ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಲೆಯಿಂದ ಹುಳ ತೆಗೆಯೋ ಸಿನಿಮಾ ‘ಯುಐ’: ನಟ, ನಿರ್ದೇಶಕ ಉಪೇಂದ್ರ ಸಂದರ್ಶನ

Published : 19 ಸೆಪ್ಟೆಂಬರ್ 2024, 23:20 IST
Last Updated : 19 ಸೆಪ್ಟೆಂಬರ್ 2024, 23:20 IST
ಫಾಲೋ ಮಾಡಿ
Comments

ನಟ ಉಪೇಂದ್ರ ಕಳೆದ ಬುಧವಾರ(ಸೆ.18) ತಮ್ಮ ಜನ್ಮದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ದೇಶನ, ತಮ್ಮ ಹೊಸ ಸಿನಿಮಾ ‘ಯುಐ’ ಹಾಗೂ ಹೊಸ ತಂತ್ರಜ್ಞಾನಗಳ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು. ಅವುಗಳ ತುಣುಕುಗಳು ಇಲ್ಲಿ....

*‘ಬರೀ ನಟನೆ ಮಾಡುತ್ತೀರಿ, ಹೆಚ್ಚಾಗಿ ನಿರ್ದೇಶನ ಏಕೆ ಮಾಡುತ್ತಿಲ್ಲ’ ಎಂದು ತುಂಬಾ ಜನ ಕೇಳುತ್ತಾರೆ. ನಾನು ಬೇಕಾದರೆ ಐದಾರು ಮದುವೆ ಆಗಿಬಿಡುತ್ತೇನೆ, ಆದರೆ ನಿರ್ದೇಶನವಿದೆಯಲ್ಲ...ಅದು ಮದುವೆಗಿಂತ ಅಪಾಯಕಾರಿ. ನಿರ್ದೇಶನಕ್ಕೆ ಇಳಿದರೆ ಮಧ್ಯದಲ್ಲೇ ಸಿಕ್ಕಿಹಾಕಿಕೊಳ್ಳುವುದು ಖಚಿತ. (ನಗುತ್ತಾ) ನಿರ್ದೇಶನ ಮಾಡುತ್ತಿದ್ದೇನೆ ಎಂದಾಗಲೇ ‘ಮನೆ ಒಳಗೇ ಬರಬೇಡ ಹೋಗು’ ಎಂದು ಪ್ರಿಯಾಂಕಾ ನನ್ನ ಬಿಟ್ಟೇಬಿಟ್ಟಿದ್ದಾರೆ. ಸಿನಿಮಾ ನಿರ್ದೇಶನ ಎನ್ನುವುದೇ ದೊಡ್ಡ ಯುದ್ಧದಂತೆ.     

*‘ಯುಐ’ ಎರಡೂವರೆ ವರ್ಷದ ಪಯಣ. ಚಿತ್ರದ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಚಿತ್ರದ ದೃಶ್ಯಗಳನ್ನು ನೋಡಿದ ಬಳಿಕ ರಿರೆಕಾರ್ಡಿಂಗ್‌ ಬದಲಿಸಿದರು. ಇದನ್ನು ಯುರೋಪ್‌ನಲ್ಲೇ ಮಾಡಬೇಕು ಎಂದರು. ಸಿನಿಮಾ ನಿರ್ಮಾಣ ಶೈಲಿ (ಮೇಕಿಂಗ್‌ ಸ್ಟೈಲ್‌) ಇದೀಗ ಬದಲಾಗಿದೆ, ಹಿಂದಿನಂತಿಲ್ಲ. ತಂತ್ರಜ್ಞಾನ ಹೊಸದಾದಂತೆ ನಿರ್ಮಾಣ ಶೈಲಿಯೂ ಬದಲಾಗಿದೆ. ‘ಹಿಂದೆಲ್ಲ ಆರು ತಿಂಗಳಿಗೆ ಒಂದು ಸಿನಿಮಾ ಆಗುತ್ತಿತ್ತು, ಮೂರು ದಿನಕ್ಕೆ ಒಂದು ಹಾಡಿನ ಚಿತ್ರೀಕರಣ ಆಗುತ್ತಿತ್ತಲ್ಲವೇ? ಈಗ ಏಕೆ ಇದು ಸಾಧ್ಯವಿಲ್ಲ’ ಎಂದು ಹಲವರು ಕೇಳುತ್ತಾರೆ. ಆದರೆ ಇದು ಈಗ ಸಾಧ್ಯವಿಲ್ಲ. ಒಂದು ಸೆಟ್‌ ನಿರ್ಮಾಣ ಮಾಡಿ ಅದರೊಳಗೆ ಹಾಡಿನ ಚಿತ್ರೀಕರಣಕ್ಕೆ ಹತ್ತು ದಿನಗಳು ಬೇಕಾಗುತ್ತವೆ. ನಿರ್ಮಾಣ ಶೈಲಿ ಬದಲಾಗಿರುವುದೇ ಇದಕ್ಕೆ ಕಾರಣ. ನಾವು ಈ ಸಿನಿಮಾವನ್ನು ಮೊದಲು ಕನ್ನಡದಲ್ಲಷ್ಟೇ ಮಾಡಬೇಕು ಎಂದುಕೊಂಡಿದ್ದೆವು. ಇದೀಗ ಇದು ಪ್ಯಾನ್ ಇಂಡಿಯಾ ಆಗಿದೆ. 

*ಪ್ರೇಕ್ಷಕರು ಅತಿ ಬುದ್ಧಿವಂತರು ಎನ್ನುವ ಒಂದೇ ವಿಶ್ವಾಸದಿಂದ ‘ಯುಐ’ ಸಿನಿಮಾ ಮಾಡಿದ್ದೇನೆ. ‘ಎ’ ಸಿನಿಮಾ ಮಾಡಿದಾಗ ಪ್ರೇಕ್ಷಕರು ಬುದ್ದಿವಂತರು ಎಂಬುದನ್ನು ಸಾಬೀತು ಮಾಡಿದರು. ನನ್ನ ಪ್ರಕಾರ ಪ್ರೇಕ್ಷಕ ನಿರ್ದೇಶಕ ಹಾಗೂ ತಂತ್ರಜ್ಞನಿಗಿಂತಲೂ ಮೇಲಿರುತ್ತಾನೆ. ಪ್ರೇಕ್ಷಕರನ್ನು ಗೆಲ್ಲುವುದಕ್ಕೆ ಭಿನ್ನವಾದ ಯೋಚನೆಯೇ ಬೇಕು. ಒಂದು ಪೋಸ್ಟರ್‌ ವಿನ್ಯಾಸ ನೋಡಿ ಸಿನಿಮಾ ನೋಡಬೇಕೇ ಬೇಡವೇ ಎನ್ನುವುದನ್ನು ಪ್ರೇಕ್ಷಕ ನಿರ್ಧರಿಸುತ್ತಾನೆ. ಪ್ರೇಕ್ಷಕನೂ ತಂತ್ರಜ್ಞನಾಗಿದ್ದಾನೆ, ಫಿಲ್ಮ್‌ಮೇಕರ್‌ ಆಗಿದ್ದಾನೆ. ಹೀಗಾಗಿ ಸಿನಿಮಾ ಮಾಡುವುದು ಸುಲಭವಾಗಿ ಉಳಿದಿಲ್ಲ. ‘ಯುಐ’ಯನ್ನು ಡಿಕೋಡ್‌ ಮಾಡುವುದು ಪ್ರೇಕ್ಷಕರ ಸಾಮರ್ಥ್ಯಕ್ಕೆ ಬಿಟ್ಟಿದ್ದು.  

*ಸಿನಿಮಾ ತಯಾರಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದಕ್ಕೆ ಸಿನಿಮಾ ವ್ಯವಹಾರ, ಸಿನಿಮಾ ತಂತ್ರಜ್ಞಾನ ಬದಲಾಗಿರುವುದೇ ಕಾರಣ. ಸುದ್ದಿಯ ನೇರಪ್ರಸಾರದಂತೆ(ಲೈವ್‌) ಸಿನಿಮಾ ಮಾಡಲು ಸಾಧ್ಯವಿಲ್ಲ. ಸಿನಿಮಾವನ್ನು ಯಾರೂ ಬೇಕೆಂದೇ ವಿಳಂಬ ಮಾಡುವುದಿಲ್ಲ. ಅದಕ್ಕೊಂದು ಕಾರಣವಿದ್ದೇ ಇರುತ್ತದೆ. 

*‘ಯುಐ’ ಮುಗಿದ ತಕ್ಷಣ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ‘ಯುಐ’ ಇಲ್ಲಿಯವರೆಗಿನ ನನ್ನ ಸಿನಿಪಯಣದ ಅತ್ಯಂತ ಹೆಚ್ಚಿನ ಬಜೆಟ್‌ನ ಸಿನಿಮಾ.      

*ತೆಲುಗಿನಲ್ಲಿ ಬಂದಿದ್ದು ಮೈಥಲಾಜಿಕಲ್‌ ‘ಕಲ್ಕಿ’. ‘ಯುಐ’ ಲಾಜಿಕಲ್‌, ಸೈಕಾಲಾಜಿಕಲ್‌ ‘ಕಲ್ಕಿ’. ಈ ಸಿನಿಮಾದ ವಿಚಾರ ಇರುವುದೇ ಪ್ರೇಕ್ಷಕರ ಯೋಚನೆಯನ್ನು ಪ್ರಚೋದಿಸಲು. ನನ್ನನ್ನು ಹುಳ ಬಿಡೋ ನಿರ್ದೇಶಕ ಎನ್ನುತ್ತಾರೆ, ‘ಯುಐ’ ತಲೆಯಿಂದ ಹುಳ ತೆಗೆಯಲು ಮಾಡಿದ ಸಿನಿಮಾ. ಆದರೆ ಈ ಹುಳ ತೆಗೆಯುವುದು ಬಹಳ ಕಷ್ಟ. ಶೀರ್ಷಿಕೆಯ ಅರ್ಥ ಏನು ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.   

*‘ಯುಐ’ನಲ್ಲಿ ರಿಯಲ್‌ ಸ್ಟಾರ್‌ಗೇ ಅನ್‌ರಿಯಲ್‌ ತಂತ್ರಜ್ಞಾನದ ಅರಿವಾಗಿದೆ. ಸುಮಾರು 250 ಕ್ಯಾಮೆರಾಗಳನ್ನು ಬಳಸಿ ಪೂರ್ತಿಯಾಗಿ ನನ್ನನ್ನು ಸ್ಕ್ಯಾನ್‌ ಮಾಡಲಾಗಿದೆ. ಇವುಗಳನ್ನು ಸಾಹಸ ದೃಶ್ಯಗಳಲ್ಲಿ ಬಳಸಿಕೊಳ್ಳಲಾಗಿದೆ.

*ರಜನಿಕಾಂತ್‌ ಅವರ ಜೊತೆ ‘ಕೂಲಿ’ ಸಿನಿಮಾ ಮಾಡುತ್ತಿದ್ದೇನೆ. ಒಳ್ಳೆಯ ಪಾತ್ರ ದೊರಕಿದೆ. ಖಂಡಿತಾ ಖಳನಾಯಕನ ಪಾತ್ರವಲ್ಲ. 

*‘ಓಂ’ ಸಿನಿಮಾದ ಸ್ಯಾಟಲೈಟ್‌ ಹಕ್ಕುಗಳನ್ನು ಯಾರಿಗೂ ನೀಡಿಲ್ಲ. ಹೀಗಾಗಿ ರಿರಿಲೀಸ್‌ ಆದಾಗ ದಾಖಲೆಗಳನ್ನೂ ಬರೆಯಿತು. ಇದೀಗ ರಿರಿಲೀಸ್‌ ಟ್ರೆಂಡ್‌ ಪ್ರಾರಂಭವಾಗಿದೆ. ‘ಎ’ ಸೇರಿದಂತೆ ಹಲವರ ಸಿನಿಮಾಗಳು ರಿರಿಲೀಸ್‌ ಆದವು. ಇದೀಗ ಸೆ.20ಕ್ಕೆ ‘ಉಪೇಂದ್ರ’ ಮರುಬಿಡುಗಡೆಯಾಗುತ್ತಿದೆ.  

‘ನನಗೆ ಸಿನಿಮಾ ತೋರಿಸಿದ ದಿನ ರಿಲೀಸ್‌ ದಿನ ನಿಗದಿ’

ಅಕ್ಟೋಬರ್‌ನಲ್ಲಿ ಬಿಗ್‌ಬಜೆಟ್‌ ಸಿನಿಮಾಗಳಾದ ‘ಮಾರ್ಟಿನ್‌’ ಹಾಗೂ ‘ಬಘೀರ’ ಬರುತ್ತಿದೆ. ಹೀಗಿರುವಾಗ ‘ಯುಐ’ ರಿಲೀಸ್‌ ಯಾವಾಗ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ‘ಅಕ್ಟೋಬರ್‌ನಲ್ಲಿ ರಿಲೀಸ್‌ ಅಂದಿದ್ದೇವೆ. ಏನು ರಿಲೀಸ್‌ ಅಂದಿದ್ದೇವಾ? ಅಕ್ಟೋಬರ್‌ನಲ್ಲಿ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಶ್ರೀಕಾಂತ್‌ ಎಲ್ಲರಿಗೂ ಬೇಕಾದವರು. ಈ ಸಿನಿಮಾಗಳ ನಿರ್ಮಾಪಕರ ನಡುವೆ ಒಳ್ಳೆಯ ಸಂಬಂಧವಿದೆ. ದೊಡ್ಡ ಸಿನಿಮಾಗಳು ಬರಬೇಕಾದರೆ ಒಂದು ಅಂತರ ಇದ್ದರೆ ಒಳ್ಳೆಯದು. ಯಾರು ಯಾರಿಗೆ ಅಂತರ ನೀಡುತ್ತಾರೆ ಎನ್ನುವುದು ಸದ್ಯದಲ್ಲೇ ತೀರ್ಮಾನವಾಗಲಿದೆ. ನನಗೆ ಸಿನಿಮಾ ತೋರಿಸಿದ ದಿನ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಎಂದಿದ್ದೇನೆ. ಮುಂದಿನ ಸೋಮವಾರ(ಸೆ.23) ‘ಯುಐ’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ’ ಎಂದರು.   

ಉಪೇಂದ್ರ ಅವರಿಗೆ ಎಟಿಎಂ ಕೊಟ್ಟಿದ್ದೇನೆ. ಸಿನಿಮಾಗೆ ಎಷ್ಟು ಖರ್ಚಾಗಿದೆ ಎಂದು ಇನ್ನಷ್ಟೇ ಲೆಕ್ಕ ಹಾಕಬೇಕಿದೆ. ‘ಯುಐ’ ಚಿತ್ರ ಅಕ್ಟೋಬರ್‌ನಲ್ಲೇ ತೆರೆಕಾಣಲಿದೆ. ಇದು ಶೇಕಡ 200 ಸತ್ಯ. ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವುದಕ್ಕೆ ವಿಳಂಬ ಆಗುತ್ತಿದೆ. ನಾವು ಬಾಲಿವುಡ್‌ನವರಿಗೆ ಸ್ಪರ್ಧೆ ಒಡ್ಡಬೇಕಲ್ಲವೇ?  
-ಜಿ.ಮನೋಹರನ್‌, ‘ಯುಐ’ ನಿರ್ಮಾಪಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT