ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಹಳೆಯ ಸಿನಿಮಾ: 'ರಾಜೀವ'ನಾಗಿ ಮಯೂರ್ ಪಟೇಲ್‌ 

Last Updated 4 ಜನವರಿ 2020, 9:01 IST
ಅಕ್ಷರ ಗಾತ್ರ

ಚಿತ್ರ: ರಾಜೀವ

ನಿರ್ದೇಶನ: ಫ್ಲೈಯಿಂಗ್ ಕಿಂಗ್ ಮಂಜು

ನಿರ್ಮಾಣ: ಜಿ.ಎಂ. ರಮೇಶ್, ಕಿರಣ್ ಕೆ.

ತಾರಾಗಣ: ಮಯೂರ್ ಪಟೇಲ್, ಅಕ್ಷತಾ, ಶಂಕರ್ ಅಶ್ವತ್ಥ್

ಕೃಷಿ ಮತ್ತು ಕೃಷಿಯನ್ನೇ ನೆಚ್ಚಿಕೊಂಡಿರುವ ಹಳ್ಳಿಗಾಡಿನ ಜನರ ಸಮಸ್ಯೆಗಳು ತೀರಾ ಸಂಕೀರ್ಣ. ಆ ಸಮಸ್ಯೆಯ ಒಂದು ಮುಖವನ್ನು ಸಿನಿಮಾ ಪರದೆಯ ಮೇಲೆ ತೋರಿಸಿ, ಎರಡೂಕಾಲು ಗಂಟೆಗಳ ಅವಧಿಯಲ್ಲಿ ಆ ಸಮಸ್ಯೆಗೊಂದು ಪರಿಹಾರ ಸೂತ್ರವನ್ನು ರೂಪಿಸಿಬಿಡುವುದು ಸರಳವಲ್ಲ.

ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವ ನೀರು ಸಿಗದಿರುವುದು, ಗ್ರಾಮಗಳಿಂದ ನಗರಗಳಿಗೆ ಯುವಕರ ವಲಸೆ ಎನ್ನುವ ಈ ಕಾಲದ ಎರಡು ಪ್ರಮುಖ ಸಮಸ್ಯೆಗಳನ್ನು ಒಂದು ಹಳ್ಳಿಯ ಕ್ಯಾನ್ವಾಸ್‌ನಲ್ಲಿ ತೋರಿಸಿ, ಆ ಎರಡು ಸಮಸ್ಯೆಗಳಿಗೆ ಬಹಳ ಸುಲಭವಾದ ಪರಿಹಾರವನ್ನು ಕೊಡುವ ಸಿನಿಮಾ ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ‘ರಾಜೀವ’.

ರಾಜೀವ (ಮಯೂರ್ ಪಟೇಲ್) ಎನ್ನುವ ಯುವಕ ನಗರದಲ್ಲಿ ಉನ್ನತ ಶಿಕ್ಷಣ ಪಡೆದರೂ, ತಂದೆಯಂತೆ ತಾನೂ ರೈತನಾಗಬೇಕು ಎಂಬ ಆಸೆ ಹೊಂದಿರುತ್ತಾನೆ. ತಂದೆಯ ಹಠಾತ್ ನಿಧನದ ಕಾರಣದಿಂದಾಗಿ, ಹಳ್ಳಿಗೆ ಧಾವಿಸುವ ರಾಜೀವ, ಅಲ್ಲಿನ ರೈತರ ಬದುಕು ಹಸನಾಗಿಸಬೇಕು ಎಂದು ಟೊಂಕ ಕಟ್ಟಿ ನಿಲ್ಲುತ್ತಾನೆ. ಆತ ಅದನ್ನು ಹೇಗೆ ಸಾಧಿಸುತ್ತಾನೆ ಎಂಬುದು ಚಿತ್ರದ ಕಥೆ.

ಊರಿನ ರೈತರ ಸಮಸ್ಯೆಗಳನ್ನು ಪರಿಹರಿಸುವ ಕಥೆಯೊಂದನ್ನೇ ಇಟ್ಟುಕೊಂಡರೆ ಸಾಕಾಗದು ಎಂಬ ಕಾರಣಕ್ಕೆ ನಿರ್ದೇಶಕರು ಚಿತ್ರದಲ್ಲಿ ಒಂದಿಷ್ಟು ಭಾವನಾತ್ಮಕ ಎಳೆಗಳನ್ನು ಸೇರಿಸಿದ್ದಾರೆ. ಸಹೋದರರ ನಡುವಿನ ಪ್ರೀತಿಯು ದ್ವೇಷಕ್ಕೆ ತಿರುಗುವುದು, ನಾಯಕ–ನಾಯಕಿಯ ನಡುವಿನ ನವಿರು ಪ್ರೇಮ, ತಾಯಿಯ ಪ್ರೀತಿ... ಇವೆಲ್ಲ ಆ ಎಳೆಗಳು. ಆದರೆ, ಇವು ಚಿತ್ರದ ಒಟ್ಟು ಅಂದವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ನೆರವನ್ನೇನೂ ನೀಡುವುದಿಲ್ಲ.

ಚಿತ್ರವನ್ನು ಕಟ್ಟಿರುವ ಶೈಲಿ, ನಾಯಕ ಹಾಗೂ ನಾಯಕಿಯನ್ನು ವೀಕ್ಷಕರಿಗೆ ಪರಿಚಯಿಸುವ ಶೈಲಿ, ಹಳ್ಳಿಗೊಬ್ಬ ಗೌಡನ ಪಾತ್ರವನ್ನು ಸೃಷ್ಟಿಮಾಡಿ ಆ ಗೌಡ ಕೆಟ್ಟವನೆಂದು ಬಿಂಬಿಸುವುದು, ಸಿನಿಮಾದ ಮೂಲ ಕಥೆಗೆ ನೇರ ಸಂಬಂಧವೇ ಇಲ್ಲದಂತೆ ಒಂದಿಷ್ಟು ಹಾಸ್ಯದ ಟ್ರ್ಯಾಕ್‌ಗಳನ್ನು ಸೃಷ್ಟಿಸಿರುವುದು... ಇವುಗಳೆಲ್ಲ ತೊಂಬತ್ತರ ದಶಕದ ಸಾಧಾರಣ ಸಿನಿಮಾಗಳನ್ನು ನೆನಪಿಗೆ ತರಿಸುತ್ತವೆ.

ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟುವಲ್ಲಿ ಗಟ್ಟಿತನ ಇಲ್ಲದಿರುವುದು, ನಿರೂಪಣೆಯಲ್ಲಿ ಬಿಗಿ ಇಲ್ಲದಿರುವುದು, ಕಥೆಯನ್ನು ಹೇಳುವ ಶೈಲಿಯಲ್ಲಿ ಹೊಸತನ ಇಲ್ಲದಿರುವುದು, ಸಂಕೀರ್ಣ ಸಮಸ್ಯೆಗಳಿಗೆ ಚಿಟಿಕೆ ಹೊಡೆದಷ್ಟು ಸುಲಭದ ರೀತಿಯ ಪರಿಹಾರ ಸೂತ್ರ ಸಿದ್ಧಪಡಿಸಿರುವುದು ಈ ಚಿತ್ರವನ್ನು ವೀಕ್ಷಿಸಿದ ನಂತರ ನೆನಪಿನಲ್ಲಿ ಉಳಿದುಕೊಳ್ಳುವ ಸಂಗತಿಗಳು.ಚಿತ್ರದ ಹಾಡುಗಳು ಕೂಡ ಮನಸ್ಸಿನಲ್ಲಿ ಹಿತಾನುಭವ ಸೃಷ್ಟಿಸುವ ಕೆಲಸ ಮಾಡುವುದಿಲ್ಲ. ಚಿತ್ರದಲ್ಲಿ ನಾಯಕಿಗೆ (ಅಕ್ಷತಾ ಶ್ರೀಧರ ಶಾಸ್ತ್ರಿ) ರಾಜೀವನನ್ನು ಪ್ರೀತಿಸುವ ಹೊರೆ ಹೊರತುಪಡಿಸಿದರೆ, ತಮ್ಮ ಅಭಿನಯ ತೋರಿಸುವ ಅವಕಾಶವೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT