ಚಿತ್ರ: ಸೂರಾರೈ ಪೋಟ್ರು (ತಮಿಳು)

ನಿರ್ಮಾಣ: ಸೂರ್ಯ, ಗುನೀತ್ ಮೊಂಗ

ನಿರ್ದೇಶನ: ಸುಧಾ ಕೊಂಗಾರ

ತಾರಾಗಣ: ಸೂರ್ಯ, ಅಪರ್ಣಾ ಬಾಲಮುರಳಿ, ಪರೇಶ್ ರಾವಲ್, ಊರ್ವಶಿ, ಅಚ್ಯುತ ಕುಮಾರ್, ಪ್ರಕಾಶ್ ಬೆಳವಾಡಿ, ಮೋಹನ್ ಬಾಬು

ಸಾಮಾಜಿಕ ಜಾಲತಾಣಗಳಲ್ಲಿ ‘ಸೂರಾರೈ ಪೋಟ್ರು’ ಸಿನಿಮಾ ಚರ್ಚೆಗೆ ಒಳಗಾಗುತ್ತಿದೆ. ಕನ್ನಡದಲ್ಲಿ ಯಾಕೆ ಇಂತಹ ಆತ್ಮಕಥಾ ಸಿನಿಮಾಗಳನ್ನು ಮಾಡಬಾರದು ಎನ್ನುವುದು ಅಂತಹ ಚರ್ಚೆಯಲ್ಲಿ ತೇಲಿಬರುತ್ತಿರುವ ಅಭಿಪ್ರಾಯ. ಅದಕ್ಕೆ ಕಾರಣ, ಈ ಸಿನಿಮಾ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ‘ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ’ ಎಂಬ ಕೃತಿಯನ್ನು ಆಧರಿಸಿದೆ ಎನ್ನುವುದು. ಬಹುಶಃ ಖುದ್ದು ಗೋಪಿನಾಥ್ ಅವರಿಗೆ ಈ ಸಿನಿಮಾ ತಮ್ಮದಲ್ಲದ ಬದುಕಿನ ಬೇರೆಯದೇ ಸಿನಿಮಾಟಿಕ್ ಫ್ಯಾಂಟಸಿಯಂತೆ ಕಂಡೀತು.

ನಿರ್ದೇಶಕಿ ಸುಧಾ ಕೊಂಗಾರ ಚಿತ್ರಕಥೆಯ ಆತ್ಮಕ್ಕೆಂದು ಗೋಪಿನಾಥ್ ಬದುಕಿನ ಯಶೋಗಾಥೆಯ ಒಂದಂಶವನ್ನು ಎತ್ತಿಕೊಂಡಿದ್ದಾರಷ್ಟೆ. ಶಾಲಿನಿ ಉಷಾದೇವಿ, ಆಲಿಫ್ ಸುರ್ತಿ ಹಾಗೂ ಗಣೇಶ ಅವರ ಜತೆಗೆ ಕುಳಿತು ಬೇರೆಯದೇ ತಮಿಳು ಯಶೋಕಥನವನ್ನು ಬರೆದಿದ್ದಾರೆ. ರಿಯಲಿಸ್ಟಿಕ್ ಆಗಿ ಗೋಪಿನಾಥ್ ಬದುಕು ಹೀಗೆ ಇದ್ದಿರಲಾರದು. ಹೀಗಾಗಿ ಸೂರ್ಯ ಸ್ಟಾರ್ಗಿರಿಯ ಅಚ್ಚಿಗೆ ತಕ್ಕಂತಹ ಕಥಾಎರಕವನ್ನು ನಿರ್ದೇಶಕಿ ಸುರಿದಿದ್ದಾರೆ.

ನೆಡುಮಾರನ್ ವಾಯುಪಡೆಯಲ್ಲಿ ಕೆಲಸ ಮಾಡಿದವನು. ಅವನಿಗೆ ಜನಸಾಮಾನ್ಯರೂ ಪ್ರಯಾಣ ಮಾಡುವಂಥ ವಿಮಾನಯಾನ ಪ್ರಾರಂಭಿಸಬೇಕೆನ್ನುವ ಮಹತ್ವಾಕಾಂಕ್ಷೆ. ಅವನ ಅಪ್ಪ ತನ್ನೂರಿಗೆ ಕರೆಂಟು ತರಲು, ರೈಲು ನಿಲ್ಲುವಂತೆ ಮಾಡಲು ಸರ್ಕಾರದ ಇಲಾಖೆಗಳಿಗೆ ಸಾಲು ಸಾಲು ಪತ್ರಗಳನ್ನು ಬರೆದಿರುತ್ತಾರೆ. ಹಳ್ಳಿಯ ಮೇಷ್ಟರೊಬ್ಬರ ಇಂತಹ ಹೋರಾಟದ ಚೌಕಟ್ಟಿನಲ್ಲಿ ಬೆಳೆದ ಮಗನಲ್ಲಿ ನಿಜಕ್ಕೂ ದೊಡ್ಡ ಮಹತ್ವಾಕಾಂಕ್ಷೆ ಮೊಳೆದೀತು ಎನ್ನುವುದು ಕಥನಾವಕಾಶ. ಸುತ್ತಲಿನವರಿಗೆ ಅಷ್ಟೇ ಏಕೆ, ಮನೆಯಲ್ಲಿರುವ ಆಪ್ತೇಷ್ಟರಿಗೂ ‘ತಿರುಕನ ಕನಸಿ’ನಂತೆ ಕಾಣುವ ನಾಯಕನ ಮಹತ್ವಾಕಾಂಕ್ಷೆಯನ್ನು ಉಜ್ಜುತ್ತಲೇ ಸಂಭಾಷಣೆಕಾರ ವಿಜಯಕುಮಾರ್ ಮಾತುಗಳನ್ನು ಬರೆದಿದ್ದಾರೆ. ತನ್ನದೇ ಬೇಕರಿ ಪ್ರಾರಂಭಿಸಬೇಕು ಎನ್ನುವ ಕನಸನ್ನು ಹೊಸೆಯುವ ನಾಯಕಿಯೂ ಪ್ರಾಕ್ಟಿಕಲ್. ಅವರಿಬ್ಬರ ನಡುವಿನ ಬೇಷರತ್ತು ಪ್ರೀತಿ. ಆಕಾಶದಷ್ಟು ಕಕ್ಕುಲತೆ. ಅಲ್ಲಲ್ಲಿ ಸ್ವಪ್ರತಿಷ್ಠೆಯ ಸೀದು ಹೋದ ಒಗ್ಗರಣೆ. ಎದುರಲ್ಲಿ ವಿಮಾನಯಾನದ ಕನಸಿಗೆ ಅಡ್ಡಗಾಲು ಹಾಕುವ ಪರೇಶ್ ರಾವಲ್ ರೂಪದ ಖಳ. ಅವನ ತಾಳಕ್ಕೆ ಕುಣಿಯುವ ವಂದಿಮಾಗಧ ಅಧಿಕಾರಿಗಳು... ಹೀಗೆ ಸಿನಿಮೀಯ ಮೆಲೋಡ್ರಾಮಾಗಳ ಚುಚ್ಚುಮದ್ದನ್ನು ನೀಡುತ್ತಲೇ ಚಿತ್ರಕಥೆಯನ್ನು ಸದಾ ‘ಹೈ ಪಾಯಿಂಟ್’ನಲ್ಲೇ ಇರುವಂತೆ ನಿರ್ದೇಶಕಿ ನೋಡಿಕೊಂಡಿದ್ದಾರೆ. ನಾಯಕ ಹಾಗೂ ನಾಯಕಿಯ ನಡುವಿನ ಬಾಂಧವ್ಯದ ದೃಶ್ಯಗಳ ಬರವಣಿಗೆ ಬಲು ಗಟ್ಟಿ. ಆದರೆ, ವಿಮಾನಯಾನ ಪ್ರಾರಂಭಿಸಲು ಜನರೇ ಕಾಸು ಹಾಕುವ ಸನ್ನಿವೇಶಕ್ಕೆ ತಕ್ಕ ಭೂಮಿಕೆ ಪ್ರಾಪ್ತಿಯಾಗಿಲ್ಲ. ನಾಯಕ ಹಾಗೂ ಅವನ ತಂದೆಯ ನಡುವಿನ ಬಂಧದ ಸನ್ನಿವೇಶಗಳ ಬರಹವೂ ತೆಳುವಾಗಿದೆ. ಫೈಟಿಂಗೇ ಇಲ್ಲದ ಸಿನಿಮಾದಲ್ಲಿ ಸೂರ್ಯ ನಟಿಸುವುದು ಅಪರೂಪ. ಹೀಗಾಗಿ ಅವರು ಇಲ್ಲಿ ತಮ್ಮ ‘ಟೆಂಪ್ಲೇಟ್’ನಲ್ಲೇ ತುಸು ಬದಲಾವಣೆ ಮಾಡಿಕೊಂಡಿರುವುದು ಮೆಚ್ಚತಕ್ಕ ಅಂಶ.

ಸೂರ್ಯ ಭಾವಾಬ್ಧಿಯಲ್ಲಿ ಮಿಂದು ಬಂದವರಂತೆ ಅಭಿನಯಿಸಿದ್ದಾರೆ. ಬೊಮ್ಮಿಯಾಗಿ ಅಪರ್ಣಾ ಬಾಲಮುರಳಿ ಜನಪದ ಕಲಾವಿದೆಯಂತೆ ಆವರಿಸಿಕೊಂಡಿದ್ದಾರೆ. ಮುಗ್ಧ ಮುಖದ ನಿರಿಗೆಗಳಲ್ಲಿ ಗಟ್ಟಿಗಿತ್ತಿಯನ್ನು ಹುದುಗಿಸಿಕೊಂಡಂತೆ ಅವರು ನಟಿಸಿರುವುದು ಕಣ್ಣಿಗೆ ಹಬ್ಬ. ಪರೇಶ್ ರಾವಲ್, ಅಚ್ಯುತ ಕುಮಾರ್, ಪ್ರಕಾಶ್ ಬೆಳವಾಡಿ ಅವರ ಪಾತ್ರಗಳಿಗೆ ಡಬ್ ಮಾಡಿರುವ ಕಂಠಗಳು ಹೊಂದಿಕೆಯಾಗಿಲ್ಲ. ಸ್ವರ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್ ಹಿನ್ನೆಲೆ ಸಂಗೀತ ಇಂಧನವಾಗಿ ಒದಗಿಬಂದಿದೆ.

‘ಬಯೋಪಿಕ್’ಗಳನ್ನು ಯಥಾವತ್ ಸಿನಿಮಾಗೆ ಹೊಂದಿಸುವುದು ಕಷ್ಟ. ಗೋಪಿನಾಥ್ ಅವರಿಗೂ ತಮ್ಮ ಬದುಕಿನ ಕೆಲವು ಪುಟಗಳನ್ನು ಇದಕ್ಕೆ ಅಳವಡಿಸಿರುವ ರೀತಿ ನೋಡಿ ಬೆರಗು ಮೂಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.