ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ‘ಶಾರದೆ’ಯ ಮೇಳ

Last Updated 26 ಜುಲೈ 2021, 19:30 IST
ಅಕ್ಷರ ಗಾತ್ರ

ಜಯಂತಿ! ಮೂರಕ್ಷರಗಳ ಈ ಹೆಸರಿನೊಂದಿಗೆ ಮೂರು ಮುಖಗಳನ್ನು ನೆನಪಿಸಿಕೊಳ್ಳಬೇಕು: ಅಪಾರ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ. ಎಂಥ ಪಾತ್ರವನ್ನಾದರೂ ನಿಭಾಯಿಸಬಲ್ಲ ಪ್ರತಿಭೆ. ಸಿದ್ಧ ಮಾದರಿಗಳಿಗೆ ಭಿನ್ನವಾದ ದಾರಿಯಲ್ಲಿ ನಡೆಯುವ ದಿಟ್ಟತನ.

ಕನ್ನಡ ಚಿತ್ರರಂಗದಲ್ಲಿ ‘ಅಣ್ಣಾವ್ರು’ ಎಂದೇ ಪ್ರಸಿದ್ಧರಾದ ರಾಜ್‌ಕುಮಾರ್‌ ಅವರನ್ನು ‘ರಾಜ್‌’ ಎಂದು ಬಹಿರಂಗವಾಗಿ ಕರೆಯುತ್ತಿದ್ದ, ಆಲಿಂಗಿಸಿಕೊಂಡು ಮುತ್ತು ಕೊಡುತ್ತಿದ್ದ ಏಕೈಕ ನಾಯಕಿ ಜಯಂತಿ. ರಾಜ್‌ ಮಾತ್ರವಲ್ಲ, ಜಯಂತಿ ಅವರ ಬಾಯಿಯಲ್ಲಿ ಪುಟ್ಟಣ್ಣ ಕಣಗಾಲ್‌ ‘ಪುಟ್ಟು’ ಆಗಿದ್ದರು. ಅಂಬರೀಶ್‌ ಹಾಗೂ ವಿಷ್ಣುವರ್ಧನ್‌, ‘ಅಂಬಿ’ ಮತ್ತು ‘ವಿಷ್ಣು’ ಆಗಿ ಮೊಟಕಾಗಿದ್ದರು. ಹೀಗೆ ತಾರಾ ವರ್ಚಸ್ಸಿನ ಕಲಾವಿದ, ನಿರ್ದೇಶಕರನ್ನು ಹೆಸರು ಹಿಡಿದು ಕರೆಯುತ್ತಿದ್ದುದು ಆ ತಾರೆಗಳೊಂದಿಗೆ ಜಯಂತಿ ಸಾಧಿಸಿದ್ದ ಸ್ನೇಹ–ಪ್ರೇಮಗಳ ಸಲಿಗೆಯಷ್ಟೇ ಆಗಿರಲಿಲ್ಲ; ತಾನು ಯಾರಿಗಿಂತ ಕಡಿಮೆಯಲ್ಲ ಎನ್ನುವ ಕಲಾವಿದೆಯ ಆತ್ಮವಿಶ್ವಾಸವೂ ಅವರ ಮಾತುಗಳಲ್ಲಿ ಪ್ರಕಟಗೊಳ್ಳುತ್ತಿತ್ತು.

ಲಂಕೇಶ್‌ ಪತ್ರಿಕೆಯಲ್ಲೊಮ್ಮೆ ‘ಅಬ್ಬಬ್ಬಾ! ಜಯಂತಿ ಎಷ್ಟು ಭಾರ’ ಎನ್ನುವ ಬರಹ ಪ್ರಕಟವಾಗಿತ್ತು. ಆ ಬರಹಕ್ಕೆ ಜಯಂತಿ ಪ್ರತಿಕ್ರಿಯೆ: ‘ನನ್ನ ಭಾರ ಗೊತ್ತಾಗಲಿಕ್ಕೆ ಲಂಕೇಶ್ ನನ್ನನ್ನು ಯಾವಾಗ ಎತ್ತಿಕೊಂಡಿದ್ದರು? ಅಬ್ಬಬ್ಬಾ! ಜಯಂತಿ ಎಷ್ಟು ದಪ್ಪ ಎಂದು ಬರೆಯಬೇಕಿತ್ತಲ್ಲವೇ?’. ಅಷ್ಟಕ್ಕವರು ಸುಮ್ಮನಾಗಲಿಲ್ಲ. ತಮ್ಮ ಗೆಳತಿಯೂ ಆಗಿದ್ದ ಲಂಕೇಶ್ ಪುತ್ರಿ ಗೌರಿ ಅವರಿಗೆ ಫೋನ್ ಮಾಡಿ, ‘ಬೇಕಿದ್ದರೆ ನಿಮ್ಮ ತಂದೆ ಒಮ್ಮೆ ನನ್ನನ್ನು ಲಿಫ್ಟ್ ಮಾಡಿ ನೋಡಲಿ’ ಎಂದು ತಮಾಷೆ ಮಾಡಿದ್ದರು. ಅದು ಜಯಂತಿ ವ್ಯಕ್ತಿತ್ವ.

ಜಯಂತಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿಕೊಳ್ಳುವ ವೇಳೆಗೆ ಕನ್ನಡ ಸಿನಿಮಾಗಳಲ್ಲಿ ‘ಆದರ್ಶ ಗೃಹಿಣಿ’ ಹಾಗೂ ‘ವಾತ್ಸಲ್ಯಮಯಿ ಅಮ್ಮ’ನ ಮಾದರಿಯೊಂದು ಚಾಲ್ತಿಯಲ್ಲಿತ್ತು. ರಾಜಮ್ಮ ಮತ್ತು ಪಂಢರಿಬಾಯಿ ಅವರಂಥ ಕಲಾವಿದೆಯರ ಮೂಲಕ ರೂಪುಗೊಂಡಿದ್ದ ಜನಪ್ರಿಯ ಮಾದರಿಯ ಭಾಗವಾಗಿದ್ದುಕೊಂಡೂ, ಅದನ್ನು ಒಡೆಯಲಿಕ್ಕೆ ಪ್ರಯತ್ನಿಸಿದ್ದು ಜಯಂತಿ ಅವರ ವಿಶಿಷ್ಟ ಸಾಧನೆ. ಹೆಣ್ಣಿನ ಭಾವಲೋಕದ ಭಿನ್ನ ಮುಖಗಳನ್ನು ಅನಾವರಣಗೊಳಿಸುವಂಥ ಪಾತ್ರಗಳಲ್ಲಿ ಅವರು ಅಭಿನಯಿಸಿದರು. ಅವರ ಸಮಕಾಲೀನರಾದ ಕಲ್ಪನಾ, ಆರತಿ, ಭಾರತಿ ಹಾಗೂ ಲೀಲಾವತಿ ಕೂಡ ಬಾಹ್ಯ ಸೌಂದರ್ಯದ ಜೊತೆಗೆ ಅಂತರಂಗದ ತುಮುಲಗಳನ್ನು ವ್ಯಕ್ತಗೊಳಿಸುವ ಪಾತ್ರಗಳಿಗೆ ಜೀವ ತುಂಬಿದವರೇ. ಆದರೆ, ಜಯಂತಿ ಹಾಗೂ ಕಲ್ಪನಾ ಅವರಿಗೆ ದೊರೆತಷ್ಟು ವೈವಿಧ್ಯದ ಪಾತ್ರಗಳು ಉಳಿದವರಿಗೆ ದೊರೆಯಲಿಲ್ಲ.

1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ
1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ

ಸಾಧನೆ–ಸವಾಲಿನ ದಾರಿ

ಸಾಂಪ್ರದಾಯಿಕ ವಿವಾಹ ವ್ಯವಸ್ಥೆಗೆ ಬೆನ್ನುಮಾಡಿ, ವಿವಾಹಪೂರ್ವ ಸಂಬಂಧವನ್ನು ಒಪ್ಪಿಕೊಳ್ಳುವ ಹೆಣ್ಣಿನ ‘ಮಿಸ್‌ ಲೀಲಾವತಿ’, ವಿವಾಹೇತರ ಸಂಬಂಧಕ್ಕೆ ಹಾತೊರೆವ ‘ಎಡಕಲ್ಲು ಗುಡ್ಡದ ಮೇಲೆ’, ಹುಚ್ಚಿಯ ಪಾತ್ರದ ‘ಬಾಳು ಬೆಳಗಿತು’, ಅಹಂಕಾರಿ ರಾಜಕುಮಾರಿಯಾಗಿ ‘ಬಹದ್ದೂರ್‌ ಗಂಡು’, ಸೀಳು ವ್ಯಕ್ತಿತ್ವದ ಹೆಣ್ಣಿನ ಪಾತ್ರದ ‘ಎರಡು ಮುಖ’ (ಕನ್ನಡದ ಮೊದಲ ಮನೋವೈಜ್ಞಾನಿಕ ಚಿತ್ರ) – ಇಂಥ ವಿಭಿನ್ನ ಪಾತ್ರಗಳನ್ನು ನಟಿಸಿದ ಅಗ್ಗಳಿಕೆ ಜಯಂತಿ ಅವರದು. ಆ ಕಾರಣದಿಂದಲೇ ಅವರು ‘ಅಭಿನಯ ಶಾರದೆ’. ಜಯಂತಿ ಅವರಿಗಿಂಥ ಉತ್ತಮ ಕಲಾವಿದೆಯರನ್ನು ಕನ್ನಡ ಸಿನಿಮಾ ಕಂಡಿದೆ. ಆದರೆ ಪಾತ್ರವೈವಿಧ್ಯ, ಯಶಸ್ಸು ಮತ್ತು ದಿಟ್ಟತನದ ಮಾದರಿಯಾಗಿ ಜಯಂತಿ ಅವರಂಥ ಮತ್ತೊಬ್ಬ ನಟಿ ಕನ್ನಡ ಸಿನಿಮಾ ಪರಂಪರೆಯಲ್ಲಿಲ್ಲ.

ನಟಿಯಾಗಿ ಜನಪ್ರಿಯತೆ ಗಳಿಸಿದರೂ ಪ್ರಯೋಗಶೀಲತೆಗೂ ಅವರದು ತೆರೆದ ಮನಸ್ಸಾಗಿತ್ತು. ಈ ತೆರೆದ ಮನಸ್ಸು ಹಾಗೂ ದಿಟ್ಟತನದ ಭಾಗವಾಗಿಯೇ ಅವರು ನಟಿಸಿದ ರತಿ ವರ್ಚಸ್ಸಿನ ಪಾತ್ರಗಳನ್ನು ಗುರ್ತಿಸಬಹುದು. ‘ಮಿಸ್‌ ಲೀಲಾವತಿ’ ಚಿತ್ರದಲ್ಲಿ ಸ್ವಿಮ್‌ ಸೂಟ್‌ ಧರಿಸಿದ್ದು ಆ ಕಾಲಕ್ಕೆ ಅನೇಕರ ಹುಬ್ಬೇರಿಸಿತ್ತು. ‘ಬೆಟ್ಟದ ಹುಲಿ’, ‘ಜೇಡರ ಬಲೆ’ ಚಿತ್ರಗಳಲ್ಲಿನ ಅವರ ಪಾತ್ರಗಳು ಆ ಕಾಲಕ್ಕೆ ಚಿತ್ರರಸಿಕರ ಮೈಮನಗಳನ್ನು ಬೆಚ್ಚಗಾಗಿಸಿದ್ದವು. ಆ ವೇಳೆಗಾಗಲೇ ಹರಿಣಿಯಂಥ (‘ಜಗನ್ಮೋಹಿನಿ’) ನಟಿಯರು ಸಿನಿಮಾಗಳಲ್ಲಿ ಮೈಮಾಟ ತೋರುವ ಪರಂಪರೆಗೆ ನಾಂದಿ ಹಾಡಿದ್ದರೂ, ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಿದ್ದು ಜಯಂತಿ. ‘ಚೂರಿ ಚಿಕ್ಕಣ್ಣ’, ‘ಭಲೇ ಬಸವ’, ‘ಊರಿಗೆ ಉಪಕಾರಿ’, ‘ರೌಡಿ ರಂಗಣ್ಣ’ ರೀತಿಯ ಚಿತ್ರಗಳಲ್ಲಿ ತುಂಟ ಹೆಣ್ಣಾಗಿ, ‘ಕಸ್ತೂರಿ ನಿವಾಸ’, ‘ಚಕ್ರತೀರ್ಥ’, ‘ಮನಸ್ಸಿದ್ದರೆ ಮಾರ್ಗ’ ಚಿತ್ರಗಳಲ್ಲಿ ಗಂಭೀರ ಪಾತ್ರಗಳಲ್ಲಿ ನಟಿಸಿದ ಅವರು ಒಂದೇ ಬಗೆಯ ಇಮೇಜ್‌ಗೆ ಕಟ್ಟುಬೀಳಲಿಲ್ಲ. ‘ನಾಗರಹಾವು’ ಚಿತ್ರದ ಓಬವ್ವನ ಪುಟ್ಟ ಪಾತ್ರದಲ್ಲಿ ಕೂಡ ಅವರು ತಮ್ಮ ಛಾಪು ಮೂಡಿಸಿದ್ದರು.

ಡಾ.ರಾಜ್‌ ಜತೆ ಒಂದು ಸಂಭ್ರಮದ ಗಳಿಗೆ...
ಡಾ.ರಾಜ್‌ ಜತೆ ಒಂದು ಸಂಭ್ರಮದ ಗಳಿಗೆ...

ನೃತ್ಯದಿಂದ ನಟನೆಗೆ

ಜಯಂತಿ (ಜನವರಿ 6, 1945 – ಜುಲೈ 26, 2021) ಅವರ ತವರು ಬಳ್ಳಾರಿ. ಕಮಲಾಕುಮಾರಿ ಎನ್ನುವುದು ಅವರ ಹುಟ್ಟುಹೆಸರು. ಬಾಲ್ಯದಲ್ಲವರಿಗೆ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ, ಆಕರ್ಷಣೆಯೇನೂ ಇರಲಿಲ್ಲ. ‘ಎರಡು ಜಡೆ ಕಮಲಾಕುಮಾರಿ’ ಎಂದು ಗೆಳತಿಯರ ನಡುವೆ ಹೆಸರಾಗಿದ್ದ ಹುಡುಗಿ, ಶಾಲಾ ವಾರ್ಷಿಕೋತ್ಸವದಲ್ಲೊಮ್ಮೆ ಮಾಡಿದ ನೃತ್ಯ ಬದುಕಿನ ಚಲನೆಯನ್ನೇ ಬದಲಾಯಿಸಿತು. ಆ ಮೆಚ್ಚುಗೆಯೇ ಮುಂದೆಯೂ ನೃತ್ಯದೊಂದಿಗೆ ನಂಟು ಇರಿಸಿಕೊಳ್ಳಲು ಕಾರಣವಾಯಿತು. ಮಗಳ ಕಣ್ಣಲ್ಲಿ ಅಮ್ಮನಿಗೆ ಪ್ರಸಿದ್ಧ ನೃತ್ಯಗಾತಿಯೊಬ್ಬಳು ಕಾಣಿಸಿದಳು. ಕಮಲಾಳ ನತ್ಯ ಅಭ್ಯಾಸಕ್ಕೆ ಅನುಕೂಲವಾಗಲೆಂದು ಕುಟುಂಬ ಮದರಾಸಿಗೆ ಬಂದು ನೆಲೆಸಿತು. ಅಮ್ಮನಿಂದ ನಿತ್ಯ ಸಕ್ಕರೆ ತುಪ್ಪ ಸವಿಯುತ್ತಿದ್ದ ಬಾಲಕಿಯ ಮೈ ನೃತ್ಯದ ಲಾಲಿತ್ಯಕ್ಕೆ ಒಗ್ಗಿಕೊಳ್ಳುವುದು ಸುಲಭವೇನಾಗಿರಲಿಲ್ಲ. ಗೆಳತಿಯರ ತಮಾಷೆಯ ನಡುವೆಯೇ ಅಭ್ಯಾಸ ಮುಂದುವರೆಯಿತು.

ಕಮಲಾಕುಮಾರಿ ನೃತ್ಯ ಕಲಿಯುತ್ತಿದ್ದ ಶಾಲೆಯ ಗುರು ಚಂದ್ರಕಲಾ ಎನ್ನುವವರು ಸಿನಿಮಾಗಳಲ್ಲಿನ ನೃತ್ಯ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಗುರುಗಳ ಜೊತೆಯಲ್ಲಿ ಶಿಷ್ಯೆಯರೂ ಆಗಾಗ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೊಗಳಿಗೆ ಹೋಗುತ್ತಿದ್ದರು. ಹೀಗೊಮ್ಮೆ ‘ಗೋಲ್ಡನ್‌ ಸ್ಟುಡಿಯೊ’ಗೆ ಹೋದಾಗ ಕಮಲಾಕುಮಾರಿ ನಿರ್ದೇಶಕ ವೈ.ಆರ್‌. ಸ್ವಾಮಿ ಅವರ ಕಣ್ಣಿಗೆ ಬಿದ್ದರು. ‘ಜೇನುಗೂಡು’ ಸಿನಿಮಾದ ತಯಾರಿಯಲ್ಲಿದ್ದ ಅವರು, ನಟನೆಯ ಆಹ್ವಾನ ನೀಡಿದರು. ಮನೆಯಲ್ಲಿ ಬಡಪೆಟ್ಟಿಗೆ ಒಪ್ಪಿಗೆ ದೊರೆಯಲಿಲ್ಲ. ಸಿನಿಮಾ ಹಾಗೂ ಸಿನಿಮಾ ಜನ ಎಂದರೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲದ ದಿನಗಳವು. ‘ಕೆಟ್ಟದು, ಒಳ್ಳೆಯದು ಎಲ್ಲ ಜಾಗದಲ್ಲೂ ಇರುತ್ತೆ. ನಾವು ಒಳ್ಳೆಯವರಾಗಿದ್ದರೆ ಎಲ್ಲರೂ ಒಳ್ಳೆಯವರಾಗಿರುತ್ತಾರೆ. ನಿಮ್ಮ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು’ ಎಂದು ಸ್ವಾಮಿ ಭರವಸೆ ನೀಡಿದರು; ಕಮಲಾಕುಮಾರಿಯ ತಾಯಿ ಸಂತಾನಲಕ್ಷ್ಮಿ ಒಪ್ಪಿಕೊಂಡರು. ಹೀಗೆ ಒಲಿದುಬಂದಿದ್ದು ‘ಜೇನುಗೂಡು’ (1963). ನಂತರದ ನಟನೆಯ ಪಯಣದಲ್ಲಿ ಸಿಹಿಯ ಪಾಲೇ ಹೆಚ್ಚು.

ಶೈಲಶ್ರೀ, ಚಿಂದೋಡಿ ಲೀಲಾ, ಜಯಮಾಲಾ ಅವರೊಂದಿಗೆ ಜಯಂತಿ
ಶೈಲಶ್ರೀ, ಚಿಂದೋಡಿ ಲೀಲಾ, ಜಯಮಾಲಾ ಅವರೊಂದಿಗೆ ಜಯಂತಿ

‘ಜೇನುಗೂಡು’ ನಂತರ ‘ಚಂದವಳ್ಳಿಯ ತೋಟ’ ಚಿತ್ರದಲ್ಲಿ ಅಭಿನಯಿಸುವಾಗ, ಕಮಲಾಕುಮಾರಿ ಹೆಸರು ಉದ್ದವಾಯಿತು ಹಾಗೂ ಕಮಲಾ ಹೆಸರಿನ ನಟಿಯರು ಯಾರೂ ಕಲಾವಿದರಾಗಿ ಏಳಿಗೆ ಕಾಣದ್ದರಿಂದ ಜಯಂತಿ ಎಂದು ಹೊಸ ನಾಮಕರಣವಾಯಿತು. ಹೆಸರಿನಲ್ಲಿನ ವಿಜಯ ವೃತ್ತಿಯಲ್ಲೂ ಕೈಹಿಡಿಯಿತು.

ಕನ್ನಡದೊಂದಿಗೆ ತೆಲುಗು, ತಮಿಳು, ಮಲಯಾಳ, ಹಿಂದಿ ಸೇರಿದಂತೆ ಸುಮಾರು 500 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ರಾಜ್‌ಕುಮಾರ್‌, ಎನ್‌.ಟಿ. ರಾಮರಾವ್‌, ಜೆಮಿನಿ ಗಣೇಶನ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಜನಪ್ರಿಯ ನಟರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ಗೆ ಜೋಡಿಯಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಾಯಕಿ ಎನ್ನುವ ಖ್ಯಾತಿಯೂ ಅವರದೇ.

ಅಂಬರೀಷ್‌ ಜತೆ ಜಯಂತಿ
ಅಂಬರೀಷ್‌ ಜತೆ ಜಯಂತಿ

ಸಂಘರ್ಷದ ಬದುಕು

ಸಿನಿಮಾದಲ್ಲಿ ಯಶಸ್ಸು ಗಳಿಸಿದರೂ, ಜಯಂತಿ ಅವರ ಖಾಸಗಿ ಜೀವನದಲ್ಲಿ ಜೇನು ಹೆಚ್ಚೇನೂ ಇರಲಿಲ್ಲ. ಸಂಬಂಧ ಕವಲೊಡೆದುದರಿಂದಾಗಿ, ಕಮಲಾಕುಮಾರಿ ಅಮ್ಮನ ಕಣ್ಣಳತೆಯಲ್ಲಿ ಬೆಳೆಯಬೇಕಾಯಿತು. ಸಖ್ಯ ಸಾಂಗತ್ಯಗಳಿಗೆ ಹೆಚ್ಚು ಆಯುಸ್ಸಿರಲಿಲ್ಲ. ಬಹುಶಃ, ಬದುಕಿನ ಬಿಕ್ಕಟ್ಟುಗಳೆಲ್ಲ ಜಯಂತಿ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿರಬೇಕು. ಮುಖದಲ್ಲಿ ಬೆಳದಿಂಗಳು, ತುಟಿಗಳಲ್ಲಿ ಮುಗುಳುನಗು, ಜೇನಿನ ಮಾಧುರ್ಯದ ಧ್ವನಿಯ ಒಡತಿ ತನ್ನ ಅಂತರಂಗವನ್ನು ತೆರೆದುಕೊಂಡಿದ್ದು ಕಡಿಮೆಯೇ.

ಜಯಂತಿ ಅವರ ಪ್ರಯೋಗಶೀಲತೆಯ ಭಾಗವಾಗಿ ಅವರ ನಿರ್ಮಾಣ, ನಿರ್ದೇಶನದ ಚಿತ್ರಗಳನ್ನು ನೋಡಬಹುದು. ಅವರು ನಿರ್ಮಿಸಿ, ನಿರ್ದೇಶಿಸಿದ ಮೊದಲ ಚಿತ್ರ ‘ವಿಜಯ್’ (1987). ‘ಏನ್ ಸ್ವಾಮಿ ಅಳಿಯಂದ್ರೆ’ (1989) ನಿರ್ದೇಶನದ ಮತ್ತೊಂದು ಸಿನಿಮಾ. ಎರಡೂ ಸಿನಿಮಾಗಳು ಗಣನೀಯ ಯಶಸ್ಸು ಗಳಿಸದೆಹೋದ ಕಾರಣದಿಂದಾಗಿ ಅವರು ನಟಿಯಾಗಿಯಷ್ಟೇ ಉಳಿದುಕೊಂಡರು.

‘ಎಡಕಲ್ಲು ಗುಡ್ಡದ ಮೇಲೆ’, ‘ಮಸಣದ ಹೂವು’, ‘ಮನಸ್ಸಿನಂತೆ ಮಾಂಗಲ್ಯ’, ‘ಧರ್ಮ ದಾರಿ ತಪ್ಪಿತು’ ಚಿತ್ರಗಳಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’, ‘ಆನಂದ್‌’ ಹಾಗೂ ‘ಟುವ್ವಿ ಟುವ್ವಿ ಟುವ್ವಿ’ ಸಿನಿಮಾಗಳಲ್ಲಿ ಪಾತ್ರಪೋಷಣೆಗಾಗಿ ‘ಅತ್ಯುತ್ತಮ ಪೋಷಕನಟಿ ರಾಜ್ಯಪ್ರಶಸ್ತಿಗಳು ಅವರಿಗೆ ಸಂದಿವೆ. ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ‘ರಾಜ್‌ಕುಮಾರ್‌ ಪ್ರಶಸ್ತಿ’ ಗೌರವ ಅವರಿಗೆ ಸಂದಿತ್ತು. ತಾರಾ ವರ್ಚಸ್ಸಿನ ಬಹುತೇಕ ನಾಯಕ ನಟರಿಗಿಂತಲೂ ಹೆಚ್ಚಿನ ಕೊಡುಗೆಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಅವರು ಇನ್ನೂ ಹೆಚ್ಚಿನ ಗೌರವಕ್ಕೆ, ರಾಷ್ಟ್ರಮಟ್ಟದ ಗೌರವಗಳಿಗೆ ಅರ್ಹರಾಗಿದ್ದರು.

ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸೋಮವಾರ ಹಿರಿಯ ನಟಿ ಜಯಂತಿ ರವರ ಪಾರ್ಥಿವ ಶರೀರಕ್ಕೆ ಜಯಮಾಲಾ, ಸುಧಾರಾಣಿ, ಶೃತಿ ಮತ್ತು ನಟ ಸೃಜನ್ ಲೋಕೇಶ್ ಅಂತಿಮ ನಮನ ಸಲ್ಲಿಸಿದರು. ಜಯಂತಿ ಅವರ ಮಗ ಕೃಷ್ಣಕುಮಾರ್‌ ಇದ್ದರು
ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸೋಮವಾರ ಹಿರಿಯ ನಟಿ ಜಯಂತಿ ರವರ ಪಾರ್ಥಿವ ಶರೀರಕ್ಕೆ ಜಯಮಾಲಾ, ಸುಧಾರಾಣಿ, ಶೃತಿ ಮತ್ತು ನಟ ಸೃಜನ್ ಲೋಕೇಶ್ ಅಂತಿಮ ನಮನ ಸಲ್ಲಿಸಿದರು. ಜಯಂತಿ ಅವರ ಮಗ ಕೃಷ್ಣಕುಮಾರ್‌ ಇದ್ದರು

ಇಳಿವಯಸ್ಸಿನಲ್ಲೂ ಅವರ ನಟನೆಯ ಮೋಹ ತೀರಿರಲಿಲ್ಲ. ನಾಗಾಭರಣ ನಿರ್ದೇಶನದ ‘ವಿಮೋಚನೆ’ (1997) ನಟಿಯಾಗಿ ಅವರಿಗೆ ಮುಪ್ಪಿಲ್ಲ ಎನ್ನುವುದಕ್ಕೆ ಉದಾಹರಣೆಯಂತಿತ್ತು. ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೋಮವಾರ ಮುಂಜಾನೆ ನಿದ್ದೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಬಹುಶಃ, ಅವರು ನಿದ್ದೆಯ ಸ್ವಪ್ನಲೋಕದಲ್ಲಿ ಕಂಡ ಯಾವುದೋ ಪಾತ್ರದ ಬೆನ್ನತ್ತಿ ಹೋಗಿರಬಹುದು.

ಜಯಂತಿ ಅವರಿಗೊಲಿದ ಪ್ರಶಸ್ತಿಗಳು

l 1965ರ– ಮಿಸ್ ಲೀಲಾವತಿ-ರಾಷ್ಟ್ರ ಪ್ರಶಸ್ತಿ

ರಾಜ್ಯ ಪ್ರಶಸ್ತಿಗಳು

l 1969 – ಎರಡು ಮುಖ

l 1976 – ಮನಸ್ಸಿನಂತೆ ಮಾಂಗಲ್ಯ

l 1981 – ಧರ್ಮ ದಾರಿ ತಪ್ಪಿತು

l 1985 – ಮಸಣದ ಹೂವು

l 1986 – ಆನಂದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT