ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಜುನ್ ಗೌಡ’ ಸಿನಿಮಾ ವಿಮರ್ಶೆ: ಸೂತ್ರ ಕಿತ್ತ ಗಾಳಿಪಟ... ಅಕಟಕಟಾ

Last Updated 31 ಡಿಸೆಂಬರ್ 2021, 13:25 IST
ಅಕ್ಷರ ಗಾತ್ರ

ಚಿತ್ರ: ಅರ್ಜುನ್ ಗೌಡ (ಕನ್ನಡ)

ನಿರ್ಮಾಣ: ರಾಮು

ನಿರ್ದೇಶನ: ಶಂಕರ್

ತಾರಾಗಣ: ಪ್ರಜ್ವಲ್ ದೇವರಾಜ್, ಸ್ಪರ್ಶ ರೇಖಾ, ಪ್ರಿಯಾಂಕಾ ತಿಮ್ಮೇಶ್, ದೀಪಕ್ ಶೆಟ್ಟಿ, ರಾಹುಲ್ ದೇವ್, ಸಾಧು ಕೋಕಿಲ

ಸಿನಿಮಾಟೊಗ್ರಾಫರ್ ಜೈ ಆನಂದ್ ಅವರನ್ನು ‘ಡ್ರೋನಾಚಾರ್ಯ’ ಎನ್ನಬಹುದು. ಮೇಲಿನಿಂದ ಅಷ್ಟೊಂದು ಸಲ ಅವರು ಬಳಸಿದ ಕ್ಯಾಮೆರಾ ಪಕ್ಷಿನೋಟ ತೋರುತ್ತಿರುತ್ತದೆ. ‘ಅತಿನಿಧಾನಂ ಯಶಸ್ವಿ ಸೂತ್ರಂ’ ಎಂಬ ತಪ್ಪುಪಾಠವನ್ನೂ ಅವರಿಗೆ ನಿರ್ದೇಶಕರು ಹೇಳಿರುವಂತಿದೆ. ಅದಕ್ಕೇ ಸ್ಲೋಮೋಷನ್ ಅನ್ನು ಒಗ್ಗರಣೆ ಅಂದುಕೊಳ್ಳದೆ ಅದೇ ಖಾದ್ಯವೆಂದು ಭಾವಿಸಿದ್ದಾರೆ. ಸ್ವರ ಸಂಯೋಜಕ ಧರ್ಮ ವಿಶ್ ಅವರಿಗೆ ವಿಪರೀತ ವಾದ್ಯಪ್ರೀತಿ. ಹೀಗಾಗಿ ಹಿನ್ನೆಲೆ ಸಂಗೀತದಲ್ಲಿ ಅವರು ನಿರ್ದಿಷ್ಟ ರಾಗಗಳನ್ನಷ್ಟೇ ಹೊಮ್ಮಿಸದೆ ತೋಚಿದ್ದನ್ನೆಲ್ಲ ಕಿವಿಗೆ ಅಪ್ಪಳಿಸುವಂತೆ ಮಾಡಿದ್ದಾರೆ.

