ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಸಾಮ್ರಾಟರಿಗೆ ಸಾವಿಲ್ಲ!

Last Updated 12 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

50ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಉದಯಿಸಿದ ಸಂಗೀತ ನಿರ್ದೇಶಕರಲ್ಲಿ ಜಿ.ಕೆ. ವೆಂಕಟೇಶ್‌, ಟಿ.ಜಿ.ಲಿಂಗಪ್ಪ, ವಿಜಯ್‌ ಭಾಸ್ಕರ್‌, ಉಪೇಂದ್ರ ಕುಮಾರ್‌, ರಾಜನ್‌ –ನಾಗೇಂದ್ರ ಅಸಾಮಾನ್ಯ ಪ್ರತಿಭೆಗಳೆನ್ನುವ ಮಾತಿನಲ್ಲಿ ಅತಿಶಯವಿಲ್ಲ. ಹಿಂದಿ ಚಿತ್ರರಂಗದಲ್ಲಿ ಶಂಕರ್‌– ಜೈಕಿಶನ್‌, ಲಕ್ಷ್ಮಿಕಾಂತ್‌– ಪ್ಯಾರೆಲಾಲ್‌ ಜೋಡಿ ಇದ್ದಂತೆ,ಕನ್ನಡ ಚಿತ್ರರಂಗ ಮೊದಲು ಕಂಡ ಅಪರೂಪದ ಸಂಗೀತ ನಿರ್ದೇಶಕ ಜೋಡಿರಾಜನ್‌ – ನಾಗೇಂದ್ರ ಅವರದು.ಈ ಅಪೂರ್ವ ಸಹೋದರರು ಎರಡು ದೇಹ, ಒಂದು ಆತ್ಮದಂತೆಯೇ ಇದ್ದವರು. ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳಿ ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇವರು ದಕ್ಷಿಣ ಭಾರತದ ಚಿತ್ರಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಸಾಮಾನ್ಯವಾದುದಲ್ಲ.

2000ರ ಸಾಲಿನಲ್ಲಿ ನಾಗೇಂದ್ರ ಹೋಗಿಬಿಟ್ಟರು.ಈ ಅಸಾಮಾನ್ಯರ ಪೀಳಿಗೆಯಲ್ಲಿ ಕೊನೆಯ ಕೊಂಡಿಯಂತೆ ರಾಜನ್ ಮಾತ್ರ‌ ಉಳಿದಿದ್ದರು. ನಾಗೇಂದ್ರ ಹೋಗಿಎರಡು ದಶಕ ತುಂಬುವುದರೊಳಗೆ ಈಗ ರಾಜನ್‌ ಅವರನ್ನು ಸಹ ಕಳೆದುಕೊಂಡುಬಿಟ್ಟೆವು. ಈಗ ಚಿತ್ರಸಂಗೀತ ಲೋಕ ನಿಜಕ್ಕೂ ಬಡವಾಗಿದೆ. ಬೆಳಿಗ್ಗೆ ಪತ್ರಿಕೆಯಲ್ಲಿ ಅವರ ಸಾವಿನ ಸುದ್ದಿ ಓದುವಾಗ ಗಳಗಳನೇ ಅತ್ತುಬಿಟ್ಟೆ, ಅವರ ಮಗ ಅನಂತುಗೆ ಸಾಂತ್ವನ ಹೇಳುವಾಗಲೂ ನನ್ನ ಗಂಟಲಸೆರೆ ಉಕ್ಕಿಬಂತು.

ರಾಜನ್‌– ನಾಗೇಂದ್ರ ನಾವೆಲ್ಲ ಒಟ್ಟಿಗೆ ಚಿತ್ರರಂಗದಲ್ಲಿ ಒಟ್ಟಿಗೆ ಬೆಳೆದವರು, ಎಲ್ಲದಕ್ಕಿಂತ ನಾವು ಮೈಸೂರಿನವರು ಎನ್ನುವುದು ನಮ್ಮಲ್ಲಿ ಒಡನಾಟ– ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿತ್ತು.ವಯಸ್ಸಿನಲ್ಲಿ ನಾನು ರಾಜನ್‌ಗಿಂತ ಸ್ವಲ್ಪ ದೊಡ್ಡವನು. ಚಿತ್ರರಂಗದ ಏನೇ ಕಾರ್ಯಕ್ರಮವಿದ್ದರೂ ಹಿರಿಯರಿಗೆ ಆಹ್ವಾನ ನೀಡಿದರೆ ಇತ್ತೀಚೆಗಿನವರೆಗೂ ನಾವಿಬ್ಬರೂ ಅಲ್ಲಿರುತ್ತಿದ್ದೆವು. ಕೆಲ ವರ್ಷಗಳ ಹಿಂದೆ ಬ್ಯೂಗಲ್‌ ರಾಕ್ ಕನ್ನಡ ಸಂಘದವರು ‘ದೊರೆ– ಭಗವಾನ್‌ ಮತ್ತು ರಾಜನ್‌– ನಾಗೇಂದ್ರ ಮ್ಯೂಸಿಕ್‌ ನೈಟ್ಸ್‌’ ಏರ್ಪಡಿಸಿದ್ದರು. ನಮ್ಮ ಜೋಡಿಗಳಲ್ಲಿ ಮೂಡಿ ಬಂದ ಚಿತ್ರಗಳ ಗೀತೆಗಳನ್ನು ಅಂದು ಗಾಯಕರು ಹಾಡಿ ರಂಜಿಸಿದರು. ಕಾರ್ಯಕ್ರಮ ವೀಕ್ಷಣೆಗೆ ಜನಸಾಗರವೇ ಕಿಕ್ಕಿರಿದು ಸೇರಿತ್ತು. ನಾನು ಮತ್ತು ರಾಜನ್‌ ಅಲ್ಲಿ ಆ ದಿನ ತುಂಬಾ ಹೊತ್ತು ಸಮಯ ಕಳೆದಿದ್ದೆವು.

ನಾವು(ದೊರೆ–ಭಗವಾನ್‌) ಸಿನಿಮಾ ನಿರ್ದೇಶನಶುರು ಮಾಡಿದ ಅವಧಿಯಲ್ಲಿ ಸಂಗೀತ ನಿರ್ದೇಶಕರಾಗಿ ಜಿ.ಕೆ. ವೆಂಕಟೇಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಉತ್ತುಂಗದ ಕಾಲದಲ್ಲಿದ್ದರು. ಅದು 1964ನೇ ಇಸವಿ, ನಾವು ‘ಮಂತ್ರಾಲಯದ ಮಹಾತ್ಮೆ’ ಸಿನಿಮಾ ಮಾಡುವಾಗ ಜಿ.ಕೆ.ವೆಂಕಟೇಶ್‌ ಕೊಂಚ ಬ್ಯುಸಿಯಾಗಿದ್ದರು. ಆಗ ನಮಗೆ ಪರ್ಯಾಯ ಆಯ್ಕೆಯಾಗಿ ಕಾಣಿಸಿದ್ದು ರಾಜನ್–‌ ನಾಗೇಂದ್ರ. ನಾವು ರಾಘವೇಂದ್ರ ಸ್ವಾಮಿಗಳ ಸಿನಿಮಾ ಮಾಡುತ್ತಿದ್ದೇವೆ ಎಂದು ಇಬ್ಬರು ಸಹೋದರರನ್ನು ಭೇಟಿ ಮಾಡಿದೆವು. ಆಗ ಅವರು ‘ನೀವುಸಂಭಾವನೆ ಕೊಟ್ಟರೆ ಕೊಡಿ, ಬಿಟ್ಟರೆ ಬಿಡಿ’ ಎನ್ನುತ್ತಾ ಸಂಗೀತ ಸಂಯೋಜಿಸಲು ಕುಳಿತರು. ತುಂಬಾ ಒಳ್ಳೊಳ್ಳೆಯ ಹಾಡುಗಳನ್ನು ಕೊಟ್ಟರು. ನಂತರ ನಮಗೆ ಜಿ.ಕೆ. ವೆಂಕಟೇಶ್‌ ‘ಕಸ್ತೂರಿ ನಿವಾಸ’ ಸಿನಿಮಾದವರೆಗೂ ಸಿಕ್ಕರು, ಮತ್ತೆ ಅವರು ಬ್ಯುಸಿಯಾದ ತಕ್ಷಣ ‘ಎರಡು ಕನಸು’ ಚಿತ್ರಗಳಿಗೆ ರಾಜನ್‌– ನಾಗೇಂದ್ರ ಅವರನ್ನು ಪುನಃಕರೆತಂದೆವು. ಆ ಸಿನಿಮಾದ ಆರೂ ಹಾಡುಗಳನ್ನು ಈ ಜೋಡಿ ಹಿಟ್‌ ಮಾಡಿಸಿತು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅವರಿಗೆ 1974ರಲ್ಲಿ ರಾಜ್ಯಪ್ರಶಸ್ತಿಯೂ ಸಿಕ್ಕಿತು.ನಂತರ ಈ ಜೋಡಿಯನ್ನು ನಾವು ಬಿಡಲೇ ಇಲ್ಲ. ‘ಬಯಲುದಾರಿ’, ‘ಚಂದನಗೊಂಬೆ’... ಹೀಗೆ ಸಾಲು ಸಾಲು ಚಿತ್ರಗಳ ನಾಗಾಲೋಟ ಮುಂದುವರಿಯಿತು. ನಮ್ಮ ಅನುಬಂಧ ಸುಮಾರು 20 ಚಿತ್ರಗಳನ್ನು ಮಾಡಿಸಿತು. ನಮ್ಮನ್ನು ಬಿಟ್ಟರೆ ಅವರನ್ನು ಬಹಳ ಇಷ್ಟ ಪಟ್ಟ ನಿರ್ದೇಶಕರೆಂದರೆ ಭಾರ್ಗವ ಮತ್ತು ಸಿದ್ದಲಿಂಗಯ್ಯ ಅವರು. ಆ ಕಾಲಘಟ್ಟದಲ್ಲಿ ಕನ್ನಡದ ಬಹುತೇಕ ಎಲ್ಲ ನಿರ್ದೇಶಕರಿಗೂ ಈ ಜೋಡಿ ಅಚ್ಚುಮೆಚ್ಚಿನಸಂಗೀತ ನಿರ್ದೇಶಕರಾಗಿದ್ದರು. ಇವರನ್ನು ಇಷ್ಟೊಂದು ಮೆಚ್ಚಲು ಯಶಸ್ಸು ಒಂದೇ ಕಾರಣವಲ್ಲ, ಅವರ ಕಾರ್ಯಶೈಲಿ ಇತ್ತಲ್ಲಾ ಅದೂ ತುಂಬಾ ವೃತ್ತಿಪರವಾಗಿತ್ತು.

ಹಾಡಿನ ವಿಷಯಕ್ಕೆ ಬಂದಾಗ ಮಾತ್ರ ‘ಈ ಹಾಡು ಸರಿ ಇಲ್ಲ ಎಂದು ತಮ್ಮ, ಇಲ್ಲ ಇದು ಸರಿ ಇದೆ’ ಎಂದು ತಮ್ಮ ಮಾತೃಭಾಷೆ ತೆಲುಗಿನಲ್ಲಿಇಬ್ಬರೂ ಜಗಳ ಕಾಯುತ್ತಿದ್ದನ್ನು ಕಂಡಿದ್ದೆ. ಈ ಸಹೋದರರ ತಂದೆ ಒಳ್ಳೆಯ ವೀಣಾ ವಾದಕರಾಗಿದ್ದರು. ಟ್ಯೂಬೊ ಫೋನ್‌ ಎನ್ನುವ ವಾದ್ಯವನ್ನು, ಜತೆಗೆ ಹಾರ್ಮೋನಿಯಂ ಅನ್ನು ನಾಗೇಂದ್ರ ನುಡಿಸುತ್ತಿದ್ದರು. ರಾಜನ್‌ ವೀಣೆ ಮತ್ತು ಪಿಟೀಲು ವಾದಕ ಕೂಡ ಆಗಿದ್ದರು. ಸಂಗೀತದ ಕಲೆ ಇವರಿಗೆ ರಕ್ತಗತವಾಗಿ ಜೀನಿನಲ್ಲೇ ಬಂದಿತ್ತು.

ಚಿತ್ರದ ಸನ್ನಿವೇಶ ಹೇಳಿ, ಮದರಾಸಿನ ಸ್ವಾಗತ್‌ ಹೋಟೆಲ್‌ನಲ್ಲಿ ರೂಮು ಮಾಡಿಕೊಟ್ಟರೆ,ಎರಡು ದಿನ ಬಿಟ್ಟ ಬರಲು ಹೇಳುತ್ತಿದ್ದರು. ಒಂದು ಚಿತ್ರದಲ್ಲಿ ಐದು ಹಾಡುಗಳಿದ್ದರೆ ಐದೂ ಹಾಡುಗಳಿಗೆ ಪಲ್ಲವಿ ಮತ್ತು ಚರಣಕ್ಕೆ ಮೂರು ಮೂರು ರಾಗಗಳಂತೆ 15 ರಾಗಗಳನ್ನು ಸಂಯೋಜಿಸಿ ಆಯ್ಕೆಯನ್ನು ನಮಗೇ ಅಂದರೆ ನಿರ್ದೇಶಕರಿಗೆ ಬಿಟ್ಟುಬಿಡುತ್ತಿದ್ದರು. ಅಂದಿನ ಕಾಲದಲ್ಲಿ ಚಿತ್ರದ ಸನ್ನಿವೇಶ, ರಾಗ– ತಾಳಕ್ಕೆ ಸಾಹಿತ್ಯ ಹೊಂದಿಕೆಯಾಗದಿದ್ದಲ್ಲಿ ಒಬ್ಬ ಸಾಹಿತಿಯಿಂದ ಸಾಹಿತ್ಯ ಅಥವಾ ಒಂದು ಪದವನ್ನು ತಿದ್ದಿಸುವಸಾಮರ್ಥ್ಯವಿದ್ದಿದ್ದು ರಾಜನ್‌ಗೆ ಮಾತ್ರ. ಅವರ ಕಾಲದಲ್ಲಿ ಚಿ.ಉದಯ್‌ಶಂಕರ್‌, ವಿಜಯನರಸಿಂಹ,ಹುಣಸೂರು ಕೃಷ್ಣಮೂರ್ತಿ, ಗೀತಪ್ರಿಯ ಅವರಂತಹ ಅಸಾಧಾರಣ ಪ್ರತಿಭೆಯ ಚಿತ್ರಸಾಹಿತಿಗಳಿದ್ದರು. ರಾಜನ್‌ –ನಾಗೇಂದ್ರ ನೀಡುತ್ತಿದ್ದ ಟ್ಯೂನ್‌ಗೆ ಥಟ್ಟನೇ ಒಂದು ಹಾಡು ಬರೆದು ಬಿಡುತ್ತಿದ್ದರು. ಐದು ನಿಮಿಷಕ್ಕೊಂದು ಹಾಡುವ ಬರೆಯುವ ಸಾಮರ್ಥ್ಯವಿದ್ದಂತಹ ಚಿ. ಉದಯ್‌ಶಂಕರ್‌ ಅವರಿಂದ ‘ಬೆಂಕಿಯ ಬಲೆ’ ಸಿನಿಮಾಕ್ಕೆ ಹಾಡು ಬರೆಸುವಾಗ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಹ ಸಾಹಿತ್ಯ ಮೂಡಿಬರುವವರೆಗೂ ಹಾಡನ್ನು ಒಪ್ಪಿರಲಿಲ್ಲ. ಹೋಟೆಲ್‌ ಬಾಲ್ಕನಿಯಲ್ಲಿ ನಿಂತುಕೊಂಡು ಉದಯ್‌ಶಂಕರ್‌ ಚಿಂತಿಸುತ್ತಾ, ಹೊರಗೆ ನೋಡುವಾಗ ಹೊರೆಗೆ ಮಳೆ ಇತ್ತು, ಬಿಸಿಲೂ ಇತ್ತು. ಆ ಸನ್ನಿವೇಶವನ್ನು ಗ್ರಹಿಸಿ ‘ಬಿಸಿಲಾದರೇನು, ಮಳೆಯಾದರೇನು’ ಹಾಡು ಬರೆದು ರಾಜನ್‌ ಕೈಗಿಟ್ಟಾಗ ‘ಆಹಾ ನೋಡಿದ್ರಾ ಹಿಂಗ್‌ ಇರಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ಆ ಹಾಡಿಗೆ ಸಂಗೀತ ಸಂಯೋಜಿಸಿದರು. ಹೀಗೆ ಅವರಲ್ಲಿದ್ದದ್ದು ಪ್ರತಿ ಹಾಡು ಚೆಂದವಾಗಿ ಬರಬೇಕು, ಸಂಗೀತ ರಸಿಕನ ಮನಸೂರೆಗೊಳ್ಳಬೇಕೆಂಬ ತುಡಿತವಿತ್ತು.

ಅವರು ಎಷ್ಟೊಂದು ಮೃದು ಸ್ವಭಾವದವರೆಂದರೆ ಅವರ ಜತೆಗಿನವರನ್ನು, ನಿರ್ಮಾಪಕರು, ನಿರ್ದೇಶಕರು, ಗಾಯಕರು, ನಟ–ನಟಿಯರು ಹೀಗೆ ಯಾರೊಬ್ಬರನ್ನು ಗದರುವಿಕೆ ಧ್ವನಿಯಲ್ಲಿ ಮಾತನಾಡಿಸಿದ್ದನ್ನೇ ನಾವು ನೋಡಲಿಲ್ಲ. ಮಾತು ಕೂಡ ಅಷ್ಟೇ ‘ಇದಮಿತ್ಥಂ’. ಅವರ ಸಂಗೀತ ನಿರ್ದೇಶನವಿದ್ದ ಚಿತ್ರದಲ್ಲಿ ಪುರುಷ ಧ್ವನಿಯ ಗಾಯಕರ ಅವಶ್ಯಕತೆ ಇದೆ ಎಂದರೆ ಅಲ್ಲಿ ಎಸ್‌.ಪಿ.ಬಿ ಇರಲೇಬೇಕಿತ್ತು. ಎಸ್‌ಪಿಬಿ ಮೇಲೆ ಅವರಿಗೆ ಅಷ್ಟೊಂದು ಅಗಾಧ ಪ್ರೀತಿ ಮತ್ತು ಅವರ ಸಂಗೀತ ಸಂಯೋಜನೆಗೆ ನಿಜವಾದ ನ್ಯಾಯ ಒದಗಿಸುವ ತಾಕತ್ತು ಎಸ್‌‍ಪಿಬಿಯಲ್ಲಿ ಇತ್ತೆಂದು ಅವರು ನಂಬಿದ್ದರು. ಎಸ್‌ಪಿಬಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದೇ ಇವರು.

ಹಾಗೆಯೇ ಅವರ ಮಾತೃಪ್ರೇಮ ಮತ್ತು ಮಾತೃಭಕ್ತಿ ಅನುಕರಣೀಯವಾದುದು. ಪ್ರತಿಯೊಂದು ಚಿತ್ರಕ್ಕೂ ಸಂಗೀತ ಸಂಯೋಜಿಸುವ ಮೊದಲು ಅವರ ತಾಯಿಯಿಂದ ಸ್ಟುಡಿಯೊದಲ್ಲಿ ಪೂಜೆ ಮಾಡಿಸಿ, ತಾಯಿಯ ಪಾದಗಳಿಗೆ ಎರಗಿ ಸಂಗೀತ ಸಂಯೋಜನೆ ಕೆಲಸ ಶುರು ಮಾಡುತ್ತಿದ್ದರು. 2000ರ ನಂತರ ಚಿತ್ರರಂಗಕ್ಕೆ ಡಿಜಿಲೀಕರಣದ ಸುನಾಮಿ ಅಬ್ಬರಿಸುತ್ತಿದ್ದಂತೆ ಪಾಪ್‌– ರ‍್ಯಾಪ್‌ ಅಬ್ಬರವೂ ಶುರುವಾಯಿತು. ಪಾಪ್‌– ರ‍್ಯಾಪ್‌ ಅನ್ನು ತಮ್ಮ ಸಂಗೀತದಲ್ಲಿ ರಾಜನ್‌ –ನಾಗೇಂದ್ರ ಅಳವಡಿಸಿಕೊಳ್ಳದೇ ತಾವು ಅನುಸರಿಸಿಕೊಂಡುಬಂದ ಸಾಂಪ್ರದಾಯಿಕ ಸಂಗೀತ ಸಂಯೋಜನೆಗೆ ಅಂಟಿಕೊಂಡರು. 50ರ ದಶಕದಿಂದ 2000ರವರೆಗೆ ಸ್ಯಾಂಡಲ್‌ವುಡ್‌ನದು ಪ್ಲಾಟಿನಂ ಯುಗ. ಈ ಯುಗದ ಚಿತ್ರರಂಗದ ಸಂಗೀತ ಲೋಕವನ್ನು ಅಕ್ಷರಶಃ ಆಳಿದ ಅನಭಿಶಕ್ತ ಸಾಮ್ರಾಟರಲ್ಲಿ ರಾಜನ್‌–ನಾಗೇಂದ್ರ ಅಗ್ರಪಂಕ್ತಿಯವರು. ಅವರು ನೀಡಿದ ಸಂಗೀತದ ಮೂಲಕವೇ ಅವರು ಚಿರಾಯು ಕೂಡ ಹೌದು.

(ನಿರೂಪಣೆ: ಕೆ.ಎಂ. ಸಂತೋಷ್‌ಕುಮಾರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT