ಗುರುವಾರ , ನವೆಂಬರ್ 14, 2019
19 °C

ಸೈನಿಕನಾಗಿ ವರುಣ್ ಧವನ್‌

Published:
Updated:
Prajavani

ಆ್ಯಕ್ಷನ್‌ ಹಾಗೂ ಥ್ರಿಲ್ಲರ್ ಚಿತ್ರಗಳ ಪ್ರೇಮಿ, ವರುಣ್‌ ಧವನ್‌ ಈಗ ಭಾರತೀಯ ಸೈನಿಕನ ಪಾತ್ರದಲ್ಲಿ ಅಭಿನಯಿಸಲು ಸೈ ಎಂದಿದ್ದಾರೆ.

‘ನಾನು ತುಂಬಾ ಖುಷಿಯಾಗಿದ್ದೇನೆ. ಇದಕ್ಕೆ ಕಾರಣ ಕೂಡ ಅಷ್ಟೇ ದೊಡ್ಡದಿದೆ. ನೀವೆಲ್ಲರೂ ಅರುಣ್‌ ಖೇತ್ರಪಾಲ್‌ ಅವರ ಹೆಸರನ್ನು ಕೇಳಿಯೇ ಇರುತ್ತೀರಿ. ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅವರ ಶೌರ್ಯ ಸಾಹಸಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯ ಜೀವನಕಥೆ ಆಧಾರಿತ ಸಿನಿಮಾದಲ್ಲಿ ನಾನು ಅಭಿನಯಿಸಲಿದ್ದೇನೆ’ ಎಂದು ವರುಣ್ ಧವನ್ ಟ್ವೀಟ್ ಮಾಡಿದ್ದಾರೆ.

‘ಕೂಲಿ ನಂ1’ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಜೊತೆ ವರುಣ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಳ್ಳುವ ಮೊದಲೇ ಅವರು ಇನ್ನೊಂದು ಸಿನಿಮಾಕ್ಕೆ ಸಹಿ ಹಾಕಿರುವುದಾಗಿ ಹೇಳಿದ್ದಾರೆ.

‘ಹೌದು ಒಂದು ಸಿನಿಮಾ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಮಧ್ಯದಲ್ಲಿಯೇ ನನಗೆ ಇಂತದ್ದೊಂದು ಒಳ್ಳೆಯ ಕಥೆ ಸಿಕ್ಕಾಗ ಒಪ್ಪದೇ ಇರಲು ಕಾರಣಗಳೇ ಇಲ್ಲ. ಯೋಧನ ಪಾತ್ರದಲ್ಲಿ ಅಭಿನಯಿಸಬೇಕು ಎಂಬುದು ಬಹಳ ದಿನಗಳ ಕನಸು’ ಎಂದು ವರುಣ್‌ ಹೇಳಿಕೊಂಡಿದ್ದಾರೆ.

‘ಬದ್ಲಾಪುರ್‌’ ಸಿನಿಮಾ ನಿರ್ದೇಶಿಸಿದ್ದ ಶ್ರೀರಾಮ್‌ ರಾಘವನ್‌ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ದಿನೇಶ್ ವಿಜನ್ ಅವರು ನಿರ್ಮಾಣ ಮಾಡಲಿದ್ದಾರೆ.

‘ಅರುಣ್‌ ಖೇತ್ರಪಾಲ್‌ ಅವರ ಕಥೆ ಕೇಳಿದಾಗ ರೋಮಾಂಚನಗೊಂಡೆ. ನಿಜ ಜೀವನದಲ್ಲಿ ಈ ರೀತಿಯ ದೃಶ್ಯಗಳು ನಡೆಯಲು ಸಾಧ್ಯವೇ ಎನಿಸಿತ್ತು. ಇದಕ್ಕಾಗಿಯೇ ಶ್ರೀರಾಮ್ ಈ ಸಿನಿಮಾ ಬಗ್ಗೆ ಅಷ್ಟೊಂದು ಉತ್ಸುಕರಾಗಿದ್ದರು. ಇಂತಹ ಪಾತ್ರ ಸಿಕ್ಕಿದ್ದು ಅದೃಷ್ಟವೇ ಸರಿ’ ಎಂದು ಧವನ್‌  ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)