‘ಅರ್ಜುನ್ ಗೌಡ’ ಸೂತ್ರ ಕಿತ್ತುಕೊಂಡು ಹಾರುವ ಗಾಳಿಪಟ. ಅದು ಆಗೀಗ ಗಾಳಿ ಹೊತ್ತೊಯ್ಯುವ ಹದದಲ್ಲಿ ಹಾರುತ್ತದೆ. ಕರೆಂಟಿನ ವೈರ್‌ಗೆ ಜೋತು ಬೀಳುತ್ತದೆ. ಅಲ್ಲಿಂದ ಹರಿದುಕೊಂಡು ಇನ್ನೆಲ್ಲಿಗೋ ದೂರಕ್ಕೆ ಹಾರುತ್ತದೇನೋ ಎಂದು ಕಣ್ಣರಳಿಸುವಷ್ಟರಲ್ಲಿ ದಿಢೀರನೆ ಭೂಸ್ಪರ್ಶ. ನಾಯಕನ ಎಡಗಣ್ಣಿನಿಂದ ನೀರು, ಆತನ ತಾಯಿಯ ಬಲಗಣ್ಣಿನಿಂದ ನೀರು. ಎರಡನ್ನೂ ಕಣ್ತುಂಬಿಕೊಳ್ಳುವವರಿಗೆ ತಕ್ಷಣವೇ ಸಾಧು ಕೋಕಿಲಾ ದರ್ಶನ. ಸಾಧು ಏನೆಲ್ಲ ಮುಖ ಕೊಂಕಿಸಿದರೂ ಬರೆದ ಪ್ರಸಂಗಗಳಲ್ಲೇ ಹಾಸ್ಯ ನಾಸ್ತಿ. ಆದ್ದರಿಂದ ನಗುವಿನ ಬದಲು ಸಂಕಟ, ಅಕಟಕಟಾ.

ಅರ್ಜುನ್ ಗೌಡ ಚಿತ್ರದ ನಾಯಕನ ಹೆಸರು. ‘ಗೌಡ ಅಂದರೆ ಪೆಟಿಷನ್ನು, ಗೌಡ್ರೆ ಅಂದರೆ ರಿಲೇಷನ್ನು’ ಎಂದು ಅವರ ಬಾಯಿಯಿಂದ ಹೊಮ್ಮುವ ಸಂಭಾಷಣೆಯಲ್ಲೇ ಒಂಥರಾ ಹಾಸ್ಯವಿದೆ. ಈ ನಾಯಕನಿಗೆ ಕೋಪವೇ ಒಡವೆ. ನಾಯಕಿಯದ್ದೇ ಸದಾ ಗೊಡವೆ. ಅಮ್ಮನೆಂದಷ್ಟೆ ಅಷ್ಟಕ್ಕಷ್ಟೆ. ಆದಾಗ್ಯೂ ಎದೆಮುಟ್ಟಿ, ಖಳರೆದುರು ‘ಅಮ್ಮ’ ಎಂದು ಒಂದೊಮ್ಮೆ ಹೇಳುವ ಮೂಲಕ ‘ಕನ್ನಡದ ಕಂದ’ ಎಂಬ ಖ್ಯಾತಿಗೆ ಪಕ್ಕಾಗುತ್ತಾರೆ.

ಅರ್ಜುನ್ ಗೌಡ್ರು ಸಿಗರೇಟು ಸೇದಬಲ್ಲರು. ಕುಡಿತ ಇನ್ನೂ ಸಲೀಸು. ಜೋಡಿಸಿಟ್ಟ ರಾಶಿ ಬಾಟಲುಗಳ ಮೇಲೆ ವಿಷಾದ ಗೀತೆಗೆ ಭಾವ ಹೊಮ್ಮಿಸುತ್ತಾ ಅವರು ಮಲಗುವ ದೃಶ್ಯವೇ ಇದಕ್ಕೆ ಸಾಕ್ಷಿ. ಹಾಗೆಂದು ಅವರು ಸೋಮಾರಿಯಲ್ಲ. ಚಲನಶೀಲ. ಹೊಡೆದರೆ ಗಿರಗಿರಗಿರ ತಿರುಗಿ ಎದುರಾಳಿಗಳು ಸ್ಲೋಮೋಷನ್ನಿನಲ್ಲಿ ಬೀಳುವುದು ಖರೆ. ಕಾಲಿಟ್ಟರೆ ಏಳುವ ದೂಳೂ ಸ್ಲೋಮೋಷನ್ನಿನಲ್ಲೇ. ನಾಯಕನಿಗೆ ಕಿಕ್ ಬಾಕ್ಸಿಂಗ್ ಗೊತ್ತಿದೆ ಎನ್ನುವುದನ್ನು ಒಂದು ಫೈಟಿಂಗ್ ಸಮರ್ಥಿಸುತ್ತದಷ್ಟೆ.

ವಾಹಿನಿಯೊಂದರ ಒಡತಿಯ ಮಗನಾದ ಈ ನಾಯಕನು ದೊಡ್ಡ ವ್ಯಾಪಾರಿಯ ಮಗಳ ಪ್ರೇಮಕ್ಕೆ ಸಿಲುಕುವುದು ಚಿತ್ರದ ಅರ್ಧ ಲೈನರ್. ಆ ಪ್ರೇಮವೇ ಪಾಶವಾಗುವುದು ಇನ್ನರ್ಧ ಲೈನರ್. ಅತ್ತ ದೇವದಾಸನೂ ಆಗದ, ಇತ್ತ ಛಲದಂಕಮಲ್ಲನಂತೆಯೂ ಕಾಣದ ನಾಯಕನನ್ನು ಹೇಗೆ ಪ್ರಕಟಪಡಿಸಬೇಕು ಎಂಬ ನಿರ್ದೇಶಕರ ಗೊಂದಲ ಸಿನಿಮಾ ಮುಗಿದ ನಂತರವೂ ನಮ್ಮನ್ನು ಕಾಡುತ್ತದೆ.

ಸಾದಾ ಕಥೆಯೊಂದನ್ನು ಅಚ್ಚರಿಗಳ ತಿರುವುಗಳ ನಿರೂಪಣೆಯಿಂದ ತೋರಿಸುವುದು ಈಗೀಗ ತಂತ್ರವಾಗಿಬಿಟ್ಟಿದೆ. ನಿರ್ದೇಶಕ ಶಂಕರ್ ಅದನ್ನೇ ಇಲ್ಲಿ ಮುಚ್ಚಟೆ ಮಾಡಹೊರಟಿದ್ದಾರೆ. ಅದರಿಂದಷ್ಟೆ ಅವರಿಗೆ ಸಮಾಧಾನವಾಗಿಲ್ಲ. ಹೀಗಾಗಿ ಸಾಧುಕೋಕಿಲಾ ಅವರಿಂದ ಬಲವಂತವಾಗಿ ನಗಿಸಲು ಮುಂದಾಗಿ, ಮುಗ್ಗರಿಸಿದ್ದಾರೆ. ಸಂಚಿತ್ ಹೆಗಡೆ ಕಂಠದಲ್ಲಿನ ನಶೆ ಸವರಿದ ವಿಷಾದಗೀತೆಯೂ ಅವರ ನೆರವಿಗೆ ಬಂದಿಲ್ಲ.

ನಾಯಕ ಪ್ರಜ್ವಲ್ ದೇವರಾಜ್ ಚುರುಕುತನಕ್ಕೆ ತಕ್ಕುದಾದ ಪಾತ್ರ ಇದಲ್ಲ. ನಾಯಕಿ ಪ್ರಿಯಾಂಕಾ ಮುಖದಲ್ಲಿನ ಗಾಬರಿಯ ಗೆರೆಗಳಿಗೆ ಇಸ್ತ್ರಿ ಹಾಕಬೇಕಿತ್ತು. ಅಭಿನಯಕ್ಕಾಗಿ ಎಡಗೈ ಮೇಲೆತ್ತುವ ತಾಯಿಯಾಗಿ ರೇಖಾ ಅವರಿಗೆ ತೆರೆಮೇಲೆ ಹೆಚ್ಚು ಅವಕಾಶ ಸಿಕ್ಕಿದೆ. ರಾಹುಲ್ ದೇವ್ ತರಹದ ಆಮದು ಪ್ರತಿಭೆಯ ಬಳಕೆಯೂ ಸಮರ್ಪಕವಾಗಿ ಆಗಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ‘ಅರ್ಜುನ್ ಗೌಡರ’ ರಿಲೇಷನ್‌ಷಿಪ್ ವೀಕೋ ವೀಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT