ ‘ಮಾಸ್ಟರ್‌’ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ. ಥಿಯೇಟರ್‌ನಲ್ಲಿಯೇ ಬಿಡುಗಡೆ ಮಾಡುತ್ತೇವೆ’ ಎಂದು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ಇನ್ನೂ ಸಿನಿಮಾಗಳ ಬಿಡುಗಡೆಗೆ ಅನುಮತಿ ನೀಡಿಲ್ಲ. ಅನುಮತಿ ನೀಡಿದ ಬಳಿಕವೂ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಇದರ ಅನ್ವಯವೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರ ಇದು. ವಿಜಯ್‌ಗೆ ಮಾಳವಿಕಾ ಮೋಹನನ್‌ ನಾಯಕಿಯಾಗಿದ್ದಾರೆ. ವಿಜಯ್‌ ಸೇತುಪತಿ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು